ಮಂಜು ಕೋಟೆ
ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿಗಳ ಖರೀದಿಗೆ ಜನಸಾಮಾನ್ಯರು ಹೆಚ್ಚಿನ ಆಸಕ್ತಿ ತೋರದೆ ಇರುವುದರಿಂದ ಪಟಾಕಿ ವ್ಯಾಪಾರಸ್ಥರು ನಷ್ಟದ ಭೀತಿಯಲ್ಲಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಕ್ಷೇತ್ರದ ಜನರು ಪರಿಸರ, ಆರೋಗ್ಯ ಕಾಳಜಿ ಹಾಗೂ ಹಣಕಾಸಿನ ಮುಗ್ಗಟ್ಟಿನಿಂದಾಗಿ ದೀಪಾವಳಿ ಹಬ್ಬದ ಪಟಾಕಿ ಖರೀದಿಗೆ ಆಸಕ್ತಿ ತೋರುತ್ತಿಲ್ಲ.
ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ಪಟಾಕಿ ವ್ಯಾಪಾರಸ್ಥರು ಕಳೆದ ಬಾರಿ ೧೫ ಅಂಗಡಿಗಳನ್ನು ತೆರೆದಿದ್ದರು. ಈ ಬಾರಿ ಪೈಪೋಟಿಯ ಮೂಲಕ ೨೯ ಪಟಾಕಿ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದರೂ ನಿರೀಕ್ಷೆಯಂತೆ ಜನರು ಅಂಗಡಿಗಳತ್ತ ಬರುತ್ತಿಲ್ಲ. ಹಬ್ಬವು ಎರಡು ದಿನ ಮಾತ್ರ ಇರುವುದರಿಂದ ಇದೇ ರೀತಿ ಮುಂದುವರಿದರೆ ಅನೇಕರು ಬಹಳಷ್ಟು ನಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟಾಕಿಯಿಂದ ಜನರ ಆರೋಗ್ಯದ ಮೇಲಾಗುವ, ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಉಂಟಾಗಿರುವುದರಿಂದ ಪಟಾಕಿ ಸಿಡಿಸಲು ಆಸಕ್ತಿ ತೋರಿಸುತ್ತಿಲ್ಲ. ಆದರೆ ಮನೆಯಲ್ಲಿರುವ ಮಕ್ಕಳಿಗೆ ಸಣ್ಣಪುಟ್ಟ ಪಟಾಕಿಗಳನ್ನು ಖರೀದಿಸಲು ಮಾತ್ರ ಅಂಗಡಿಗಳತ್ತ ಧಾವಿಸುತ್ತಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಪಟಾಕಿಗಳ ಬೆಲೆ ಶೇ.೧೫ರಷ್ಟು ಹೆಚ್ಚಳವಾಗಿರುವುದರಿಂದಲೂ ಖರೀದಿ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಮನೆಗಳಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಮಣ್ಣಿನ ಹಣತೆಗಳನ್ನು ಹಚ್ಚಿ ದೀಪಾವಳಿ ಆಚರಿಸಲು ಒಲವು ತೋರುತ್ತಿದ್ದಾರೆ.
” ಸರಗೂರು ಮತ್ತು ಕೋಟೆ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಈ ಬಾರಿ ಅತಿ ಹೆಚ್ಚು ಪಟಾಕಿ ಅಂಗಡಿಗಳು ತೆರೆದಿವೆ. ಜನಸಾಮಾನ್ಯರಲ್ಲಿ ಪಟಾಕಿ ದುಷ್ಪರಿಣಾಮಗಳ ಅರಿವು ಹೆಚ್ಚಾಗಿರುವುದರಿಂದ ಪಟಾಕಿ ಖರೀದಿಸಲು ಮುಂದಾಗುತ್ತಿಲ್ಲ. ಇದರಿಂದ ನಷ್ಟದ ಭೀತಿಯಲ್ಲಿದ್ದೇವೆ. ಇನ್ನೆರಡು ದಿನಗಳಲ್ಲಿ ಜನರು ಪಟಾಕಿ ಖರೀದಿಸಲು ಮುಗಿಬಿದ್ದರೆ ಮಾತ್ರ ವ್ಯಾಪಾರಸ್ಥರು ಲಾಭ ಕಾಣಬಹುದು.”
-ವಿನಯ್ ಭಜರಂಗಿ, ಪಟಾಕಿ ವ್ಯಾಪಾರಸ್ಥರು, ವರ್ತಕರ ಸಂಘದ ಅಧ್ಯಕ್ಷರು





