Mysore
28
broken clouds

Social Media

ಬುಧವಾರ, 14 ಜನವರಿ 2026
Light
Dark

ಹಾವು, ಚೇಳುಗಳ ತಾಣವಾಗಿರುವ ಮೈಸೂರಿನ ಖಾಲಿ ನಿವೇಶನಗಳು!

ಎಚ್.ಎಸ್.ದಿನೇಶ್‌ಕುಮಾರ್

ಮೈಸೂರು: ನಗರದಲ್ಲಿ ಒಂದೆಡೆ ಸೂರಿಲ್ಲದವರು ನಿವೇಶನಗಳಿಗಾಗಿ ಪರದಾಡುತ್ತಿದ್ದರೆ, ಮತ್ತೊಂದೆಡೆ ಹಲವರು ನಿವೇಶನ ಖರೀದಿಸಿ ಹಲವು ವರ್ಷಗಳಾದರೂ ಮನೆ ನಿರ್ಮಿಸದೆ ಖಾಲಿ ಉಳಿಸಿದ್ದಾರೆ. ಇದರ ಪರಿಣಾಮ ಖಾಲಿ ನಿವೇಶನಗಳೀಗ ಹಾವು, ಚೇಳು ಮತ್ತು ಮುಂಗುಸಿ ಸೇರಿದಂತೆ ಹುಳುಹುಪ್ಪಟೆಗಳು, ಸರೀಸೃಪಗಳ ತಾಣವಾಗಿ ಪರಿವರ್ತಿತವಾಗುತ್ತಿವೆ. ನಿವೇಶನಗಳ ಸ್ವಚ್ಛತೆಗೆ ಹಣ ಪಡೆದರೂ ನಗರಪಾಲಿಕೆ ಮಾತ್ರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.

ನಗರದ ಪ್ರಮುಖ ಬಡಾವಣೆಗಳೂ ಸೇರಿದಂತೆ ಬಹುತೇಕ ಎಲ್ಲ ಬಡಾವಣೆಗಳಲ್ಲಿಯೂ ಖಾಲಿ ನಿವೇಶನಗಳದ್ದೇ ಸಮಸ್ಯೆ. ರಿಯಲ್ ಎಸ್ಟೇಟ್ ಕುಳಗಳ ಕಪ್ಪು ಹಣ, ಕೆಲ ಅಽಕಾರಿಗಳು ತಮ್ಮ ಆದಾಯಕ್ಕೂ ಮೀರಿ ಸಂಪಾದಿಸಿರುವ ಹೆಚ್ಚುವರಿ ಹಣದಿಂದ ಖರೀದಿಸಿರುವ ನಿವೇಶನಗಳು ಇಂದು ಪಾಳುಬಿದ್ದ ಸ್ಥಿತಿಯಲ್ಲಿವೆ.

ನಗರದ ಕುವೆಂಪುನಗರ, ವಿವೇಕಾನಂದನಗರ, ರಾಮಕೃಷ್ಣನಗರ, ಜೆ.ಪಿ.ನಗರ, ಯಾದವಗಿರಿ, ವಿಜಯನಗರ, ಹೆಬ್ಬಾಳು, ಬೋಗಾದಿ, ಬ್ಯಾಂಕ್ ಕಾಲೋನಿ, ಬೆಮೆಲ್‌ನಗರ ಸೇರಿದಂತೆ ವಿವಿಧ ಖಾಸಗಿ ಬಡಾವಣೆಗಳಲ್ಲಿ ಸುಮಾರು ೫೧,೦೦೦ ಖಾಲಿ ನಿವೇಶನಗಳಿವೆ. ಇದೀಗ ಅಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.

ವಿಶೇಷವೆಂದರೆ ಬಡವರು ಮತ್ತು ಮಧ್ಯಮ ವರ್ಗದವರು ಖರೀದಿಸಿರುವ ೨೦೩೦ ಅಳತೆಯ ನಿವೇಶನಗಳಲ್ಲಿ ಬಹುತೇಕ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಆದರೆ, ‘ಉಳ್ಳವರು’ ಖರೀದಿಸಿರುವ ೩೦೪೦, ೪೦೬೦ ಮತ್ತು ೫೦೮೦ ಅಳತೆಯ ಬಹುತೇಕ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಲ್ಲ.

ಇಂತಹ ನಿವೇಶನಗಳಲ್ಲೀಗ ಗಿಡಗಂಟಿಗಳು ಬೆಳೆದು ನಿಂತಿದ್ದು, ರಾತ್ರಿಯಾದರೆ ನಿವಾಸಿಗಳು ಭಯದಲ್ಲಿ ವಾಸಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪಾತ್ರ ಕೂಡ ಇದೆ. ನಗರದ ಪ್ರಮುಖ ಬಡಾವಣೆಗಳಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ ಆಗಿದ್ದಾಗ), ಮೂಲೆ ನಿವೇಶನ ಹಾಗೂ ಸ್ವಲ್ಪ ಮಟ್ಟಿಗೆ ಮಧ್ಯಂತರ ನಿವೇಶನಗಳನ್ನು ಹರಾಜು ಮಾಡದೆ ಖಾಲಿ ಬಿಟ್ಟಿದೆ. ಅಂತಹ ನಿವೇಶನಗಳನ್ನು ಮುಡಾ ಕಾಲ ಕಾಲಕ್ಕೆ ಸ್ವಚ್ಛಗೊಳಿಸದ ಕಾರಣ ಅಲ್ಲೀಗ ಆಳೆತ್ತರದ ಗಿಡಗಂಟಿಗಳು ಬೆಳೆದುನಿಂತಿವೆ.

ಜೆ.ಪಿ.ನಗರ, ಬೆಮೆಲ್ ಬಡಾವಣೆ, ರಾಮಕೃಷ್ಣ ನಗರ, ರಾಜೀವ್‌ನಗರ, ಆಲನಹಳ್ಳಿ ಬಡಾವಣೆ ಮುಂತಾದ ಸ್ಥಳಗಳಲ್ಲಿ ಹಗಲು ರಾತ್ರಿ ಎನ್ನದೆ ಖಾಲಿ ನಿವೇಶನದೊಳಗಿಂದ ಹಾವು, ಮುಂಗುಸಿ ಉಡ ಮುಂತಾದವು ಧುತ್ತನೆದು ರಾಗಿ ಸಾರ್ವಜನಿಕರನ್ನು ಭಯಭೀತಗೊಳಿಸುತ್ತಿವೆ.

ಹಣ ಪಡೆದು ಸ್ವಚ್ಛಗೊಳಿಸುವ ಯೋಜನೆ ಏನಾಯ್ತು?: ಖಾಲಿ ನಿವೇಶನಗಳಲ್ಲಿನ ಗಿಡಗಂಟಿ ತೆರವುಗೊಳಿಸಲು ಮಹಾನಗರ ಪಾಲಿಕೆ ಹಾಗೂ ಮುಡಾ ನಿವೇಶನಗಳ ಮಾಲೀಕರಿಂದ ಸ್ವಚ್ಛತಾ ತೆರಿಗೆ (ಸೆಸ್)ಯನ್ನು ಪಾವತಿಸಿಕೊಳ್ಳುತ್ತಿದೆ. ಪ್ರತಿ ವರ್ಷ ತೆರಿಗೆ ಪಾವತಿ ಸಂದರ್ಭದಲ್ಲಿ ಸ್ವಚ್ಛತೆಗೆಂದು ಚದರ ಅಡಿಗೆ ೫೦ ಪೈಸೆಯಂತೆ ನಗರಪಾಲಿಕೆ ಕಟ್ಟಿಸಿಕೊಳ್ಳುತ್ತಿದೆ. ಇದರಿಂದ ಪ್ರತೀ ವರ್ಷ ಪಾಲಿಕೆಗೆ ೨೨ ಕೋಟಿ ರೂ. ಸಂಗ್ರಹವಾಗುತ್ತದೆ. ಆದರೂ ನಗರಪಾಲಿಕೆ ಅಽಕಾರಿಗಳು ನಿವೇಶನಗಳ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ವಿಪರ್ಯಾಸವೆಂದರೆ ಸ್ವಚ್ಛತೆ ಮಾಡಲು ಅಗತ್ಯ ಸಿಬ್ಬಂದಿಯೂ ಇಲ್ಲ. ಯಂತ್ರಗಳೂ ಇಲ್ಲ. ಹೀಗಾಗಿ ನಗರದ ಬಹುತೇಕ ಬಡಾವಣೆಗಳ ಖಾಲಿ ನಿವೇಶನಗಳಲ್ಲಿ ಇಂದು ಆಳೆತ್ತರದ ಗಿಡಗಂಟಿಗಳು ಬೆಳೆದುನಿಂತಿದ್ದು, ಅಲ್ಲಿ ಓಡಾಡುವ ಸಾರ್ವಜನಿಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಆತಂಕ ಹುಟ್ಟಿಸುತ್ತಿವೆ. ಒಟ್ಟಾರೆ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಎಂಡಿಎ ಅಥವಾ ಮಹಾ ನಗರಪಾಲಿಕೆ ಕೂಡಲೇ ಖಾಲಿ ನಿವೇಶನಗಳ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

” ನಗರದ ವಿವಿಧ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳು ಹಾವು, ಮುಂಗುಸಿ ವಾಸಸ್ಥಾನವಾಗಿರುವುದರ ಜೊತೆಗೆ ಸರಗಳ್ಳರು ಹಾಗೂ ಮನೆಗಳ್ಳರ ಅಡಗುತಾಣವಾಗಿ ಕೂಡ ಪರಿ ವರ್ತನೆಯಾಗುವ ಆತಂಕವಿದೆ. ಯಾವುದೇ ಸಬೂಬು ಹೇಳದೆ, ಎಂಡಿಎ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಾಗೂ ನಗರಪಾಲಿಕೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕು.”

-ಪ್ರೇಮ ಶಂಕರೇಗೌಡ, ನಗರಪಾಲಿಕೆ ಮಾಜಿ ಸದಸ್ಯರು

” ಮುಡಾ ನಿಯಮದಂತೆ ನಿವೇಶನ ಮಂಜೂರಾದ ಮೂರು ವರ್ಷಗಳಲ್ಲಿ ಮನೆ ನಿರ್ಮಾಣ ಮಾಡಬೇಕು ಎಂಬ ಷರತ್ತು ಇದೆ. ಮುಡಾ ಅಧಿಕಾರಿಗಳು ಅದನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ನಿವೇಶನಗಳನ್ನು ಖರೀದಿಸಿ ವರ್ಷಾನುಗಟ್ಟಲೆ ಖಾಲಿ ಬಿಟ್ಟಲ್ಲಿ ಅಂತಹವರ ನಿವೇಶನಗಳನ್ನು ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಬೇಕು.”

-ಬಾಲಕೃಷ್ಣ ಸಂಗಾಪುರ, ಸಾಮಾಜಿಕ ಹೋರಾಟಗಾರ

Tags:
error: Content is protected !!