Mysore
18
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಮಹಾ ಮಾದಲಿ ಸೇವೆಯೊಂದಿಗೆ ತೆರೆ ಕಂಡ ಕಪ್ಪಡಿ ಜಾತ್ರೆ

26 ದಿನಗಳ ಕಾಲ ನಡೆದ ಜಾತ್ರೆಗೆ ಸಾವಿರಾರು ಮಂದಿ ಭೇಟಿ: ಸಾಲು ಪಂಕ್ತಿ ಭೋಜನ

– ಭೇರ್ಯ ಮಹೇಶ್

ಕೆ.ಆರ್.ನಗರ: ತಾಲ್ಲೂಕಿನ ಪ್ರಸಿದ್ಧ ಕಪ್ಪಡಿ ಕ್ಷೇತ್ರದಲ್ಲಿ ಮಹಾ ಶಿವರಾತ್ರಿಯಿಂದ ಪ್ರಾರಂಭವಾಗಿದ್ದ ಜಾತ್ರೋತ್ಸವಕ್ಕೆ 26 ದಿನಗಳ ನಂತರ ಸೋಮವಾರ ಅದ್ಧೂರಿ ಮಹಾಮಾದಲಿ ಸೇವೆ ನಡೆಸುವುದರೊಂದಿಗೆ ತೆರೆ ಎಳೆಯಲಾಯಿತು.

ಕಾವೇರಿ ನದಿ ದಂಡೆಯ ಹಸಿರು ತೋಪಿನಲ್ಲಿ ಇರುವ ಕಪ್ಪಡಿ ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ರಾಚಪ್ಪಾಜಿ, ಚನ್ನಾಜಮ್ಮನವರ
ಗದ್ದಿಗೆ, ಸಿದ್ದಪ್ಪಾಜಿ ದೇವಸ್ಥಾನ, ಉರಿ ಗದ್ದಿಗೆ, ಮಂಟೇಸ್ವಾಮಿ, ಬಸವಣ್ಣ ದೇಗುಲವಿದ್ದು, ನೀಲಗಾರರ ಸಂಪ್ರದಾಯದಂತೆ ಭಕ್ತಾದಿಗಳಿಂದ ಇಲ್ಲಿ ಗದ್ದುಗೆ, ಕಂಡಾಯ ಪೂಜೆ ನಡೆಯುತ್ತದೆ. ಕ್ಷೇತ್ರದಲ್ಲಿ ಭೋಜನ ಶಾಲೆ ಇದ್ದು, ಜಾತ್ರೋತ್ಸವ ಸಂದರ್ಭದಲ್ಲಿ ನಿತ್ಯ ಪ್ರಸಾದ ವಿನಿಯೋಗ ನಡೆಯುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೋತ್ಸವದ ಕೊನೆಯ ದಿನಗಳಂದು ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಭಾನುವಾರ ಮತ್ತು ಸೋಮವಾರವೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಕಪ್ಪಡಿ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳು ಮಾಂಸಾಹಾರ ಮತ್ತು ಸಸ್ಯಾಹಾರ ಅಡುಗೆ ತಯಾರಿಸಿಕೊಂಡು ಊಟ ಸವಿದರು.

ಸೋಮವಾರ ದೇವರ ದರ್ಶನ ಮಾಡಿದ ಭಕ್ತಾದಿಗಳು, ಮಹಾ ಮಾದಲಿ ಪ್ರಸಾದ ಸೇವೆಯಲ್ಲಿ ಭಾಗಿಯಾಗಿದ್ದರು. ಮಾರಾಟಕ್ಕೆ ಇಡಲಾಗಿದ್ದ ಮಹಾ ಮಾದಲಿ ಪ್ರಸಾದ ಖರೀದಿಸಿ ತೆರಳಿದರು.

ಮಂಗಳವಾರ ಗದ್ದುಗೆ ಮಹಾಭಿಷೇಕಕ್ಕೂ ಭಕ್ತಾದಿಗಳು ಹೆಚ್ಚಾಗಿ ಸೇರಿದ್ದರು. ಮಹಾಭಿಷೇಕ ನಡೆದ ನಂತರ ಮಧ್ಯಾಹ್ನ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳು ಕಪ್ಪಡಿಯಿಂದ ನಿರ್ಗಮಿಸಿದರು.

ಪ್ರತಿ ವರ್ಷ ಉರಿ ಗದ್ದುಗೆಗೆ ಬಂದು ಪೂಜೆ ಸಲ್ಲಿಸಿ ಹೋಗುವುದರಿಂದ ದೇವರು ನಮಗೆ ಆಶೀರ್ವಾದ ಮಾಡುತ್ತಾರೆ. ಇದರಿಂದ ಬೆಟ್ಟದಷ್ಟು
ಕಷ್ಟಗಳು ಬಂದರೂ ನೀರಿನಂತೆ ಕರಗಿ ಹೋಗುತ್ತವೆ. ಮನೆ ದೇವರು ಆಗಿದ್ದರಿಂದ 30 ವರ್ಷಗಳಿಂದಲೂ ಕಪ್ಪಡಿ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಈಗ ಮಗನೊಂದಿಗೆ ಬಂದು ಮುಡಿ ಕೊಟ್ಟು ಪೂಜೆ ಸಲ್ಲಿಸಿದ್ದೇನೆ.

-ಮಹದೇವ, ಹರಳ, ಕೊಳ್ಳೇಗಾಲ, ತಾಲ್ಲೂಕು.

ಕಪ್ಪಡಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳ ಸಂಖ್ಯೆ ಹಿಂದಿಗಿಂತ ಈ ಬಾರಿ ಕಡಿಮೆಯಾಗಿದೆ. ಜಾತ್ರೋತ್ಸವದ ಸಂದರ್ಭದ ಕೊನೆಯ 2-3 ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗುವುದು ಸಾಮಾನ್ಯ. ಸೋಮವಾರ ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

-ಕೃಷ್ಣಗೌಡ, ವ್ಯಾಪಾರಿ, ಬಾಲೂರು.

Tags:
error: Content is protected !!