Mysore
25
overcast clouds

Social Media

ಮಂಗಳವಾರ, 14 ಜುಲೈ 2026
Light
Dark

114 ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತ ಅಪಾಯ

ನವೀನ್ ಡಿಸೋಜ

ಮಳೆ ಕಡಿಮೆಯಿದ್ದರೂ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ; ಅಪಾಯಕಾರಿ ಪ್ರದೇಶಗಳ ಗುರುತು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜುಲೈ ಆರಂಭದಿಂದ ಅಬ್ಬರಿಸಿದ ವರುಣ ಮತ್ತೆ ಬಿಡುವು ನೀಡಿದೆ. ಆದರೆ, ದಿಢೀರ್ ಮಳೆಯಿಂದ ಅನಾಹುತ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಿಲ್ಲೆಯಾದ್ಯಂತ ಒಟ್ಟು ೧೧೪ ಗ್ರಾಮ ಹಾಗೂ ವಾರ್ಡ್‌ಗಳನ್ನು ಪ್ರವಾಹ ಅಥವಾ ಭೂಕುಸಿತ ಅಪಾಯದ ಪ್ರದೇಶಗಳೆಂದು ಗುರುತಿಸಲಾಗಿದೆ.

ಜುಲೈ ಆರಂಭದಿಂದ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿತ್ತು. ಆದರೆ ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ಕ್ಷೀಣಿಸಿದ್ದು, ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಕಂಡುಬಂದಿದೆ. ಈ ನಡುವೆ ಜಿಎಸ್‌ಐ ವರದಿ ಮತ್ತು ಈ ಹಿಂದಿನ ವರ್ಷಗಳ ಅನುಭವದ ಆಧಾರದಲ್ಲಿ ಜಿಲ್ಲಾಡಳಿತ ಭೂಕುಸಿತ ಮತ್ತು ಪ್ರವಾಹ ಪೀಡಿತ ಸ್ಥಳಗಳನ್ನು ಗುರುತಿಸಿದೆ.

ಅಪಾಯದ ಪರಿಸ್ಥಿತಿ ಎದುರಾದರೆ ೩,೩೫೨ ಕುಟುಂಬಗಳ ೧೨,೫೯೫ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜಿಲ್ಲೆಯ ನಾನಾ ಭಾಗಗಳಲ್ಲಿ ೧೦೯ ಕಾಳಜಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ೧,೨೩೦ ಕುಟುಂಬಗಳ ೪,೫೩೩ ಜನರನ್ನು ಸ್ಥಳಾಂತರಿಸ ಬೇಕಾಗುವ ಸಾಧ್ಯತೆ ಇದೆ. ಇದಕ್ಕಾಗಿ ೩೬ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಕುಶಾಲನಗರ ತಾಲ್ಲೂಕಿನಲ್ಲಿ ೧,೦೩೦ ಕುಟುಂಬಗಳ ೩,೭೯೩ ಜನರಿಗೆ ೨೯ ಕೇಂದ್ರಗಳು, ಸೋಮವಾರಪೇಟೆ ತಾಲ್ಲೂಕಿನಲ್ಲಿ ೫೧೦ ಕುಟುಂಬಗಳ ೨,೦೨೨ ಜನರಿಗೆ ೧೮ ಕೇಂದ್ರಗಳು, ವಿರಾಜಪೇಟೆ ತಾಲ್ಲೂಕಿನಲ್ಲಿ ೩೯೧ ಕುಟುಂಬಗಳ ೧,೫೬೨ ಜನರಿಗೆ ೧೫ ಕೇಂದ್ರಗಳು ಹಾಗೂ ಪೊನ್ನಂಪೇಟೆ ತಾಲ್ಲೂಕಿನಲ್ಲಿ ೧೯೧ ಕುಟುಂಬಗಳ ೬೮೫ ಜನರಿಗೆ ೧೧ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ.

ಮುಂದಿನ ದಿನಗಳಲ್ಲಿ ಮಳೆ ಮುಂದುವರಿದು ಪ್ರಾಕೃತಿಕ ವಿಕೋಪ ಉಂಟಾಗುವ ಸಂಭವವಿದ್ದರೆ ಅಪಾಯದ ಪ್ರದೇಶಗಳ ಜನರು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ತುರ್ತು ಪರಿಸ್ಥಿತಿ ಎದುರಾದರೆ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿರಬೇಕು ಎಂದು ಸೂಚಿಸಲಾಗಿದೆ.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಲಾಗಿದ್ದು, ಇಲಾಖಾವಾರು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ನಗರ, ಸ್ಥಳೀಯ ಸಂಸ್ಥೆ ಸೇರಿದಂತೆ ಹೋಬಳಿವಾರು ಒಟ್ಟು ೨೦ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ವಿಕೋಪಗಳು ಸಂಭವಿಸಿದಲ್ಲಿ ಸ್ಥಳೀಯ ಹಾಗೂ ಜಿಲ್ಲಾಡಳಿತದೊಂದಿಗೆ ಸಮನ್ವಯ ಮಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸೆಸ್ಕ್ ಸೇರಿದಂತೆ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರು ಮಾಹಿತಿ ನೀಡಲು ಮನವಿ ಮಾಡಲಾಗಿದೆ.

” ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಪ್ರಾಕೃತಿಕ ವಿಕೋಪ ಉಂಟಾದರೆ ಈಗಾಗಲೇ ಗುರುತಿಸಿರುವ ಕುಟುಂಬಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ಮಳೆ ಕೊರತೆ ಅಥವಾ ಅತಿವೃಷ್ಟಿಯಂತಹ ಯಾವುದೇ ಸಮಸ್ಯೆಯನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.”

-ಎಸ್.ಜೆ.ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ

” ಜಿಲ್ಲಾಡಳಿತದ ವಾಟ್ಸಾಪ್ ಸಂಖ್ಯೆ ೮೫೫೦೦೦೧೦೭೭, ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ೦೮೨೭೨ ೨೨೧೦೭೭, ಪೊಲೀಸ್ ಸಹಾಯವಾಣಿ ೧೧೨, ಸೆಸ್ಕ್ ೧೯೧ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.”

 

 

Tags:
error: Content is protected !!