ಗಿರಿಜನರಿಗಿಲ್ಲ ಕಾವೇರಿ, ಕಬಿನಿ ನೀರು; ಕಾರ್ಯಗತವಾಗದ ಜಲ ಜೀವನ್ ಮಿಷನ್
# ಪ್ರಸಾದ್ ಲಕ್ಕೂರು
ಚಾಮರಾಜನಗರ: ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶಗಳ ಒಳಗಿರುವ ಜನರ ಪೋಡುಗಳಿಗೆ ಜಲ ಜೀವನ್ ಮಿಷನಡಿ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆ ಆರಂಭದಲ್ಲಿಯೇ ಮುಗ್ಗರಿಸಿಬಿದ್ದಿದೆ.
ಅರಣ್ಯ ಇಲಾಖೆಯು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡದ ವಿಳಂಬ ಮಾಡುತ್ತಿರುವ ಕಾರಣ ಕಳೆದ 2 ವರ್ಷಗಳಿಂದ ಯೋಜನೆ ಮಕಾಡೆ ಮಲಗಿದೆ ಹಾಗಾಗಿ ಗಿರಿಜನರಿಗೆ ಶುದ್ಧ ಕಾವೇರಿ ಮತ್ತು ಕಬಿನಿ ನೀರು ಕುಡಿಯುವ ಭಾಗ್ಯ ಇನ್ನೂ ದೊರೆತಿಲ್ಲ.
ಜಿಲ್ಲಾ ಪಂಚಾಯತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಾಮಗಾರಿ ನಡೆಸಲು ಅನುಮತಿ ಕೋರಿ ಅರಣ್ಯ ಇಲಾಖೆಯ ಪರವೇಜ್ ಫೋರ್ಟಲ್‌ಗೆ ಅರ್ಜಿ ಸಲ್ಲಿಸಿ ಕಾಯುತ್ತಿವೆ. ಅರ್ಜಿಯು ರಾಜ್ಯ ಅರಣ್ಯ ಇಲಾಖೆಯ ಕಾರ್ಯದರ್ಶಿ ಬಳಿ ದೂರು ತಿನ್ನುತ್ತ ಬಿದ್ದಿದೆ.
ಜಿಲ್ಲೆಯ 15 ಗಿರಿಜನರ ಪೋಡುಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಜಲ ಜೀವನ್ ಮಿಷನ್‌ನಡಿ ಕೈಗೆತ್ತಿಕೊಳ್ಳಲಾಗಿದೆ. ಹನೂರು ತಾಲ್ಲೂಕಿಗೆ ಸೇರಿದ ನೆಲ್ಲಿಕತಿ, ಕೆರೆದಿಂಬ ಗಿರಿಜನರ ಪೋಡುಗಳಲ್ಲಿ 1.33 ಕೋಟಿ ರೂ., ಪಾಲಾರ್ ಪೋಡಿನಲ್ಲಿ 1.85 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಚಾಮರಾಜನಗರ ತಾಲ್ಲೂಕಿಗೆ ಸೇರಿದ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ದೊಳಗಿರುವ ಬೇಡಗುಳಿಯಲ್ಲಿ 1.52 ಕೋಟಿ ರೂ., ಕೆ.ಗುಡಿ ಪೋಡಿನಲ್ಲಿ 62.30 ಲಕ್ಷ ರೂ., ಬೂತಾಣಿ ಪೋಡಿನಲ್ಲಿ 1.44 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ.
ಯಳಂದೂರು ತಾಲ್ಲೂಕಿಗೆ ಸೇರಿದ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಬಂಗ್ಲೆ ಪೋಡಿ ನಲ್ಲಿ 15.20 ಲಕ್ಷ ರೂ., ಹೊಸ ಪೋಡಿನಲ್ಲಿ 35 ಲಕ್ಷ ರೂ., ಕಲ್ಯಾಣಿ ಪೋಡಿನಲ್ಲಿ 15.40 ಲಕ್ಷ ರೂ., ಮುತ್ತುಗದ್ದೆ ಪೋಡಿನಲ್ಲಿ 20.50 ಲಕ್ಷ ರೂ., ಸೀಗೆಬೆಟ್ಟದಲ್ಲಿ 16.30 ಲಕ್ಷ ರೂ., ಯರಕನಗದ್ದೆಯಲ್ಲಿ 34.80 ಲಕ್ಷ ರೂ., ಪುರಾಣಿ ಪೋಡಿನಲ್ಲಿ 46.50 ಲಕ್ಷ ರೂ., ಮಂಜಿಗುಂಡಿಯಲ್ಲಿ 8.90 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಅಂದಾಜಿಸಲಾಗಿದೆ.
ಈ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಕಾವೇರಿ ಮತ್ತು ಕಬಿನಿಯಿಂದ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಪೈಪ್ಲೈನ್ ಅಳವಡಿಕೆ, ಕಾವೇರಿ ಮತ್ತು ಕಬಿನಿ ನೀರು ಸಾಗಿಸಲು ಸಾಧ್ಯವಾಗದ ಪೋಡುಗಳಲ್ಲಿ ಬೋರ್‌ವೆಲ್ ಕೊರೆಯುವುದು, ಮನೆ ಮನೆಗೆ ನಲ್ಲಿ ಮತ್ತು ಮೀಟರ್ ಅಳವಡಿಕೆ ಮಾಡುವುದು ಯೋಜನೆಯಲ್ಲಿ ಸೇರಿದೆ.
ಈ ಗಿರಿಜನರ ಪೋಡುಗಳಲ್ಲಿ ಕಾಮಗಾರಿ ಗುತ್ತಿಗೆಯನ್ನು ಸುಪ್ರಜಾ ಕನ್‌ಕ್ಷನ್ ಸಂಸ್ಥೆಗೆ ನೀಡಲಾಗಿದೆ. ಸಂಸ್ಥೆಯು ಈಗಾಗಲೇ ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿದೆ. ಆದರೆ ಪೈಪ್‌ಲೈನ್ ಅಳವಡಿಕೆ, ಬೋರ್ ವೆಲ್ ಕೊರೆಯಲು, ನಲ್ಲಿ ಅಳವಡಿಕೆಗೆ ಅವಕಾಶ ದೊರೆತಿಲ್ಲ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 2022-23ನೇ ಸಾಲಿನಲ್ಲಿ ಚಾ.ನಗರ ಮತ್ತು ಯಳಂದೂರು ತಾಲ್ಲೂಕುಗಳ ಪೋಡುಗಳಲ್ಲಿ ಮತ್ತು 2023-24ನೇ ಸಾಲಿನಲ್ಲಿ ಕೊಳ್ಳೇಗಾಲ ತಾಲ್ಲೂಕಿನ – ಪೋಡುಗಳಲ್ಲಿ ಕಾಮಗಾರಿ ಆರಂಭಿಸಲು ಗುತ್ತಿದಾರರಿಗೆ ಕಾರ್ಯಾದೇಶವನ್ನು ನೀಡಿದೆ. ಆದರೆ, ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿಲ್ಲ.
ಪೈಪ್‌ಲೈನ್‌ಗೆ ಅವಕಾಶ ನೀಡುತ್ತಿಲ್ಲ:
ಕೆಲವು ಪೋಡುಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾ ಗಿದೆ. ಆದರೆ, ಪೈಪ್ ಲೈನ್ ಸೂರಲು ಅರಣ್ಯ ಇಲಾಖೆಯ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಪೈಪ್ ಲೈನ್ ಮಾರ್ಗದಲ್ಲಿ ಮರಗಳಿವೆ ಎಂಬ ನೆಪವೊಡ್ಡುತ್ತಿದ್ದಾರೆ. ರಸ್ತೆಗಳ ಬದಿಯಲ್ಲಿ ಪೈಪ್ ಲೈನ್ ಹಾಕಲು ಕೂಡ ಬಿಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.
“ಕಾಮಗಾರಿ ಸಂಬಂಧ 15 ದಿನಗಳಿಗೊಮ್ಮೆ ಆನ್ಯಾಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುತ್ತಿದೆ. ಈ ಬಗ್ಗೆ ಸಿಎಂ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲಿ ಅನುಮತಿ ಸಿಗುವ ವಿಶ್ವಾಸವಿದೆ,”
-ಸಿ.ಟಿ.ಶಿಲ್ಲಾನಾಗ್, ಜಿಲ್ಲಾಧಿಕಾರಿ,
“ಅರಣ್ಯ ಸಂರಕ್ಷಣೆ ಕಾಯ್ದೆ(1980)ಯು ಅರಣ್ಯದೊಳಗೆ ವಾಸಿಸುವವರಿಗೆ ಕಾಡಿಗೆ ತೊಂದರೆಯಾಗದಂತೆ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳುತ್ತದೆ. ಅರಣ್ಯ ಹಕ್ಕು ಕಾಯ್ದೆ (2006) ಕೂಡ ಗಿರಿಜನರು ಕಾಡಿನೊಳಗೆ ಬದುಕಲು ಅವಕಾಶ ಕಲ್ಪಿಸಿದೆ. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ.”
– ಡಾ.ಸಿ.ಮಾದೇಗೌಡ, ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಬಿಳಿಗಿರಿರಂಗನ ಬೆಟ್ಟ.
“ಕಾಮಗಾರಿ ನಡೆಸಲು ಅನುಮತಿ ಕೋರಿ ಅರಣ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕಾಮಗಾರಿಯ ಅವಶ್ಯಕತೆ ಕುರಿತು ಮನವರಿಕೆ ಮಾಡಿದ್ದೇವೆ. ಅವರು ಪರಿಶೀಲಿಸಿ ಅನುಮತಿ ನೀಡಬೇಕಿದೆ.”
– ಶ್ರೀಪತಿ, ನಿರ್ದೇಶಕರು, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ.