ಕೆ. ಆರ್. ನಗರ, ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಭತ್ತದ ಬೆಳೆ ಬೆಳೆಯಲು ಸಜ್ಜಾಗಿರುವ ರೈತರು
ಕೆ. ಆರ್. ನಗರ: ಮೇ ತಿಂಗಳಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಕೆ. ಆರ್. ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳ ನಾಲೆಗಳಿಗೆ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಕಾವೇರಿ ನದಿಗೆ ಬಿಡುತ್ತಿರುವುದರಿಂದ ಹಾಗೂ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಕೆ. ಆರ್. ಎಸ್. ಜಲಾಶಯ ಸದ್ಯದಲ್ಲೇ ಭರ್ತಿಯಾಗುವ ವಿಶ್ವಾಸ ಮೂಡಿಸಿದೆ.
ಕೊಡಗಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಇನ್ನೇನು ಹಾರಂಗಿ ಜಲಾಶಯ ಭರ್ತಿಯಾಗಲಿದೆ. ಹಾಗಾಗಿ ಹಾರಂಗಿ ಎಡದಂಡೆ ಮತ್ತು ಬಲದಂಡೆ ನಾಲೆಗಳು, ಕೆ. ಆರ್. ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಬಳ್ಳೂರು ಅಣೆಕಟ್ಟೆಯಿಂದ ಚಾಮರಾಜ ಎಡ ಹಾಗೂ ಬಲದಂಡೆ ನಾಲೆಗಳಿಗೆ ಮತ್ತು ಶ್ರೀರಾಮ ಮತ್ತು ಮಿರ್ಲೆ ಶ್ರೇಣಿ ನಾಲೆಗಳಿಗೆ ನೀರು ಹರಿಸಬೇಕು ಎಂಬುದು ಈ ಭಾಗದ ರೈತ ಮುಖಂಡರ ಒತ್ತಾಯವಾಗಿದೆ.
ಜುಲೈ ಮೊದಲ ವಾರದಿಂದ ಭತ್ತದ ಬಿತ್ತನೆ ಕಾರ್ಯ ನಡೆಸಲು ಈಗಾಗಲೇ ರೈತರು ಸಜ್ಜಾಗಿದ್ದಾರೆ. ಆದರೆ ಸಕಾಲದಲ್ಲಿ ಬಿತ್ತನೆ ಬೀಜ ವಿತರಣೆಗೆ ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ಕೊಡಗಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಕೆ. ಆರ್. ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಿಗೆ ಸೇರಿದ ಚಾಮರಾಜ ಎಡದಂಡೆ ಮತ್ತು ಬಲದಂಡೆ ನಾಲೆಗಳು, ಶ್ರೀರಾಮ ನಾಲೆಗಳಿಗೆ ನೀರು ಹರಿಸಿ, ಮುಂದೆ ನೀರಿನ ಕೊರತೆ ಎದುರಾಗಿರುವ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. – ಜೆ. ಎಂ. ಕುಮಾರ್, ಗೌರವಾಧ್ಯಕ್ಷ, ರಾಜ್ಯ ರೈತ ಪರ್ವ ಸಂಘ
ಭತ್ತದ ನಾಡಿನಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಈ ಬಾರಿ ಮುಂಗಾರು ಚೆನ್ನಾಗಿ ಆಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ. ಈಗಲಾದರೂ ನೀರಾವರಿ ಅಽಕಾರಿಗಳ ಸಭೆ ನಡೆಸಿ ಜುಲೈ ಮೊದಲ ವಾರದಲ್ಲಿ ಭತ್ತ ಬೆಳೆಯಲು ನಾಲೆಗಳಿಗೆ ನೀರು ಹರಿಸಲು ಸರ್ಕಾರ ಹಾಗೂ ಶಾಸಕರು ಮುಂದಾಗಬೇಕು. – ಅರ್ಜುನಹಳ್ಳಿ ರಾಮಪ್ರಸಾದ್, ಅಧ್ಯಕ್ಷರು, ಯುವ ರೈತ ವೇದಿಕೆ





