ಗುಂಡ್ಲುಪೇಟೆ: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ
ಗುಂಡ್ಲುಪೇಟೆ: ತಾಲ್ಲೂಕಿನ ಕೆರೆಗಳನ್ನು ತುಂಬಿಸಬೇಕು ಹಾಗೂ ಅರಣ್ಯ ಇಲಾಖೆಗೆ ನೀಡಿರುವ ಕಂದಾಯ ಭೂಮಿಯನ್ನು ಹಿಂಪಡೆಯಬೇಕು, ರೈತರಿಗೆ ಸಾಗುವಳಿನೀಡಿದ ಜಮೀನಿಗೆ ಪಹಣಿ ನೀಡಬೇಕು, ಅರಣ್ಯ ಇಲಾಖೆ ಎನ್‌ಒಸಿ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ಆರಂಭಿಸಲಾಯಿತು.
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ, ೨೦೨೪ ರಲ್ಲಿ ಅಧಿಕಾರಿಗಳು ರೈತರಿಗೆ ಕೆರೆ ತುಂಬಿಸುವ ಆಶ್ವಾಸನೆ ನೀಡಿ ಇನ್ನೂ ನೀರು ತುಂಬಿಸಿಲ್ಲ. ಅವರನ್ನು ನಂಬಬೇಡಿ, ಅವರು ಕೆರೆ ತುಂಬಿಸುವವರೆಗೂ ನಿಮ್ಮ ಧರಣಿ ಕೈಬಿಡಬೇಡಿ ಎಂದು ಕರೆ ನೀಡಿದರು.
ರೈತರು ಪುಡಿಗಾಸಿನ ಆಸೆಗೆ ಜಮೀನು ಮಾರಬಾರದು. ರೈತ ವ್ಯವಸಾಯ ಮಾಡಿದರೆ ಮಾತ್ರ ಎಲ್ಲರಿಗೂ ಅನ್ನ ಸಿಗುವುದು. ರೈತರಿಗೆ ನೀರು, ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಅದು ಸರ್ಕಾರದ ಕೆಲಸ, ಅಧಿಕಾರಿಗಳ ಕೆಲಸ. ಆದ್ದರಿಂದ ಆ ಕೆಲಸ ಆಗುವವರೆಗೂ ಹೋರಾಟ ನಡೆಸಿ ಹಕ್ಕು ಪಡೆದುಕೊಳ್ಳಬೇಕು ಎಂದರು.
೧೧೦ ಕೆರೆಗಳನ್ನು ತುಂಬಿಸುವ ಯೋಜನೆ ಬೇಗ ಅನುಷ್ಠಾನಕ್ಕೆ ತರಬೇಕು ಎಂಬ ಬೇಡಿಕೆ ಇದ್ದು, ಇದರ ಬಗ್ಗೆ ಸದನದಲ್ಲಿ ನಾನು ಮಾತನಾಡುತ್ತೇನೆ. ಅಂತರ್ಜಲ ಕುಸಿದರೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಕೆರೆಗಳನ್ನು ತುಂಬಿಸಲು ಆದ್ಯತೆ ನೀಡಬೇಕು ಎಂದರು. ಸಾಗುವಳಿ ಪಡೆದ ರೈತರಿಗೆ ಒನ್ ಟು ಫೈವ್ ಮಾಡಿಕೊಡಬೇಕು. ಈ ಬಗ್ಗೆ ನಾನು ಸಹ ಸರ್ಕಾರದ ಗಮನ ಸೆಳೆಯುತ್ತೇನೆ. ಕಾಡುಪ್ರಾಣಿಗಳ ಹಾವಳಿ ನಡುವೆ ಸರಿಯಾಗಿ ವಿದ್ಯುತ್ ನೀಡದೆ ಮಧ್ಯರಾತ್ರಿ ನೀಡುವುದರಿಂದ ಮಾನವ-ಪ್ರಾಣಿ ಸಂಘರ್ಷವಾಗುತ್ತಿದೆ ಎಂದರು. ನಂತರ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಹಂಗಳ ಹೋಬಳಿಯಲ್ಲಿ ೨೦೩ ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ತೆರಕಣಾಂಬಿ ಹೋಬಳಿಯಲ್ಲಿ ೯೫೯ ಹೆಕ್ಟೇರ್ ಪ್ರದೇಶ, ಕಸಬಾ ಹೋಬಳಿಯಲ್ಲಿ ೫೭೫ ಹೆಕ್ಟೇರ್ ಪ್ರದೇಶ ಸೇರಿ ತಾಲ್ಲೂಕಿನಲ್ಲಿ\ ೨,೫೨೦ ಹೆಕ್ಟೇರ್ ಅಂದರೆ ೬೩ ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಂಡು ಬಂದಿದ್ದು, ಇನ್ನೆಲ್ಲಿ ಇವರು ಸಾಗುವಳಿ ನೀಡುವುದು? ಎಂದು ಪ್ರಶ್ನಿಸಿದರು.
೨೦೨೨-೨೩ರಲ್ಲಿ ಸಾಗುವಳಿಗೆ ಅರ್ಜಿ ಹಾಕಿದ ೩,೮೩೭ ಜನರಲ್ಲಿ ೧,೫೩೦ ರೈತರ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಅದರಲ್ಲಿ ೧೨ ಜನರಿಗೆ ಮಾತ್ರ ಸಾಗುವಳಿ ವಿತರಣೆ ಮಾಡಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಸಾಗುವಳಿ ಪಡೆಯಲು ಲಂಚಕೊಡುವ ದುಸ್ಥಿತಿ ರೈತರಿಗೆ ಎದುರಾಗಿದೆ ಎಂದರು. ಸಂಘದ ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸರ್ವೋದಯ ಪಕ್ಷದ ಅಧ್ಯಕ್ಷ ಕರುಣಾಕರ್, ರಾಜ್ಯ ಕಾರ್ಯದರ್ಶಿ ಮಹೇಶ್ ಪ್ರಭು, ಮಹೇಶ್ ಕುಮಾರ್, ಕೆಂಪುಗೌಡರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಸಂಘಟನೆ ಕಾರ್ಯದರ್ಶಿ ಸಿದ್ದರಾಜು, ತಾಲ್ಲೂಕು ಅಧ್ಯಕ್ಷ ದಿಲೀಪ್ ಹಂಗಳ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಾಧು ಹಂಗಳ ಮತ್ತಿತರರು ಹಾಜರಿದ್ದರು.
” ಜನರ ಸಮಸ್ಯೆಗಳು ಅರ್ಜಿ ಮುಕ್ತವಾಗಬೇಕು. ಅರ್ಜಿ ಕೊಡುವ ಮುನ್ನ ಸಮಸ್ಯೆಗಳು ಬಗೆಹರಿಯುವಂತೆ ಅಧಿಕಾರಿಗಳು ಕೆಲಸ ಮಾಡಬೇಕು. ರೈತರು ಸ್ಥಳೀಯ ಮಾರುಕಟ್ಟೆ ಸೃಷ್ಟಿಮಾಡಿಕೊಂಡು ನಿಮ್ಮ ಬೆಳೆಯನ್ನು ನೀವೇ ಮಾರುವ ಹಂತಕ್ಕೆ ಹೊಗಬೇಕು. ಬೆಂಬಲ ಬೆಲೆ ನೀವೇ ಸೃಷ್ಟಿಸಿಕೊಳ್ಳಬೇಕು. ರೈತರ ಬೇಡಿಕೆಗಳ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತುತ್ತೇನೆ.”
-ದರ್ಶನ್ ಪುಟ್ಟಣ್ಣಯ್ಯ, ಶಾಸಕ
” ಕೆರೆ ತುಂಬಿಸುವ ಯೋಜನೆ ಯಾವ ರಾಜಕಾರಣಿಯ ಕೊಡುಗೆಯಲ್ಲ. ಅದು ರೈತರ ಹೋರಾಟದ ಫಲ. ಬಂಡೀಪುರದಲ್ಲಿ ಸಫಾರಿ ವಾಹನಗಳ ಸಂಚಾರ, ರೆಸಾರ್ಟ್‌ಗಳಿಂದ ಕಾಡು ಪ್ರಾಣಿಗಳು ನಾಡಿನತ್ತ ಬಂದು ಜನ-ಜಾನುವಾರುಗಳ ಮೇಲೆ ದಾಳಿ ಮಾಡಿ ಫಸಲು ನಾಶ ಮಾಡುತ್ತಿವೆ. ಆದ್ದರಿಂದ ರೆಸಾರ್ಟ್‌ಗಳ ತೆರವು ಹಾಗೂ ಸಫಾರಿ ಬಂದ್ ಮಾಡಬೇಕು.”
-ಮಹದೇವಪ್ಪ ಶಿವಪುರ, ರೈತ ಸಂಘದ ಜಿಲ್ಲಾಧ್ಯಕ್ಷ





