ಮೈಸೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಡೆಂಗ್ಯೂ ಜ್ವರದ ಭೀತಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಾನು ಹಿರಿಯ ನಾಗರಿಕನಾಗಿದ್ದು, ಜೆ.ಪಿ.ನಗರದ ಸಾಯಿಬಾಬ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ವಾಸಿಸುತ್ತಿದ್ದೇನೆ. ಇತ್ತೀಚೆಗೆ ನಮ್ಮ ಬಡಾವಣೆಯಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ನಮ್ಮ ಬಡಾವಣೆಯ ರಸ್ತೆಯಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಂಜೆಯ ವೇಳೆ ಮಹಿಳೆಯರು, ಮಕ್ಕಳು ಹಾಗೂ ನಮ್ಮಂತಹ ಹಿರಿಯ ನಾಗರಿಕರು ವಾಕಿಂಗ್ ಮಾಡುತ್ತಿದ್ದು, ಈ ವೇಳೆ ಸೊಳ್ಳೆಗಳ ಕಡಿತಕ್ಕೆ ಒಳಗಾಗುತ್ತಿದ್ದೇವೆ. ಈಗಾಗಲೇ ನಗರದಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವುದರಿಂದ ಇಲ್ಲಿನ ನಿವಾಸಿಗಳಿಗೂ ಆತಂಕ ಶುರುವಾಗಿದೆ. ಆದ್ದರಿಂದ ಜನರ ಸುರಕ್ಷತೆಯ ದೃಷ್ಟಿಯಿಂದ ಮೈಸೂರು ಮಹಾನಗರಪಾಲಿಕೆಯವರು ನಮ್ಮ ರಸ್ತೆಗೂ ಫಾಗಿಂಗ್ ಮಾಡಬೇಕಾಗಿದೆ.
-ಕೆ.ಎನ್.ಅಶ್ವತ್ಥನಾರಾಯಣ, ಜೆ.ಪಿ.ನಗರ, ಮೈಸೂರು.