Mysore
18
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಮಂಡ್ಯ: ಶಾಲೆ ಸುತ್ತ ಮೊಟ್ಟೆ ವಿತರಣೆ ವಿವಾದ

ಹೇಮಂತ್‌ಕುಮಾರ್

ಮೊಟ್ಟೆ ನೀಡುವಂತೆ ಕೆಲ ವಿದ್ಯಾರ್ಥಿಗಳ ಮನವಿ

ಸಮೀಪದಲ್ಲೇ ದೇವಸ್ಥಾನ ಹಿನ್ನೆಲೆ ಮೊಟ್ಟೆಗೆ ಆಕ್ಷೇಪ

ಸರ್ಕಾರದ ಆದೇಶ ಪಾಲನೆ: ಕ್ಷೇತ್ರ ಶಿಕ್ಷಣಾಧಿಕಾರಿ

ಆಲಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟ

ಮಂಡ್ಯ: ವಿದ್ಯಾರ್ಥಿಗಳ ಪೌಷ್ಟಿಕಾಂಶ ಕೊರತೆ ನೀಗಿಸಲು ಹಾಗೂ ಆರೋಗ್ಯದ ದೃಷ್ಟಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮೊಟ್ಟೆ ನೀಡಬೇಕೆಂಬ ರಾಜ್ಯ ಸರ್ಕಾರದ ಸದುದ್ದೇಶದ ಯೋಜನೆ ಗ್ರಾಮಸ್ಥರ ನಂಬಿಕೆಗೆ ಅಡ್ಡಿಯಾಗುತ್ತದೆಂಬ ಕಾರಣಗಳ ಹಿನ್ನೆಲೆಯಲ್ಲಿ ವಿವಾದಕ್ಕೆ ದಾರಿ ಮಾಡಿದೆ.

ಸರ್ಕಾರದ ಆದೇಶದಂತೆ ಶಿಕ್ಷಕರು ಮೊಟ್ಟೆ ಅಗತ್ಯವಿರುವ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲು ಮುಂದಾಗಿದ್ದರಿಂದ ಇದನ್ನು ನಂಬಿಕೆ ಹೆಸರಿನಲ್ಲಿ ವಿರೋಧಿಸಿದ್ದ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಶಾಲೆಗಳಿಗೆ ಸೇರಿಸಲು ಮುಂದಾಗಿರುವ ಘಟನೆ ಆಲಕೆರೆ ಗ್ರಾಮದಲ್ಲಿ ನಡೆದಿದೆ.

ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಪ್ರಸಿದ್ಧ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯದ ೨೦೦ ಮೀ. ವ್ಯಾಪ್ತಿಯಲ್ಲೇ ಇರುವುದರಿಂದ ಇಲ್ಲಿ ಮೊಟ್ಟೆ ಬೇಯಿಸಿ ವಿತರಿಸುವುದರಿಂದ ಜನರ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ. ಮೊಟ್ಟೆಯ ಬದಲು ಬಾಳೆ ಹಣ್ಣು ವಿತರಿಸಬೇಕೆಂದು ೨ ವರ್ಷಗಳ ಹಿಂದೆ ಗ್ರಾಮಸ್ಥರು ಸಭೆ ಸೇರಿ ಒಮ್ಮತದಿಂದ ತೀರ್ಮಾನ ಕೈಗೊಂಡಿದ್ದರು. ಅದರಂತೆ ಕೆಲವು ವರ್ಷಗಳಿಂದ ಮಕ್ಕಳಿಗೆ ಮೊಟ್ಟೆ ಬದಲಾಗಿ ಬಾಳೆಹಣ್ಣು, ಕಡ್ಲೆ ಮಿಠಾಯಿಯನ್ನು ವಿತರಿಸಲಾಗುತ್ತಿತ್ತು

ಆದರೆ ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಸರ್ಕಾರದ ನಿರ್ದೇಶನದಂತೆ ಮೊಟ್ಟೆ ನೀಡಿ ಎಂದು ಜಿಲ್ಲಾಧಿಕಾರಿಗಳು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮನವಿ ಸಲ್ಲಿಸಿದ್ದರಿಂದಾಗಿ ಸರ್ಕಾರದ ಸೂಚನೆಯಂತೆ ಅಗತ್ಯ ಇರುವ ಮಕ್ಕಳಿಗೆ ಮೊಟ್ಟೆ ವಿತರಿಸಲು ಆರಂಭಿಸಿದ್ದರು. ಇದನ್ನು ಗ್ರಾಮಸ್ಥರು ಪ್ರಶ್ನಿಸಿದಾಗ ನಾವು ಸರ್ಕಾರದ ಆದೇಶವನ್ನು ಪಾಲಿಸುತ್ತಿರುವುದಾಗಿ ಹೇಳಿದರು.

ಗ್ರಾಮಸ್ಥರು ತೆಗೆದುಕೊಂಡಿದ್ದ ತೀರ್ಮಾನವನ್ನು ಶಾಲೆಯ ಆಡಳಿತ ಮಂಡಳಿ ಧಿಕ್ಕರಿಸಿ ಮೊಟ್ಟೆ ವಿತರಿಸಿದೆ ಎಂದು ಗ್ರಾಮದ ಮುಖಂಡ ಅಭಿನಂದನ್ ಪಟೇಲ್ ಆರೋಪಿಸಿದ್ದಾರೆ. ಇದು ವಿವಾದಕ್ಕೆಡೆಮಾಡಿದ್ದು, ಸರ್ಕಾರಿ ಆದೇಶದಂತೆ ಮೊಟ್ಟೆ ತಿನ್ನುವ ಮಕ್ಕಳಿಗೆ ವಿತರಣೆ ಮಾಡಿರುವುದನ್ನು ವಿರೋಧಿಸಿ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಿಸಿ ಪಡೆದು ಬೇರೆ ಶಾಲೆಗಳಿಗೆ ದಾಖಲಾಗಲು ಮುಂದಾಗಿದ್ದಾರೆ.

ಸುಮಾರು ೧೨೦ ವಿದ್ಯಾರ್ಥಿಗಳಿದ್ದ ಆಲಕೆರೆ ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಆದೇಶ ಸೌಹಾರ್ದತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ ಮೊಟ್ಟೆಗೆ ಪರ್ಯಾವಾಗಿ ಬಾಳೆಹಣ್ಣನ್ನು ನೀಡುವಂತೆ ಶಿಕ್ಷಣ ಇಲಾಖೆಗೆ ಮಾಡಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ. ಮೊಟ್ಟೆ ನೀಡುವುದು ಅನಿವಾರ್ಯವಾದರೆ ಆ ಮಕ್ಕಳ ಮನೆಗಳಿಗೆ ಕೊಡುವ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಬಿಇಒ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ಗ್ರಾಮಸ್ಥರ ಕೋರಿಕೆಯನ್ನು ಪರಿಗಣಿಸದ ಹಿನ್ನೆಲೆಯಲ್ಲಿ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತರಕಾರಿ ಮಹೇಶ್ ಹೇಳಿದ್ದಾರೆ.

ಸರ್ಕಾರಿ ಶಾಲೆ ಉಳಿಸುವ ಯೋಜನೆಯಡಿ ಸರ್ಕಾರ ಅಗತ್ಯ ಶಿಕ್ಷಣ ಕೊಡುವುದರ ಬದಲು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಕೆಲಸಕ್ಕೆ ಕೈ ಹಾಕಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಸಲಿಗೆ ಆಲಕೆರೆ ಸರ್ಕಾರಿ ಶಾಲೆಯ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಕೊಡುಗೆಯು ದೊಡ್ಡ ಮಟ್ಟದಲ್ಲಿದೆ. ಮಂಡ್ಯ ತಾಲ್ಲೂಕಿನಲ್ಲಿಯೇ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆ ಇದಾಗಿತ್ತು ಎನ್ನುವ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ರುದ್ರೇಶ್ ಅವರು, ನಮ್ಮ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸುತ್ತಮುತ್ತ ಪಾವಿತ್ರ್ಯತೆ ಕಾಪಾಡುವುದು ಗ್ರಾಮದ ಪ್ರತೀತಿ.

ಸರ್ಕಾರ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಡುವುದಕ್ಕೆ ನಾವು ವಿರೋಧ ಮಾಡುತ್ತಿಲ್ಲ. ಈ ಸ್ಥಳದಲ್ಲಿ ಮೊಟ್ಟೆ ಬೇಯಿಸುವುದು ಬೇಡ ಎಂಬುದಷ್ಟೇ ನಮ್ಮ ಬೇಡಿಕೆ ಎಂದು ಹೇಳಿದರು. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

ಇದರಿಂದಾಗಿ ೧೨೪ ವಿದ್ಯಾರ್ಥಿಗಳ ಪೈಕಿ ಈಗಾಗಲೇ ಸುಮಾರು ೫೦ ಮಕ್ಕಳ ಪೋಷಕರು ಅಕ್ಕಪಕ್ಕದ ಗ್ರಾಮದಲ್ಲಿರುವ ಖಾಸಗಿ ಶಾಲೆಗೆಸೇರಿಸಲು ಮುಂದಾಗಿದ್ದಾರೆ. ಸುಮಾರು ೩೦ ಪೋಷಕರು ಶೀಘ್ರದಲ್ಲೇ ಟಿಸಿ ಪಡೆದು ಈ ಶಾಲೆಯನ್ನು ತೊರೆಯಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

” ಆಲಕೆರೆ ಸರ್ಕಾರಿ ಶಾಲೆಯಲ್ಲಿ ಕೆಲವರು ಮೊಟ್ಟೆ ಬೇಯಿಸಿ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅವರ ಮನವೊಲಿಸಿ ಜಿಲ್ಲಾಧಿಕಾರಿಗಳ ನಿರ್ದೇಶನ, ಸರ್ಕಾರದ ನಿಯಮದಂತೆ ಬಿಸಿಯೂಟ ನೀಡಲಾಗುತ್ತಿದೆ. ಇದನ್ನು ವಿರೋಽಸಿ ಇಲ್ಲಿಂದ ಯಾವ ಪೋಷಕರೂ ಟಿಸಿ ಪಡೆದು ಹೋಗಿಲ್ಲ.”

ಸೌಭಾಗ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಂಡ್ಯ

” ಆಲಕೆರೆಯ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ಬೇಕಾದವರಿಗೆ ಮೊಟ್ಟೆ, ಬೇಡ ಎಂದವರಿಗೆ ಬಾಳೆ ಹಣ್ಣು ನೀಡಲಾಗುತ್ತಿದೆ. ಮೊಟ್ಟೆ ಬೇಕೆಂದವರಿಗೆ ಕೊಡಲೇಬೇಕು. ಇದು ಸರ್ಕಾರದ ಆದೇಶ.”

ಗಿರೀಶ್, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ

” ಶ್ರೀ ವೀರಭದ್ರಸ್ವಾಮಿ ಕೊಂಡ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನದ ಪಕ್ಕದಲ್ಲೇ ಸರ್ಕಾರಿ ಶಾಲೆ ಇದ್ದು, ಇಲ್ಲಿ ಮೊಟ್ಟೆ ಬೇಯಿಸಿ ಮಕ್ಕಳಿಗೆ ಕೊಡುವುದರ ಬದಲು, ಅವರ ಮನೆಗೇ ತೆಗೆದುಕೊಂಡು ಹೋಗುವುದಕ್ಕೆ ಊರಿನವರ ಅಭ್ಯಂತರವಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೂ ಇಲ್ಲಿನ ಶಿಕ್ಷಕರೊಬ್ಬರು ಮತ್ತೆ ಮೊಟ್ಟೆ ನೀಡುತ್ತೇವೆಂದು ಹಠ ಹಿಡಿದವರಂತೆ ವರ್ತಿಸಿದ್ದಾರೆ. ಆದ್ದರಿಂದ ಶೇ.೭೫ ಪೋಷಕರು ತಮ್ಮ ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗಳಿಗೆ ಸೇರಿದ್ದಾರೆ.”

ರುದ್ರೇಶ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರು, ಆಲಕೆರೆ ಶಾಲೆ

” ಸರ್ಕಾರಿ ಶಾಲೆಯ ಮಕ್ಕಳಿಗೆ ಮೊಟ್ಟೆ ನೀಡುವ ಆದೇಶ ಬಂದಾಗಲೇ ಎಸ್‌ಡಿಎಂಸಿ ವತಿಯಿಂದ ಗ್ರಾಮಸ್ಥರ ಸಭೆ ಕರೆದು ಶಾಲೆ ಪಕ್ಕದಲ್ಲೇ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನವಿರುವುದರಿಂದ ಇಲ್ಲಿ ಮೊಟ್ಟೆ ಕೊಡುವುದು ಬೇಡ ಎಂದು ಒಕ್ಕೊರಲ ನಿರ್ಧಾರವಾಗಿತ್ತು. ಎಲ್ಲರ ಒಪ್ಪಿಗೆಯಂತೆ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕಿ ಕೊಡುತ್ತಾ ಬರಲಾಗಿತ್ತು. ಇತ್ತೀಚೆಗೆ ಬಂದ ಶಿಕ್ಷಕರೊಬ್ಬರು ಗ್ರಾಮಸ್ಥರ ನಿಲುವಿಗೆ ವಿರೋಧವಾಗಿ ವರ್ತಿಸಿದ್ದಾರೆ.”

ತರಕಾರಿ ಮಹೇಶ್,  ಗ್ರಾಪಂ ಮಾಜಿ ಸದಸ್ಯರು, ಆಲಕೆರೆ 

Tags:
error: Content is protected !!