ಮಂಜು ಕೋಟೆ
ಎಚ್. ಡಿ. ಕೋಟೆ: ಪುರಸಭೆಯ ವರಿಷ್ಠರ ಗಾದಿ ಹಿಡಿಯಲು ಜಾ. ದಳ ಮತ್ತು ಕಾಂಗ್ರೆಸ್ ಪಕ್ಷಗಳ ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಎರಡೂ ಪಕ್ಷಗಳು ತೀವ್ರ ಕಾರ್ಯತಂತ್ರ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.
ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ -. ೧೯ರಂದು ಕಚೇರಿಯಲ್ಲಿ ನಡೆಯಲಿದೆ. ಅಧ್ಯಕ್ಷ ಸ್ಥಾನ ಜಾ. ದಳದ ಪರಿಶಿಷ್ಟ ಪಂಗಡಗಳ ಮಹಿಳಾ ಸದಸ್ಯರಿಗೆ ಲಭಿಸುವುದು ಖಚಿತ ವಾಗಿರು ವುದರಿಂದ ಹಾಲಿ ಸದಸ್ಯೆ ಮತ್ತು ಮಾಜಿ ಅಧ್ಯಕ್ಷರಾದ ಶಿವಮ್ಮ ಚಾಕಹಳ್ಳಿ ಕೃಷ್ಣ, ಸರೋಜಮ್ಮ ಚಿಕ್ಕಣ್ಣ, ಅನಿತಾ ನಿಂಗನಾಯಕ ಅವರ ನಡುವೆ ಪೈಪೋಟಿ ಉಂಟಾಗಿ ಕಾರ್ಯತಂತ್ರ ನಡೆಯುತ್ತಿದೆ.
ಈ ಮೂವರಲ್ಲಿ ಒಬ್ಬರಿಗೆ ಅಧಿಕಾರ ನೀಡಲು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಪುರಸಭಾ ಮಾಜಿ ಅಧ್ಯಕ್ಷ ಎಂ. ಸಿ. ದೊಡ್ಡ ನಾಯಕ, ಪಕ್ಷದ ಅಧ್ಯಕ್ಷ ರಾಜೇಂದ್ರ, ಪಕ್ಷದ ಪುರಸಭೆಯ ೮ ಜನ ಸದಸ್ಯರು, ಅನೇಕ ಮುಖಂಡರು ಸಭೆ ನಡೆಸಿ ಚರ್ಚಿಸಿ ಅಂತಿಮಗೊಳಿಸುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪಕ್ಷದವರಿಗೆ ಪ್ರಕಟ ಗೊಂಡಿರುವ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ಪಡೆಯಲು ಪರಿಶಿಷ್ಟ ಪಂಗಡದ ಮಹಿಳೆಯರು ಇಲ್ಲದ ಕಾರಣ ಆಕಾಂಕ್ಷಿಗಳು ಇಲ್ಲ. ಆದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾ ಗಿರುವುದರಿಂದ ಬಹುಮತ ಇರುವ ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷ ಸ್ಥಾನ ಹಿಡಿ ಯುವುದು ಖಚಿತವಾಗಿದೆ.
ಹೀಗಾಗಿ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರಾದ ಆಸಿಫ್ ಏಜಾಜ್ ಪಾಷಾ, ಸಾಹಿರಾಬಾನು, ಅನ್ಸರ್, ರಾಜು ವಿಶ್ವ ಕರ್ಮ ಅವರು ಉಪಾಧ್ಯಕ್ಷ ಸ್ಥಾನ ಪಡೆ ಯುವ ನಿಟ್ಟಿನಲ್ಲಿ ಪಕ್ಷದ ಮುಖಂಡರನ್ನು, ಸದಸ್ಯರನ್ನು, ಶಾಸಕರನ್ನು, ಸಂಸದರನ್ನು ಭೇಟಿ ಮಾಡಿ ಪೈಪೋಟಿಯಲ್ಲಿ ಕಾರ್ಯ ತಂತ್ರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ಪಕ್ಷದ ಪುರಸಭಾ ಸದಸ್ಯ ೧೨ ಜನರು ಹಾಗೂ ಮುಖಂಡರು, ಪಕ್ಷದ ಅಧ್ಯಕ್ಷರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಉಳಿದಂತೆ ಬಿಜೆಪಿಯ ನಂದಿನಿ, ಬಿಎಸ್ಪಿಯ ನಂಜಪ್ಪ, ಬಂಡಾಯ ಕಾಂಗ್ರೆಸ್‌ನ ಐಡಿಯಾ ವೆಂಕಟೇಶ್ ಈ ಮೂವರು ಸದಸ್ಯರು ಕೂಡ ವರಿಷ್ಠರ ಗಾದಿಗೆ ಸ್ಪರ್ಧಿಸುವ ನಿಟ್ಟಿನಲ್ಲಿ ನಿಗೂಢ ವಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಪಡೆಯಲೇಬೇಕೆಂದು ಜಾ. ದಳ ಮತ್ತು ಕಾಂಗ್ರೆಸ್ ಪಕ್ಷದ ತಲಾ ಮೂವರು ಪೈಪೋಟಿ ನಡೆಸುತ್ತಿದ್ದು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದ ಅಂತಿಮವಾಗಿ ಈ ಸ್ಥಾನಗಳು ಯಾರ ಪಾಲಾಗಲಿವೆ ಎಂಬುದು ತೀವ್ರ ಕುತೂಹಲ ಮೂಡಿಸಿದ್ದು, ಬುಧವಾರದವರೆಗೆ ಪುರಸಭೆ ವ್ಯಾಪ್ತಿಯ ಜನಸಾಮಾನ್ಯರು ಕಾಯಬೇಕಾಗಿದೆ.





