• ರಮೇಶ್ ಪಿ. ರಂಗಸಮುದ್ರ
ಭತ್ತ ವಿಶ್ವದಾದ್ಯಂತ ಬೆಳೆಯುವ ಪ್ರಾಚೀನ ಮತ್ತು ಜನಪ್ರಿಯ ಆಹಾರ ಬೆಳೆಯಾಗಿದ್ದು, ಈ ಆಹಾರ ಬೆಳೆಯನ್ನು ವಿಶ್ವದ ಶೇ.80ಕ್ಕಿಂತ ಹೆಚ್ಚು ಜನರು ಬಳಸುತ್ತಾರೆ.
ಏಷ್ಯಾ ಖಂಡವನ್ನು ‘ವಿಶ್ವದ ಅಕ್ಕಿಯ ಒಡೆಯ’ ಎಂದೇ ಕರೆಯುತ್ತಾರೆ. ಚೀನಾ, ಜಪಾನ್, ಭಾರತ, ಇಂಡೋನೇಷಿಯಾ ಮುಂತಾದ ರಾಷ್ಟ್ರಗಳು ಇಡೀ ವಿಶ್ವಕ್ಕೆ ಅಕ್ಕಿ ಪೂರೈಸುವ ಸಾಮರ್ಥ್ಯವನ್ನು ಹೊಂದಿದ್ದು,
ಭಾರತದಲ್ಲಿ ಹರಪ್ಪ, ಮೆಹೆಂಜೋದಾರೊ ಕಾಲದಿಂದಲೂ ಶ್ರೀ ಪದ್ಧತಿ ಭತ್ತದ ಬೇಸಾಯ ಭತ್ತ ಬೆಳೆಯುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ.
ಇತ್ತೀಚಿನ ದಿನಗಳಲ್ಲಿ ಭತ್ತದ ಬೇಸಾಯವು ಇಳಿಮುಖವಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಭತ್ತ ಹೆಚ್ಚು ನೀರಿನಲ್ಲಿ ಬೆಳೆಯುವ ಬೆಳೆ ಎಂಬ ಕಾರಣದಿಂದ ನೀರು ಪೂರೈಸಲಾಗದೆ ಹಲವು ರೈತರು ಈ ಬೇಸಾಯವನ್ನು ಕೈಬಿಟ್ಟಿದ್ದಾರೆ. ಆದರೆ ಮಿತ ನೀರಿನ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡೂ ಭತ್ತ ಬೆಳೆಯಬಹುದಾಗಿದೆ.
ನೀರಿನ ಸಮರ್ಪಕ ಬಳಕೆಯ ಮಹತ್ವವನ್ನು ಕೃಷಿಕರು ಅದರಲ್ಲಿಯೂ ಭತ್ತ ಬೆಳೆಯುವ ಕೃಷಿಕರು ಅರಿತು ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡಬೇಕು. ಆ ಮೂಲಕ ಭತ್ತ ಬೆಳೆಯಬೇಕು.
ಅಂತರರಾಷ್ಟ್ರೀಯ ಸಮುದಾಯವು 2024ರ ವರ್ಷವನ್ನು ಜೀವಕ್ಕಾಗಿ ಭತ್ತ’ ಎಂದು ಘೋಷಿಸಿ ಭತ್ತದ ಮಹತ್ವವನ್ನು ಸಾರಿದೆ.
ಮಿತ ನೀರಿನ ಭತ್ತ ಬೇಸಾಯ ಪದ್ಧತಿಗಳು
1.ಭತ್ತ ಬೆಳೆಯಲು ಸೂಕ್ತ ಭೂಮಿಯ ಆಯ್ಕೆ, ನೀರು ನಿಲ್ಲುವ ಎರೆಮಿಶ್ರಿತ ಭೂಮಿಯನ್ನು ಆಯ್ಕೆ ಮಾಡಬೇಕು.
2.ಭೂಮಿಯನ್ನು ಸಮಪಾತಾಳಿ ಮಾಡುವುದು, ಭತ್ತ ಬೆಳೆಯುವ ಭೂಮಿಯಲ್ಲಿ ನೀರು ಎಲ್ಲೆಡೆ ಎರಡರಿಂದ ಐದು ಇಂಚು ಆಳದಲ್ಲಿ ನಿಲ್ಲುವಂತೆ ಸಿದ್ದ ಮಾಡಿಕೊಳ್ಳಬೇಕು.
3.ಎರಡು ಮೂರು ಬಾರಿ ಕೆಸರು ಉಳುಮೆ ಮಾಡುವುದು ಮಣ್ಣಿನ ರಂದ್ರಗಳು ಮುಚ್ಚಿ ಭೂಮಿಯ ಮೇಲೈನಲ್ಲಿ ಹೆಚ್ಚು ನೀರು ನಿಲ್ಲುವಂತೆ ಮಣ್ಣನ್ನು ಮಾಗಿಸಿ ಸಿದ್ಧಮಾಡಿಕೊಳ್ಳಬೇಕು.
4 ನಾಟಿಯಾದ 10 ರಿಂದ 20 ದಿನಗಳು ದಿನಕ್ಕೆ ಎರಡರಿಂದ ಮೂರು ಅಂಗಳ ನೀರು ನಿಲ್ಲಬೇಕು. ಕಾಳುಕಟ್ಟುವ
ಸಮಯದಲ್ಲಿ ಐದರಿಂದ ಆರು ಇಂಚು ಆಳದ ನೀರು ನಿಲ್ಲಿಸುವುದು. ಉಳಿದ ಸಮಯ ಭೂಮಿ ಬಿರುಕು ಬಿಡದಂತೆ ನೀರು ನಿರ್ವಹಣೆ ಮಾಡಿ ಕಟಾವಿಗೆ 8 ದಿನಗಳ ಮೊದಲೇ ನೀರು ನಿಲ್ಲಿಸುವುದು.
ಮಿತ ನೀರಿನ ಭತ್ತ ಬೇಸಾಯ ಪದ್ಧತಿಗಳು
1990 ರಿಂದೀಚೆಗೆ ಭತ್ತದ ಇಳುವರಿಯನ್ನು ಹೆಚ್ಚಿಸಲು ಮಿತ ನೀರಿನ ಬಳಕೆಯು ಸಾಧ್ಯವೆಂಬುದು ದೃಢಪಟ್ಟಿದ್ದು, ಈ ಪದ್ಧತಿಯನ್ನು ಮಡಗಾಸ್ಕರ್ ಪದ್ದತಿ ಅಥವಾ ಶ್ರೀಪದ್ಧತಿ ಎಂದು ಕರೆಯುತ್ತಾರೆ. ಶ್ರೀ ಪದ್ಧತಿ ಎಂದರೆ ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಶನ್. ಅಂದರೆ ನೀರು, ಮಣ್ಣು, ಬೀಜ, ಸಸಿ ಹಾಗೂ ಗೊಬ್ಬರದ ಮಿತ ಬಳಕೆ.
ಶ್ರೀ ಪದ್ಧತಿಯ ಅನುಕೂಲಗಳು
1 ಸಾಮಾನ್ಯ ಪದ್ಧತಿಯಲ್ಲಿ ಎಕರೆಗೆ 25 ರಿಂದ 30 ಕೆ.ಜಿ. ಬಿತ್ತನೆ ಬೀಜ ಬೇಕಾಗಿದ್ದರೆ. ಶ್ರೀ ಪದ್ಧತಿಯಲ್ಲಿ 2-9 ಕೆ.ಜಿ. ಸಾಕು
2 ಈ ಪದ್ಧತಿಯಲ್ಲಿ ಕೇವಲ 2000 ಲೀಟರ್ ನೀರು ಸಾಕು. ಇದರಿಂದ ಶೇ.35ರಿಂದ 40ರಷ್ಟು ನೀರು ಉಳಿತಾಯವಾಗುತ್ತದೆ.
3 ಮಣ್ಣಿನ ಸಾರವು ಕಡಿಮೆ ನೀರಿನಲ್ಲಿ ಹೆಚ್ಚಾಗುತ್ತದೆ. ಸಾವಯವ ಗೊಬ್ಬರಗಳು, ರಸಗೊಬ್ಬರಗಳು ಕರಗಿ ಹಾವಿಯಾಗುವುದನ್ನು ತಪ್ಪಿಸಿ ಬೆಳೆಗಳಿಗೆ ದಕ್ಕುತ್ತದೆ.
4 ಕಡಿಮೆ ರೋಗ, ಕೀಟಬಾಧೆ, ಅನುಪಯುಕ್ತ ಕೀಟ ಹುಳುಗಳು ನೀರಿನಲ್ಲಿ ವೃದ್ಧಿಯಾಗುವುದು ತಪ್ಪುತ್ತದೆ. ಗಿಡ ಸದೃಢವಾಗಿ ರೋಗನಿರೋಧಕ ಶಕ್ತಿ ಪಡೆಯುತ್ತದೆ.
5 ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ.
6 ಉತ್ಪಾದನಾ ವೆಚ್ಚ ತಗ್ಗುತ್ತದೆ. ಬೀಜ, ಗೊಬ್ಬರ, ನೀರು ನಿರ್ವಹಣೆಯಲ್ಲಿ ಮಿತವಾಗಿರುತ್ತದೆ.
7 ಸದೃಢ ಬೇರು ಬೆಳವಣಿಗೆ ಹೊಂದಿ ತೆಂಡೆ ಹೊಡೆಯುವುದರಿಂದ ಕಾಳು ಗಟ್ಟಿಯಾಗಿ ಶೇ.20ರಿಂದ 25ರಷ್ಟು ಹೆಚ್ಚು ಇಳುವರಿ ಪಡೆಯಬಹುದು.
8 ರಸಗೊಬ್ಬರ ಕೀಟನಾಶಕಗಳ ಮಿತ ಬಳಕೆ ಸಾವಯವ ಗೊಬ್ಬರಗಳ ಬಳಕೆ ಮಾಡುವುದರಿಂದ ನೆಲ, ಜಲಗಳು ಶುದ್ಧವಾಗಿ ಪರಿಸರ ಮಾಲಿನ್ಯ ತಪ್ಪುತ್ತದೆ.
rameshprangasamudra@gamil.com