Mysore
27
broken clouds

Social Media

ಗುರುವಾರ, 08 ಜನವರಿ 2026
Light
Dark

ಭೂ ವ್ಯಾಜ್ಯ: ಇತ್ಯರ್ಥದಲ್ಲಿ ಮೈಸೂರು ಮೇಲುಗೈ

ಕೆ.ಬಿ.ರಮೇಶ ನಾಯಕ 

ಒಂದೂವರೆ ವರ್ಷಗಳಲ್ಲಿ ಕಂದಾಯ ನ್ಯಾಯಾಲಯಗಳಲ್ಲಿ ಶೇ.೮೭ರಷ್ಟು ಪ್ರಗತಿ

ಮೇಲ್ಮನವಿ ಪ್ರಕರಣ ಹೊರತುಪಡಿಸಿದರೆ ನಿರೀಕ್ಷೆಗೂ ಮೀರಿ ಸಾಧನೆ 

ಮೈಸೂರು: ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಭೂ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ರೈತರ ಜಮೀನಿಗೆ ಸಂಬಂಽಸಿದ ವ್ಯಾಜ್ಯಗಳ ಇತ್ಯರ್ಥದಲ್ಲಿ ಮೈಸೂರು ಜಿಲ್ಲೆ ಮೇಲುಗೈ ಸಾಧಿಸಿದೆ.

ರಾಜ್ಯದ ಕಂದಾಯ ಇಲಾಖೆ ನೀಡಿರುವ ಗುರಿಗಿಂತಲೂ ಮೈಸೂರು ಜಿಲ್ಲೆಯಲ್ಲಿ ಒಂದೂವರೆ ವರ್ಷಗಳಲ್ಲಿ ಶೇ.೮೭ರಷ್ಟು ಪ್ರಗತಿ ಸಾಧಿಸಿರುವುದು ಗಮನಾರ್ಹವಾಗಿದೆ. ಮೇಲ್ಮನವಿ ಪ್ರಕರಣಗಳನ್ನು ಹೊರತುಪಡಿಸಿದರೆ ನಿರೀಕ್ಷೆಗೂ ಮೀರಿ ಪ್ರಕರಣಗಳು ಇತ್ಯರ್ಥವಾಗಿರುವುದು ರೈತ ಸಮುದಾಯದಲ್ಲಿ ಸಂತೋಷವನ್ನುಂಟು ಮಾಡಿದೆ.

ಆಸ್ತಿ ಭಾಗ, ಖಾತೆ ಬದಲಾವಣೆ, ಸರ್ವೆ ಸೇರಿದಂತೆ ಹತ್ತಾರು ವಿಷಯಗಳಲ್ಲಿ ರೈತರು ತಹಸಿಲ್ದಾರ್, ಉಪ ವಿಭಾಗಾಽಕಾರಿ, ಜಿಲ್ಲಾಧಿಕಾರಿಗಳ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುತ್ತಾರೆ

ಅದರಲ್ಲೂ ರೈತರ ಜಮೀನಿಗೆ ಸಂಬಂಧಿಸಿದ ಖಾತೆ, ನಕ್ಷೆ, ಪೋಡಿ ಮತ್ತಿತರ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಕಂದಾಯಇಲಾಖೆಯಲ್ಲಿ ವ್ಯಾಜ್ಯಗಳು ಹೆಚ್ಚಾಗಲು ದಾರಿಯಾಗಿತ್ತು. ಸಾರ್ವಜನಿಕರ ಕೆಲಸ ಕಾರ್ಯಗಳ ಒತ್ತಡದ ನಡುವೆ ನ್ಯಾಯಾಲಯ ಕಲಾಪ ನಡೆಸಬೇಕಿದ್ದರಿಂದ ಹಲವಾರು ವರ್ಷಗಳಿಂದ ವ್ಯಾಜ್ಯಗಳು ಪರಿಹಾರ ಕಂಡಿರಲಿಲ್ಲ. ಇದರಿಂದಾಗಿ ರೈತರು ಮತ್ತು ಮತ್ತಿತರ ಸಂಘಟನೆಗಳು ಸರ್ಕಾರದ ಗಮನಕ್ಕೆ ತರುತ್ತಿದ್ದರು. ಹಾಗಾಗಿ, ಕಂದಾಯ ಸಚಿವರು ಕಾಲಮಿತಿಯೊಳಗೆ ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದ್ದರು.

ಒಂದೂವರೆ ವರ್ಷದಲ್ಲಿ ೧೪,೧೦೯ ಪ್ರಕರಣ ಇತ್ಯರ್ಥ: ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಮೈಸೂರು ಮತ್ತು ಹುಣಸೂರು ಉಪ ವಿಭಾಗಾಧಿಕಾರಿ, ಉಪ ವಿಶೇಷಾಧಿಕಾರಿ, ೯ ತಾಲ್ಲೂಕುಗಳ ತಹಸಿಲ್ದಾರ್ಗಳ ವಿರುದ್ಧ ನ್ಯಾಯಾಲಯಗಳಲ್ಲಿ ಇದ್ದ ೧೬,೧೩೫ ಪ್ರಕರಣಗಳ ಪೈಕಿ ಒಂದೂವರೆ ವರ್ಷದಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಅಪರ ಜಿಲ್ಲಾಧಿಕಾರಿಗಳ ನಿಯಮಿತವಾದ ಮೇಲ್ವಿಚಾರಣೆಯ ಫಲವಾಗಿ ೧೪,೧೦೯ ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಿಂದಾಗಿ ಕಂದಾಯ ನ್ಯಾಯಾಲಯ ಪ್ರಕರಣಗಳಲ್ಲಿ ಕಚೇರಿಗೆ ಅಲೆಯುತ್ತಿದ್ದ ರೈತರು, ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗಿದೆ.

ಕೆಲಸದ ಒತ್ತಡದ ನಡುವೆ ಕಲಾಪ: ಮೈಸೂರು ಜಿಲ್ಲೆಯು ಮುಖ್ಯಮಂತ್ರಿ ತವರು ಆಗಿರುವ ಜತೆಗೆ ಹಲವಾರು ಸಚಿವರು ಮೈಸೂರಿಗೆ ಬರುತ್ತಲೇ ಇರುತ್ತಾರೆ.

ದಸರಾ ಮಹೋತ್ಸವ, ಕುಂಭಮೇಳ, ಬರ, ಪ್ರಕೃತಿ ವಿಕೋಪ ನಿರ್ವಹಣೆ ಹೀಗೆ ಹತ್ತಾರು ಕೆಲಸಗಳಲ್ಲಿ ತೊಡಗಿರುವ ಅಧಿಕಾರಿಗಳಿಗೆ ಸಮಯದ ಅಭಾವದಿಂದ ಕಂದಾಯ ಪ್ರಕರಣಗಳ ಸಂಬಂಧ ಕಲಾಪ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಜಿಲ್ಲಾಧಿಕಾರಿಯವರು ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವುದಕ್ಕೆ ವಿಶೇಷ ಗಮನಹರಿಸಿ ಆಗಿಂದಾಗ್ಗೆ ತಹಸಿಲ್ದಾರ್, ಉಪ ವಿಭಾಗಾಧಿಕಾರಿಗಳ ಕಂದಾಯ ಪ್ರಕರಣಗಳ ಕುರಿತು ಪ್ರಗತಿಪರಿಶೀಲನೆ ನಡೆಸಿದ್ದರಿಂದಾಗಿ ಕೆಳಹಂತದ ಅಧಿಕಾರಿಗಳು ನಿರೀಕ್ಷೆಯಂತೆ ಕೆಲಸ ಮಾಡಿದ್ದರಿಂದ ಜಿಲ್ಲೆಯಲ್ಲಿ ಶೇ.೮೭ರಷ್ಟು ಗುರಿ ತಲುಪಲು ಸಾಧ್ಯವಾಗಿದ್ದು, ಇತರ ಜಿಲ್ಲೆಗಳಿಗೂ ಮಾದರಿಯಾಗಿದೆ.

ಮೇಲ್ಮನವಿ ಸಲ್ಲಿಸಲು ಅವಕಾಶ: ಕಂದಾಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ಹೂಡುವುದಕ್ಕಿಂತ ಮೊದಲು ತಹಸಿಲ್ದಾರ್ ನ್ಯಾಯಾಲಯಕ್ಕೆ ಬರುತ್ತದೆ. ತಹಸಿಲ್ದಾರ್ ಕೋರ್ಟ್ ತೀರ್ಪು ಪ್ರಶ್ನಿಸಿ ಎಸಿ,ಡಿಸಿ ಕೋರ್ಟ್ ಮೊರೆ ಹೋಗುತ್ತಾರೆ. ಕಂದಾಯ ಪ್ರಕರಣಗಳಲ್ಲಿ ಡಿಸಿ ಕೋರ್ಟ್ ನೀಡುವ ತೀರ್ಪು ಅಂತಿಮವಲ್ಲದೇ ಇದ್ದರೂ ಬಹುತೇಕ ಕೇಸುಗಳು ಸಮಾಧಾನಕರವಾಗಿ ಇತ್ಯರ್ಥವಾಗಿರುತ್ತದೆ. ಹೀಗಾಗಿ, ಮೇಲ್ಮನವಿ ಪ್ರಕರಣಗಳು ಶೇ.೧೦ರಷ್ಟು ಇರುವುದಿಲ್ಲ ಎಂದು ಹೇಳಲಾಗಿದೆ.

” ಕಂದಾಯ ನ್ಯಾಯಾಲಯಗಳ ಪ್ರಕರಣಗಳಲ್ಲಿ ಗಣನೀಯ ಮತ್ತು ಅಭೂತಪೂರ್ವ ಸಾಧನೆ ಮಾಡಲಾಗಿದೆ. ಒಂದೂವರೆ ವರ್ಷಗಳಲ್ಲಿ ಎಲ್ಲಾ ಹಂತದ ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸಿರುವುದರಿಂದ ರೈತರಿಗೆ ಸಹಕಾರಿಯಾಗಿದೆ.”

-ಡಾ.ಪಿ.ಶಿವರಾಜು, ಅಪರ ಜಿಲ್ಲಾಧಿಕಾರಿ

Tags:
error: Content is protected !!