Mysore
17
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಚಂದದ ಬದುಕು ನೀಡಿದ ಚೆಂಡು ಹೂ ಬೇಸಾಯ

ಅನಿಲ್ ಅಂತರಸಂತೆ

ಬೇಸಾಯ ಎಂಬುದು ಈಗ ಯುವಕರಿಂದ ದೂರಾಗಿದೆ. ಅಲ್ಪಸ್ವಲ್ಪ ಜಮೀನು ಇದ್ದರಂತೂ ಅವರು ಜಮೀನಿನತ್ತ ಮುಖ ಮಾಡಿಯೂ ನೋಡುವುದಿಲ್ಲ. ಜಮೀನನ್ನು ಮಾರಾಟ ಮಾಡಿ ನಗರ ಭಾಗಗಳಲ್ಲಿ ಹೋಗಿ ನೆಲೆಸಿ ಬಿಡುತ್ತಾರೆ.

ಹೌದು, ಗ್ರಾಮೀಣ ಭಾಗಗಳಲ್ಲಿ ಈಗ ಕೃಷಿ ಬಿಟ್ಟು ನಗರಗಳತ್ತ ಹೋಗುವವರೇ ಹೆಚ್ಚು. ಅಲ್ಪಸ್ವಲ್ಪ ಭೂಮಿಯಲ್ಲಿ ಕೃಷಿ ಮಾಡಿ ಅದರಿಂದ ಲಾಭ ಪಡೆದು ಜೀವನ ಸಾಗಿಸು ವುದಾದರೂ ಹೇಗೆ? ಎಂಬ ಉದ್ದೇಶದಿಂದಲೇ ಕೃಷಿ ಬಿಡುವವರೇ ಹೆಚ್ಚಾಗಿದ್ದಾರೆ. ಅರ್ಧ ಎಕರೆ, ಮುಕ್ಕಾಲು ಎಕರೆ ಭೂಮಿಯಲ್ಲಿ ಕೃಷಿ ಬೆಳೆಯನ್ನು ಮಾರಾಟ ಮಾಡುವುದರಲ್ಲೇ ಬಂದ ಲಾಭವೆಲ್ಲಾ ಅಲ್ಲಿಯೇ ಖರ್ಚಾಗಿ ಹೋಗುತ್ತದೆ. ಹೀಗಿರುವ ಕೃಷಿಯಿಂದ ಆದಾಯ ಪಡೆದು ಜೀವನ ಸಾಗಿಸುವುದು ಕಷ್ಟದ ಕೆಲಸ. ಹೀಗಾಗಿಯೇ ಜಮೀನು ಮಾರಿ ನಗರಗಳತ್ತ ಮುಖ ಮಾಡಿಬಿಡುತ್ತಾರೆ. ಹೀಗೆ ಕೃಷಿ ತೊರೆದು ನಗರಗಳತ್ತ ಹೋಗುವವರ ಮಧ್ಯೆ ಎಚ್.ಡಿ. ಕೋಟೆ ತಾಲ್ಲೂಕಿನ ಮಾಚನಾಯಕನಹಳ್ಳಿ ಗ್ರಾಮದ ರೈತ ಗೋಪಾಲಶೆಟ್ಟಿ ಮಾದರಿಯಾಗಿದ್ದಾರೆ. ಇವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಮುಕ್ಕಾಲು ಎಕರೆ ಜಮೀನನ್ನು ಚೆಂಡು ಹೂ ಬೇಸಾಯಕ್ಕಾಗಿ ಮೀಸಲಿಟ್ಟು, ಹೂ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುವ ಮೂಲಕ ಮಾದರಿ ರೈತರ ಅನಿಸಿಕೊಂಡಿದ್ದಾರೆ.

ಗೋಪಾಲ ಶೆಟ್ಟಿಯವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಟೊಮೆಟೋ, ಚೊಟ್ಟು, ಮೆಂತ್ಯ, ಜೋಳ ಜತೆ ಚೆಂಡು ಹೂ ಬೆಳೆಯುವ ಮೂಲಕ ಲಾಭದಾಯಕ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಧಾರಣ ಆದಾಯ ವಿದ್ದ ಕೃಷಿಯಲ್ಲಿ ಕುಟುಂಬದವರೆಲ್ಲ ಸೇರಿ ದುಡಿಯುತ್ತಿದ್ದರು. ಈ ವೇಳೆ ಓಮ್ಮಿ ಆಕ್ಟಿವ್ ಹೆಲ್ತ್ ಟೆಕ್ನಾಲಜಿಸ್ ಕಂಪೆನಿಯ ಸಹಕಾರದಿಂದ ಕಂಪೆನಿಯಲ್ಲಿಯೇ ಚೆಂಡು ಹೂ ಬಿತ್ತನೆ ಬೀಜ, ಗೊಬ್ಬರ ಪಡೆದು ಚೆಂಡು ಹೂ ಬೇಸಾಯ ಆರಂಭಿಸಿದರು. ಸದ್ಯ ಗುಣಮಟ್ಟದ ಬೇಸಾಯ ಮಾಡುತ್ತಿರುವ ಗೋಪಾಲಶೆಟ್ಟಿ, ಪ್ರತಿ ಭಾರಿ 8-10 ಟನ್‌ಗಳಷ್ಟು ಹೂ ಬೆಳೆಯುತ್ತಾರೆ. ಕೆಲ ಬಾರಿ ಉತ್ತಮ ಮಳೆಯಾಗಿ ಸಕಾಲಕ್ಕೆ ಗೊಬ್ಬರ ನೀಡಿದರೆ 10-12 ಟನ್‌ನಷ್ಟು ಹೂ ಸಿಗಲಿದೆ.

ಓಮ್ಮಿ ಆಕ್ಟಿವ್ ಹೆಲ್ತ್‌ ಟೆಕ್ನಾಲಜಿಸ್ ಕಂಪೆನಿಯು ರೈತರಿಗೆ ಚೆಂಡು ಹೂ ಬಿತ್ತನೆ ಬೀಜ, ಗೊಬ್ಬರವನ್ನು ವಿತರಣೆ ಮಾಡುತ್ತಿದ್ದು, ಬೆಳೆಯನ್ನು ಜಮೀನಿಗೆ ನೇರವಾಗಿ ರೈತರಿಂದಲೇ ಖರೀದಿಸುತ್ತದೆ. ಅಲ್ಲದೆ ಕಂಪೆನಿಯ ತಜ್ಞರು, ಅಧಿಕಾರಿಗಳು ಆಗಾಗ್ಗೆ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಗುಣಮಟ್ಟವನ್ನು ಪರಿಶೀಲಿಸುತ್ತಾರೆ.

ಬೆಳೆಯನ್ನೂ ನೇರವಾಗಿ ರೈತರ ಭೂಮಿಯಿಂದಲೇ ಖರೀದಿಸುತ್ತಾರೆ. ಬೆಳೆ ಕೈಗೆ ಬಂದ ಬಳಿಕ ತಗುಲಿದ ಖರ್ಚು ಹಿಡಿದು ಬಂದ ಆದಾಯವನ್ನು ರೈತರಿಗೆ ನೇರವಾಗಿ ನೀಡುವುದರಿಂದ ರೈತರಿಗೆ ಮಾರುಕಟ್ಟೆಯ ಸಮಸ್ಯೆಯೂ ತಪ್ಪುತ್ತಿದೆ.
ania64936@gmail.com

ನಾನು ನಾಲೈದು ವರ್ಷಗಳಿಂದ ಚೆಂಡು ಹೂ ಬೇಸಾಯ ಮಾಡುತ್ತಿದ್ದೇನೆ. ಉತ್ತಮ ಲಾಭ ಇದೆ. ಕಂಪೆನಿಯ ಕಡೆಯಿಂದ ಪ್ರೋತ್ಸಾಹ ಚೆನ್ನಾಗಿದೆ. ಆರಂಭದಲ್ಲಿ ನಾನು ಬೆಳೆಯು ತ್ತಿದ್ದ ಬೆಳೆಗಳಿಗೆ ಹೋಲಿಸಿದರೆ ಚೆಂಡು ಹೂನಲ್ಲಿ ಹೆಚ್ಚಿನ ಲಾಭವಿದೆ. ಕಂಪೆನಿಯವರೇ ಸ್ಥಳಕ್ಕೆ ಬಂದು ಖರೀದಿ ಮಾಡುವುದರಿಂದ ಮಾರುಕಟ್ಟೆ ಸಮಸ್ಯೆಯೂ ಇಲ್ಲ.
-ಗೋಪಾಲ ಶೆಟ್ಟಿ, ರೈತ.

ಇತರೆ ಬೆಳೆಗಳಿಂತ ಚೆಂಡು ಹೂನಲ್ಲಿ ಲಾಭ ಇದೆ. ಮಳೆ ಚೆನ್ನಾಗಿ ಬಂದಷ್ಟು ಫಸಲು ಚೆನ್ನಾಗಿರಲಿದೆ. ಚೆಂಡು ಹೂನಿಂದ ನಮಗೆ ನಷ್ಟವಾಗಿಲ್ಲ. ನಾನು ನಮ್ಮ ತಂದೆ, ತಾಯಿ ಎಲ್ಲರೂ ಒಟ್ಟಾಗಿ ಜಮೀನಿನಲ್ಲಿ ಶ್ರಮಿಸುತ್ತೇವೆ. ಅಗತ್ಯವಿದ್ದಾಗ ಕೆಲಸಗಾರರನ್ನು ಕರೆದುಕೊಳ್ಳುತ್ತೇವೆ.
-ಚಿನ್ನ ಗೋಪಾಲ, ಗೋಪಾಲ ಶೆಟ್ಟಿಯವರ ಮಗ.

ತಾಲ್ಲೂಕಿನಲ್ಲಿ ಚೆಂಡು ಹೂ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಕಂಪೆನಿಯೇ ಸ್ಥಳಕ್ಕೆ ಬಂದು ಖರೀದಿ ಮಾಡುವುದರಿಂದ ಮಾರಕಟ್ಟೆಯ ಸಮಸ್ಯೆಯೂ ಇಲ್ಲ. ಅಗತ್ಯ ಬಿದ್ದಾಗ ತಜ್ಞರು, ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ರೈತರಿಗೆ ಅಗತ್ಯ ಸಲಹೆ ನೀಡುತ್ತಾರೆ.
-ಗಣೇಶ್, ಓಮ್ಮಿ ಆಕ್ಟಿವ್‌ ಹೆಲ್ತ್ ಟೆಕ್ನಾಲಜಿಸ್.

Tags:
error: Content is protected !!