ಬಂದ ದಾರಿಗೆ ಸುಂಕ ಇಲ್ಲದಂತೆ ಹಿಂತಿರುಗಿದ ಜನತೆ
ಮೃಗಾಲಯದತ್ತ ಮುಖ ಮಾಡಿದ ಸಾರ್ವಜನಿಕರು
ವಾಪಸ್ ಕಳುಹಿಸಲು ಹೈರಾಣಾದ ನಗರ ಪೊಲೀಸರು
ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರು ಅರಮನೆಗೆ ಮಂಗಳವಾರ ಭೇಟಿ ನೀಡಲಿದ್ದು, ಸೋಮವಾರದಿಂದಲೇ ಸಾರ್ವಜನಿಕರು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವ ಕಾರಣ ಪ್ರವಾಸಿಗರು ನಿರಾಸೆಯಿಂದ ಹಿಂತಿರುಗಿದರು.
ಅರಮನೆಯ ಕರಿಕಲ್ಲು ತೊಟ್ಟಿ ದ್ವಾರ, ಪ್ರವೇಶದ್ವಾರ ಒಂದು, ಪ್ರವೇಶ ದ್ವಾರ ಎರಡು, ಜಯ ಮಾರ್ತಾಂಡ ದ್ವಾರ, ಬಲರಾಮ ದ್ವಾರಗಳಲ್ಲಿ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಬ್ಯಾನರ್ ಹಾಕಿ ಗೇಟನ್ನು ಹಾಕಲಾಗಿತ್ತು. ಅರಮನೆ ಮಂಡಳಿ ಕಚೇರಿಯಲ್ಲಿ ಕೆಲಸ ಮಾಡುವ ನೌಕರರಿಗೆ ಮಧ್ಯಾಹ್ನದ ಬಳಿಕ ರಜೆ ನೀಡಿ ಕಳುಹಿಸಲಾಯಿತು.
ನಗರಪಾಲಿಕೆ ಎದುರಿನ ಪ್ರವೇಶ ದ್ವಾರದ ಬಳಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಂದಿನಂತೆ ಕಾಡಾ ಕಚೇರಿ, ದೊಡ್ಡಕೆರೆ ಮೈದಾನ ಮೊದಲಾದ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಅರಮನೆ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧದ ಬ್ಯಾನರ್ ನೋಡುವಂತಾಯಿತು. ಸುಮಾರು ೧೧ ಗಂಟೆಗೆ ನೂರಾರು ಜನರು ಬರಲು ಶುರು ಮಾಡಿದ್ದರಿಂದ ಪೊಲೀಸರು ವಾಪಸ್ ಕಳುಹಿಸುವ ಹೊತ್ತಿಗೆ ಹೈರಾಣಾದರು. ಕೋಟೆ ಮಾರಮ್ಮನ ದೇವಸ್ಥಾನ ಸೇರಿದಂತೆ ಇತರೆ ಕಡೆಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಿರಲಿಲ್ಲ. ಅರಮನೆ ನೋಡಲು ಬಂದಿದ್ದವರು ರಾಷ್ಟ್ರಪತಿ ಭೇಟಿಯಿಂದಾಗಿ ನಿರ್ಬಂಧ ಹೇರಲಾಗಿದೆ ಎನ್ನುವ ವಿಚಾರ ಕೇಳಿ ಬೇಸರದಿಂದ ಹೊರನಡೆದರು. ಇದರಿಂದಾಗಿ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ತುಸು ಹೆಚ್ಚಳವಾಗಿತ್ತು.
” ವಾಹನ ನಿಲುಗಡೆಗೆ ಸವಾರರ ಪರದಾಟ: ವಾಹನಗಳ ನಿಲುಗಡೆಗೆ ಅವಕಾಶ ಇಲ್ಲದ ಕಾರಣ ಅನೇಕರು ಬೇರೆ ಕಡೆಗಳಲ್ಲಿ ನಿಲ್ಲಿಸಲು ಪರದಾಡಿದರು. ಮಂಗಳವಾರ ಮಧ್ಯಾಹ್ನದ ತನಕ ಅರಮನೆ ಸುತ್ತಮುತ್ತಲ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲು ಅವಕಾಶ ನೀಡಿಲ್ಲ. ಹೀಗಾಗಿ, ಪುರಭವನ, ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆಯಲ್ಲಿ ಕಾದು ಕಾದು ವಾಹನ ನಿಲ್ಲಿಸುತ್ತಿದ್ದು ಕಂಡುಬಂದಿತು.”





