Mysore
21
broken clouds

Social Media

ಬುಧವಾರ, 16 ಸೆಪ್ಟೆಂಬರ್ 2026
Light
Dark

ಬಾಗಿಲುಗಳನ್ನು ತೆರೆದಿಡಿ, ಸಂವಹನವನ್ನು ಪಾರದರ್ಶಕವಾಗಿಡಿ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು

ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯಂತ ಮುಖ್ಯವಾದ ಪಾಠ 

ಯಾವುದೇ ನಾಗರಿಕನು ತನ್ನ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ವ್ಯವಸ್ಥೆಯೊಳಗೆ ಕಳೆದುಹೋದಂತೆ ಅನುಭವ ಪಡಬಾರದು… ಇತ್ತೀಚೆಗೆ, ಒಬ್ಬ ಪತ್ರಕರ್ತರೊಂದಿಗೆ ಹಳೆಯ ದಿನಗಳ ಮಾತನಾಡುತ್ತಿದ್ದಾಗ, ನನಗೆ ಫ್ರಾಂಜ್ ಕಾಫ್ಕರ ‘ ದಿ ಟ್ರಯಲ’ ಪುಸ್ತಕದ ನೆನಪಾಯಿತು…

ಈ ಕಾದಂಬರಿಯು ಪಾರದರ್ಶಕವಲ್ಲದ ವ್ಯವಸ್ಥೆಯಲ್ಲಿ ಸಿಲುಕಿರುವ ಸಾಮಾನ್ಯ ನಾಗರಿಕನ ಗೊಂದಲಮಯ ಚಿತ್ರಣವನ್ನು ನೀಡುತ್ತದೆ, ಯಾರನ್ನು ಸಂಪರ್ಕಿಸಬೇಕು, ಎಲ್ಲಿಗೆ ಹೋಗಬೇಕು ಅಥವಾ ಯಾರಾದರೂ ನಿಜವಾಗಿಯೂ ನನ್ನ ಅಹವಾಲನ್ನು ಕೇಳುತ್ತಾರೆಯೇ? ಎಂಬುದು ತಿಳಿಯದ ದಯನೀಯ ಸ್ಥಿತಿ…

ಆ ಸಂಭಾಷಣೆಯು ನನ್ನನ್ನು ಬೀದರ್‌ನಲ್ಲಿ ಎಸ್.ಪಿ. ಆಗಿದ್ದ ದಿನಗಳಿಗೆ ಕರೆದೊಯ್ದಿತು. ಅನೇಕ ನಾಗರಿಕರಿಗೆ, ಹಿರಿಯ ಪೊಲೀಸ್ ಅಧಿಕಾರಿಯ ಕಚೇರಿಗೆ ಹೋಗುವುದೇ ಭಯವುಂಟು ಮಾಡುವಂತಹದ್ದಾಗಿರುತ್ತದೆ. ಅವರು ನಿಜವಾದ ಕುಂದುಕೊರತೆಗಳನ್ನು ಹೊತ್ತು ಬರಬಹುದು, ಆದರೆ ಅವರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳೂ ಇರುತ್ತವೆ…

ನನಗೆ ಅಧಿಕಾರಿಗಳನ್ನು ಭೇಟಿಯಾಗಲು ಬಿಡುತ್ತಾರೆಯೇ? ಯಾರಾದರೂ ತಾಳ್ಮೆಯಿಂದ ಕೇಳುತ್ತಾರೆಯೇ? ನಾನು ಹೊರಟು ಹೋದ ನಂತರ ನಾನು ನೀಡಿದ ದೂರಿನ ಮೇಲೆ ಏನಾದರೂ ಕ್ರಮ ಆಗುತ್ತದೆಯೇ? ಆಗ ಪೊಲೀಸ್ ಮತ್ತು ಜನರ ನಡುವಿನ ಈ ಅಂತರವನ್ನು ಕಡಿಮೆ ಮಾಡಲು ನಾನು ಬಯಸಿದೆ. ಆದ್ದರಿಂದ ಪ್ರತಿದಿನ ಸಂಜೆ ೪ ರಿಂದ ೬.೩೦ ರವರೆಗೆ ನಾಗರಿಕರು ನೇರವಾಗಿ ನನ್ನನ್ನು ಭೇಟಿಯಾಗಿ ತಮ್ಮ ಕುಂದುಕೊರತೆಗಳನ್ನು ಹಂಚಿಕೊಳ್ಳಲು ಎಸ್‌ಪಿ ಕಚೇರಿಯನ್ನು ತೆರೆದಿಟ್ಟೆ . ಆರಂಭದ ದಿನಗಳಲ್ಲಿ ಕಾಯುತ್ತಿದ್ದ ಜನರ ಮಾತುಗಳನ್ನು ಕೇಳುವಷ್ಟರಲ್ಲಿ , ಅನೇಕ ಬಾರಿ ರಾತ್ರಿ ೯ ಗಂಟೆ ಆಗುತ್ತಿತ್ತು.

ಈ ಆಲಿಸುವಿಕೆ ಜೊತೆಗೆ ಪಾರದರ್ಶಕತೆಯೂ ಇರಬೇಕಿತ್ತು. ನಾಗರಿಕರು ಪೊಲೀಸ್ ಕೆಲಸ ಮತ್ತು ಪ್ರಮುಖ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರಲೆಂದು ನಾವು ಪತ್ರಿಕಾ ಮಾಧ್ಯಮದ ಸ್ನೇಹಿತರೊಂದಿಗೆ ಆಗಾಗ್ಗೆ ಮುಕ್ತ ಸಂವಾದಗಳನ್ನು ನಡೆಸಲು ಪ್ರಾರಂಭಿಸಿದೆವು. ಕಚೇರಿಯನ್ನು ಕೂಡ ಸೌಹಾರ್ದಯುತವಾಗಿರಿಸಲು ನಾನು ಬಯಸಿದೆ. ಜಿಲ್ಲಾಧಿಕಾರಿಗಳಾಗಿದ್ದ ಗೋವಿಂದ್ ರೆಡ್ಡಿ ಅವರ ಸಹಕಾರದಿಂದ ಗೋಡೆಗಳನ್ನು ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಕಲಾಕೃತಿಗಳಿಂದ ಪೇಂಟಿಂಗ್ ಮಾಡಲಾಯಿತು. ಸಂದರ್ಶಕರ ಕೊಠಡಿಯಲ್ಲಿ ಪ್ರತಿಷ್ಠಿತ ಪೊಲೀಸ್ ಅಧಿಕಾರಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳು ಮತ್ತು ಸ್ಥಳೀಯ ಗಡಿನಾಡು ಲೇಖಕರು ಬರೆದ ಪುಸ್ತಕಗಳಿದ್ದವು. ನಮ್ಮನ್ನು ಭೇಟಿಯಾಗಲು ಕಾಯುತ್ತಿದ್ದ ನಾಗರಿಕರು ಕುಳಿತು, ಓದಿ, ಇದು ತಮಗಾಗಿಯೇ ಇರುವ ಸ್ಥಳ ಎಂಬ ಭಾವನೆಯನ್ನು ಹೊಂದಬಹುದಿತ್ತು. ಕಾಲಕ್ರಮೇಣ, ನಾನು ಒಂದು ಬದಲಾವಣೆಯನ್ನು ಗಮನಿಸಿದೆ, ನಾಗರಿಕರಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಎಸ್‌ಪಿ ಕಚೇರಿಯನ್ನು ಪ್ರವೇಶಿಸಲು ಪ್ರಾರಂಭಿಸಿದರು. ಮುಕ್ತವಾಗಿ ಬರಬಹುದು, ನೇರವಾಗಿ ಮಾತನಾಡಬಹುದು ಮತ್ತು ಗೌರವದಿಂದ ನಮ್ಮ ಮಾತುಗಳು ಆಲಿಸಲ್ಪಡುತ್ತವೆ, ಕ್ರಮ ಕೂಡಲೆ ಜರುಗಿಸಲಾಗುತ್ತದೆ ಎಂಬುದು ಅವರ ಅರಿವಿಗೆ ಬಂದಿತು.

ಆ ಅನುಭವವು ಸಾರ್ವಜನಿಕ ಸೇವೆಯ ಬಗ್ಗೆ ನಾನು ದೃಢವಾಗಿ ನಂಬಿರುವ ವಿಷಯವನ್ನು ಬಲಪಡಿಸಿತು. ಒಂದು ಕಚೇರಿಯು ಅಧೀಕಾರವನ್ನು ಪ್ರತಿನಿಧಿಸಬಹುದು, ಆದರೆ ಅದು ಎಂದಿಗೂ ಆಡಳಿತ ಮತ್ತು ನಾಗರಿಕರ ನಡುವಿನ ತಡೆಗೋಡೆಯಾಗಬಾರದು. ಸಮವಸ್ತ್ರವು ನಮಗೆ ಜವಾಬ್ದಾರಿ ಮತ್ತು ಅಧಿಕಾರವನ್ನು ನೀಡುತ್ತದೆ. ಆದರೆ ಸಮವಸ್ತ್ರದ ಹಿಂದೆ ಕೇಳಲು, ವಿವರಿಸಲು ಮತ್ತು ಕಾರ್ಯನಿರ್ವಹಿಸಲು ಸಿದ್ಧರಿರುವ ಒಬ್ಬರಿದ್ದಾರೆ ಎಂದು ಜನರಿಗೆ ತಿಳಿದಾಗ ವಿಶ್ವಾಸ ಬೆಳೆಯುತ್ತದೆ. ಬಹುಶಃ ಫ್ರಾಂಜ್ ಕಾಫ್ಕರ ಅಧಿಕಾರಶಾಹಿ ಜಟಿಲತೆಗೆ ಅತ್ಯಂತ ಸರಳ ಉತ್ತರ ಸಾರ್ವಜನಿಕ ಸಂಸ್ಥೆಗಳಿಗೊಂದು ಅತ್ಯಂತ ಮುಖ್ಯವಾದ ಪಾಠವಾಗಿದೆ: ಬಾಗಿಲುಗಳನ್ನು ತೆರೆದಿಡಿ, ಸಂವಹನವನ್ನು ಪಾರದರ್ಶಕವಾಗಿಡಿ, ಮತ್ತು ಪ್ರತಿಯೊಬ್ಬ ನಾಗರಿಕನೂ ತನ್ನ ಮಾತು ಕೇಳಿಸಿಕೊಳ್ಳಲಾಗಿದೆ ಎಂಬ ಸಂತೃಪ್ತಿ ಬರುವಂತೆ ಮಾಡಿ.

” ನಾಗರಿಕರಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಎಸ್‌ಪಿ ಕಚೇರಿಯನ್ನು ಪ್ರವೇಶಿಸಲು ಪ್ರಾರಂಭಿಸಿದರು. ಮುಕ್ತವಾಗಿ ಬರಬಹುದು, ನೇರವಾಗಿ ಮಾತನಾಡಬಹುದು ಮತ್ತು ಗೌರವದಿಂದ ನಮ್ಮ ಮಾತುಗಳು ಆಲಿಸಲ್ಪಡುತ್ತವೆ, ಕ್ರಮ ಕೂಡಲೆ ಜರುಗಿಸಲಾಗುತ್ತದೆ ಎಂಬುದು ಅವರ ಅರಿವಿಗೆ ಬಂದಿತು.”

 

 

Tags:
error: Content is protected !!