Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

24 ಗಂಟೆಯಲ್ಲೇ ಹರಿದು ಹೋದ ಫ್ಲೆಕ್ಸ್‌  ಎಸ್.ಎಸ್.ಭಟ್  

ನಂಜನಗೂಡು: ಅಪಘಾತದ ಸ್ಥಳದಲ್ಲಿ ಕಾಟಾಚಾರದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಳವಡಿಸಿದ್ದ ಸೂಚನಾ ಫ್ಲೆಕ್ಸ್ 24ಗಂಟೆಯಲ್ಲೇ ಹರಿದು ಹೋಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಕೋಟಿ ಕೋಟಿ ರೂ. ವಸೂಲಿ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರವು ಕಾಟಾಚಾರದ ಪ್ಲೆಕ್ಸ್ ಅಳವಡಿಸಿದ ದಿನವೇ ಅದು ಹರಿದು ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಚಾಮುಂಡಿ ಟೌನ್‌ಶಿಪ್ ಬಳಿಯ ರೈಲ್ವೆ ಮೇಲ್ಸೇತುವೆಯ ತಿರುವಿನಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲದೆ ಅಲ್ಲಿ ಅಪಘಾತಗಳ ಸರಣಿಯೇ ನಡೆಯಲಾರಂಭಿಸಿದೆ.

ಈ ಸ್ಥಳದ ಸರಣಿ ಅಪಘಾತ ಹಾಗೂ ಸಾವು-ನೋವಿನ ಅನಾಹುತವನ್ನು ಅರಿತ ಶಾಸಕ ದರ್ಶನ್ ಧ್ರುವನಾರಾಯಣ ತಾಲ್ಲೂಕು ಪಂಚಾಯಿತಿಯಲ್ಲಿ ಸಭೆ ನಡೆಸಿ ಅಪಘಾತಗಳಾಗಿ ಅನೇಕ ಜನರ ಸಾವಿಗೆ ಕಾರಣವಾಗಿರುವ ಆ ಸ್ಥಳದಲ್ಲಿ ಎಚ್ಚರಿಕೆಯ ಸೂಚನಾ ಫಲಕವನ್ನುಅಳವಡಿಸಬೇಕು. ತಪ್ಪಿದಲ್ಲಿ ಆಗಬಹುದಾದ ಅಪಘಾತಗಳಿಗೆ ನಿಮ್ಮ ಮೇಲೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿದ್ದರು. ಶಾಸಕರು ಸೂಚನೆ ನೀಡಿ ವಾರ ಕಳೆದರೂ ಫಲಕ ಅಳವಡಿಸಿರಲಿಲ್ಲ.

ಇದನ್ನು ಓದಿ : ಅಪಘಾತ : ಕೂಲಿಯಾಳು ಸಾವು, 6ಮಂದಿ ಕಾರ್ಮಿಕರು ಗಂಭೀರ

ಸೂಚನಾ ಫಲಕಗಳಿಲ್ಲದೆ ಮತ್ತೆ ಘಟಿಸಿದ ಅಪಘಾತದಲ್ಲಿ ಸಾವು ಸಂಭವಿಸಿದಾಗ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗುತ್ತಿರುವ ಅಪಘಾತ ಎಂದು ಪೊಲೀಸರು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದರು. ಅದಾದ ಮೇಲೆ ಅವರು ಕಾಟಾಚಾರದ ಪ್ಲೆಕ್ಸ್ ಮಾಡಿ ತಂದು ಹಾಕಿದರು. ಆದರೆ ಇದು ಹಾಕಿದ ೨೪ ಗಂಟೆಗಳೊಳಗೆ ಗಾಳಿಗೆ ಹರಿದು ಹೋಗಿದೆ. ಅಲ್ಲಿ ಸೂಚನಾಫಲಕ ಅಳವಡಿಸಿ ಅಪಘಾತಗಳನ್ನು ತಡೆಗಟ್ಟಬೇಕೆಂಬ ಶಾಸಕರ ಸದುದ್ದೇಶಕ್ಕೆ ಇದರಿಂದ ತಡೆಯಾದಂತಾಗಿದೆ.

ಕಳಪೆ ಫ್ಲೆಕ್ಸ್ ಅಳವಡಿಕೆ:  ಯಾವುದೋ ಮದುವೆ ಅಥವಾ ಗೃಹ ಪ್ರವೇಶದ ಮನೆಗಳಿಗೆ ದಾರಿ ತೋರುವಂತಿದ್ದ ಪ್ಲಾಸ್ಟಿಕ್ ಪ್ಲೆಕ್ಸ್ ತಂದು ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಕೋಟಿ ಕೋಟಿ ರೂ. ಸಂಚಾರ ಶುಲ್ಕ ವಸೂಲಿ ಮಾಡುವ ಪ್ರಾಧಿಕಾರಕ್ಕೆ ಸಂಚಾರಿಗಳ ಪ್ರಾಣ ರಕ್ಷಣೆಗಾಗಿ ಗುಣಮಟ್ಟದ ಸೂಚನಾ ಫಲಕ ಅಳವಡಿಸಲು ಹಣವಿಲ್ಲವೇ? ಒಂದೇ ದಿನದಲ್ಲಿ ಹರಿದು ಚಿಂದಿಯಾಗಿರುವ ಕಳಪೆ ಗುಣಮಟ್ಟದ ಪ್ಲೆಕ್ಸ್ ಏಕೆ? ಮತ್ತೇ ಇಲ್ಲಿ ಸರಣಿ ಅಪಘಾತ ಮುಂದುವರಿಯುವುದು ಹೆದ್ದಾರಿ ಪ್ರಾಧಿಕಾರಕ್ಕೆ ಬೇಕೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಈಗ ಉತ್ತರಿಸುವವರ‍್ಯಾರು?

Tags:
error: Content is protected !!