ಚಿರಂಜೀವಿ ಎಸ್.ಹುಲ್ಲಹಳ್ಳಿ
ದಸರಾ ಹಬ್ಬಗಳಲ್ಲಿ ಸಾಲಾನೆಯಾಗಿದ್ದವನು; ೧೮ ವರ್ಷಗಳ ಬಳಿಕ ಚಿನ್ನದ ಅಂಬಾರಿ ಹೊರುವ ಅವಕಾಶ
ಮೈಸೂರು: ಕಾಡಾನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ ‘ಪ್ರಶಾಂತ’ ಆನೆ ಈಗ ಮೈಸೂರು ದಸರಾ ಗಜಪಡೆಯ ಸಾರಥ್ಯ ವಹಿಸಲಿದೆ. ತನ್ನ ಶಾಂತ ಸ್ವಭಾವದಿಂದ ‘ಕ್ಯಾಪ್ಟನ್ ಕೂಲ್’ ಎಂದೇ ಗುರುತಿಸಿ ಕೊಂಡಿರುವ ೫೪ ವರ್ಷದ ಪ್ರಶಾಂತ ಆನೆಗೆ ಈ ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಒಲಿದಿದೆ.
ಈ ಬಾರಿಯ ವಿಜಯ ದಶಮಿಯಂದು ಜಂಬೂ ಸವಾರಿಯಲ್ಲಿ ೭೫೦ ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗಲಿದೆ. ಕಳೆದ ೧೮ ವರ್ಷಗಳಿಂದ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಪ್ರಶಾಂತ ಆನೆಗೆ ಅರಮನೆಯ ವಾತಾವರಣ ಹೊಸದಲ್ಲ. ಜಂಬೂ ಸವಾರಿಯ ಸಂಭ್ರಮ, ಜನಸಾಗರ, ವಾದ್ಯಘೋಷಗಳ ಸದ್ದು, ಮೆರವಣಿಗೆಯ ಸುದೀರ್ಘ ಹಾದಿ ಎಲ್ಲವೂ ಚಿರಪರಿಚಿತ. ಇಷ್ಟು ವರ್ಷಗಳ ಕಾಲ ಗಜಪಡೆಯ ಭಾಗವಾಗಿ ಸಾಗಿದ್ದ ಆನೆಗೆ ಈ ಬಾರಿ ಇಡೀ ಗಮನ ತನ್ನತ್ತ ಸೆಳೆಯುವ ಜವಾಬ್ದಾರಿ ಸಿಕ್ಕಿದೆ.
ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರುವ ಹೊಣೆಯಿಂದ ನಿರ್ಗಮಿಸಿದ ಬಳಿಕ ತೆರವಾದ ಸ್ಥಾನವನ್ನು ಪ್ರಶಾಂತ ತುಂಬುತ್ತಿದ್ದಾನೆ.
ಒಂದು ಟನ್ ಭಾರದ ತಾಲೀಮು: ಚಿನ್ನದ ಅಂಬಾರಿ ಹೊರುವುದು ಕೇವಲ ಗೌರವದ ಸಂಕೇತವಲ್ಲ; ಅದಕ್ಕೆ ದೈಹಿಕ ಸಾಮರ್ಥ್ಯ, ಸಹನಾ ಶಕ್ತಿ ಮತ್ತು ಸುದೀರ್ಘ ತಾಲೀಮೂ ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರಶಾಂತ ಆನೆಗೆ ಮರದ ಅಂಬಾರಿ ಹಾಗೂ ಮರಳು ಮೂಟೆಗಳನ್ನು ಬಳಸಿ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಸುಮಾರು ೭೦೦ ಕೆಜಿಯಿಂದ ಒಂದು ಟನ್ ವರೆಗಿನ ಭಾರವನ್ನು ಹೊತ್ತು ಅಭ್ಯಾಸ ನಡೆಸಲಾಗಿದೆ.
ಶಾಂತ ಸ್ವಭಾವವೇ ವಿಶೇಷತೆ: ಆನೆಯ ಬಲವನ್ನು ಅದರ ದೇಹದ ಗಾತ್ರದಿಂದ ಮಾತ್ರ ಅಳೆಯಲಾಗದು. ಭಾರ ಹೊರುವ ಸಾಮರ್ಥ್ಯದ ಜತೆಗೆ ಶಾಂತ ಸ್ವಭಾವ, ಸಮತೋಲನದ ನಡಿಗೆ, ಮಾವುತ ಮತ್ತು ಕಾವಾಡಿಯ ಸೂಚನೆಗಳಿಗೆ ಸ್ಪಂದಿಸುವ ಗುಣವೂ ಅಂಬಾರಿ ಆನೆಯ ಆಯ್ಕೆಯಲ್ಲಿ ನಿರ್ಣಾಯಕವಾಗುತ್ತದೆ. ಈ ಎಲ್ಲ ಗುಣಗಳ ವಿಚಾರದಲ್ಲಿ ಪ್ರಶಾಂತ ಗಮನ ಸೆಳೆದಿದೆ.
” ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ೧೯೯೩ರಲ್ಲಿ ಸೆರೆಹಿಡಿಯಲಾದ ಪ್ರಶಾಂತ ಆನೆಯನ್ನು ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಲಾಯಿತು. ಕಾಡಿನ ಪರಿಸರದಿಂದ ಮಾನವ ಸಂಪರ್ಕದ ವಾತಾವರಣಕ್ಕೆ ಹೊಂದಿಕೊಂಡು ತರಬೇತಿ ಪಡೆದ ಈ ಆನೆ ಅರಣ್ಯ ಇಲಾಖೆಯ ಕಾರ್ಯಾಚರಣೆಗಳಲ್ಲಿಯೂ ಪಾಲ್ಗೊಂಡಿದೆ. ಕಾಡಾನೆ, ಹುಲಿ ಸೆರೆ ಕಾರ್ಯಾಚರಣೆಗಳಲಿ ಭಾಗವಹಿಸಿರುವುದು ಪ್ರಶಾಂತನ ಬದುಕಿನ ಪ್ರಮುಖ ಅಧ್ಯಾಯ. ಕಠಿಣ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹಿಡಿದು, ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುವ ದಸರಾ ಮೆರವಣಿಗೆಯಲ್ಲಿ ಶಿಸ್ತುಬದ್ಧವಾಗಿ ಸಾಗುವವರೆಗೆ ಪ್ರಶಾಂತ ವಿಭಿನ್ನ ವಾತಾವರಣಗಳಿಗೆ ಒಗ್ಗಿಕೊಂಡಿದೆ. ಈಗ ಅಂಬಾರಿ ಹೊರಲು ಆಯ್ಕೆಯಾಗಿರುವುದು ಅದರ ದೀರ್ಘ ಅನುಭವಕ್ಕೆ ಸಂದ ಮನ್ನಣೆಯಂತಿದೆ.
ಅಂಬಾರಿ ಹೊಣೆ; ಹೊಸ ಅಧ್ಯಾಯ ಆರಂಭ: ಅಭಿಮನ್ಯು ಹಲವು ವರ್ಷಗಳ ಕಾಲ ಅಂಬಾರಿ ಹೊತ್ತು ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದ. ಈಗ ಆ ಜವಾಬ್ದಾರಿ ಪ್ರಶಾಂತನ ಹೆಗಲೇರಿದೆ. ಅಂಬಾರಿ ಆನೆಯ ಸ್ಥಾನಕ್ಕೆ ಆಯ್ಕೆಯಾಗು ವುದು ಯಾವುದೇ ಆನೆಗೆ ಸಾಮಾನ್ಯ ಸಂಗತಿಯಲ್ಲ. ದೈಹಿಕ ಸಾಮರ್ಥ್ಯ, ಆರೋಗ್ಯ, ಸ್ವಭಾವ, ತರಬೇತಿ ಮತ್ತು ಮೆರವಣಿಗೆಯ ಅನುಭವ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಿದ ಬಳಿಕವೇ ಈ ಜವಾಬ್ದಾರಿ ನೀಡಲಾಗುತ್ತದೆ.





