ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ, ಚೀನಾ ಮೊದಲಾದ ಏಷ್ಯಾ ಖಂಡದ ರಾಷ್ಟ್ರಗಳ ಮೇಲೆ ಮನಸೋ ಇಚ್ಛೆ ಆಮದು ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ಸಡ್ಡು ಹೊಡೆದು ಚೀನಾ- ಭಾರತ ಬಾಯಿ ಬಾಯಿ ಎಂದು ಚೀನಾದೊಂದಿಗೆ ಭಾರತ ಸ್ನೇಹವನ್ನು ಉತ್ತುಂಗಕ್ಕೇರಿಸಿಕೊಂಡಿದೆ.
ಸ್ನೇಹಿತರನ್ನು ಬದಲಿಸಿಕೊಳ್ಳಬಹುದು ಆದರೆ ನೆರೆಯವರನ್ನು ಬದಲಿಸಿಕೊಳ್ಳಲಾಗುವುದಿಲ್ಲವೆಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಾತನ್ನು ಸದಾ ತಲೆಯೊಳಗಿಟ್ಟುಕೊಂಡಿರುವ ಭಾರತದ ಪ್ರಯತ್ನವೇನೋ ಸರಿ. ಆದರೆ ಚೀನಾ ಭಾರತದ ಒಳ್ಳೆಯ ಉದ್ದೇಶವನ್ನು ಅದೆಷ್ಟು ಅರ್ಥ ಮಾಡಿಕೊಳ್ಳಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇತಿಹಾಸವನ್ನು ಗಮನಿಸಿದರೆ ಚೀನಾ ಸ್ನೇಹದ ವಿಷಯದಲ್ಲಿ ನಂಬಿಕೆಗೆ ಅರ್ಹವಾದ ದೇಶವಂತೂ ಅಲ್ಲವೇ ಅಲ್ಲ.
ಇದನ್ನು ಓದಿ:ಇಂಡಿಗೋ ವಿಮಾನಕ್ಕೆ ಪಕ್ಷಿ ಡಿಕ್ಕಿ: ತಪ್ಪಿದ ಭಾರೀ ಅನಾಹುತ
ಇದೇ ಚೀನಾದ ಅಧ್ಯಕ್ಷರಾದ ಕ್ಷಿ ಪಿಂಗ್ ಅವರನ್ನು ಈ ಹಿಂದೆ ಪ್ರಧಾನಿ ಮೋದಿಯವರು ಭಾರತಕ್ಕೆ ಕರೆಸಿಕೊಂಡು ಮಹಾಬಲಿಪುರಂ ಬಂಡೆಯನ್ನು ತೋರಿಸಿ ಸ್ನೇಹದ ಕನಸು ಕಾಣುತ್ತಾ ಕಳುಹಿಸಿಕೊಟ್ಟ ಸ್ವಲ್ಪ ಸಮಯದಲ್ಲೇ ಆಕ್ಸಾಯ್ ಚಿನ್ ಗಡಿಯಲ್ಲಿ ಭಾರತದ ಪ್ರದೇಶವನ್ನು ಅತಿಕ್ರಮಣ ಮಾಡಿ ನಮ್ಮವರೊಂದಿಗೆ ಗುದ್ದಾಟಕ್ಕಿಳಿದು ಸಂಬಂಧ ಹಳಸಿ ಹೋದ ಪ್ರಕರಣವನ್ನು ನೆನೆದರೆ ಚೀನಾ ಅಧ್ಯಕ್ಷ ಕ್ಷಿ ಅವರನ್ನು ಎಷ್ಟರ ಮಟ್ಟಿಗೆ ನಂಬಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ.
ಸದ್ಯ ಚೀನಾಕ್ಕೂ ಅಮೆರಿಕ ಬದ್ಧ ವೈರಿಯಾಗಿರುವುದರಿಂದ ಮತ್ತು ರಷ್ಯಾ ದೇಶವು ನಮ್ಮೊಂದಿಗೆ ವಿಶ್ವಾಸದಿಂದ ಇರುವುದರಿಂದ ಚೀನಾ ವಿಧಿ ಇಲ್ಲದೆ ಭಾರತದೊಂದಿಗೆ ನಗುವಿನ ಮುಖವಾಡ ಹಾಕಿ ನಿಂತಿದೆ. ಚೀನಾದೊಂದಿಗೆ ನಾವು ಸ್ನೇಹ ಕುದುರಿಸಿದಲ್ಲಿ ಸದಾ ಚೀನಾದ ಮಿತ್ರರು ನಮ್ಮ ಮಿತ್ರರಾಗಿ ಚೀನಾದ ಶತ್ರುಗಳು ನಮ್ಮ ಶತ್ರುಗಳಾಗ ಬೇಕಾದ ಸಂದಿಗ್ಧ ಪರಿಸ್ಥಿತಿ ಬರಬಹುದು. ಚೀನಾ ಅಮೆರಿಕದೊಂದಿಗೆ ದ್ವೇಷದ ಕಾರಣಕ್ಕಾಗಿ ನಮ್ಮನ್ನು ಪರಮ ಮಿತ್ರ ಸ್ಥಾನದಲ್ಲಿ ಕೂರಿಸಿ ನಮ್ಮನ್ನು ಸಹಿಸಿಕೊಳ್ಳುತ್ತದೆಯೇ? ಇವುಗಳನ್ನೆಲ್ಲಾ ಗಮನಿಸಿದರೆ ಕ್ಷಿ ಮೋದಿ ಅವರನ್ನು ಅಪ್ಪಿಕೊಂಡುದುದು ಪ್ರಸಕ್ತ ಪರಿಸ್ಥಿತಿಗೆ ಮಾತ್ರವೇ ಹೊರತು ಇದು ಅವರ ಮನಃ ಪರಿವರ್ತನೆಯಲ್ಲ ಮತ್ತು ಶಾಶ್ವತವೂ ಅಲ್ಲ.
-ದೊಡ್ಡಕಮರವಳ್ಳಿ ಸಿದ್ದಲಿಂಗಪ್ಪ, ಜೆ.ಪಿ.ನಗರ, ಮೈಸೂರು





