ಕೆ.ಬಿ.ರಮೇಶನಾಯಕ
೧೯೧೩ರಲ್ಲಿ ಮೈಸೂರಲ್ಲಿ ತರಬೇತಿ ಶಾಲೆಯಾಗಿ ಆರಂಭ
ರಾಜ್ಯದ ಜನರಲ್ಲಿ ಅತ್ಯಂತ ಸುರಕ್ಷತಾ ಮನೋ ಭಾವನೆ ಮೂಡಿಸಿರುವ ರಾಜ್ಯ ಪೊಲೀಸ್ ಇಲಾಖೆಯ ಶಿಸ್ತುಬದ್ಧ ಕಾರ್ಯಕ್ಕೆ ಅನವರತ ತರಬೇತಿ ನೀಡುತ್ತಿರುವ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯು ೧೨೫ ವರ್ಷಗಳನ್ನು ಪೂರೈಸುವುದರ ಕಡೆಗೆ ಹೆಜ್ಜೆ ಇರಿಸಿದೆ.
೧೮೯೨ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಪೊಲೀಸ್ ತರಬೇತಿ ಶಾಲೆ ೧೮೯೭ರಲ್ಲಿ ಇತರೆ ಜಿಲ್ಲೆಗಳಿಗೂ ವಿಸ್ತರಿಸಿತು. ಮೈಸೂರಿನಲ್ಲಿ ೧೯೧೩ರಲ್ಲಿ ಆರಂಭವಾಗಿ, ೧೯೪೫ರಲ್ಲಿ ಸಂಯುಕ್ತ ತರಬೇತಿ ಶಾಲೆಯಾಗಿ, ೧೯೫೮ರಲ್ಲಿ ಮೈಸೂರು ಶಾಲೆಯು ಪೊಲೀಸ್ ತರಬೇತಿ ಕಾಲೇಜಾಗಿ ಪರಿವರ್ತನೆಗೊಂಡಿತು. ರಾಜ್ಯ ಸರ್ಕಾರ ೧೯೯೨ರಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯಾಗಿ ಉನ್ನತೀಕರಿಸಿತು.
ಅಕಾಡೆಮಿಯು ಮೈಸೂರಿನ ಕೇಂದ್ರಭಾಗದಲ್ಲಿದ್ದು, ಸುಮಾರು ೪೮ ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡು ದೇಶದಲ್ಲೇ ನಂಬರ್ ಒನ್ಕರ್ನಾಟಕ ಪೊಲೀಸ್ ಅಕಾಡೆಮಿ ಎಂಬ ಬಿರುದು ಪಡೆದು ಕೊಂಡಿದೆ.
೨,೫೦೦ಕ್ಕೂ ಹೆಚ್ಚು ಗೆಜೆಟೆಡ್ ಅಧಿಕಾರಿಗಳಿಗೆ ಹಾಗೂ ಐದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪ್ರೊಬೆಷನರ್‌ಗಳಿಗೆ ತರಬೇತಿ ನೀಡಿದ ಏಕೈಕ ತರಬೇತಿ ಸಂಸ್ಥೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಈ ಅಕಾಡೆಮಿಯು ತನ್ನ ನೂರು ವರ್ಷಗಳ ನಿರಂತರ ಸೇವೆಯ ನಂತರ ೨೦೧೩ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿತ್ತು.
ಅಕಾಡೆಮಿಯಲ್ಲಿ ಪೊಲೀಸ್ ಇಲಾಖೆಗೆ ನೇರ ನೇಮಕ ಗೊಂಡ ಪ್ರೊಬೆಷನರಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಧಿಕಾರಿಗಳಿಗೆ ಒಂದು ವರ್ಷದ ಬುನಾದಿ ತರಬೇತಿ, ಐಪಿಎಸ್ ಅಧಿಕಾರಿಗಳಿಗೆ ಎರಡು ವಾರಗಳ ತರಬೇತಿ ಹಾಗೂ ಸೇವಾ ನಿರತ ಪೊಲೀಸ್ ಅಧಿಕಾರಿಗಳಿಗೆ ಪುನಶ್ಚೇತನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಈ ಸಂಸ್ಥೆಯು ರಾಜ್ಯದ ಅಬಕಾರಿ, ಸಾರಿಗೆ, ಅಗ್ನಿಶಾಮಕದಳ, ಕಾರಾಗೃಹ ಅಧಿಕಾರಿಗಳು, ಪುದುಚೇರಿ ರಾಜ್ಯದ ಅಧಿಕಾರಿಗಳು ಹಾಗೂ ಮಾಲ್ಡೀವ್ಸ್ ಮತ್ತು ಭೂತಾನ್ ದೇಶದ ಅಧಿಕಾರಿಗಳಿಗೆ ಬುನಾದಿ ತರಬೇತಿ ನೀಡಿದಗೌರವ ಹೊಂದಿದೆ. ಇದಲ್ಲದೆ, ಅಕಾಡೆಮಿಯು ಸಮಾಜದ ವಿವಿಧ ರಂಗಗಳಲ್ಲಿ ಸಾಧನೆಗೈದ ಮಹನೀಯರ ಉಪನ್ಯಾಸ ಮಾಲಿಕೆ ಆರಂಭಿಸಿದೆ. ಈ ಮಾಲಿಕೆಯಲ್ಲಿ ಅಕಾಡೆಮಿಯ ಬುನಾದಿ ತರಬೇತಿಯಲ್ಲಿದ್ದ ೨೧೮ ಪ್ರೊಬೆಷನರಿ ಪ್ರಶಿಕ್ಷಣಾರ್ಥಿಗಳು ಹಾಗೂ ವಿಡಿಯೋ ಕಾನ್ಛರೆನ್ಸ್ ಮೂಲಕ ಕಲಬುರಗಿಯಲ್ಲಿರುವ ಪೊಲೀಸ್ ತರಬೇತಿ ಶಾಲೆಯ ೧೬೯ ಪ್ರೊಬೆಷನರಿ ಸಬ್‌ಇನ್‌ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದು ಗಮನಾರ್ಹವಾಗಿದೆ.
ಭಯೋತ್ಪಾದನೆ ಹೆಚ್ಚುತ್ತಿರುವ ಕಾಲದಲ್ಲಿ ಸ್ಫೋಟದ ನಂತರದ ತನಿಖಾ ಕಾರ್ಯ ಕೈಗೊಳ್ಳುವಲ್ಲಿ (ಐಇಡಿ) ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ ನೆರವಿನೊಡನೆ ತರಬೇತಿ ನೀಡಲು ಕೇಂದ್ರ ಸರ್ಕಾರವು ದೇಶದಲ್ಲಿ ಎರಡು ಸಂಸ್ಥೆ ಗಳನ್ನು ಗುರುತಿಸಿದೆ. ಹೊಸದಿಲ್ಲಿಯ ಎನ್. ಎಸ್.ಜಿ. ಸಂಸ್ಥೆ ಹೊರತುಪಡಿಸಿದರೆ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಈ ಹೆಗ್ಗಳಿಕೆ ದಕ್ಕಿದೆ.
ಇಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಸುಸಜ್ಜಿತ ವಸತಿ ನಿಲಯ, ಆಧುನಿಕ ಭೋಜನ ಶಾಲೆಯಿದ್ದು, ಅತ್ಯಾಧುನಿಕ ಸಾಧನ ಒಳಗೊಂಡ ಅಗತ್ಯ ಸೇವೆಗಳ ಸಂಕೀರ್ಣವೂ ಇಲ್ಲಿದೆ. ಒಲಿಂಪಿಕ್ ಕ್ರೀಡಾ ಮಟ್ಟದ ಈಜುಕೊಳ, ಅತ್ಯುತ್ತಮ ಪರೇಡ್ ಮೈದಾನ, ಕ್ರೀಡಾಂಗಣ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ ಕುರಿತು ತರಬೇತಿ ಜೊತೆಗೆ ದೇಶ ದಲ್ಲಿಯೇ ಅತ್ಯಾಧುನಿಕ ವಿಧಿವಿಜ್ಞಾನ ಪ್ರಯೋಗಾಲಯ ಮದರಿಯ ಪೊಲೀಸ್ ಠಾಣೆ ಸಹ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿದೆ. ಶತಮಾನವನ್ನು ಪೂರ್ಣಗೊಳಿಸಿ ೧೨೫ನೇ ವರ್ಷಗಳ ಕಡೆಗೆ ಹೆಜ್ಜೆ ಇಟ್ಟಿರುವ ಅಕಾಡೆಮಿಯು ರಾಜ್ಯದಲ್ಲೇ ಹೆಮ್ಮೆಯ ಕೇಂದ್ರವಾಗಿದೆ.
” ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಕೆಲಸ ಮಾಡುವುದಕ್ಕೆ ಒಲವು ತೋರುವಂತಹ ಅಧಿಕಾರಿಗಳಿಗೆ ತಿಳಿಸಿಕೊಡುವ ವಿಚಾರಗಳು ಎಂತಹದ್ದೇ ಪ್ರಕರಣವಾದರೂಭೇದಿಸುವ ಮಟ್ಟಿಗೆ ತರಬೇತಿ ದೊರೆಯಲಿದೆ.”





