Mysore
19
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ಶೈಕ್ಷಣಿಕ ಪ್ರವಾಸ; ಶಾಲಾ ಮುಖ್ಯಸ್ಥರು, ಪೋಷಕರಿಗೆ ಪೀಕಲಾಟ  

ಗಿರೀಶ್ ಹುಣಸೂರು

ಶೈಕ್ಷಣಿಕ ಪ್ರವಾಸಕ್ಕೆ ಬಿಇಒ ಅನುಮತಿ ಕಡ್ಡಾಯ

ಪ್ರವಾಸದ ವೇಳೆ ಯಾವುದೇ ಅವಘಡಗಳಿಗೆ ಶಾಲಾ ಮುಖ್ಯಸ್ಥರೇ ಹೊಣೆ

ಡಿಸೆಂಬರ್ ತಿಂಗಳಲ್ಲೇ ಶೈಕ್ಷಣಿಕ ಪ್ರವಾಸ ಮುಗಿಸಬೇಕು

ಪ್ರವಾಸಕ್ಕೆ ಕೆಎಸ್‌ಆರ್‌ಟಿಸಿ, ಕೆಎಸ್‌ಟಿಡಿಸಿ ಬಸ್‌ಗಳ ಬಳಕೆ ಕಡ್ಡಾಯ

ಮೈಸೂರು: ‘ದೇಶ ಸುತ್ತಿನೋಡು-ಕೋಶ ಓದಿ ನೋಡು’ ಎಂಬ ನಾಣ್ಣುಡಿಯಂತೆ ಪ್ರತಿ ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ ಮಕ್ಕಳನ್ನು ಶಾಲಾ ಪ್ರವಾಸಕ್ಕೆ ಕರೆದೊಯ್ಯುವುದು ವಾಡಿಕೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಶಾಲಾ ಪ್ರವಾಸ- ಶಾಲಾ ಮುಖ್ಯಸ್ಥರು ಹಾಗೂ ಪೋಷಕರ ಪೀಕಲಾಟಕ್ಕೆ ಕಾರಣವಾಗುತ್ತಿದೆ.

ಹೆಚ್ಚುತ್ತಿರುವ ರಸ್ತೆ ಅಪಘಾತಗಳು, ಮಕ್ಕಳ ಮೇಲೆ ಶಿಕ್ಷಕರಿಂದಲೇ ನಡೆಯುವ ಲೈಂಗಿಕ ದೌರ್ಜನ್ಯಗಳು, ಶಿಕ್ಷಕರು ಜೊತೆಯಲ್ಲಿದ್ದರೂ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡದಿರುವುದು, ದೂರ ಪ್ರಯಾಣದ ಸಂದರ್ಭದಲ್ಲಿ ಹಳಸಲು ಆಹಾರ ನೀಡಿಕೆ, ರಾತ್ರಿ ಸೂಕ್ತ ವಸತಿ ಸೌಕರ್ಯ ಕಲ್ಪಿಸದಿರುವುದು, ಪ್ರಯಾಣದ ವೇಳೆ ನಿಯಮಿತವಾಗಿ ಶೌಚಕ್ಕೆ ಅವಕಾಶ ನೀಡದಿರುವುದು… ಹೀಗೆ ಸಾಲು ಸಾಲು ಆರೋಪಗಳನ್ನು ಹಿಂದಿನ ವರ್ಷಗಳಲ್ಲಿ ಶಾಲಾ ಪ್ರವಾಸಕ್ಕೆ ಹೋಗಿ ಬಂದ ಮಕ್ಕಳು ಮತ್ತವರ ಪೋಷಕರು ಪಟ್ಟಿ ಮಾಡುತ್ತಾರೆ.

ಆದರೆ, ಎಲ್ಲ ಶಾಲೆಗಳವರೂ ಹೀಗೆಯೇ ಎಂದೇನಲ್ಲ, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ ಉತ್ತಮವಾಗಿ ಪ್ರವಾಸ ಆಯೋಜಿಸುವ ಶಾಲೆಗಳೂ ಇವೆ. ಆದರೆ, ಸರ್ಕಾರದ ಸುತ್ತೋಲೆಯನ್ನು ಗಾಳಿಗೆ ತೂರಿ ಶೈಕ್ಷಣಿಕ ಪ್ರವಾಸ ಆಯೋಜಿಸುವ ಶಾಲಾ ಆಡಳಿತ ಮಂಡಳಿಗಳು ಭಾರೀ ಬೆಲೆ ತೆರಬೇಕಾಗುತ್ತದೆ.

ಇದಕ್ಕೆ ತಾಜಾ ಉದಾಹರಣೆ ಮೈಸೂರಿನ ತರಳಬಾಳು ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಶೈಕ್ಷಣಿಕ ಪ್ರವಾಸವೇ ಆಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಶಿಕ್ಷಣ ಇಲಾಖೆಯ ಕಟ್ಟುಪಾಡುಗಳಿಂದಾಗಿ ಶಿಕ್ಷಕರು ಮಕ್ಕಳ ಜತೆಗೆ ಪ್ರವಾಸಕ್ಕೆ ತೆರಳಲು ನಮಗೇಕೆ ಇಲ್ಲದ ಉಸಾಬರಿ ಎಂದು ಹಿಂಜರಿಯುವಂತಾಗಿದೆ.

ಶೈಕ್ಷಣಿಕ ಪ್ರವಾಸ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಆಯಾಯ ಶಾಲೆಗಳವರು ಶಿಕ್ಷಣ ಇಲಾಖೆಯಿಂದ ಅನುಮತಿಪಡೆದುಕೊಳ್ಳುವುದು ಕಡ್ಡಾಯ. ಪ್ರತಿ ವರ್ಷ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಡಿಸೆಂಬರ್ ತಿಂಗಳ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳದೆ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಬೇಕು. ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಬೇಕು. ಪ್ರವಾಸವನ್ನು ಶೈಕ್ಷಣಿಕ ಪ್ರವಾಸವಾಗಿರಲು ಕಲಿಕೆಗೆ ಪೂರಕವಾಗುವ ಸ್ಥಳಗಳನ್ನು ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ಪ್ರವಾಸ ಕೈಗೊಳ್ಳುವ ಖಾಸಗಿ ಶಾಲೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶಾಲಾ ಮಾನ್ಯತೆಯನ್ನು ನವೀಕರಿಸಿರಬೇಕು.

ಪ್ರವಾಸದ ಸಮಯದಲ್ಲಿ ಸಂಭವಿಸುವ ಯಾವುದೇ ಅವಘಡಗಳಿಗೆ ಶಾಲೆಯ ಮುಖ್ಯಸ್ಥರೇ ನೇರ ಹೊಣೆಗಾರರಾಗಿರುತ್ತಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು.

ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು. ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಪ್ರವಾಸಕ್ಕೆ ನಿಯೋಜಿತ ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳತಕ್ಕದ್ದು. ಈ ಎಲ್ಲಾ ಷರತ್ತುಗಳನ್ನು ಪಾಲಿಸಿ, ಇಲಾಖೆಯ ಅನುಮತಿಯನ್ನು ತಪ್ಪದೇ ಪಡೆದಿರಬೇಕು ಹಾಗೂ ಪ್ರವಾಸಕ್ಕೆ ತೆರಳುವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಗೆ ಕಡ್ಡಾಯವಾಗಿ ನೀಡಿ ಅನುಮೋದನೆ ಪಡೆಯಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಹೊರ ರಾಜ್ಯ ಪ್ರವಾಸಕ್ಕೆ ಅನುಮತಿ ಕಡ್ಡಾಯ: ಕರ್ನಾಟಕದ ಒಳಗೆ ಮತ್ತು ಹೊರ ರಾಜ್ಯಗಳಿಗೆ ಪ್ರವಾಸಕ್ಕೆ ಕರೆದೊಯ್ಯುವ ಶಾಲೆಗಳವರು ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕಿದೆ. ೨೦೨೩ರಲ್ಲಿ ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ಪ್ರತೀ ಶೈಕ್ಷಣಿಕ ವರ್ಷ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಇಲಾಖೆಯ ಷರತ್ತುಗಳ ಅನ್ವಯ ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅನುಮತಿ ನೀಡಲು ಸೂಚಿಸಿದ್ದಾರೆ. ಜತೆಗೆ ಶೈಕ್ಷಣಿಕ ಪ್ರವಾಸವನ್ನು ಭಾರತೀಯ ರೈಲ್ವೆಯ ರೈಲುಗಳಲ್ಲಿಯೂ ಹಮ್ಮಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಆದರೆ, ಸರ್ಕಾರದ ಈ ಸುತ್ತೋಲೆ ಪಾಲನೆಯಾಗುತ್ತಿದೆಯೇ ಎಂಬುದೇ ಯಕ್ಷ ಪ್ರಶ್ನೆ. ಕೆಎಸ್ ಆರ್‌ಟಿಸಿ, ಕೆಎಸ್‌ಟಿಡಿಸಿ ಬಸ್‌ಗಳ ಬದಲಿಗೆ ಬಹುತೇಕ ಶಾಲೆಗಳವರು ಖಾಸಗಿ ಬಸ್‌ಗಳಲ್ಲೇ ಪ್ರವಾಸಕ್ಕೆ ಕರೆದೊಯ್ಯುವುದು, ಇಂತಹ ಬಸ್‌ಗಳಲ್ಲಿ ದೂರದ ಪ್ರವಾಸಕ್ಕೂ ಒಬ್ಬನೇ ಚಾಲಕ, ಚಾಲಕ ನಿದ್ರೆಗೆ ಜಾರಿದರೆ ಕ್ಲೀನರ್ ಬಸ್ ಚಾಲನೆ ಮಾಡಿದ ಬಹುತೇಕ ಸಂದರ್ಭಗಳಲ್ಲಿ ಅವಘಡಗಳು ಸಂಭವಿಸಿರುವ ನಿದರ್ಶನಗಳಿವೆ.

ಕೆಎಸ್‌ಟಿಡಿಸಿ ಬಸ್‌ಗಳು ಐಷಾರಾಮಿ ಆಗಿರುವುದರಿಂದ ರಿಯಾಯಿತಿ ದರದಲ್ಲಿ ಸಿಗುವುದು ಕಷ್ಟ. ಹೀಗಾಗಿ ಪ್ರವಾಸ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರುಗಳು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿದೆ. ಇಲ್ಲವಾದಲ್ಲಿ ಮಕ್ಕಳು ಪ್ರವಾಸ ಮುಗಿಸಿ ಸುರಕ್ಷಿತವಾಗಿ ವಾಪಸ್ಸಾಗುವವರೆಗೂ ಶಾಲಾ ಮುಖ್ಯಸ್ಥರು ಹಾಗೂ ಪೋಷಕರಿಗೆ ಪೀಕಲಾಟ ತಪ್ಪಿದ್ದಲ್ಲ.

” ಸರ್ಕಾರ ಪ್ರವಾಸಿ ತಾಣಗಳಲ್ಲಿ ಮಕ್ಕಳು ಮತ್ತು ಶಿಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಬೇಕು. ಪ್ರವಾಸಿ ತಾಣಗಳಲ್ಲಿ ಶಾಲಾ ಮಕ್ಕಳ ವಾಸ್ತವ್ಯಕ್ಕೆ ಸಿಎಸ್‌ಆರ್ ನಿಧಿಯಲ್ಲಿ ತಂಗುದಾಣಗಳನ್ನು ನಿರ್ಮಿಸಬೇಕು. ಕೆಎಸ್‌ಆರ್‌ಟಿಸಿಯವರು ಸುಸ್ಥಿತಿಯಲ್ಲಿರುವ ಬಸ್ ಮತ್ತು ಅನುಭವಿ ಚಾಲಕರನ್ನು ನಿಯೋಜಿಸಬೇಕು.”

ಟಿ.ಸತೀಶ್ ಜವರೇಗೌಡ, ಶಿಕ್ಷಕರು

” ಶೈಕ್ಷಣಿಕ ಪ್ರವಾಸದ ವೇಳೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ೨೦೨೩ ಮತ್ತು ೨೦೨೪ರಲ್ಲಿ ಸರ್ಕಾರ ಸುತ್ತೋಲೆಗಳನ್ನು ಹೊರಡಿಸಿದೆ. ಮೈಸೂರಿನ ತರಳಬಾಳು ಶಿಕ್ಷಣ ಸಂಸ್ಥೆಯ ಪ್ರಕರಣಕ್ಕೆ ಸಂಬಂಽಸಿದಂತೆ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದಮೇಲೆ ಕ್ರಮ ಜರುಗಿಸಲಾಗುವುದು.”

ಉದಯಕುಮಾರ್, ಡಿಡಿಪಿಐ,ಮೈಸೂರು

Tags:
error: Content is protected !!