ನವೀನ್ ಡಿಸೋಜ
ಹಾಕಿಗೆ ಮತ್ತಷ್ಟು ಉತ್ತೇಜನ ನೀಡಲು ಮುಂದಾದ ಕೈಗ್ ಗ್ರೂಪ್; ಹಾಕಿ ಕೂರ್ಗ್ ಲೀಗ್‌ನಲ್ಲಿ ಅರ್ಹತೆ ಪಡೆದ ೧೬ ತಂಡಗಳ ನಡುವೆ ಸೆಣಸಾಟ
ಮಡಿಕೇರಿ: ಕೊಡಗಿನಲ್ಲಿ ಹಾಕಿಗೆ ಮತ್ತಷ್ಟು ಉತ್ತೇಜನ ನೀಡಲು ಕೈಗ್ ಗ್ರೂಪ್ ಮುಂದಾಗಿದ್ದು, ಹಾಕಿ ಕೂರ್ಗ್ ಸಹಯೋಗದಲ್ಲಿ ಕೂರ್ಗ್ ಚಾಲೆಂಜರ್ಸ್ ಆಯೋಜಿಸುತ್ತಿರುವ ಮೊದಲ ವರ್ಷದ ಕೈಗ್ ಕಪ್ ಹಾಕಿ ಪಂದ್ಯಾವಳಿ ಡಿ.೧೬ರಿಂದ ೨೦ರವರೆಗೆ ನಡೆಯಲಿದೆ.
ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಅಕ್ಟೋಬರ್‌ನಲ್ಲಿ ನಡೆದ ಹಾಕಿ ಕೂರ್ಗ್ ಲೀಗ್‌ನಲ್ಲಿ ಪಾಲ್ಗೊಂಡು ಅರ್ಹತೆ ಪಡೆದಿರುವ ೧೬ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಕೈಗ್ ಹಾಕಿಯ ಲೋಗೋ ಬಿಡುಗಡೆ ಕಾರ್ಯಕ್ರಮ ಈಗಾಗಲೇ ಜರುಗಿದ್ದು, ಪಂದ್ಯಾವಳಿಗೆ ಅಗತ್ಯ ಸಿದ್ಧತೆಯನ್ನು ಆಯೋಜಕರು ಮಾಡಿಕೊಂಡಿದ್ದಾರೆ.
ಅಮ್ಮತ್ತಿ ಗ್ರಾಮದ ಕುಟ್ಟಂಡ ಹ್ಯಾರಿ ಅಪ್ಪಯ್ಯ, ಸರಸ್ವತಿ ದಂಪತಿ ಪುತ್ರ ಕೈಗ್ ಗ್ರೂಪ್ ಮುಖ್ಯಸ್ಥರಾದ ಕುಟ್ಟಂಡ ಸುದಿನ್ ಮಂದಣ್ಣ ಅವರ ಚಿಂತನೆಯಲ್ಲಿ ಈ ಕೈಗ್ ಹಾಕಿ ಪಂದ್ಯಾವಳಿ ಆಯೋಜನೆಗೊಳ್ಳುತ್ತಿದೆ. ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಓರ್ವ ಸ್ಥಳೀಯ ಮತ್ತು ಓರ್ವ ಅತಿಥಿ ಆಟಗಾರರಿಗೆ ತಲಾ ೧೨ ಲಕ್ಷ ರೂ. ಮೌಲ್ಯದ ೫,೪೪೪ ಚದರ ಅಡಿ ನಿವೇಶನವನ್ನು ನೀಡಲಾಗುತ್ತಿದೆ. ಜತೆಗೆ ವಿಜೇತ ತಂಡಕ್ಕೆ ೨ ಲಕ್ಷ ರೂ. ನಗದು ಬಹುಮಾನ ಮತ್ತು ಕೈಗ್ ರೋಲಿಂಗ್ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ೧ ಲಕ್ಷ ರೂ. ನಗದು ಬಹುಮಾನ, ತೃತೀಯ ಬಹುಮಾನ ಪಡೆಯುವ ತಂಡಕ್ಕೆ ೫೦ ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಲಾಗಿದೆ.
ಇದನ್ನೂ ಓದಿ:-ಪ್ರವಾಸದ ವೇಳೆ ಬಸ್ ಪಲ್ಟಿ ಪ್ರಕರಣ: ಮೈಸೂರಿಗೆ
ಟೂರ್ನಿಯಲ್ಲಿ ಒಟ್ಟು ೧೬ ತಂಡಗಳು ಪಾಲ್ಗೊಳ್ಳುತ್ತಿದ್ದು, ಪ್ರತಿ ತಂಡದಲ್ಲಿ ೫ ಅತಿಥಿ ಆಟಗಾರರಿಗೆ ಅವಕಾಶ ನೀಡಲಾಗಿದೆ. ಅತಿಥಿ ಆಟಗಾರರು ಭಾರತದ ಯಾವುದೇ ಪ್ರದೇಶದವ ರಾಗಿರಬಹುದು ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರನ್ನು ಸೇರಿಸಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ನಡೆದ ಕೂರ್ಗ್ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಆಟವಾಡಿದ ತಂಡಗಳ ಪೈಕಿ ೧೬ ಅತ್ಯುತ್ತಮ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಈ ತಂಡಗಳ ನಡುವೆ ನಾಕೌಟ್ ಮಾದರಿಯಲ್ಲಿ ಈ ಪಂದ್ಯಾವಳಿ ನಡೆಯಲಿದೆ.
” ಕೂರ್ಗ್ ಚಾಲೆಂಜರ್ಸ್ ಕ್ಲಬ್‌ನಿಂದ ಈ ಹಿಂದೆ ಆಫ್ ರೋಡ್ ರ‍್ಯಾಲಿಯನ್ನು ಆಯೋಜನೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಹಾಕಿ ಟೂರ್ನಿಯನ್ನು ಆಯೋಜಿಸುತ್ತಿದ್ದೇವೆ. ಈ ಟೂರ್ನಿ ಪ್ರತಿ ವರ್ಷ ಮುಂದುವರಿಯಲಿದೆ. ಕೈಗ್ ಗ್ರೂಪ್, ಹಾಕಿ ಕೂರ್ಗ್ ಸಹಭಾಗಿತ್ವದಲ್ಲಿ ಮುಂದೆ ಬೇರೆ ಬೇರೆ ಸಂಸ್ಥೆಗಳು ಮುನ್ನಡೆಸಲಿವೆ.”
-ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ಕೂರ್ಗ್ ಚಾಲೆಂಜರ್ಸ್ ಕ್ಲಬ್ ಸ್ಥಾಪಕ
ಕೈಗ್ ಹಾಕಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳು:
ಮಡಿಕೇರಿ ಚಾರ್ಮರ್ಸ್, ಕೂರ್ಗ್ ಚಾಲೆಂಜರ್ಸ್, ಕೋಣನಕಟ್ಟೆ ಇಲೆವೆನ್, ಬಿಬಿಸಿ ಗೋಣಿಕೊಪ್ಪ, ಬೇರಳಿನಾಡ್, ಕುಂದ ಬೊಟ್ಟಿಯತ್ನಾಡ್, ಸೋಮವಾರಪೇಟೆ ಡಾಲ್ಛಿನ್, ಬಲಂಬೇರಿ ಮಹದೇವ ಸ್ಪೋರ್ಟ್ಸ್ ಕ್ಲಬ್, ಅಮ್ಮತ್ತಿ ರಾಯಲ್ಸ್, ಕಡಿಯತ್ನಾಡ್, ಕೂಡಿಗೆ ಕ್ರೀಡಾ ಶಾಲೆ ತಂಡ, ಕೈಗ್ ಹಾಕಿ, ಕಗಟ್ನಾಡ್ ಫ್ಲೈಯಿಂಗ್ ಎಲ್ಬೋಸ್, ಅಮ್ಮತ್ತಿ ಸ್ಪೋರ್ಟ್ಸ್, ನಾಪೋಕ್ಲು ಶಿವಾಜಿ, ಮಲ್ಮ ಕಕ್ಕಬ್ಬೆ ತಂಡಗಳು ಕೈಗ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ.





