ನನ್ನ ಆರು ಏಳನೆಯ ವಯಸ್ಸಿನಿಂದ ಹದಿನಾರನೆಯ ವಯಸ್ಸಿನವರೆಗೆ ಪಾಠಶಾಲೆಯಲ್ಲಿ ವಿದ್ಯೆಯನ್ನು ಕಲಿತೆ. ಆದರೆ ಸ್ಕೂಲಿನಲ್ಲಿ ನನಗೆ ಯಾವ ಧಾರ್ಮಿಕ ಶಿಕ್ಷಣವೂ ದೊರೆಯಲಿಲ್ಲ. ಶಿಕ್ಷಕರಿಂದ ಯಾವುದು ನನಗೆ ಸುಲಭವಾಗಿ ದೊರೆಯಬಹುದಾಗಿದ್ದಿತೋ ಅದೂ ದೊರೆಯಲಿಲ್ಲ. ಆದರೂ ಸುತ್ತಲಿನ ವಾತಾವರಣದಿಂದಲೇ ನಾನು ಅಷ್ಟು ಇಷ್ಟು ಧರ್ಮಭಾವನೆಯನ್ನು ಹೊಂದಿದೆನೆಂದು ಹೇಳಬಹುದು. ಇಲ್ಲಿ ಧರ್ಮಕ್ಕೆ ವ್ಯಾಪಕ ಅರ್ಥವನ್ನು ಕೊಡಬೇಕು. ಧರ್ಮ ಎಂದರೆ ಆತ್ಮಸಾಕ್ಷಾತ್ಕಾರ, ಆತ್ಮಜ್ಞಾನ ಎಂದು ನನ್ನ ಅಭಿಪ್ರಾಯ.
ವೈಷ್ಣವ ಸಂಪ್ರದಾಯದಲ್ಲಿ ನಾನು ಜನ್ಮ ಎತ್ತಿದುದರಿಂದ ಆಗಾಗ ದೇವಾಲಯಕ್ಕೆ ಹೋಗಬೇಕಾಗುತ್ತಿತ್ತು. ಆದರೆ ನನಗೆ ಅದರಲ್ಲಿ ಶ್ರದ್ಧೆ ಉತ್ಪನ್ನವಾಗಿರಲಿಲ್ಲ. ದೇವಾಲಯದ ವೈಭವ ನನಗೆ ಒಪ್ಪಿಗೆ ಆಗಲಿಲ್ಲ. ದೇವಾಲಯಕ್ಕೆ ಹೋಗಿ ಬರುತ್ತಿದ್ದವರ ಅನಾಚಾರಗಳನ್ನು ಕೇಳಿ ಕೇಳಿ, ನನಗೆ ಅದರಲ್ಲಿ ಉದಾಸೀನತೆ ಹುಟ್ಟಿತು. ಇದರಿಂದ ನನಗೆ ಸ್ವಲ್ಪವೂ ಧರ್ಮಭಾವನೆ ಜನಿಸಲಿಲ್ಲ.
ಆದರೆ ದೇವಾಲಯದಿಂದ ಕಲಿಯದಿದ್ದುದನ್ನು, ನಮ್ಮ ಕುಟುಂಬದ ಬಹುಕಾಲದ ನೌಕರಳಾದ ಸೇವಕಿಯಿಂದ ಅರಿತೆ. ಅವಳಿಗೆ ನನ್ನಲ್ಲಿದ್ದ ಪ್ರೇಮವನ್ನು ಇಂದೂ ನೆನೆಸಿಕೊಳ್ಳುತ್ತೇನೆ.ಭೂತಪ್ರೇತಗಳೆಂದರೆ ನನಗೆ ಭಯವೆಂದು ಹಿಂದೆಯೇ ಹೇಳಿದ್ದೇನೆ. ಈ ಭಯಕ್ಕೆ ರಾಮನಾಮ ಔಷಧಿಯೆಂದು ರಂಭೆ (ಸೇವಕಿಯ ಹೆಸರು) ನನಗೆ ಹೇಳಿಕೊಟ್ಟಳು. ರಾಮನಾಮಕ್ಕಿಂತ ಹೆಚ್ಚಾಗಿ, ನನಗೆ ರಂಭೆಯಲ್ಲಿಯೇ ಹೆಚ್ಚು ನಂಬಿಕೆ ಇತ್ತು. ಅದರಂತೆ ಭೂತಪ್ರೇತಗಳ ಭಯದಿಂದ ತಪ್ಪಿಸಿಕೊಳ್ಳಲು ನಾನು ಚಿಕ್ಕಂದಿನಿಂದಲೇ ರಾಮನಾಮ ಜಪವನ್ನು ಪ್ರಾರಂಭಿಸಿದೆ. ಅದು ಬಹಳ ಕಾಲ ಮುಂದುವರಿಯದಿದ್ದರೂ ಬಾಲ್ಯದಲ್ಲಿ ಬಿತ್ತಿದ ಬೀಜ ವ್ಯರ್ಥವಾಗಲಿಲ್ಲ. ಎಲ್ಲ ಸಂಪ್ರದಾಯಗಳನ್ನೂ ಸಮಾನತೆಯಿಂದ ಕಾಣುವ ಶಿಕ್ಷಣ, ನನಗೆ ರಾಜಕೋಟೆಯಲ್ಲಿ ಶ್ರಮವಿಲ್ಲದೆ ದೊರೆಯಿತು.
ಹಿಂದೂಧರ್ಮದ ಬೇರೆ ಬೇರೆ ಸಂಪ್ರದಾಯಗಳಲ್ಲಿ ಆದರವಿಡುವುದನ್ನು ನಾನು ಕಲಿತೆ. ಏಕೆಂದರೆ ನಮ್ಮ ತಂದೆ ತಾಯಿಗಳು ವಿಷ್ಣು ದೇವಾಲಯಕ್ಕಲ್ಲದೆ ರಾಮಮಂದಿರ ಮತ್ತು ಈಶ್ವರ ದೇವಾಲಯಗಳಿಗೂ ಹೋಗುತ್ತಿದ್ದರು. ಜತೆಯಲ್ಲಿ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದರು. ನಾವೇ ಹೋಗಲೂ ಅವಕಾಶವನ್ನು ಕೊಡುತ್ತಿದ್ದರು. ಅಲ್ಲದೆ ನಮ್ಮ ತಂದೆಯ ಬಳಿ ಯಾರಾದರೂ ಜೈನ ಸನ್ಯಾಸಿಗಳು ಯಾವಾಗಲೂ ಇರುತ್ತಲೇ ಇದ್ದರು. ತಂದೆ ಅವರಿಗೆ ಭಿಕ್ಷೆಯನ್ನು ಕೊಡುತ್ತಿದ್ದುದಲ್ಲದೆ, ಅವರನ್ನು ಆದರದಿಂದ ಸತ್ಕರಿಸುತ್ತಿದ್ದರು. ಅವರು ತಂದೆಯೊಂದಿಗೆ ಧಾರ್ಮಿಕ ಮತ್ತು ವ್ಯಾವಹಾರಿಕ ಚರ್ಚೆಯನ್ನೂ ಮಾಡುತ್ತಿದ್ದರು. ಇದಲ್ಲದೆ ನಮ್ಮ ತಂದೆಯವರಿಗೆ ಮುಸಲ್ಮಾನ್ ಮತ್ತು ಪಾರಸೀ ಮಿತ್ರರು ಕೂಡ ಇದ್ದರು. ಅವರು ತಮ್ಮ ತಮ್ಮ ಧರ್ಮಗಳ ವಿಷಯವಾಗಿ ನಮ್ಮ ತಂದೆಗೆ ಹೇಳುತ್ತಿದ್ದರು. ಈ ಮಾತುಗಳನ್ನು ನಮ್ಮ ತಂದೆ ಆದರದಿಂದಲೂ, ಪ್ರೇಮಭಾವ ದಿಂದಲೂ ಕೇಳುತ್ತಿದ್ದರು. ನಾನು ನಮ್ಮ ತಂದೆಯವರ ಶುಶ್ರೂಷೆಯಲ್ಲಿರುತ್ತಿದ್ದುದರಿಂದ ಬಹು ಸಮಯ ಅಲ್ಲಿಯೇ ಕುಳಿತಿರುತ್ತಿದ್ದ. ಈ ಎಲ್ಲ ವಿಷಯಗಳ ಪರಿಣಾಮವಾಗಿ ನನ್ನ ಮನಸ್ಸಿನಲ್ಲಿ ಇತರ ಧರ್ಮಗಳ ವಿಷಯದಲ್ಲಿ ಸಮಾನಭಾವ ಉಂಟಾಯಿತು.
ನಾನು ಇತರ ಧರ್ಮಗಳನ್ನು ಹೀಗೆ ಸಮ ಭಾವದಿಂದ ಕಾಣುತ್ತಿದ್ದುದರಿಂದ ನನಗೆ ಈಶ್ವರನಲ್ಲಿ ನಿಜವಾದ ಶ್ರದ್ಧಾಭಕ್ತಿ ಇದ್ದಿತೆಂದು ಭಾವಿಸ ಕೂಡದು. ಆ ಸಮಯದಲ್ಲಿ ನನ್ನ ತಂದೆಯ ಪುಸ್ತಕ ಸಂಗ್ರಹದಲ್ಲಿದ್ದ ಮನುಸೃ ತಿಯ ಭಾಷಾಂತರದಒಂದು ಪ್ರತಿ ನನಗೆ ಸಿಕ್ಕಿತು. ಅದರಲ್ಲಿ ಸೃಷ್ಟಿಯ ಉತ್ಪತ್ತಿ ಮೊದಲಾದ ವರ್ಣನೆಯನ್ನು ಓದಿದೆ. ನನಗೆ ಅದರಲ್ಲಿ ಶ್ರದ್ಧೆಯುಂಟಾಗಲಿಲ್ಲ. ಅದರ ಬದಲು ಸ್ವಲ್ಪ ನಾಸ್ತಿಕತೆ ಉಂಟಾಯಿತು. ನಮ್ಮ ಇನ್ನೊಬ್ಬ ಚಿಕ್ಕಪ್ಪನ ಮಗನ (ಇನ್ನೂ ಜೀವಿಸಿದ್ದಾನೆ) ಬುದ್ಧಿತೀಕ್ಷ ತೆಯಲ್ಲಿ ನನಗೆ ನಂಬಿಕೆ ಇತ್ತು. ಅವನ ಮುಂದೆ ನನ್ನ ಸಂಶಯಗಳನ್ನು ತಿಳಿಸಿದನು. ಆದರೆ ಅವನಿಂದಲೂ ನನಗೆ ಸಮಾಧಾನ ದೊರಕಲಿಲ್ಲ. ಆತ ಹೀಗೆ ಹೇಳಿದ, ‘ದೊಡ್ಡವನಾದ ಮೇಲೆ ನಿನ್ನ ಬುದ್ಧಿಗೆ ಇದು ತಾನಾಗಿಯೇ ತಿಳಿಯುತ್ತದೆ. ಹುಡುಗರು ಇಂತಹ ಪ್ರಶ್ನೆಗಳನ್ನು ಕೇಳಬಾರದು. ನಾನೇನೋ ತೆಪ್ಪಗಾದನು. ಆದರೆ ಮನಸ್ಸಿಗೆ ಶಾಂತಿ ಲಭಿಸಲಿಲ್ಲ. ಮನುಸೃ ತಿಯ ಖಾದ್ಯಾಖಾದ ಪ್ರಕರಣದಲ್ಲಿ ಬರುವ ವಿಷಯ ಪ್ರಚಲಿತ ಪದ್ಧತಿಗಳಿಗೆ ವಿರೋಧವಾಗಿ ಇರುವಂತೆ ತೋರಿತು. ಅನುಮಾನಕ್ಕೆ ದೊರೆತ ಉತ್ತರವೂ ಬಹುಮಟ್ಟಿಗೆ ಹಿಂದಿನ ಉತ್ತರದಂತೆಯೇ ‘ಬುದ್ಧಿ ವಿಕಾಸವಾದಾಗ ಈ ವಿಷಯಗಳನ್ನು ಇನ್ನೂ ಚೆನ್ನಾಗಿ ಓದಿ ಮನನ ಮಾಡೋಣ’ ಎಂದು ಸಮಾಧಾನ ಮಾಡಿಕೊಂಡೆ.
ಆಗ ನಾನು ಮನುಸೃ ತಿಯನ್ನು ಓದಿ ಅಹಿಂಸೆಗೆ ಪ್ರೇರಣೆಯನ್ನಂತೂ ಪಡೆಯಲಿಲ್ಲ. ಮಾಂಸಾಹಾರದ ಕಥೆಯನ್ನು ಹಿಂದೆಯೇ ಹೇಳಿದ್ದೇನೆ. ಅದಕ್ಕೆ ಮನುಸೃ ತಿಯಲ್ಲಿ ಸಮರ್ಥನೆ ದೊರಕಿತು. ಹಾವು, ತಿಗಣೆ ಮುಂತಾದುವನ್ನು ಕೊಲ್ಲುವುದು ನೀತಿ ಎಂದು ತಿಳಿದಿದ್ದೆ. ಆ ಸಮಯದಲ್ಲಿ ನಾನು ಧರ್ಮವೆಂದು ತಿಳಿದು ತಿಗಣೆ ಮುಂತಾದುವನ್ನು ಕೊಂದುದು ಜ್ಞಾಪಕವಿದೆ. ಆದರೆ ಒಂದು ವಿಷಯ, ಈ ಸೃಷ್ಟಿಯು ನೀತಿಯ ತಳ ಹದಿಯ ಮೇಲೆ ನಿಂತಿದೆಯೆಂದೂ, ನೀತಿಯ ಸಮಾವೇಶವು ಸತ್ಯದಲ್ಲಿ ಆಗುತ್ತದೆಂದೂ ನನ್ನ ಮನಸ್ಸಿನ ಮೇಲೆ ಚೆನ್ನಾಗಿ ಅಚ್ಚು ಒತ್ತಿತ್ತು. ಸತ್ಯೋಪಾಸನೆಯೇ ನನ್ನ ಮುಖ್ಯ ಗುರಿಯಾಯಿತು. ಸತ್ಯದ ಮಹಿಮ ದಿನದಿನಕ್ಕೂ ನನ್ನ ದೃಷ್ಟಿಯಲ್ಲಿ ಹೆಚ್ಚಾಗುತ್ತಾ ಹೋಯಿತು. ಇದರ ಜತೆಯಲ್ಲಿಯೇ ಒಂದು ಗುಜರಾತೀ ನೀತಿಪದ್ಯ ನನ್ನ ಹೃದಯದಲ್ಲಿ ಅಂಕಿತವಾಗಿತ್ತು. ಅಪಕಾರಕ್ಕೆ ಪ್ರತಿಯಾಗಿ ಮಾಡಬೇಕಾದ್ದು ಅಪಕಾರವನ್ನಲ್ಲ, ಉಪಕಾರವನ್ನು ಎಂಬುದುಅದು. ಈ ತತ್ವ ನನ್ನ ಮೇಲೆ ತನ್ನ ಪ್ರಭಾವವನ್ನು ಬೀರಿತು. ಅಪಕಾರಕ್ಕೆ ಪ್ರತಿಯಾಗಿ ಉಪಕಾರ ಮಾಡುವುದು ನನ್ನ ಮನವೊಪ್ಪಿದ ವಿಷಯವಾಯಿತು. ನಾನು ಈ ತತ್ವದ ಅಸಂಖ್ಯಾತ ಪ್ರಯೋಗಗಳನ್ನು ಮಾಡಿದೆನು.
ಆ ಅದ್ಭುತ ಪದ್ಯವಿದು: ಪಾನೀ ಅಪನೇ ಪಾಯ ಬಲು ಭೋಜನ ತೋ ದೇಜೆ ಅಪೀ ನಮಾನೇ ಶೀಷ ದಂಡವತ್ ಕೋಡಕೀಚೆಅಪಣೋ ಘಾಸೇ ದಾಮ್ ಕಾಮ್ ಮಹೀರಿ ನು ಕರೀಯ ಆಪ ಉಗರೇ ಪ್ರಾಣ ತೇ ತಣ ದುಃಖ ಮಾಂ ಮರಿಯೆ ಗುಣ ಪೀಡೇ ತೋ ಗುಣ ದಶ ಗಣೇ ಮನವಾಚಾ ಕರ್ಮ ಕರೀ ಅವಗುಣ ಪೀಡೇ ಜೇ ಗುಣಕರೇ ತೇ ಜಗಮಾಂ ಜೋಸ್ಕೋ ಸಹೀ ‘ಒಂದು ಲೋಟ ನೀರುಕೊಟ್ಟವರಿಗೆ ಊಟ ನೀಡು, ಒಳ್ಳೆಯ ಮಾತನಾಡಿದವರಿಗೆ ದಂಡವತ್ ಪ್ರಣಾಮ ಮಾಡು, ಒಂದು ಕಾಸು ಕೊಟ್ಟವರಿಗೆ ಚಿನ್ನದ ಮೊಹರು ಕೊಡು, ನಿನ್ನ ಪ್ರಾಣವುಳಿಸಿದವರಿಗೆ ನಿನ್ನ ಜೀವವನ್ನೇ ಕೊಡಲು ಸಿದ್ಧನಾಗು. ಉಪಕಾರಕ್ಕೆ ಪ್ರತಿಯಾಗಿ ಮನೋವಾಕ್ಕಾಯಗಳಿಂದ ಹತ್ತು ಪಟ್ಟು ಪ್ರತ್ಯುಪಕಾರ ಮಾಡು. ನಿಜವಾದ ಜ್ಞಾನಿಗಳು ಎಲ್ಲರನ್ನೂ ಒಂದೇ ಸಮನಾಗಿ ನೋಡುತ್ತಾರೆ, ಅಪಕಾರ ಮಾಡಿದವರಿಗೂ ಸಂತೋಷದಿಂದ ಉಪಕಾರ ಮಾಡುತ್ತಾರೆ.’




