ಮಂಜು ಕೋಟೆ
ಕಬಿನಿ ಜಲಾಶಯ ಭರ್ತಿ; ೧೦ ಸಾವಿರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ
ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಬರದ ನಡುವೆಯೂ ಕೇರಳದ ವಯನಾಡು ಮತ್ತು ಕೊಡಗಿನಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಕಬಿನಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ೪ ಗೇಟ್‌ಗಳ ಮೂಲಕ ೧೦,೦೦೦ ಕ್ಯೂಸೆಕ್ಸ್ ನೀರನ್ನು ನದಿಯ ಮೂಲಕ ತಮಿಳುನಾಡಿಗೆ ಬಿಡಲಾಗಿದೆ.
ಕಬಿನಿ ಜಲಾಶಯ ೧ ತಿಂಗಳ ಹಿಂದೆ ೫೨ ಅಡಿಗಳಿಗೆ ಕುಸಿತ ಕಂಡಿದ್ದು, ರೈತರು, ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು. ಜುಲೈ ತಿಂಗಳಿನಲ್ಲಿ ಕೇರಳದ ವಯನಾಡು ಮತ್ತು ಕೊಡಗು ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಕ್ಕೆ ಈಗ ೧೫,೦೦೦ ಕ್ಯೂಸೆಕ್ಸ್‌ವರೆಗೂ ಒಳಹರಿವು ಇದೆ.
ಇದರಿಂದಾಗಿ ಜಲಾಶಯದ ನೀರಿನ ಮಟ್ಟ ೮೨ ಅಡಿಗಳಿಗೆ ಏರಿಕೆಯಾಗಿದೆ. ಜಲಾಶಯದ ಗರಿಷ್ಟ ಮಟ್ಟ ೮೪ ಅಡಿಗಳು. ಜಲಾಶಯದ ಸುರಕ್ಷತೆ ದೃಷ್ಟಿಯಿಂದಾಗಿ ೮೨ ಅಡಿಗಳಿಗೆ ಮಾತ್ರ ನೀರು ಶೇಖರಣೆ ಮಾಡಿಕೊಂಡು ಒಳಹರಿವಿನ ನೀರನ್ನು ೪ ಕ್ರಸ್ಟ್‌ಗೇಟ್‌ಗಳ ಮೂಲಕ ಶನಿವಾರ ಮಧ್ಯಾಹ್ನ ೩ ಗಂಟೆಯಲ್ಲಿ ಅಧಿಕಾರಿಗಳಾದ ರಂಗಯ್ಯ ಮತ್ತು ಗಣೇಶ್ ಅವರು ನದಿ ಪಾತ್ರದ ಜನರಿಗೆ ಸೈರನ್ ಮೂಲಕ ವಿಚಾರ ತಿಳಿಸಿ ನದಿಗೆ ಬಿಟ್ಟಿದ್ದಾರೆ.
ಒಂದೇ ತಿಂಗಳಿನಲ್ಲಿ ೩೨ ಅಡಿಗಳಷ್ಟು ನೀರು ಶೇಖರಣೆಗೊಂಡಿದ್ದು, ೧೫ ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಈ ಬಾರಿ ತಮಿಳುನಾಡಿಗೆ ನೀರು ಹರಿಸಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಕಬಿನಿ ಜಲಾಶಯದಿಂದ ನೀರು ಹರಿಸುವ ಮೂಲಕ ಪಾಲನೆ ಮಾಡುವುದು ಖಚಿತವಾಗಿದೆ. ಪ್ರತಿನಿತ್ಯ ತಮಿಳುನಾಡಿಗೆ ಮೂರೂವರೆ ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಆದೇಶವಿದ್ದು, ಈಗ ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸುಮಾರು ೧೦ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅಽಕಾರಿಗಳಿಗೆ ಕಬಿನಿ ಜಲಾಶಯ ವರದಾನವಾಗಿದೆ.
ತಾಲ್ಲೂಕಿನಲ್ಲಿರುವ ಕಬಿನಿ, ನುಗು ಜಲಾಶಯಗಳು ಸ್ಥಳೀಯರು ಮತ್ತು ರೈತರಿಗಿಂತ ಹೊರಗಿನವರಿಗೆ ಉಪಯುಕ್ತ ಎಂಬುದು ಸಾಬೀತಾಗುತ್ತಿದೆ. ತಾಲ್ಲೂಕಿನ ಬಹುತೇಕ ಕೆರೆಕಟ್ಟೆಗಳು ಮಳೆ ಇಲ್ಲದೆ ಬರಿದಾಗಿವೆ. ಈಗಲಾದರೂ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಹಾಗೂ ತಾರಕ ಜಲಾಶಯಕ್ಕೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಕೆಲಸ ಮಾಡಲು ಶಾಸಕ ಅನಿಲ್ ಚಿಕ್ಕಮಾದು, ನೀರಾವರಿ ಇಲಾಖೆಯ ಅಧಿಕಾರಿಗಳಾದ ರಘುಪತಿ, ಮಹೇಶ್, ಗಣೇಶ್ ಅವರು ಮುಂದಾಗಿ ಈ ಭಾಗದ ರೈತರ ಹಿತ ಕಾಪಾಡಬೇಕಿದೆ.
” ಜಲಾಶಯದ ಗರಿಷ್ಟ ಮಟ್ಟ ೮೪ ಅಡಿ ತಲುಪಲು ಎರಡು ಅಡಿ ಮಾತ್ರ ಇದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ೪ ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತಿದ್ದು, ಈಗ ೧೦,೦೦೦ ಕ್ಯೂಸೆಕ್ಸ್ ನೀರು ಬಿಡುತ್ತಿದ್ದು, ರಾತ್ರಿ ಆಗುತ್ತಿದ್ದಂತೆ ನೀರಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿದೆ.”
ರಂಗಯ್ಯ, ಇಇ, ಕಬಿನಿ ಜಲಾಶಯ
” ಕಬಿನಿ ಜಲಾಶಯ ತುಂಬಿರುವುದು ಸಂತಸ ತಂದಿದೆ. ಈ ಭಾಗದ ರೈತರು, ಸಾರ್ವಜನಿಕರು ಹಾಗೂ ಕೆರೆಕಟ್ಟೆಗಳಿಗೆ, ಕುಡಿಯುವ ನೀರಿಗೆ ಸಮಸ್ಯೆ ನಿವಾರಣೆಯಾಗಲಿದೆ. ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆ ಮಾತನಾಡಿದ್ದೇನೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಸರ್ಕಾರ ಕಬಿನಿ ಜಲಾಶಯ ಭರ್ತಿಯಾಗಿರುವುದರಿಂದ ನಿರಾಳವಾದಂತಾಗಿದೆ. ಈ ಭಾಗದ ನೀರಾವರಿ ಪ್ರದೇಶ ಮತ್ತು ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇನೆ.”
ಅನಿಲ್ ಚಿಕ್ಕಮಾದು, ಶಾಸಕರು





