ವಿವಿಧ ಸಂಘ ಸಂಸ್ಥೆಗಳಿಂದ ಕೆಸರುಗದ್ದೆ ಕ್ರೀಡಾಕೂಟ ಆಯೋಜನೆ; ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಸಂಭ್ರಮಿಸುವ ಗ್ರಾಮಸ್ಥರು
ನವೀನ್ ಡಿಸೋಜ
ಮಡಿಕೇರಿ: ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಮಂಜಿನ ಆಟ, ಜೊತೆಗೆ ಒಂದಷ್ಟು ಚಳಿಯ ಕಾಟ, ಇದ್ಯಾವುದೂ ಲೆಕ್ಕಕ್ಕಿಲ್ಲ ಎಂಬಂತೆ ಗದ್ದೆಯಲ್ಲಿ ಕೆಸರಿನೋಕುಳಿ ಆಡುತ್ತಿರುವ ಮಕ್ಕಳು.. ಹಗ್ಗ ಜಗ್ಗಾಟ, ಭರ್ಜರಿ ಓಟ, ಕ್ರಿಕೆಟ್ ಇವೆಲ್ಲವೂ ಕೊಡಗು ಜಿಲ್ಲೆಯ ಅಲ್ಲಲ್ಲಿ ಕಂಡುಬರುತ್ತಿರುವ ಚಿತ್ರಣ.
ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂದಾಗ ಒಂದಷ್ಟು ಆತಂಕ, ಭಯದ ವಾತಾವರಣ ಇರುತ್ತದೆ. ಜೊತೆಗೆ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಇದರ ನಡುವೆ ಜಿಲ್ಲೆಯಲ್ಲಿ ಮನರಂಜನೆಗೆ ಕೊರತೆ ಇಲ್ಲ. ಜಿಟಿಜಿಟಿ ಮಳೆಯ ನಡುವೆ ಕೆಸರಿನಲ್ಲಿ ಆಯೋಜಿಸಲ್ಪಡುವ ವಿವಿಧ ಕ್ರೀಡೆಗಳು ನೋಡುಗರ ಗಮನ ಸೆಳೆಯುತ್ತವೆ. ಕ್ರೀಡಾ ತವರು ಎನಿಸಿಕೊಂಡಿರುವ ಕೊಡಗಿನಲ್ಲಿ ಬೇಸಿಗೆಯಲ್ಲಿ ಮಾತ್ರವಲ್ಲದೆ ಮಳೆಗಾಲದಲ್ಲಿಯೂ ನಾನಾ ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಕೆಸರುಗದ್ದೆಯಲ್ಲಿ ನಡೆಯುವ ಕ್ರೀಡಾಕೂಟ ಗಳ ಮಹತ್ವ ಪಡೆದುಕೊಂಡಿದೆ.
ಬೇಸಿಗೆಯ ಸಮಯದಲ್ಲಿ ಹಾಕಿ, ಕ್ರಿಕೆಟ್, ಫುಟ್ ಬಾಲ್, ವಾಲಿಬಾಲ್ ಒಂದಿಲ್ಲೊಂದು ಕ್ರೀಡಾಕೂಟಗಳು ನಡೆಯುವ ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ, ಕೆಸರು ಗದ್ದೆ ಕ್ರೀಡಾಕೂಟಗಳು ಗಮನ ಸೆಳೆಯುತ್ತವೆ. ಈ ಕ್ರೀಡಾಕೂಟಗಳು ದೇಸಿ ಸೊಗಡನ್ನು ಅನಾವರಣಗೊಳಿಸುತ್ತವೆ.
ಇಲ್ಲಿನ ಕ್ರೀಡಾಪ್ರೇಮಿಗಳು ಮಳೆ, ಚಳಿಗೆ ಮೈಯೊಡ್ಡಿ ಆಟವಾಡುವುದಕ್ಕಾಗಿಯೇ ಕೆಲವು ಸಂಘ-ಸಂಸ್ಥೆ ತಂಡಗಳನ್ನು ರಚಿಸಿಕೊಂಡು ಆಯೋಜಕರನ್ನು ಹಿಡಿದು ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದಾರೆ.
ಗದ್ದೆಯಲ್ಲಿ ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ಕೆಸರು ಗದ್ದೆ ಓಟ, ಮುಕ್ತ ಓಟ, ಸಾಂಪ್ರದಾಯಿಕ ನಾಟಿ ಓಟದ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಆಯೋಜಿಸಿ, ವಿಜೇತರಿಗೆ ಬಹುಮಾನ ಘೋಷಿಸುತ್ತಾರೆ.
ಹಿಂದಿನ ಕಾಲದಲ್ಲಿ ನಾಟಿ ಆದ ನಂತರ ಪ್ರತಿ ಗ್ರಾಮದಲ್ಲಿ ನಾಟಿ ಓಟ ನಡೆಯುತ್ತಿತ್ತು. ಇದರಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನವಾಗಿ ಬಾಳೆಗೊನೆ, ಎರಡನೇ ಬಹುಮಾನವಾಗಿ ತೆಂಗಿನಕಾಯಿ ಹಾಗೂ ಮೂರನೇ ಬಹುಮಾನವಾಗಿ ವೀಳ್ಯೆದೆಲೆ ನೀಡಿ ಗೌರವಿಸಲಾಗುತ್ತಿತ್ತು. ಕಾಲಾನುಕ್ರಮದಲ್ಲಿ ಇದೇ ಮುಂದುವರಿದು ಕೆಸರುಗದ್ದೆ ಕ್ರೀಡಾಕೂಟ ಎಂದಾಯಿತು. ಮೊದಲು ನಾಟಿ ಓಟ ಮಾತ್ರ ನಡೆಯುತ್ತಿತ್ತು. ಆದರೆ ಇದೀಗ ನಾಟಿ ಓಟದೊಂದಿಗೆ ನಾನಾ ಕ್ರೀಡಾಕೂಟಗಳು ನಡೆಯುವುದರೊಂದಿಗೆ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತಿದೆ.
” ವಿಶಿಷ್ಟ ಸಂಸ್ಕ ತಿ, ಆಚಾರ-ವಿಚಾರಗಳಿಂದ ಗಮನಸೆಳೆಯುತ್ತಿರುವ ಕೊಡಗಿನಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಜೊತೆಗೆ ಮರೆಯಾಗುತ್ತಿರುವ ಗ್ರಾಮೀಣ ಸೊಗಡಿನ ಆಟೋಟಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತಿದೆ.”
-ಚಂದ್ರಕಾಂತ್, ಆಯೋಜಕರು, ಫಾರ್ಮರ್ಸ್ ಕ್ಲಬ್ , ತಾಳತ್ತಮನೆ
” ಮಳೆಗಾಲದ ಕೆಸರಿನ ಆಟದ ಮಜವೇ ಬೇರೆ. ಊರಿನವರೆಲ್ಲಸೇರಿ, ನೆರೆ ಊರವರನ್ನು ಸೇರಿಸಿ ಕೊಂಡು ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಎನ್ನದೇ ಎಲ್ಲರೂ ಒಂದೆಡೆ ಕೆಸರಿನಲ್ಲಿ ಎದ್ದು ಬಿದ್ದು ಆಟ ಆಡುತ್ತಿದ್ದರೆ ಅದನ್ನು ವರ್ಣಿಸಲಾಗದು. ಗ್ರಾಮಸ್ಥರೆಲ್ಲರೂ ಸೇರಲು ಇಂತಹ ಕ್ರೀಡಾಕೂಟ ಸಹಕಾರಿ. ಇಂತಹ ಕ್ರೀಡಾಕೂಟಗಳು ಇನ್ನು ಹೆಚ್ಚಾಗಿ ಆಯೋಜನೆ ಗೊಳ್ಳುವಂತಾಗಬೇಕು.”
-ಸೌಮ್ಯ ಪ್ರೀತಮ್, ಸ್ಪರ್ಧಿ





