Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಆತ ಸಾಯುವಂತೆ ಗುಂಡು ಹೊಡೆಯಬೇಕಿತ್ತು..

ಬಾಲಕಿ ಅತ್ಯಾಚಾರ, ಕೊಲೆ ಆರೋಪಿ ಕಾರ್ತಿಕ್ ತಾಯಿ ಆಕ್ರೋಶದ ಮಾತು

ಮೈಸೂರು: ಆತ ನನ್ನ ಮಗ ಎಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ… ಆತನ ಕಾಲಿಗೆ ಗುಂಡು ಹೊಡೆಯುವ ಬದಲಾಗಿ ಆತ ಸಾಯುವಂತಹ ಜಾಗಕ್ಕೆ ಗುಂಡು ಹೊಡೆಯಬೇಕಿತ್ತು… ಇದು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಅಮಾನುಷವಾಗಿ ಕೊಲೆ ಮಾಡಿದ ಆರೋಪಿ, ಸೈಕೋ ಕಿಲ್ಲರ್ ಕಾರ್ತಿಕ್‌ನ ತಾಯಿಯ ಆಕ್ರೋಶದ ನುಡಿಗಳು.

ಕಾರ್ತಿಕ್‌ನ ತಾಯಿ ಗಾಯತ್ರಿ ಅವರನ್ನು ಭೇಟಿ ಮಾಡಿದ ಪೊಲೀಸರು, ಆತನ ಕೃತ್ಯದ ಬಗ್ಗೆ ತಿಳಿಸಿದಾಗ, ಅವರು ಅಕ್ಷರಶಃ ನಡುಗಿಹೋದರು. ಒಬ್ಬ ಅಮಾಯಕ ಬಾಲಕಿಯನ್ನು ಇಷ್ಟು ಕ್ರೂರವಾಗಿ ಕೊಲೆ ಮಾಡುತ್ತಾನೆ ಎಂದು ನಾನು ಊಹಿಸಿಯೂ ಇರಲಿಲ್ಲ ಎಂದು ಮುಜುಗರದಿಂದಲೇ ಹೇಳಿದರು. ಆತ ಹಾದಿ ತಪ್ಪಿದ ಮಗ. ನಮ್ಮ ಮನೆಗೆ ಯಾವಾಗಲೋ ಬರುತ್ತಿದ್ದ. ಕೊಳ್ಳೇಗಾಲದಲ್ಲಿ ಬಸ್ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದ. ಕೆಟ್ಟ ಚಟಗಳ ದಾಸನಾಗಿದ್ದ.

ಆತನ ಮೇಲೆ ನನಗೆ ಯಾವುದೇ ನಂಬಿಕೆ ಇರಲಿಲ್ಲ ಎಂದರು. ಆತ ಒಳ್ಳೆಯ ವ್ಯಕ್ತಿಯಾಗಿ ಬಾಳಲಿ ಎಂದು ಸಾಕಷ್ಟು ಯತ್ನ ಮಾಡಿದ್ದೆ. ಮದುವೆಯನ್ನೂ ಮಾಡಿದ್ದೆ. ಆದರೆ, ಆತನ ಪತ್ನಿ ಕೂಡ ಆತನನ್ನು ತೊರೆದು ಹೋಗಿದ್ದಾಳೆ. ಅದಕ್ಕೆ ಈತನ ಅಶಿಸ್ತು, ಅಸಹ್ಯ ನಡವಳಿಕೆಯೇ ಕಾರಣ. ಇದರಲ್ಲಿ ಆಕೆಯದ್ದು ಯಾವ ತಪ್ಪೂ ಇಲ್ಲ ಎಂದು ದುಃಖದಿಂದಲೇ ಅಲವತ್ತುಕೊಂಡರು. ಗುರುವಾರ ಬೆಳಿಗ್ಗೆ ಆತ ಈ ನೀಚ ಕೆಲಸ ಮಾಡಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ನನ್ನ ಮನಸ್ಸು ಘಾಸಿಗೊಳಗಾಯಿತು. ನಾನು ತರಕಾರಿ ಮಾರಾಟ ಮಾಡಿಕೊಂಡು ಗೌರವದಿಂದ ಬದುಕು ಸಾಗಿಸುತ್ತಿದ್ದೇನೆ. ಇಂತಹ ಮಗನಿಂದ ನನಗೂ ಕೆಟ್ಟ ಹೆಸರು ಬರುವಂತಾಯಿತು ಎಂದು ಕಣ್ಣೀರಾದರು.

ಇದನ್ನು ಓದಿ : ಕೆಂಡಗಣ್ಣಿನ ಮೇಷ್ಟರ ತಾಯಿ ಕರುಳು

ಆತ ಈ ನೀಚಕೃತ್ಯ ಮಾಡಿದ್ದು ಬಹಳ ದೊಡ್ಡ ತಪ್ಪು. ಆತನನ್ನು ಕ್ಷಮಿಸಲೇಬಾರದು. ನೀವು, ಕಾಲಿಗೆ ಗುಂಡು ಹೊಡೆಯುವ ಬದಲಿಗೆ ಅವನನ್ನು ಸಾಯಿಸಿಯೇ ಬಿಡಬೇಕಿತ್ತು. ಸಮಾಜಕ್ಕೆ ಇಂತಹ ನೀಚರ ಅವಶ್ಯವಿಲ್ಲ. ಆತನ ಮುಖವನ್ನೂ ನೋಡುವ ಆಸೆ ನನಗಿಲ್ಲ ಎಂದು ನೊಂದು ನುಡಿದರು.

ಬಾಲಕಿ ಅಂತ್ಯಸಂಸ್ಕಾರ:  ದಸರಾದಲ್ಲಿ ಬಲೂನು ಮಾರಾಟ ಮಾಡಲುಪೋಷಕರೊಂದಿಗೆ ಮೈಸೂರಿಗೆ ಬಂದಿದ್ದಾಗ ದುಷ್ಕರ್ಮಿಯಿಂದ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಬಾಲಕಿಯ ಶವದೊಂದಿಗೆ ಪೋಷಕರು, ಕಲಬುರ್ಗಿ ಜಿಲ್ಲೆಯ ಸ್ವಗ್ರಾಮಕ್ಕೆ ಗುರುವಾರ ಸಂಜೆ ತೆರಳಿದರು. ಶುಕ್ರವಾರ ಸಂಜೆ ವೇಳೆಗೆ ಅವರ ಸಂಪ್ರದಾಯದಂತೆ ಬಾಲಕಿಯ ಅಂತ್ಯಸಂಸ್ಕಾರ ನಡೆಸಿದ್ದಾರೆ. ಬಾಲಕಿಯ ಸಾವಿಗೆ ಗ್ರಾಮಸ್ಥರು ಮಮ್ಮಲ ಮರುಗಿದರು.

ಆರೋಪಿ ಟ್ರಾಮಾ ಕೇರ್ ಸೆಂಟರ್‌ಗೆ ಸ್ಥಳಾಂತರ:  ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆ ಗುಂಡೇಟಿಗೆ ಒಳಗಾಗಿರುವ ಆರೋಪಿ ಕಾರ್ತಿಕ್‌ನನ್ನು, ಕೆ.ಆರ್. ಆಸ್ಪತ್ರೆಯಿಂದ ಮೇಟಗಳ್ಳಿಯಲ್ಲಿ ಇರುವ ಟ್ರಾಮಾ ಕೇರ್ ಸೆಂಟರ್‌ಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಎಚ್.ಎಸ್.ದಿನೇಶ್ ಕುಮಾರ್

Tags:
error: Content is protected !!