೨೮. ೮೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಫೈಓವರ್ – ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ ಮೇಲ್ಸೇತುವೆ
ನವೀನ್ ಡಿಸೋಜ
ಮಡಿಕೇರಿ: ಕೊಡಗಿನ ಮೊದಲ ಫೈಓವರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾಗಮಂಡಲ ಮೇಲ್ಸೇತುವೆ ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ.
ಪ್ರತೀ ವರ್ಷ ಮಳೆಗಾಲದಲ್ಲಿ ದ್ವೀಪದಂತಾಗುವ ಭಾಗ ಮಂಡಲ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳು ಹೊರ ಜಗತ್ತಿನ ಸಂಪರ್ಕವನ್ನೇ ಕಡಿದುಕೊಳ್ಳುತ್ತಿದ್ದವು. ಮಳೆಗಾಲದಲ್ಲಿ ಕನಿಷ್ಠ ಮೂರು ನಾಲ್ಕು ಬಾರಿಯಾದರೂ ತ್ರಿವೇಣಿ ಸಂಗಮ ಭರ್ತಿಯಾಗಿ ಪ್ರವಾಹ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಪ್ರಮುಖ ರಸ್ತೆಗಳಾದ ಮಡಿಕೇರಿ ಮತ್ತು ನಾಪೋಕ್ಲು ಕಡೆಗೆ ಸಂಪರ್ಕಕ್ಕೆ ದೋಣಿಗಳನ್ನು ಬಳಸಬೇಕಾಗುತ್ತಿತ್ತು. ತಿಂಗಳುಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಇಲ್ಲಿಯೇ ಇದ್ದು, ಜನರನ್ನು ಬೋಟ್ ಮೂಲಕ ದಾಟಿಸುತ್ತಿದ್ದರು.
ಈ ಸಮಸ್ಯೆಗೆ ಮುಕ್ತಿ ನೀಡಲು ೨೦೧೬ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಿತು. ೨೦೧೬ರ ಅ. ೬ರಂದು ಯೋಜನೆಗೆ ಅನುಮೋದನೆ ದೊರೆಯಿತು. ಬಳಿಕ ೨೦೧೮ರಲ್ಲಿ ಕೊಡಗು ಉಸ್ತುವಾರಿ ಸಚಿವರಾಗಿದ್ದ ಕೆ. ಜೆ. ಜಾರ್ಜ್ ಕಾಮಗಾರಿಗೆ ಚಾಲನೆ ನೀಡಿದ್ದರು. ಆರಂಭದಿಂದಲೇ ಕುಂಟುತ್ತಾ ಸಾಗಿದ ಮೇಲ್ಸೇತುವೆ ಕಾಮಗಾರಿ ಬರೋಬ್ಬರಿ ೬ ವರ್ಷಗಳ ಬಳಿಕ ಪೂರ್ಣಗೊಂಡಿದ್ದು, ಇಂದು ಉದ್ಘಾಟನೆಗೊಳ್ಳುತ್ತಿದೆ.
ಕಾಮಗಾರಿ ಆರಂಭದಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರದಲ್ಲಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಅಧಿಕಾರ ನಡೆಸಿತು. ನಂತರ ಬಿಜೆಪಿಯೂ ಆಡಳಿತ ನಡೆಸಿ ಬಳಿಕ ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದ ಬಳಿಕ ಮೇಲ್ಸೇತುವೆ ಉದ್ಘಾಟನೆಗೊಳ್ಳುತ್ತಿರುವುದು ವಿಶೇಷ. ಒಟ್ಟು ೨೮. ೮೬ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಮಧ್ಯಾಹ್ನ ೩ ಗಂಟೆಗೆ ಉದ್ಘಾಟನಾ ಸಮಾರಂಭ : ಜಲ ಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ ನಿಯಮಿತ ವತಿಯಿಂದ ಕೊಡಗು ಜಿಲ್ಲೆಯ ಭಾಗಮಂಡಲದ ಹತ್ತಿರ ಮಡಿಕೇರಿ-ತಲಕಾವೇರಿ ಮತ್ತು ನಾಪೋಕ್ಲು-ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಮೇಲ್ಸೇತುವೆಯ ಉದ್ಘಾಟನಾ ಸಮಾರಂಭ ಶುಕ್ರವಾರ ಮಧ್ಯಾಹ್ನ ೩ ಗಂಟೆಗೆ ಭಾಗಮಂಡಲದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಇಲಾಖೆ ಸಚಿವ ಡಿ. ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಭೋಸರಾಜು, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ, ಇಂಧನ ಸಚಿವ ಕೆ. ಜೆ. ಜಾರ್ಜ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ. ಪಿ. ಸುಜಾ ಕುಶಾಲಪ್ಪ, ಎಸ್. ಎಲ್. ಭೋಜೇಗೌಡ, ಡಾ. ಧನಂಜಯ ಸರ್ಜಿ, ಭಾಗಮಂಡಲ ಗ್ರಾ. ಪಂ. ಅಧ್ಯಕ್ಷ ಕಾಳನ ಎ. ರವಿ ಇತರರು ಪಾಲ್ಗೊಳ್ಳಲಿದ್ದಾರೆ.
ಎಸ್. ಎಂ. ಕೃಷ್ಣ ಹೆಸರಿಡಿ: ಕೆ. ಪಿ. ಚಂದ್ರಕಲಾ ಕೊಡಗಿನ ಪವಿತ್ರ ಕ್ಷೇತ್ರ ಭಾಗಮಂಡಲದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಭಾಗಮಂಡಲ ತಲಕಾವೇರಿ ರಸ್ತೆ ಸಂಪರ್ಕಿಸುವ ಮೇಲ್ಸೇತುವೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಎಸ್. ಎಂ. ಕೃಷ್ಣ ಹೆಸರು ನಾಮಕರಣ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿ. ಪಂ. ಮಾಜಿ ಅಧ್ಯಕ್ಷೆ ಕೆ. ಪಿ. ಚಂದ್ರಕಲಾ ಸಲಹೆ ನೀಡಿದ್ದಾರೆ.
ಕನ್ನಡ ನಾಡಿದ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ ಅಭಿವೃದ್ಧಿಗೆ ಎಸ್. ಎಂ. ಕೃಷ್ಣ ರವರು ೧೨. ೫೦ ಕೋಟಿ ರೂ. ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದರು. ತಮ್ಮ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಯ ಮೂವರನ್ನು ಮಂತ್ರಿಗಳನ್ನಾಗಿ ಮಾಡುವ ಮೂಲಕ ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಗೆ ಕೃಷ್ಣ ಹೆಸರಿಡುವಂತೆ ಅವರು ಒತ್ತಾಯಿಸಿದ್ದಾರೆ.