Mysore
23
overcast clouds
Light
Dark

42 ವರ್ಷಗಳ ಬಳಿಕ ಹಾರಂಗಿ ಮುಖ್ಯ ಕಾಲುವೆ ದುರಸ್ತಿ

ಮಡಿಕೇರಿ: ರಾಜ್ಯದಲ್ಲಿ ಈ ಬಾರಿ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ಜಲಾಶಯಗಳಲ್ಲಿ ನೀರಿನ ಸೋರಿಕೆ ತಡೆಗೆ ಕ್ರಮ ಕೈಗೊಂಡಿದೆ. ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಿಂದ ನೀರು ಬಿಡುವ ಸಂದರ್ಭದಲ್ಲಿ ಆಗುವ ದೊಡ್ಡ ಪ್ರಮಾಣದ ಸೋರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಲಾಶಯ ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ಮುಖ್ಯ ಕಾಲುವೆಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಅಣೆಕಟ್ಟೆ ನಿರ್ಮಾಣ ಆಗಿ 42 ವರ್ಷ ಕಳೆದಿದ್ದು, ಈ ತನಕ ಮುಖ್ಯ ಕಾಲುವೆಯ ದುರಸ್ತಿ ಆಗಿರಲಿಲ್ಲ. ಹಾಸನ ಜಿಲ್ಲೆಗೆ ನೀರು ಪೂರೈಸಲು ಎಡದಂಡೆ ನಾಲೆ ಮತ್ತು ಮೈಸೂರು ಜಿಲ್ಲೆಗೆ ನೀರು ಪೂರೈಸಲು ಬಲದಂಡೆ ನಾಲೆಗೆ ಕಣಿವೆ ಬಳಿಯಿಂದ ಈ ಮುಖ್ಯ ನಾಲೆಯಿಂದಲೇ ನೀರು ಸರಬರಾಜು ಆಗುತ್ತದೆ. ಆದರೆ ಮುಖ್ಯ ನಾಲೆ ಬಹುತೇಕ ಕಡೆಗಳಲ್ಲಿ ಹಾನಿಯಾಗಿದ್ದ ಕಾರಣ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆ ಯಾಗಿ ವ್ಯರ್ಥವಾಗುತ್ತಿತ್ತು.

ಮುಖ್ಯ ಕಾಲುವೆಯಲ್ಲಿ ಹರಿಯುವ ನೀರಿನಲ್ಲಿ ಶೇ.20-30ರಷ್ಟು ನೀರು ಸೋರಿಕೆಯಾಗುತ್ತಿದ್ದರಿಂದ ಎಚ್ಚೆತ್ತುಕೊಂಡ ಹಾರಂಗಿ ಅಣೆಕಟ್ಟೆ ವಿಭಾಗದ ಅಧಿಕಾರಿಗಳು ಕಾಲುವೆ ದುರಸ್ತಿ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಅಚ್ಚುಕಟ್ಟು ಪ್ರದೇಶದ ರೈತರೂ ಮುಖ್ಯ ಕಾಲುವೆ ದುರಸ್ತಿಯ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸ್ಥಳೀಯ ಶಾಸಕರು ಪೂರಕವಾಗಿ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರಿಂದ ಭಾರಿ ನೀರಾವರಿ ಸಚಿವರು ಕೂಡ ಈ ಮುಖ್ಯ ಕಾಲುವೆ ದುರಸ್ತಿಯ ಅಗತ್ಯತೆ ಮನಗಂಡು ನಾಲೆಯ ಆಧುನೀಕರಣಕ್ಕೆ ಅನುಮೋದನೆ ಕೊಟ್ಟಿದ್ದಾರೆ.

ಮೊದಲ ಹಂತದಲ್ಲಿ ಹಾರಂಗಿ ಮುಖ್ಯನಾಲೆಯ 0-6.85 ಕಿಲೋಮೀಟರ್ ತನಕ ಆಧುನೀಕರಣ ಕಾರ್ಯಕ್ಕೆ ಸರ್ಕಾರ 50 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಆಂಧ್ರಪ್ರದೇಶ ಮೂಲದ ಗುತ್ತಿಗೆದಾರರು ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

50 ಕೊಟಿ ರೂ. ವೆಚ್ಚದ ಮುಖ್ಯ ನಾಲೆಯ ದುರಸ್ತಿ ಕಾಮಗಾರಿಯ ಜೊತೆಗೆ 8 ಕೋಟಿ ರೂ. ವೆಚ್ಚದಲ್ಲಿ ಬ್ಲಾಕ್ ಮಾದರಿಯ ನಾಲೆಯ ಕಟ್ ಆ್ಯಂಡ್ ಕವರ್ ಪ್ರಮುಖ ಕಾಮಗಾರಿಯೂ ನಡೆದಿದೆ. ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಒಂದನೆಯ ತೂಬಿನಿಂದ ಆರನೇ ತೂಬಿನವರೆಗೆ ದುರಸ್ತಿ, ಮುಖ್ಯ ನಾಲೆಯ ಮೇಲ್ಬಾಗದಲ್ಲಿ ರಸ್ತೆಯ ನಿರ್ಮಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕಿರು ಸೇತುವೆ ನಿರ್ಮಾಣ, ಮುಖ್ಯ ನಾಲೆಯ ಎರಡೂ ಬದಿಗಳಲ್ಲಿ ಕಾಂಕ್ರಿಟೀಕರಣ, ಮುಖ್ಯ ನಾಲೆಯು ಕಿರಿದಾದ ಸ್ಥಳಗಳಲ್ಲಿ ಬೆಟ್ಟ ಕುಸಿಯದ ಹಾಗೆ ತಡೆಗೋಡೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲಾಗುತ್ತಿದೆ.

ಕುಶಾಲನಗರ ತಾಲ್ಲೂಕು ಬ್ಯಾಡಗೊಟ್ಟ ಗ್ರಾಮದ ಸಮೀಪ ಬೆಟ್ಟದ ಬುಡದಲ್ಲಿ ಆಳದಲ್ಲಿ ಹೋಗಿರುವ ಸುಮಾರು 150 ಮೀಟರ್ ಉದ್ದದ ಮುಖ್ಯ ನಾಲೆಯ ಬ್ಲಾಕ್ ಮಾದರಿ ಕಟ್ ಆ್ಯಂಡ್ ಕವರ್ ಪ್ರಮುಖ ಕಾಮಗಾರಿಯೂ ಶುರುವಾಗಿದೆ. ಈ ಕಾಮಗಾರಿ ನಡೆದ ನಂತರ ಈ ಭಾಗದಲ್ಲಿ ಮುಖ್ಯ ನಾಲೆ ಮೇಲೆ ಬೆಟ್ಟ ಕುಸಿತವಾದರೂ ಯಾವುದೇ ತೊಂದರೆಗಳಾಗದೆ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಅನುಕೂಲ ಆಗುತ್ತದೆ.
ಮೊದಲ ಹಂತದ ಕಾಮಗಾರಿ ಮುಗಿಯುತ್ತಿದ್ದಂತೆಯೇ 2ನೇ ಹಂತದಲ್ಲಿ 6.85-14.75 ಆಧುನೀಕರಣಕ್ಕೆ ಇಲಾಖೆ ಮುಂದಾಗಿದೆ. ಇದಕ್ಕಾಗಿ ಸರ್ಕಾರ ಈಗಾಗಲೇ 72.75 ಕೋಟಿ ರೂ.ಗಳ ಯೋಜನೆಗೆ ಮಂಜೂರಾತಿ ಕೊಟ್ಟಿದೆ.

1982ರಲ್ಲಿ ಜಲಾಶಯ ನಿರ್ಮಾಣ: ಹುದುಗೂರು ಗ್ರಾಮದಲ್ಲಿರುವ ಹಾರಂಗಿ ಅಣೆಕಟ್ಟೆ ನಿರ್ಮಾಣ ಕಾಮಗಾರಿ 1969ರಲ್ಲಿ ಆರಂಭವಾಗಿ 1982ರಲ್ಲಿ ಪೂರ್ಣಗೊಂಡಿತು. ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಾರಂಗಿ ಜಲಾಶಯದಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಜೀವನದಿ ಕಾವೇರಿಯ ಪ್ರಮುಖ ಉಪನದಿಯಾಗಿರುವ ಹಾರಂಗಿ ಪುಷ್ಪಗಿರಿ, ಕೋಟೆಬೆಟ್ಟ, ಮುಕ್ಕೋಡ್ಲು, ಕಾಲೂರು, ಹಟ್ಟಿಹೊಳೆ, ಮಾದಾಪುರ ಸೇರಿದಂತೆ 419,58 ಚ.ಕಿ.ಮೀ.ಗಳಷ್ಟು ವಿಶಾಲವಾದ ಜಲಾನಯನ ಪ್ರದೇಶ ಹೊಂದಿದೆ. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯ ಕಾವೇರಿ ಕಣಿವೆಯ ಮಹತ್ವದ ಜಲಾಶಯಗಳಲ್ಲಿ ಒಂದಾಗಿದೆ. ಜಲಾಶಯದಿಂದ ನೀರಾವರಿಯ ಅನುಕೂಲತೆ ಜತೆಗೆ ಜಲಾಶಯದ ನೀರನ್ನು ಬಳಸಿ ಖಾಸಗಿ ಸಂಸ್ಥೆಯೊಂದು ಇಲ್ಲಿ ವಿದ್ಯುತ್ ಕೂಡ ಉತ್ಪಾದಿಸುತ್ತದೆ.

ಹಾರಂಗಿ ಅಣೆಕಟ್ಟೆ ನಿರ್ಮಾಣವಾದ 42 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮುಖ್ಯ ನಾಲೆಯ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ 0-6.85 ಕಿಲೋಮೀಟರ್ ತನಕ ನಾಲೆಯ ಆಧುನೀಕರಣ ಕಾರ್ಯ ನಡೆದಿದೆ. ಮಳೆಗಾಲ ಶುರುವಾಗುವುದರೊಳಗೆ ಈ ಕೆಲಸ ಮುಗಿಯಲಿದೆ. ನಂತರ 2ನೇ ಹಂತದಲ್ಲಿ 6.85-14.75 ಕಿಮೀ ತನಕ ನಾಲೆಯ ಆಧುನೀಕರಣ ಕಾಮಗಾರಿ ನಡೆಯುತ್ತದೆ.
-ಪುಟ್ಟಸ್ವಾಮಿ, ಇಇ, ಕಾವೇರಿ ನೀರಾವರಿ ನಿಗಮ