ಶೋಚನೀಯ ಸ್ಥಿತಿಯಲಿ ಮೈಸೂರಿನ ಐತಿಹಾಸಿಕ ಹೆಗ್ಗಳಿಕೆಯ ದೇವರಾಜ, ಲ್ಯಾನ್ಸ್‌ಡೌನ್, ವಾಣಿವಿಲಾಸ ಕಟ್ಟಡಗಳು
ಇತ್ತೀಚೆಗೆ ಐತಿಹಾಸಿಕ ಮಹಾರಾಣಿ ಮಹಿಳಾ ಕಾಲೇಜಿನ ಕಟ್ಟಡ ನವೀಕರಣದ ವೇಳೆ ಕುಸಿದ ಘಟನೆ ಎಲ್ಲರಿಗೂ ಎಚ್ಚರಿಕೆಯ ಘಂಟೆಯಾಗಿದೆ. ಮೈಸೂರಿನಲ್ಲಿ ೬೦೦ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿದ್ದು, ಅವುಗಳಲ್ಲಿ ೧೨೯ ಕಟ್ಟಡಗಳನ್ನು ಪುರಾತತ್ವ ಇಲಾಖೆಯ ಸಮೀಕ್ಷೆಯ ಆಧಾರದ ಮೇಲೆ ಸರ್ಕಾರ ಅಧಿಕೃತವಾಗಿ ಪಾರಂಪರಿಕ ಕಟ್ಟಡಗಳೆಂದು ಘೋಷಿಸಿದೆ.
ಇದರಲ್ಲಿ ೨೫ ಕಟ್ಟಡಗಳಿಗೆ ತುರ್ತು ದುರಸ್ತಿ ಅವಶ್ಯಕತೆ ಇದೆ ಎಂದು ಪಾರಂಪರಿಕ ತಜ್ಞರು ವರದಿ ನೀಡಿದ್ದಾರೆ. ಈ ಕಟ್ಟಡಗಳಿಂದ ಸಾರ್ವಜನಿಕರಿಗೂ ಅಪಾಯವಿದೆ. ಕಳೆದ ಒಂದು ದಶಕದಲ್ಲಿ ಹತ್ತಾರು ಕಟ್ಟಡಗಳು ನೆಲಸಮಗೊಂಡಿವೆ. ಆದರೆ, ಹೀಗೆ ಕುಸಿದು ಬಿದ್ದ ಪಾರಂಪರಿಕ ಕಟ್ಟಡಗಳಿಗೆ ನವೀಕರಣವಾಗಲಿ ಅಥವಾ ದುರಸ್ತಿ ಭಾಗ್ಯವಾಗಲಿ ಇನ್ನೂ ಸಿಕ್ಕಿಲ್ಲ. ಸರ್ಕಾರ ಹಾಗೂ ಸ್ಥಳೀಯ ಆಡಳಿತ ಈ ಕುರಿತು ತಕ್ಷಣವೇ ಗಮನಹರಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಐತಿಹಾಸಿಕ ಕಟ್ಟಡಗಳು ನೆಲಸಮವಾಗಲಿವೆ. ಈ ನಿಟ್ಟಿನಲ್ಲಿ ಮೈಸೂರಿನ ಇತರ ಪಾರಂಪರಿಕ ಕಟ್ಟಡಗಳ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗಿದೆ.
ಸಿ. ಎ. ಶಶಿಧರ
ಮೈಸೂರು ನಗರವು ತನ್ನ ಐತಿಹಾಸಿಕ ಕಟ್ಟಡಗಳಿಂದಾಗಿ ಪಾರಂಪರಿಕ ನಗರವಾಗಿ ಗುರುತಿಸಿಕೊಂಡಿದೆ. ಈ ಪೈಕಿ ಮೈಸೂರಿನ ಪಾರಂಪರಿಕ ಮಾರುಕಟ್ಟೆಗಳು ಸಹ ವಿಶಿಷ್ಟ ಸ್ಥಾನವನ್ನು ಹೊಂದಿವೆ. ನಗರದ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡ, ಮಂಡಿ ಮಾರುಕಟ್ಟೆ ಮತ್ತು ವಾಣಿ ವಿಲಾಸ ಮಾರುಕಟ್ಟೆಗಳು ಮೈಸೂರಿನ ಪ್ರಮುಖ ವ್ಯಾಪಾರ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿದ್ದವು.
ಆದಾಗ್ಯೂ, ಅವುಗಳ ಭದ್ರತೆ ಮತ್ತು ಉಳಿವು ಇದೀಗ ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ. ನಿರ್ವಹಣೆಯ ಕೊರತೆಯಿಂದಾಗಿ, ಇವು ಇಂದು ಶಿಥಿಲಾವಸ್ಥೆಗೆ ತಲುಪಿವೆ. ಮೈಸೂರಿನ ಪರಂಪರೆಯನ್ನು ಉಳಿಸಲು ಮತ್ತು ಮಾರುಕಟ್ಟೆಯ ಆರ್ಥಿಕ ಚಟುವಟಿಕೆಗಳನ್ನು ಮೊದಲಿನಂತೆ ನಿರ್ಭಿಡೆಯಿಂದ ಮುಂದುವರಿಸಲು ಈ ಮಾರುಕಟ್ಟೆಗಳ ಪುನಶ್ಚೇತನದ ಯೋಜನೆಯ ಅಗತ್ಯವಿದ್ದು, ಸ್ಥಳೀಯ ಆಡಳಿತ ಹಾಗೂ ಸರ್ಕಾರ ಈ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
ವಾಣಿವಿಲಾಸ ಮಾರುಕಟ್ಟೆ ಕಟ್ಟಡ
ನಗರದ ಅಗ್ರಹಾರದಲ್ಲಿರುವ ವಾಣಿ ವಿಲಾಸ ಮಾರುಕಟ್ಟೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಹಾಗೂ ಮೈಸೂರು ಸಂಸ್ಥಾನದ ಮಹಾರಾಣಿ ಕೆಂಪನಂಜಮ್ಮಣಿ ವಾಣಿ ವಿಲಾಸ ಸನ್ನಿಧಾನ ಅವರ ಹೆಸರಿನಲ್ಲಿ ನಿರ್ಮಿಸಲಾಗಿದೆ. ಮಾರುಕಟ್ಟೆಯು ೯೦ ಅಂಗಡಿಗಳನ್ನೊಳಗೊಂಡಿದ್ದು ಸ್ಥಳೀಯ ರೈತರು ಮತ್ತು ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಕೇಂದ್ರವಾಗಿತ್ತು. ಇಲ್ಲಿ ಹಣ್ಣು, ತರಕಾರಿ, ಧಾನ್ಯಗಳು, ಮಸಾಲೆ ಪದಾರ್ಥಗಳು ಸೇರಿದಂತೆ ವಿವಿಧ ವಸ್ತುಗಳ ವ್ಯಾಪಾರ ಇಂದಿಗೂ ನಡೆಯುತ್ತಿದೆ. ಆದರೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡೇ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಏಕೆಂದರೆ ಈ ಪಾರಂಪರಿಕ ಕಟ್ಟಡವೂ ನಿರ್ಲಕ್ಷ್ಯ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಶಿಥಿಲಾವಸ್ಥೆಗೆ ತಲುಪಿದೆ. ಕೆಲ ವರ್ಷಗಳ ಹಿಂದೆ ಮಹಾಮಳೆಯ ಪರಿಣಾಮವಾಗಿ ಮಾರುಕಟ್ಟೆಯ ಮುಖ್ಯ ದ್ವಾರದ ಗೋಡೆ ಕುಸಿದು ಬಿದ್ದಿತು. ಈ ಘಟನೆ ನಂತರ, ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಯಿತು, ಆದರೆ ಸಂಪೂರ್ಣ ಪುನಶ್ಚೇತನದ ಯೋಜನೆಗಳು ಇನ್ನೂ ಜಾರಿಯಾಗಿಲ್ಲ. ಪ್ರಸ್ತುತ, ಮಾರುಕಟ್ಟೆಯ ಕಟ್ಟಡದಲ್ಲಿ ಅನೇಕ ಕಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಶಿಥಿಲಾವಸ್ಥೆಯಲ್ಲಿದೆ.
ಲ್ಯಾನ್ಸ್‌ಡೌನ್ ಕಟ್ಟಡ
೧೮೯೨ರಲ್ಲಿ ನಿರ್ಮಾಣವಾದ ಲ್ಯಾನ್ಸ್‌ಡೌನ್ ಕಟ್ಟಡವು ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿತ್ತು. ಮರ, ಚಪ್ಪಡಿ ಕಲ್ಲುಗಳು ಹಾಗೂ ಸುಣ್ಣಗಾರೆಯ ಮಿಶ್ರಣವನ್ನು ಬಳಸಿ ನಿರ್ಮಿಸಲಾಗಿರುವ ಈ ಕಟ್ಟಡದ ವಿನ್ಯಾಸದಲ್ಲಿ ಆ ಕಾಲದ ವಾಸ್ತುಶಿಲ್ಪದ ವೈಶಿಷ್ಟ್ಯತೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಲ್ಯಾನ್ಸ್‌ಡೌನ್ ಮಾರುಕಟ್ಟೆ ಮೈಸೂರಿನ ವ್ಯಾಪಾರ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದು ಕೆಳಗೆ ೫೩ ಅಂಗಡಿಗಳು ಹಾಗೂ ಮೊದಲ ಮಹಡಿಯಲ್ಲಿ ೨೫ ಮಳಿಗೆಗಳಿದ್ದವು. ವೃತ್ತ ಪತ್ರಿಕೆಗಳ ಕಚೇರಿ, ಪುಸ್ತಕ ಮಳಿಗೆಗಳು, ವಕೀಲರು ಮತ್ತು ನೋಟರಿ, ಟ್ರಾವೆಲ್ಸ್, ಜೆರಾಕ್ಸ್ ಅಂಗಡಿ, ಖಾದಿ ಅಂಗಡಿ, ಫೋಟೋ ಫ್ರೇಮ್, ಔಷಧಿ ಅಂಗಡಿಗಳು ಸೇರಿದಂತೆ ವಿವಿಧ ವಸ್ತುಗಳ ವ್ಯಾಪಾರಕ್ಕೆ ಕೇಂದ್ರವಾಗಿ ಸ್ಥಳೀಯ ವ್ಯಾಪಾರಿಗಳಿಗೆ ಆದಾಯದ ಮೂಲ ವಾಗಿತ್ತು. ೨೦೧೨ರಲ್ಲಿ ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ನಾಲ್ವರು ವ್ಯಕ್ತಿಗಳು ಸಾವನ್ನಪ್ಪಿದರು. ಈ ದುರ್ಘಟನೆ ಕಟ್ಟಡದ ದುಸ್ಥಿತಿಯನ್ನು ಬೆಳಕಿಗೆ ತಂದಿತು.
ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಗಳು: ಕಟ್ಟಡದ ಶಿಥಿಲಾವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಆಡಳಿತವು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಮುಂದಾಯಿತು. ೨೦೧೩ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಕಟ್ಟಡದ ಪುನಶ್ಚೇತನಕ್ಕಾಗಿ ೬ ಕೋಟಿ ರೂ. ಗಳನ್ನು ಮೀಸಲಿಟ್ಟು ಕೆಲಸವನ್ನೂ ಆರಂಭಿಸಲಾಯಿತು. ಆದರೆ ೨೦೧೬ರಲ್ಲಿ, ದೇವರಾಜ ಮಾರುಕಟ್ಟೆಯ ಉತ್ತರ ದ್ವಾರ ಕುಸಿದ ಸಂದರ್ಭದಲ್ಲಿ ಲ್ಯಾನ್ಸ್‌ಡೌನ್ ಕಟ್ಟಡದ ನವೀಕರಣದ ಕಾಮಗಾರಿ ಯನ್ನು ಸ್ಥಗಿತಗೊಳಿಸಲಾಯಿತು. ಈ ಘಟನೆ ಸಂಭವಿಸಿ ೧೩ ವರ್ಷ ಗಳು ಕಳೆದರೂ ಕಟ್ಟಡವನ್ನು ಮರು ನಿರ್ಮಾಣ ಮಾಡಬೇಕೋ ಅಥವಾ ನವೀಕರಣಗೊಳಿಸ ಬೇಕೋ ಎಂಬ ಗೊಂದಲದ ಪರಿಣಾಮ ಕಟ್ಟಡ ಪಾಳು ಬಿದ್ದಿದೆ. ಕಟ್ಟಡದ ಗೋಡೆಗಳು, ಕಂಬಗಳು, ಮತ್ತು ಮೇಲ್ಚಾವಣಿಗಳು ಹಾನಿ ಗೊಳಗಾಗಿದ್ದು, ಆತಂಕವನ್ನು ಉಂಟುಮಾಡಿವೆ. ವ್ಯಾಪಾರಸ್ಥರು ಕಟ್ಟಡದ ಎದುರಿಗೆ ಶೆಡ್ ಕಟ್ಟಿಕೊಂಡು ವಹಿವಾಟು ನಡೆಸುತ್ತಿದ್ದಾರೆ.
ದೇವರಾಜ ಮಾರುಕಟ್ಟೆ
೧೮೮೬ರ ದಶಕದಲ್ಲಿ ನಿರ್ಮಾಣಗೊಂಡಿರುವ ದೇವರಾಜ ಮಾರುಕಟ್ಟೆಯನ್ನು ಅರಮನೆಗೆ ಕುಡಿಯುವ ನೀರು ಪೂರೈಸುತ್ತಿದ್ದ ದಿವಾನ್ ಪೂರ್ಣಯ್ಯ ಕಾಲುವೆಯ ಮೇಲೆ ನಿರ್ಮಿಸಲಾಗಿದೆ. ದೊಡ್ಡ ದೇವರಾಜ ಒಡೆಯರ್ ಅವರ ಹೆಸರಿನಲ್ಲಿ ನಾಮಕರಣ ಮಾಡಲಾಗಿರುವ ಈ ಮಾರುಕಟ್ಟೆಯು ಮೈಸೂರಿನ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇದು ಸುಮಾರು ಮೂರೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಮಾರುಕಟ್ಟೆಯಲ್ಲಿ ಸುಮಾರು ೮೨೨ ಅಂಗಡಿಗಳಿದ್ದು, ೨೫೦ ತೆರೆದ ಮಳಿಗೆಗಳಿವೆ. ಹಣ್ಣು, ಹೂವು, ತರಕಾರಿ, ಮಸಾಲೆ ಪದಾರ್ಥಗಳು, ಪೂಜಾ ಸಾಮಾನುಗಳು, ಅಲಂಕಾರಿಕ ವಸ್ತುಗಳು, ಹಾಲಿನ ಉತ್ಪನ್ನಗಳು ಸೇರಿದಂತೆ ವಿವಿಧ ವಸ್ತುಗಳ ವ್ಯಾಪಾರ ಈಗಲೂ ನಡೆಯುತ್ತಿದೆ.
ಮಾರುಕಟ್ಟೆ ಸಂಕೀರ್ಣವು ಅಗ್ನಿ ಸುರಕ್ಷಿತವಾಗಿಲ್ಲ. ಇದುವರೆಗೆ ಹಲವಾರು ಬಾರಿ ಅಗ್ನಿ ಅವಘಡಗಳು ಸಂಭವಿಸಿದ್ದು ಅನೇಕ ಅಂಗಡಿಗಳು ಧ್ವಂಸಗೊಂಡಿವೆ. ೧೯೮೧ರಲ್ಲಿ ೧೫೦ ಅಂಗಡಿಗಳು, ೧೯೯೦ರಲ್ಲಿ ೧೭೫ ಅಂಗಡಿಗಳು ಮತ್ತು ೧೯೯೯ರಲ್ಲಿ ೩೦ ಅಂಗಡಿಗಳು ಅಗ್ನಿಗೆ ಆಹುತಿಯಾದವು. ಆದಾಗ್ಯೂ ಇಂದಿಗೂ ಈ ಮಾರುಕಟ್ಟೆಯನ್ನು ಅಗ್ನಿ ಪ್ರತಿರೋಧಕವಾಗಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದಲ್ಲದೆ, ೨೦೧೬ರಲ್ಲಿ ಮಾರುಕಟ್ಟೆಯ ಉತ್ತರ ದ್ವಾರದ ಕಮಾನು ಕುಸಿತಗೊಂಡಿದೆ. ಮೈಸೂರು ಮಹಾನಗರ ಪಾಲಿಕೆ ಮತ್ತು ಸರ್ಕಾರ ತಜ್ಞರ ಸಮಿತಿ ರಚಿಸಿ, ವರದಿ ಸಲ್ಲಿಸಲು ಸೂಚಿಸಿತು. ತಜ್ಞರ ಸಮಿತಿ, ಮಾರುಕಟ್ಟೆಯನ್ನು ನೆಲಸಮಗೊಳಿಸಿ ಮರುನಿರ್ಮಾಣ ಮಾಡುವುದೇ ಸೂಕ್ತ ಎಂಬ ಶಿಫಾರಸು ಮಾಡಿತು.
ಈ ನಿರ್ಧಾರಕ್ಕೆ ಪಾರಂಪರಿಕ ಸಂರಕ್ಷಣಾ ಸಮಿತಿಯ ಸದಸ್ಯರು ಮತ್ತು ಪಾರಂಪರಿಕ ಕಟ್ಟಡಗಳ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದರು. ಅವರು ಮಾರುಕಟ್ಟೆಯನ್ನು ಸಂರಕ್ಷಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಆದರೆ, ೨೦೨೩ರಲ್ಲಿ ಕರ್ನಾಟಕ ಹೈಕೋರ್ಟ್, ಈ ಅರ್ಜಿಯನ್ನು ವಜಾಗೊಳಿಸಿ, ಮಾರುಕಟ್ಟೆಯನ್ನು ನೆಲಸಮ ಗೊಳಿಸಲು ಆದೇಶ ನೀಡಿತು. ಆದರೆ ಅರಸು ಮನೆತನದವರು ಹಾಗೂ ವ್ಯಾಪಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ತೀರ್ಪು ಇನ್ನೂ ಬಾಕಿಯಿದ್ದು, ಕಟ್ಟಡದ ಭವಿಷ್ಯ ಅದರಿಂದ ನಿರ್ಧಾರವಾಗಲಿದೆ.