* ರೈತರ ಕೈಗೆ ಸಿಗದ ಫಸಲು
* ಸ್ಥಳಾಂತರಕ್ಕೆ ಅನುಮತಿ ನೀಡಲು ಅರಣ್ಯ ಇಲಾಖೆಯಿಂದ ಮನವಿ
* ವಾನರ ಸೇನೆ ಸೆರೆಗೆ ನುರಿತವರಿಂದ ಶೋಧ
ಮಡಿಕೇರಿ: ಕೊಡಗು ಜಿಯಲ್ಲಿ ಮಂಗಗಳ ಕಾಟದಿಂದ ಬೆಳೆಗಾರರು ಕಂಗಾಲಾಗಿರುವ ಹಿನ್ನೆಲೆಯಲ್ಲಿ ಮಂಗಗಳನ್ನು ಸೆರೆ ಹಿಡಿಯಲು ಅನುಮತಿ ನೀಡುವಂತೆ ಅರಣ್ಯ ಇಲಾಖೆ, ಇಲಾಖೆಯ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಿದ್ದು, ಮಂಗಗಳನ್ನು ಸೆರೆ ಹಿಡಿಯುವ ನುರಿತ ವ್ಯಕ್ತಿಗಳಿಗಾಗಿ ಹುಡುಕಾಟ ನಡೆದಿದೆ.
ಕೊಡಗು ಜಿಯ ಗಡಿ ಭಾಗ ಸಂಪಾಜೆ ವ್ಯಾಪ್ತಿಯಲ್ಲಂತೂ ಮಂಗಗಳ ಉಪಟಳ ಹೇಳತೀರದಾಗಿದೆ. ಅಲ್ಲಿ ಮಾತ್ರವಲ್ಲ, ಮಡಿಕೇರಿ ತಾಲ್ಲೂಕಿನ ಬಿಳಿಗೇರಿ, ಕಗ್ಗೋಡ್ಲು, ಅರವತ್ತೊಕ್ಲು ಸೇರಿದಂತೆ ಇನ್ನೂ ಅನೇಕ ಭಾಗಗಳಲ್ಲಿ ಮಂಗಗಳು ಇನ್ನಿಲ್ಲದ ತೊಂದರೆ ನೀಡುತ್ತಿವೆ. ಕೋತಿಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟಲ್ಲಿ ತೋಟವೇ ಸರ್ವನಾಶ ಎನ್ನುವ ಸ್ಥಿತಿ ಸೃಷ್ಟಿಯಾಗಿದೆ.
ಕಾಡಾನೆಗಳ ಕಾಟಕ್ಕಿಂತಲೂ ಮಂಗಗಳ ಕಾಟವನ್ನು ಸಹಿಸಲಾಗುತ್ತಿಲ್ಲ ಎಂದು ಹಲವು ಬೆಳೆಗಾರರು ಹೇಳುತ್ತಿzರೆ. ಕಾಡಾನೆಯೊಂದು ತೋಟ ಹೊಕ್ಕರೆ ಅಥವಾ ನಾಲ್ಕಾರು ಆನೆಗಳು ತೋಟದ ಒಳ ಹೊಕ್ಕರೆ ಅವು ನಡೆದಾಡುವಜಾಗ ಮಾತ್ರ ಹಾಳಾಗುತ್ತದೆ. ಆದರೆ, ಸುಮಾರು ೭೦ರಿಂದ ೮೦ ಸಂಖ್ಯೆಯಲ್ಲಿರುವ ಮಂಗಗಳ ಹಿಂಡು ನುಗ್ಗಿ ಇಡೀ ತೋಟವನ್ನೇ ನಾಶಮಾಡುತ್ತಿವೆ. ಮಂಗಗಳು ಬೆಳೆ ತಿನ್ನುವುದಕ್ಕಿಂತ ನಾಶ ಮಾಡುವುದೇ ಹೆಚ್ಚು. ತೆಂಗಿನ ಮರದಲ್ಲಿ ಒಂದು ಎಳನೀರು ಕುಡಿದು,ಉಳಿದ ಪಗಡೆಗಳನ್ನೆಲ್ಲಾ ಕಿತ್ತೆಸೆಯುತ್ತವೆ.
ಇದನ್ನು ಓದಿ: ಪಚ್ಚೆದೊಡ್ಡಿ ಗ್ರಾಮಕ್ಕೆ ತ್ರಿಸದಸ್ಯ ಸಮಿತಿ ತಂಡ ಭೇಟಿ
ಬಹಳಷ್ಟು ಕಡೆ ಒಂದು ಎಕರೆ ಬಾಳೆ ತೋಟದಲ್ಲಿ ಒಂದೇ ಒಂದು ಬಾಳೆಹಣ್ಣು ಸಹ ಕೈಗೆ ಸಿಗದಂತೆ ಮಾಡಿವೆ ಎಂದು ಸಂಪಾಜೆ ಭಾಗದ ರೈತರು ಅಲವತ್ತುಕೊಳ್ಳುತ್ತಾರೆ. ತೋಟದಲ್ಲಿ ಕೇವಲ ತೆಂಗಿನಮರ ಮಾತ್ರವಲ್ಲ ಎಲ್ಲ ಬಗೆಯ ತೋಟಗಾರಿಕಾ ಬೆಳೆಗಳನ್ನೂ ಮಂಗಗಳು ಹಾಳುಗೆಡಹುತ್ತಿವೆ. ಸಪೋಟ ಹಣ್ಣಿನ ಗಿಡಗಳಲ್ಲಿರುವ ಫಲಗಳೆಲ್ಲವನ್ನೂ ಮಣ್ಣು ಪಾಲು ಮಾಡುತ್ತಿವೆ.
ದುಬಾರಿ ಬೆಳೆ ಲಿಚಿ ಗಿಡ ಈಗ ಫಲ ಬಿಡಲು ಆರಂಭಿಸಿದ್ದು, ಅವುಗಳನ್ನೂ ಮಂಗಗಳು ಬಿಡುತ್ತಿಲ್ಲ. ಪಪ್ಪಾಯ ಹಣ್ಣನ್ನು ತಿನ್ನುವುದಿರಲಿ, ಗಿಡಗಳನ್ನೇ ಸೀಳಿ ಹಾಕುತ್ತಿವೆ. ಇದೀಗ ಕಾಫಿ ಗಿಡಗಳ ಮೇಲೂ ದಾಳಿ ಆರಂಭಿಸಿದ್ದು, ಕಾಫಿ ಹಣ್ಣನ್ನು ತಿಂದು, ಉದುರಿಸಿ, ಗಿಡಗಳ ಕೊಂಬೆಗಳನ್ನು ಮುರಿದು ನಾಶ ಮಾಡುತ್ತಿವೆ.ಮ ಕೇವಲ ತೋಟಗಳಿಗೆ ಮಾತ್ರವಲ್ಲ, ಮನೆಯಂಗಳಕ್ಕೂ ವಾನರ ಸೇನೆ ದಾಳಿ ಇಡುತ್ತಿದೆ. ಮನೆಯಂಗಳದಲ್ಲಿ ಬೆಳೆದ ಎಲ್ಲ ತರಕಾರಿ ಬೆಳೆಗಳನ್ನೂ ನಾಶಪಡಿಸುತ್ತಿವೆ. ಇದೀಗ ಮನೆಯೊಳಕ್ಕೂ ನುಗ್ಗಿ ದಾಂದಲೆ ನಡೆಸುತ್ತಿವೆ. ಕೊಯನಾಡು ವ್ಯಾಪ್ತಿಯಲ್ಲಿ ಮನೆಗಳಿಗೆ ನುಗ್ಗಿ ಸಾಮಗ್ರಿಗಳನ್ನು ನಾಶಪಡಿಸಿರುವ ಘಟನೆಗಳೂ ನಡೆದಿವೆ.
ಮಂಗಗಳ ಕಾಟ ವಿಪರೀತವಾಗಿದ್ದು, ಬೆಳೆದ ಯಾವ ಫಸಲೂ ಕೈಗೆ ದಕ್ಕದೆ ಬೆಳೆಗಾರರು ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಕೂಡಲೇ ಮಂಗಗಳನ್ನು ಸೆರೆ ಹಿಡಿದು ಬೆಳೆಯನ್ನು ಉಳಿಸಬೇಕು. ಇಲ್ಲದಿದ್ದರೆ, ರೈತರಿಗೆ ಅಪಾರ ನಷ್ಟ ಉಂಟಾಗುತ್ತದೆ ಎಂದು ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ನವೀನಕುಮಾರ್ ಹೇಳುತ್ತಾರೆ.
” ಸಂಪಾಜೆ ವ್ಯಾಪ್ತಿಯಲ್ಲಿ ಮಂಗಗಳ ಕಾಟ ಅತಿಯಾಗಿದೆ. ೩೦-೪೦ ತೆಂಗಿನಮರಗಳನ್ನು ಹೊಂದಿರುವವರು ಸಹ ಅಂಗಡಿಯಿಂದ ತೆಂಗಿನಕಾಯಿ ಖರೀದಿಸಬೇಕಾದ ಸ್ಥಿತಿ ಒದಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಮಂಗಗಳನ್ನು ಸೆರೆ ಹಿಡಿಯಬೇಕು ಎಂದು ಪತ್ರ ಬರೆದಿದ್ದೇವೆ. ಆದರೆ, ಇನ್ನೂ ಆ ಕೆಲಸ ಆಗಿಲ್ಲ. ಕೂಡಲೇ ಇಲ್ಲಿರುವ ಮಂಗಗಳನ್ನು ಸೆರೆ ಹಿಡಿದು, ಬೆಳೆಗಾರರನ್ನು ಉಳಿಸಬೇಕು”
-ರಮಾದೇವಿ ಬಾಲಚಂದ್ರ, ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ
ಇದನ್ನು ಓದಿ: ಮತ್ತೆ ಆರಂಭವಾದ ಕೋಟೆ ಪೊಲೀಸ್ ಕ್ಯಾಂಟೀನ್
” ಮಂಗಗಳ ಕಾಟ ಅತಿಯಾಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಅರಣ್ಯ ಇಲಾಖೆಯಿಂದ ಮಂಗಗಳ ಸೆರೆಗೆ ಅನುಮತಿ ಕೋರಿ ಎಪಿಸಿಸಿಎಫ್ ಅವರಿಗೆ ಪತ್ರ ಬರೆದಿzವೆ. ಅನುಮತಿ ದೊರೆತ ಕೂಡಲೇ ನುರಿತ ವ್ಯಕ್ತಿಗಳನ್ನು ಕರೆದು ತಂದು ಮಂಗಗಳನ್ನು ಸೆರೆ ಹಿಡಿಸಲಾಗುವುದು.”
-ಅಭಿಷೇಕ್, ಡಿಸಿಎಫ್, ಮಡಿಕೇರಿ ವನ್ಯಜೀವಿ ವಲಯ
ಅನುಮತಿ ಕೋರಿದ ಅರಣ್ಯಾಧಿಕಾರಿಗಳು: ಈ ಹಿಂದೆ ಮಂಗಗಳನ್ನು ಸೆರೆ ಹಿಡಿಯಲು ಅನುಮತಿ ನೀಡುವ ಅಧಿಕಾರ ಸಿಸಿಎಫ್ ದರ್ಜೆಯ ಅಧಿಕಾರಿಗಳಿಗೆ ಇತ್ತು. ಆದರೆ, ಈಗ ಸರ್ಕಾರ ಈ ಅಧಿಕಾರವನ್ನು ಎಪಿಸಿಸಿಎಫ್ ದರ್ಜೆಯ ಅಧಿಕಾರಿಗಳಿಗೆ ನೀಡಿದೆ. ಹಾಗಾಗಿ, ಕೊಡಗು ಜಿಯ ಅರಣ್ಯಾಧಿಕಾರಿಗಳು ಮಂಗಗಳ ಸೆರೆಗೆ ಅನುಮತಿ ಕೋರಿ ಎಪಿಸಿಸಿಎಫ್‌ಗೆ ಈಗಾಗಲೇ ಪತ್ರ ಬರೆದಿದ್ದಾರೆ.
–ಪುನೀತ್ ಮಡಿಕೇರಿ





