Mysore
30
clear sky

Social Media

ಶುಕ್ರವಾರ, 07 ಫೆಬ್ರವರಿ 2025
Light
Dark

ರೈತರನ್ನು ಕೈಬೀಸಿ ಕರೆಯುತ್ತಿರುವ ಕೃಷಿ ಮೇಳ

ಶ್ರೀಧರ್ ಆರ್.ಭಟ್

ನಂಜನಗೂಡು: ಸುತ್ತೂರು ಶ್ರೀ ಶಿವರಾತ್ರೀಶ್ವರರ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಕ ಕೇಂದ್ರವಾಗಿ ಹೊರಹೊಮ್ಮಿರುವುದು ಈ ಕೃಷಿ ತೋಟ.

ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಶತ ದಿನಗಳ ಶ್ರಮದ ಫಲವನ್ನು ಜಾತ್ರೆಗೆ ಬಂದವರೆಲ್ಲರೂ ಈ ಕೃಷಿ ತೋಟದಲ್ಲಿ ಕಾಣಬಹುದಾಗಿದೆ. ಕೃಷಿಕರಿಂದಲೇ ತುಂಬಿರುವ ಸಮಾಜದಲ್ಲಿ ಆಧುನಿಕ ಕೃಷಿಯೊಂದಿಗೆ ಪ್ರಾಚೀನ ಕೃಷಿ ಪದ್ಧತಿಯನ್ನು ಅನಾವರಣಗೊಳಿಸಿರುವುದು ಸುತ್ತೂರು ಜಾತ್ರೆಯ ಕೃಷಿಮೇಳದ ಹೆಗ್ಗಳಿಕೆಯಾಗಿದೆ.

ಕೃಷಿಮೇಳವನ್ನು ಪ್ರವೇಶಿಸುತ್ತಿದ್ದಂತೆ ಎಡ-ಬಲಗಳಲ್ಲಿ ನಮಗೆ ಕಾಣುವುದು ಮಾನವನ ಸಮಗ್ರ ಆಹಾರಗಳಾದ ಏಕದಳ, ದ್ವಿದಳ, ಎಣ್ಣೆಕಾಳುಗಳು, ವಾಣಿಜ್ಯಬೆಳೆಗಳು, ತೋಟಗಾರಿಕೆ ಬೆಳೆಗಳಾದ ಸೊಪ್ಪು- ತರಕಾರಿ, ಹನಿ ನೀರಾವರಿ ಬಳಸಿಕೊಂಡು ಬೆಳೆದ ಆಹಾರ ಪದಾರ್ಥಗಳು ನೋಡುಗರ ಕಣ್ಮನ ಸೆಳೆಯುತ್ತವೆ.

ಕೃಷಿ ಬೆಳೆಯೊಂದಿಗೆ ವಿವಿಧ ಜಾತಿಯ ಹೂವುಗಳನ್ನೂ ಬೆಳೆದು ರೈತರ ಆದಾಯವನ್ನು ಹೆಚ್ಚಿಸಬಹುದಾದ ಪದ್ಧತಿಯನ್ನು ಇಲ್ಲಿ ತೋರಿಸಿರುವುದಲ್ಲದೇ ಆ ಬೆಳೆಗಳ ಮಾರುಕಟ್ಟೆ ದರಗಳ ಪರಿಚಯವನ್ನು ಆಸಕ್ತ ಕೃಷಿಕರಿಗೆ ಉಣಬಡಿಸುವುದು ಈ ಮೇಳದ ಆಯೋಜಕರಾದ ಕೆವಿಕೆಯ ಹೆಗ್ಗಳಿಕೆ.

ಕೃಷಿಯ ಅವಿಭಾಜ್ಯ ಅಂಗವಾಗಿರುವ ಪಶು ಸಂಗೋ ಪನೆ ಮತ್ತು ಅದರಿಂದಾಗುವ ಲಾಭಗಳನ್ನೂ ಇಲ್ಲಿ ಪರಿಚಯಿಸಲಾಗುತ್ತಿದೆ.

ಪ್ರತಿವರ್ಷ ಒಂದೆರಡು ವಿಜ್ಞಾನ ಆವಿಷ್ಕಾರಗಳನ್ನು ಕೃಷಿಕರಿಗೆ ಪರಿಚಯಿಸುವ ವ್ಯವಸ್ಥೆ ಎರಡು ದಶಕ  ಗಳಿಂದಲೂ ಈ ಕೃಷಿಮೇಳದಲ್ಲಿ ನಡೆದು ಬಂದಿದೆ.

ಅತೀ ಸಣ್ಣ ರೈತರ ಅಭ್ಯುದಯವನ್ನು ಮನದಲ್ಲಿಟ್ಟುಕೊಂಡ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಒಂದು ಎಕರೆ ಪ್ರದೇಶದಲ್ಲಿ ಇಲ್ಲಿ ಸೃಷ್ಟಿಸಿದ ಕೃಷಿ ಬ್ರಹ್ಮಾಂಡ ಕಡಿಮೆ ಖರ್ಚಿನಲ್ಲಿ ಸುಸ್ಥಿರ ಕೃಷಿಲೋಕವನ್ನು ಅನಾವರಣಗೊಳಿಸಿದೆ. ಇದರೊಂದಿಗೆ ಕಬ್ಬು ಕಟಾವು ಮಾಡುವ ಬೃಹತ್ ಯಂತ್ರ ಗಮನ ಸೆಳೆಯುತ್ತಿದ್ದು,ಈ ಯಂತ್ರದ ಸಹಾಯದಿಂದ ಪ್ರತಿ ಟನ್ ಕಬ್ಬಿನ ಶೇ. ೪೫ರಷ್ಟು ವೆಚ್ಚ ಕಡಿಮೆಯಾಗುವುದರೊಂದಿಗೆ ಇದೇ ಯಂತ್ರ ಕಬ್ಬಿನ ಸೋಗನ್ನು ಪುಡಿಮಾಡುವುದರಿಂದ ಈ ಯಂತ್ರ ರೈತನಿಗೆ ಸಹಕಾರಿಯಾಗುವುದನ್ನು ಇಲ್ಲಿ ತೋರಿಸಿಕೊಡಲಾಗುತ್ತದೆ.

ಆ ಮೂಲಕ ಕೃಷಿಕರಲ್ಲಿ ಅರಿವು ಮೂಡಿಸುವ ಯತ್ನ ಸಾಗಿದೆ. ಕೃಷಿಯೊಂದಿಗೆ ಪಶು ಸಂಗೋಪನೆಗೆ ಒತ್ತು ಕೊಟ್ಟಿರುವುದು ಕೃಷಿಮೇಳದ ಹಿರಿಮೆಯಾಗಿದೆ. ಈ ಬಾರಿ ಕೃಷಿ ಮೇಳದ ಪ್ರಮುಖ ಆಕರ್ಷಣೆಯಾಗಿರುವುದು ಜೈವಿಕ ಇದ್ದಿಲು (ಬಯೋಚಾರ್). ಕೃಷಿ ಭೂಮಿಯನ್ನು ಸುಧಾರಿಸುವ ಉದ್ದೇಶದಿಂದ ಬಯೋಚಾರ್‌ನ್ನು iಣ್ಣಿನಲ್ಲಿ ಸೇರಿಸಿ ಆ ಪ್ರದೇಶವನ್ನು ನೈಸರ್ಗಿಕ ಹಸಿರು ಪ್ರದೇಶವಾಗಿಸುವ ಯತ್ನ ಪ್ರಾತ್ಯಕ್ಷಿಕೆ ಇಲ್ಲಿ ಸಾಕಾರಗೊಂಡಿದೆ. ಜೈವಿಕ ವಸ್ತುಗಳನ್ನು ಮಿತವಾದ ಆಮ್ಲ ಜನಕದ ಪೂರೈಕೆಯೊಂದಿಗೆ ಕಾಯಿಸಿದಾಗ ಸಿಗುವುದೇ ಬಯೋಚಾರ್.

ತರಗೆಲೆ, ಸೋಗೆ, ಹಾಳೆ, ಗರಿಗಳು, ಅಡಕೆ ಸಿಪ್ಪೆ, ತೆಂಗಿನ ಮಟ್ಟೆಗಳನ್ನು ಸುಟ್ಟಾಗ ದೊರೆಯುವ ಬಯೋ ಚಾರ್‌ನ್ನು ಕೃಷಿಕನೇ ಉತ್ಪಾದಿಸಿಕೊಳ್ಳುವ ಪ್ರಾತ್ಯಕ್ಷಿಕೆಯನ್ನು ಸಹ ಇಲ್ಲಿ ಕೈಗೊಳ್ಳಲಾಗಿದೆ. ಈ ರೀತಿಯಾಗಿ ಉತ್ಪಾದನೆಯಾಗುವ ಬಯೋಚಾರ್ ಮಣ್ಣಿನಲ್ಲಿ ಬಹಳ ಕಾಲ ಉಳಿಯುವುದರೊಂದಿಗೆ ರೋಗ ನಿರೋಧಕ ಶಕ್ತಿಯನ್ನೂ ಪಡೆದುಕೊಂಡಿರುತ್ತದೆ. ಈ ಬಯೋಚಾರ್ ನಿಂದ ತೈಲ ಮತ್ತು ಅನಿಲ ಉತ್ಪಾದನೆಯನ್ನು ಸಿದ್ಧಪಡಿಸುವ ಆವಿಷ್ಕಾರವನ್ನು ಇಲ್ಲಿ ಕಾಣಬಹುದು. ೨೦೦ ಲೀಟರ್ ಸಾಮರ್ಥ್ಯದ ಲೋಹದ ಡ್ರಮ್‌ನ್ನು ಉಪಯೋಗಿಸಿಕೊಂಡು ಅತೀ ಕಡಿಮೆ ಖರ್ಚಿನಲ್ಲಿ ಬಯೋಚಾರ್ ಕುಲುಮೆ ಉತ್ಪಾದಿಸುವುದನ್ನು ಇಲ್ಲಿ ರೈತರಿಗೆ ಪರಿಚಯಿಸಲಾಗುತ್ತಿದೆ.

Tags: