ಕೆ.ಬಿ.ರಮೇಶನಾಯಕ
ಸದಸ್ಯರ ಸಂಖ್ಯೆ ಹೆಚ್ಚಳದಿಂದ ಹಲವು ಸಮಿತಿಗಳಲ್ಲಿ ಗೊಂದಲ ನಿರ್ಮಾಣ ತಪ್ಪಿಸಲು ಯೋಜನೆ
ದಸರಾ ಉಪಸಮಿತಿ:ಅಧಿಕಾರೇತರ ಸದಸ್ಯರ ಬೇಕಾಬಿಟ್ಟಿ ನೇಮಕಾತಿ ತಡೆಯಲು ಚಿಂತನೆ
ಮೈಸೂರು: ಅರಮನೆ ಅಂಗಳದಲ್ಲಿ ಕುಳಿತು ಜಂಬೂಸವಾರಿ ಮೆರವಣಿಗೆ ವೀಕ್ಷಣೆ ಮಾಡುವವರ ಆಸನಗಳ ಸಂಖ್ಯೆಯನ್ನು ಕಡಿತ ಮಾಡಿದ್ದ ಸರ್ಕಾರ, ಈ ಬಾರಿ ಉಪ ಸಮಿತಿಗಳಲ್ಲಿ ಅಧಿಕಾರೇತರ ಸದಸ್ಯರ ಸಂಖ್ಯೆಯನ್ನು ಬೇಕಾಬಿಟ್ಟಿ ನೇಮಕ ಮಾಡುವ ಬದಲಿಗೆ ಮಿತಿ ಹೇರಲು ಚಿಂತನೆ ನಡೆಸಿದೆ.
ಹಲವು ಉಪ ಸಮಿತಿಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಿ ಕೊನೆಯ ದಿನಗಳಲ್ಲಿ ಉಂಟಾಗುತ್ತಿದ್ದ ಗೊಂದಲ, ಪಾಸ್‌ಗಳ ಒತ್ತಡವನ್ನು ತಗ್ಗಿಸಲು ಕೊನೆಗೂ ಸದಸ್ಯರ ಮಿತಿಯನ್ನು ೫೦ ದಾಟದಂತೆ ನೋಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದಸರಾ ಮಹೋತ್ಸವದ ವಿವಿಧ ಉಪ ಸಮಿತಿಗಳಿಗೆ ಕಾರ್ಯಾಧ್ಯಕ್ಷರು, ಉಪ ವಿಶೇಷಾಧಿಕಾರಿಗಳು, ಕಾರ್ಯ ದರ್ಶಿಗಳನ್ನಾಗಿ ಅಧಿಕಾರಿಗಳನ್ನು ನಿಯೋಜಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಅಧಿಕಾರೇತರ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡುವಾಗ ರಾಜಕೀಯ ಪಕ್ಷಗಳ ಮುಖಂಡರಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಅಧ್ಯಕ್ಷರು, ಉಪಾಧ್ಯಕ್ಷರನ್ನಾಗಿ ಆಡಳಿತಾರೂಢ ಪಕ್ಷಕ್ಕೆ ಸೇರಿದವರನ್ನು ನೇಮಿಸಿದರೆ, ಸದಸ್ಯರ ನೇಮಕದಲ್ಲಿ ಪ್ರತಿಪಕ್ಷದ ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡುವುದು ಮಾಮೂಲಿಯಾಗಿದೆ. ಕಳೆದ ಬಾರಿ ವಿವಿಧ ಉಪ ಸಮಿತಿ ಗಳಿಗೆ ಮೊದಲ ಪಟ್ಟಿ ಯಲ್ಲಿ ಅಧ್ಯಕ್ಷರು, ಮೂವರು ಉಪಾಧ್ಯಕ್ಷರೂ ಸೇರಿದಂತೆ ೫೦ರಿಂದ ೬೦ ಮಂದಿಯನ್ನು ನೇಮಕ ಮಾಡಲಾ ಗಿತ್ತು.
ನಂತರದ ದಿನಗಳಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರ ಮೇಲೆ ತೀವ್ರ ಒತ್ತಡ ಹೇರಿದ್ದರಿಂದಾಗಿ ಪಟ್ಟಿಯ ಗಾತ್ರ ಬೆಳೆಯುತ್ತಲೇ ಹೋಗಿದ್ದರಿಂದ ಯುವ ದಸರಾ ಉಪ ಸಮಿತಿಯಲ್ಲಿ ೧೧೦ ಮಂದಿ, ಸಾಂಸ್ಕೃತಿಕ ಉಪ ಸಮಿತಿಯಲ್ಲಿ ೧೧೦ ಮಂದಿ, ಮೆರವಣಿಗೆ ಉಪ ಸಮಿತಿಯಲ್ಲಿ ೯೦ ಸದಸ್ಯರನ್ನು ನೇಮಿಸಲಾಗಿತ್ತು. ಹೀಗಾಗಿ, ಮೆರವಣಿಗೆ ಉಪ ಸಮಿತಿ ಸದಸ್ಯರು ಜಂಬೂಸವಾರಿ ಮೆರವಣಿಗೆ ವೇಳೆ ಶಿಸ್ತನ್ನು ಕಾಪಾಡಿಕೊಳ್ಳದೆ ಹಾಗೂ ತಮಗೆ ಮೀಸಲಾದ ಆಸನದಲ್ಲಿ ಕೂರುವ ಬದಲಿಗೆ ಎಲ್ಲೆಂದರಲ್ಲಿ ಓಡಾಡುತ್ತಿದ್ದರಿಂದಾಗಿ ಮುಖ್ಯಮಂತ್ರಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ಅದರಲ್ಲೂ ಕೆಲವು ಉಪ ಸಮಿತಿಗಳ ಸದಸ್ಯರು ಪಾಸ್ಹಂಚಿಕೆ ಮಾಡುವಾಗ ತಮಗೆ ಇಷ್ಟಿಷ್ಟು ಪಾಸ್ ಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಲ್ಲದೆ, ತಮಗಿಷ್ಟ ಬಂದ ಹಾಗೆಯೇ ಕಾರ್ಯಕ್ರಮ ಬದಲಿಸುವಂತೆ ಹೇಳುತ್ತಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರ ತನಕ ದೂರುಗಳು ಹೋಗಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ವಾಗಿತ್ತು. ನಂತರ, ಸದಸ್ಯರ ಸಂಖ್ಯೆಯನ್ನು ಮಿತಿಗೊಳಿಸುವ ಬಗ್ಗೆ ಸಿಎಂ ಸಮ್ಮತಿಸಿದ್ದರಿಂದಾಗಿ ಪ್ರತಿಯೊಂದು ಸಮಿತಿ ಯಲ್ಲಿಯೂ ೫೦ ಸದಸ್ಯರ ಸಂಖ್ಯೆ ದಾಟದಂತೆ ಪಟ್ಟಿ ತಯಾರಿಸಲು ಸೂಚಿಸಲಾಗಿದೆ.
ಶಾಸಕರ ಬೆಂಬಲಿಗರು, ಮುಖಂಡರಿಗೆ ಅವಕಾಶ: ದಸರಾ ಉಪ ಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕದಲ್ಲಿ ಪಕ್ಷದ ಮುಖಂಡರು, ಶಾಸಕರ ಬೆಂಬಲಿಗರಿಗೆ ಅವಕಾಶ ನೀಡಲಾಗುತ್ತಿದ್ದು, ಶಾಸಕರಿಂದ ಪಟ್ಟಿ ಕೇಳಲಾಗಿದೆ. ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಡಿ.ರವಿಶಂಕರ್, ಕೆ.ಹರೀಶ್ ಗೌಡ, ಸಂಸದ ಸುನಿಲ್ ಬೋಸ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಎಚ್.ಪಿ. ಮಂಜುನಾಥ್ ಅವರ ಶಿಫಾರಸ್ಸಿನ ಪಟ್ಟಿ, ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಕೊಡುವ ಪಟ್ಟಿಯನ್ನು ಕ್ರೋಡೀಕರಿಸಿ ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.
ಪ್ರಮುಖ ಸಮಿತಿಗಳ ಮೇಲೆ ಹಲವರ ಕಣ್ಣು: ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸುತ್ತಿರುವ ಕಾರಣ ಪ್ರಮುಖ ಉಪ ಸಮಿತಿಗಳ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಉಪ ಸಮಿತಿಗಳ ನೇಮಕಾತಿ ಪಟ್ಟಿಯನ್ನು ದಸರಾ ಉದ್ಘಾಟನೆಯ ೨-೩ ದಿನಗಳು ಇರುವಂತೆ ಬಿಡುಗಡೆ ಮಾಡಿದರೂ ಅನೇಕರು ತಮ್ಮನ್ನೇ ನಿಯೋಜಿಸುವಂತೆ ಒತ್ತಡ ಹೇರುತ್ತಿದ್ದಾರೆ. ಯುವ ದಸರಾ, ಸಾಂಸ್ಕೃತಿಕ, ಸ್ತಬ್ಧ ಚಿತ್ರ, ಆಹಾರ ಮೇಳ, ಕ್ರೀಡಾ, ವಿದ್ಯುತ್ ದೀಪಾಲಂಕಾರ ಉಪ ಸಮಿತಿಗಳ ಅಧ್ಯಕ್ಷರನ್ನಾಗಿ ಮಾಡುವಂತೆ ಬೇಡಿಕೆ ಇಟ್ಟಿರುವ ಕೆಲವು ಮುಖಂಡರು, ನಿಗಮ-ಮಂಡಳಿಗಳಲ್ಲಿ ಅವಕಾಶ ಕೊಟ್ಟಿಲ್ಲ. ದಸರಾ ಉಪ ಸಮಿತಿಗಳಲ್ಲಾದರೂ ಅವಕಾಶ ಕಲ್ಪಿಸುವಂತೆ ಶಾಸಕರ ಬೆನ್ನೇರಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.





