ದೊಡ್ಡಾಸ್ಪತ್ರೆ ಎಂದೇ ಖ್ಯಾತಿ ಪಡೆದಿರುವ ಮೈಸೂರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಟ್ರಾಮಾ ಕೇರ್, ಪಿಕೆಟಿಬಿ ಆಸ್ಪತ್ರೆಗಳಲ್ಲಿ ರೋಗಿಗಳ ಹಸಿವನ್ನು ನೀಗಿಸಬೇಕಾದ ಅನ್ನ ಕಸದ ತೊಟ್ಟಿ ಪಾಲಾಗುತ್ತಿರುವುದು ವಿಷಾದಕರ ಸಂಗತಿ.
ಆಸ್ಪತ್ರೆಯ ಫುಡ್ ಮೆನುವಿನಲ್ಲಿ ಮಧ್ಯಾಹ್ನ ಒಂದು ಕಪ್ ಮೊಸರು, ರಾತ್ರಿ ಮಜ್ಜಿಗೆ ಕೊಡಬೇಕು ಎಂದಿದ್ದರೂ ಒಂದೇ ಒಂದು ದಿನವೂ ಮೊಸರು ಮತ್ತು ಮಜ್ಜಿಗೆಯನ್ನು ನೀಡಿಲ್ಲ ಎಂಬುದು ಒಳ ರೋಗಿಗಳ ಆಪಾದನೆಯಾಗಿದೆ.
ಪಿಕೆಟಿಬಿ ಮತ್ತು ಚೆಲುವಾಂಬ ಆಸ್ಪತ್ರೆಗಳಲ್ಲಿ ಮೊಟ್ಟೆ ನೀಡಲಾಗುತ್ತಿದೆ, ಆದರೆ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ದಿನಗಳಲ್ಲಿ ವಿಶೇಷ ಅಡುಗೆ ಮಾಡಲಾಗುತ್ತಿತ್ತು, ಈಗ ಅದ್ಯಾವುದೂ ಇಲ್ಲದೆ ಪ್ರತಿ ದಿನವೂ ಒಂದೇ ತರಹದ ತರಕಾರಿ ಸಾರು ನೀಡುತ್ತಿದ್ದು, ಭಾನುವಾರ ಬೆಳಿಗ್ಗೆ ತಿಂಡಿ ಬದಲು ಮೂರು ಪೀಸ್ ಬ್ರೆಡ್ – ಕಾಫಿ ನೀಡಲಾಗುತ್ತಿದೆ. ಒಳರೋಗಿಗಳಿಗ ನಿಗದಿತ ಸಮಯದಲ್ಲಿ ಊಟ ನೀಡದೆ, ರಾತ್ರಿ ಊಟವನ್ನು ಮಧ್ಯಾಹ್ನ ೩ ರಿಂದ ೫ ಗಂಟೆಯೊಳಗೆ ನೀಡುತ್ತಿರುವುದರಿಂದ ಅನ್ನವನ್ನು ತಿನ್ನಲಾಗದೆ ಬಹುತೇಕ ರೋಗಿಗಳು ಊಟವನ್ನು ಕಸದ ತೊಟ್ಟಿಗೆ ಬಿಸಾಡುತ್ತಿದ್ದಾರೆ. ಜಯದೇವ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿರುವ ಅನಾಥ ಒಳರೋಗಿಗಳಿಗೆ ಊಟವನ್ನು ಪಾರ್ಸೆಲ್ ಕವರ್‌ನಲ್ಲಿ ಪ್ಯಾಕ್ ಮಾಡಿ ನೀಡುತ್ತಾರೆ. ಆದರೆ ಅದೂ ಕಸದ ತೊಟ್ಟಿಗೆ ಸೇರುತ್ತಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ರೋಗಿಗಳಿಗೆ ಸಕಾಲಕ್ಕೆ ಉತ್ತಮ ಗುಣಮಟ್ಟದ ಊಟ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ.
– ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





