ಕೆ.ಎಂ.ಅನುಚೇತನ್
ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಕಾಣದ ರಸ್ತೆ
ಕೆಲ ಕಂಪೆನಿಗಳಿಂದ ಸ್ವಯಂ ಖರ್ಚಿನಲ್ಲಿ ಮೂಲ ಸೌಕರ್ಯ ನಿರ್ಮಾಣ
ಕೆಲವೆಡೆ ಯದ್ವಾತದ್ವಾ ಬೆಳೆದಿರುವ ಗಿಡ ಗಂಟಿಗಳು
ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮುಚ್ಚಿ ಹೋಗಿರುವ ಮಳೆ ನೀರು ಚರಂಡಿ
ಹುಲ್ಲು, ಮರ, ಗಿಡಗಳು ಬೆಳೆದು ಕಾಣದಂತಾಗಿರುವ ಒಳಚರಂಡಿ
ಮೈಸೂರು: ನಗರದ ಆರ್ಥಿಕ ಹಬ್ ಆಗಿರುವ ಹೆಬ್ಬಾಳು, ಹೂಟಗಳ್ಳಿ, ಕೂರ್ಗಳ್ಳಿ ಕೈಗಾರಿಕಾ ಪ್ರದೇಶಗಳು ಸಾವಿರಾರು ಕೋಟಿ ರೂ.ಗಳ ಆದಾಯದ ಮೂಲಗಳು. ಇಂತಹ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ ಬೃಹದಾಕಾರವಾಗಿದೆ. ನಗರದ ಹೊರ ವಲಯದ ಈ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಲಭ್ಯ ದ ಕೊರತೆ ಎದ್ದು ಕಾಣುತ್ತಿದೆ.
ಮುಖ್ಯವಾಗಿ ರಸ್ತೆ, ಒಳ ಚರಂಡಿ ಹಾಗೂ ಬೀದಿ ದೀಪಗಳ ವ್ಯವಸ್ಥೆ ಹದಗೆಟ್ಟಿದೆ. ಇತ್ತೀಚೆಗೆ ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯವಾಗುತ್ತಿದೆ. ಈ ಭಾಗದಲ್ಲಿ ದಿನ ನಿತ್ಯ ದುಡಿಯಲು ಸಾವಿರಾರು ಕಾರ್ಮಿಕರು, ಉದ್ಯೋಗಿಗಳು ಓಡಾಡುತ್ತಾರೆ. ದಿನದ ೨೪ ಗಂಟೆಗಳೂ ವಾಹನಗಳ ಸಂಚಾರ ಇರುತ್ತದೆ. ನೂರಾರು ಭಾರಿ ಗಾತ್ರದ ವಾಹನ ಗಳು, ಸಾವಿರಾರು ದ್ವಿಚಕ್ರ ವಾಹನಗಳು ಸಂಚಾರ ಮಾಡು ತ್ತವೆ. ಇಷ್ಟೆಲ್ಲ ವಹಿವಾಟು, ಜನಸಂದಣಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು ಅತ್ಯಗತ್ಯ. ಆದರೆ, ಇಲ್ಲಿ ಅವ್ಯವಸ್ಥೆಯೇ ತಾಂಡವವಾಡುತ್ತಿದೆ.
ಸಮರ್ಪಕ ಒಳಚರಂಡಿ ವ್ಯವಸ್ಥೆಯೂ ಇಲ್ಲ: ಕೈಗಾರಿಕಾ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ನೀರು ಬಳಕೆಯಾಗುತ್ತದೆ. ಕೈಗಾರಿಕೆಗಳ ತ್ಯಾಜ್ಯದ ನೀರನ್ನು ಒಳಚರಂಡಿ ಮೂಲಕ ಹೊರಗೆ ಹರಿಸಬೇಕು. ಆದರೆ, ಆ ಸ್ಥಳಗಳಲ್ಲಿ ಒಳಚರಂಡಿ ವ್ಯವಸ್ಥೆಯೇ ಇಲ್ಲ. ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿಯಲು ಕಾಲುವೆಗಳನ್ನು ನಿರ್ಮಿಸಲಾಗಿದೆ. ಮಳೆ ಸುರಿದರೆ ಈ ಕಾಲುವೆಗಳಲ್ಲಿ ಮಣ್ಣು ತುಂಬಿಕೊಳ್ಳುತ್ತದೆ. ಕೈಗಾರಿಕೆಗಳ ತ್ಯಾಜ್ಯದ ನೀರು ಸರಾಗವಾಗಿ ಹರಿಯಲಾಗದೆ, ರಸ್ತೆಗೆ ಚಾಚಿಕೊಳ್ಳುತ್ತದೆ.
ಇನ್ನು ಕೆಲವು ಸ್ಥಳಗಳಲ್ಲಿ ಗಿಡಗಂಟಿಗಳು ಯದ್ವಾತದ್ವಾ ಬೆಳೆದು ಮಳೆ ನೀರು ಹರಿಯುವುದೂ ಅಸಾಧ್ಯ ಎಂಬಂತಾಗಿದೆ. ಕೆಲವು ಕೈಗಾರಿಕೆಗಳು, ಉದ್ಯಮಗಳು ತಮ್ಮ ಅನುಕೂಲಕ್ಕಾಗಿ ಕೆಲವೆಡೆ ಒಳಚರಂಡಿ ನಿರ್ಮಿಸಿಕೊಂಡಿದ್ದು, ಅದರಲ್ಲಿಯೂ ನೀರಿನೊಂದಿಗೆ ಹರಿದುಬರುವ ಮಣ್ಣು ತುಂಬಿಕೊಂಡಿದೆ. ಅಲ್ಲದೆ, ಒಳಚರಂಡಿಗಳ ಮೇಲೆ ಹುಲ್ಲು, ಮರ, ಗಿಡಗಳು ಬೆಳೆದು ರಸ್ತೆ ಯಾವುದು, ಚರಂಡಿ ಯಾವುದೂ ಎಂದು ಕಾಣದಂತಾಗಿದೆ.
ಗುಂಡಿಗಳಿಂದ ಆವೃತವಾದ ರಸ್ತೆ: ರಸ್ತೆಗಳು ಅಚ್ಚುಕಟ್ಟಾಗಿದ್ದರೆ ಸಂಚಾರ ವ್ಯವಸ್ಥೆಯೂ ಸುಗಮವಾಗಿರುತ್ತದೆ. ಆದರೆ ಇಂತಹ ಕೈಗಾರಿಕಾ ಪ್ರದೇಶಗಳು ಹಾಗೂ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ಅಧೋಗತಿಗೊಳಪಟ್ಟಿವೆ. ಹಲವು ರಸ್ತೆಗಳು ಗುಂಡಿ ಬಿದ್ದಿವೆ. ಕಳಪೆ ಕಾಮಗಾರಿಯಿಂದ ರಸ್ತೆಯ ಡಾಂಬರು ಹೆಚ್ಚು ದಿನ ಬಾಳಿಕೆ ಬಾರದೆ ಎಲ್ಲೆಂದರಲ್ಲಿ ಕಿತ್ತು ಬಂದಿದೆ. ಹಾಗಾಗಿ ವಾಹನಗಳು ಬಹು ಕಷ್ಟದಲ್ಲಿ ಸಂಚರಿಸಬೇಕಿದೆ. ಗುಂಡಿಗಳಿಂದಾಗಿ ರಸ್ತೆಗಳೆಲ್ಲಾ ದೂಳುಮಯವಾಗಿವೆ.
ಹೂಟಗಳ್ಳಿ ನಗರಸಭೆ ವತಿಯಿಂದ ಹೂಟಗಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಜನವಸತಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ೬೦ ಕೋಟಿ ರೂ. ಮಂಜೂರು ಮಾಡಲಾಗಿದ್ದು, ಯಾವುದೇ ರಸ್ತೆ ನಿರ್ಮಾಣ ಕೆಲಸವಾಗಿಲ್ಲ ಎಂದು ಮೈಸೂರು ಚೇಂಬರ್ ಆ- ಕಾರ್ಮಸ್ ಅಂಡ್ ಇಂಡಸ್ಟ್ರೀ ಅಧ್ಯಕ್ಷ ಕೆ.ಬಿ. ಲಿಂಗರಾಜು ಹೇಳಿದ್ದಾರೆ.
ಬೀದಿ ದೀಪಗಳ ಅವ್ಯವಸ್ಥೆ: ಕೈಗಾರಿಕಾ ಪ್ರದೇಶಗಳಲ್ಲಿ ನಿತ್ಯವೂ ಸಾವಿರಾರು ಕಾರ್ಮಿಕರು, ಉದ್ಯೋಗಿಗಳು ಸಂಚರಿಸುತ್ತಾರೆ. ಹಲವರು ವಾಹನಗಳಲ್ಲಿ ಸಂಚರಿಸಿದರೆ, ಇನ್ನೂ ಕೆಲವರು ನಡೆದುಕೊಂಡೇ ಓಡಾಡುತ್ತಾರೆ. ಈ ಪ್ರದೇಶಗಳಲ್ಲಿ ಜನಸಂದಣಿ ಕಡಿಮೆ. ಬೀದಿ ದೀಪಗಳು ಇದ್ದರೆ ರಾತ್ರಿ ವೇಳೆ ಜನರು, ಕಾರ್ಮಿಕರು ಧೈರ್ಯವಾಗಿ ಓಡಾಡಬಹುದು. ಬೀದಿ ದೀಪಗಳು ಇಲ್ಲದ್ದರಿಂದ ಜನರು ಓಡಾಡಲು ಭಯಪಡುವಂತಾಗಿದೆ. ಹಾಗಾಗಿ ಇಲ್ಲಿ ಬೆಳಕಿನ ವ್ಯವಸ್ಥೆ ಬಹಳ ಮುಖ್ಯ.
ಯಾವುದೇ ರಸ್ತೆಗಳಲ್ಲೂ ಸಮರ್ಪಕ ಬೀದಿ ದೀಪಗಳೇ ಇಲ್ಲ. ಅದರಲ್ಲೂ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳೇ ಇಲ್ಲದಂತಾಗಿದೆ. ಇಲ್ಲಿರುವ ಬೀದಿದೀಪಗಳ ಪೈಕಿ ಕೆಲವು ಕೆಟ್ಟು ಹೋಗಿದ್ದರೆ, ಹಲವು ಮಂದ ಬೆಳಕು ಸೂಸುತ್ತಿದ್ದು, ಶೀಘ್ರದಲ್ಲಿ ಕೆಟ್ಟುಹೋಗುವ ಸೂಚನೆ ನೀಡುತ್ತಿವೆ.
ಸಮರ್ಪಕ ನೀರು ಪೂರೈಕೆ, ವಿದ್ಯುತ್ ಸರಬರಾಜು: ಕೈಗಾರಿಕೆಗಳು ನಿರಂತರವಾಗಿ ಕಾರ್ಯನಿರ್ವಹಿಸಲು ನೀರು, ವಿದ್ಯುತ್ ಪೂರೈಕೆ ಮೂಲ ಆಧಾರ. ಹಾಗಾಗಿ ಕೈಗಾರಿಕಾ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಜಾಗ್ರತೆ ವಹಿಸಲಾಗಿದೆ. ಹಲವು ಕೈಗಾರಿಕೆಗಳಲ್ಲಿ ಹೊರಬಿಡುವ ತ್ಯಾಜ್ಯದ ನೀರನ್ನು ಸಮರ್ಪಕವಾಗಿ ಸಂಸ್ಕರಿಸಿ, ಮರುಬಳಕೆಮಾಡುತ್ತಿಲ್ಲ. ಆ ನೀರನ್ನು ಕೆರೆ ಕಟ್ಟೆಗಳಿಗೆ ಹರಿಸಲಾಗುತ್ತಿದೆ. ಇನ್ನುಳಿದಂತೆ ವಿದ್ಯುತ್ ಪೂರೈಕೆ ಉತ್ತಮವಾಗಿದ್ದು, ಇತ್ತೀಚಿನ ದಿನಗಳಲ್ಲಿ ದಸರಾದ ನಂತರದಲ್ಲಿ ಕೆಲ ಸಮಯ ವಿದ್ಯುತ್ ವ್ಯತ್ಯಯ ಕಾಡುತ್ತಿದೆ ಎಂಬುದು ಉದ್ಯಮಿಯೊಬ್ಬರ ಮಾತು.
” ಮೈಸೂರು ಭಾಗದಲ್ಲಿ ಕೈಗಾರಿಕಾ ಕ್ಷೇತ್ರದಿಂದ ಸಾಕಷ್ಟು ಲಾಭವಿದೆ. ಆದರೆ, ಈ ಪ್ರದೇಶಗಳ ಅಭಿವೃದ್ಧಿ ಸರಿಯಾಗಿಲ್ಲ. ಇನ್ನೂ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಮೂಲಸೌಕರ್ಯ ಸಮರ್ಪಕವಾಗಿ ಇರದಿದ್ದರೆ ಕೈಗಾರಿಕೆಗಳ ಉನ್ನತೀಕರಣ ಸಾಧ್ಯವಿಲ್ಲ.”
– ವಿ.ಸಿ.ರವಿಕುಮಾರ್, ಅಧ್ಯಕ್ಷ , ನೆರೊಡ್ಕೊ ಸಂಸ್ಥೆ, ಮೈಸೂರು
” ರಸ್ತೆಗಳು ತೀರಾ ಹದಗೆಟ್ಟಿದ್ದು ಓಡಾಡಲು ಸಮಸ್ಯೆಯಾಗುತ್ತಿದೆ. ಸರಿಯಾದ ಬಸ್ ವ್ಯವಸ್ಥೆಯಿಲ್ಲ. ರಾತ್ರಿವೇಳೆಯೂ ಕಾರ್ಮಿಕರು, ಉದ್ಯೋಗಿಗಳು ಕೆಲಸಕ್ಕೆ ಹೋಗುತ್ತಾರೆ. ಆದರೆ, ರಸ್ತೆಗಳಲ್ಲಿ ವಿದ್ಯುತ್ ಬೀದಿ ದೀಪಗಳ ವ್ಯವಸ್ಥೆಯೇ ಇಲ್ಲ. ಮಹಿಳಾ ನೌಕರರು, ಗುಂಪಿನಲ್ಲಿದ್ದರೂ ಭಯದಿಂದಲೇ ಓಡಾಡಬೇಕಾಗಿದೆ. ಏಕಾಂಗಿಯಾಗಿ ಸಂಚರಿಸುವುದು ದುಸ್ತರವಾಗಿದೆ.”
-ಕಾಂಚನ, ಐಟಿ ಉದ್ಯೋಗಿ, ಹೆಬ್ಬಾಳು
” ಕೆಲಸ ಮುಗಿದ ಬಳಿಕ ವಾಹನಗಳಲ್ಲಿ ಈ ಗುಂಡಿ ರಸ್ತೆಗಳಲ್ಲಿ ಸಂಚರಿಸುವುದು ತೀರಾ ಬೇಸರ ಮೂಡಿಸುತ್ತದೆ. ರಾತ್ರಿ ವೇಳೆಯಲ್ಲಂತೂ ವಿದ್ಯುತ್ ದೀಪವಿಲ್ಲದ ಕಾರಣ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ. ಮಳೆ ಸುರಿದರೆ, ರಸ್ತೆಗಳ ಗುಂಡಿಗಳಲ್ಲಿ ನೀರು ನಿಂತು ಕೆಸರು ತುಂಬಿರುತ್ತದೆ.”
-ಶ್ರೀನಿವಾಸ್, ಕಾರ್ಮಿಕ, ಕೂರ್ಗಳಿ





