Mysore
28
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ಕೊಡಗಿನಲ್ಲಿ ಆಟೋಗಳಿಗೆ ಜಿಲ್ಲಾ ಪರವಾನಗಿಗೆ ಬೇಡಿಕೆ 

ನವೀನ್ ಡಿಸೋಜ

ಆಟೋ ಚಾಲಕರು,ಮಾಲೀಕರ ಸಂಘದಿಂದ ಸರ್ಕಾರಕ್ಕೆ ಮನವಿ; ಟ್ಯಾಕ್ಸಿ ಚಾಲಕರ ಸಂಘದಿಂದ ಆಕ್ಷೇಪ

ಮಡಿಕೇರಿ:ಕೊಡಗಿನಲ್ಲಿ ಆಟೋ ಚಾಲನೆಗೆ ಜಿಲ್ಲಾ ವ್ಯಾಪ್ತಿಯ ಪರವಾನಗಿ ನೀಡಬೇಕುಎಂದು ಆಟೋ ಚಾಲಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಆಟೋ ರಿಕ್ಷಾಗಳಿಗೆ ಜಿಲ್ಲಾ ಪರವಾನಗಿ ನೀಡಿದರೆ ನಮಗೆ ಸಮಸ್ಯೆಯಾಗುತ್ತದೆ ಎಂದು ಜಿಲ್ಲಾ ಟ್ಯಾಕ್ಸಿ ಚಾಲಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಸದ್ಯ ಜಿಲ್ಲೆಯಲ್ಲಿ ಈ ವಿಚಾರ ಚರ್ಚೆಗೆ ಕಾರಣವಾಗಿದೆ.

ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಜಿಲ್ಲೆಯಾದ್ಯಂತ ಆಟೋ ಚಾಲನೆಗೆ ರಹದಾರಿ ನೀಡಬೇಕೆಂಬ ಒತ್ತಾಯವನ್ನು ಹಿಂದಿನಿಂದಲೂ ಆಟೋ ಚಾಲಕರು ಮಾಡುತ್ತಾ ಬಂದಿದ್ದಾರೆ. ಆದರೆ, ಖಾಸಗಿ ಬಸ್‌ಗಳು, ಟ್ಯಾಕ್ಸಿಗಳಿಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಕೇವಲ ೧೦ ಕಿ.ಮೀ. ವ್ಯಾಪ್ತಿಗೆ ಮಾತ್ರ ಪರ್ಮಿಟ್ ನೀಡಲಾಗಿತ್ತು. ಇತ್ತೀಚೆಗೆ ಈ ಪರವಾನಗಿಯನ್ನು ಹಗಲಲ್ಲಿ೧೫ ಕಿ.ಮೀ. ಮತ್ತು ರಾತ್ರಿ ವೇಳೆ ೨೦ ಕಿ.ಮೀ.ಗೆ ಹೆಚ್ಚಿಸಲಾಗಿದೆ. ಇದೀಗ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯಾದ್ಯಂತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಒತ್ತಾಯಿಸಿದೆ. ಈ ಕುರಿತು ಶಾಸಕ ಎ. ಎಸ್. ಪೊನ್ನಣ್ಣ ಅವರ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಒಂದು ಕಾಲದಲ್ಲಿ ಪೆಟ್ರೋಲ್ ವಾಹನಗಳಿಗೆ ಮಾತ್ರ ಸೀಮಿತವಾಗಿದ್ದ ಕೊಡಗಿನ ಆಟೋ ರಿಕ್ಷಾ ಕ್ಷೇತ್ರದಲ್ಲಿ ಈಗ ಡೀಸೆಲ್, ಎಲ್‌ಪಿಜಿ, ಸಿಎನ್‌ಜಿ ಮತ್ತು ಎಲೆಕ್ಟ್ರಾನಿಕ್ ವಾಹನಗಳೂ ರಸ್ತೆಗಳಿದಿವೆ. ಸಿಎನ್‌ಜಿ ಮತ್ತು ಎಲ್‌ಪಿಜಿ ಫಿಲ್ಲಿಂಗ್ ಸ್ಟೇಷನ್‌ಗಳು ಸದ್ಯ ವಿರಾಜಪೇಟೆ ಮತ್ತು ಕುಶಾಲನಗರದಲ್ಲಿ ಮಾತ್ರ ಇವೆ. ಇಂತಹ ವಾಹನಗಳನ್ನು ಹೊಂದಿರುವವರು ಇಂಧನ ತುಂಬಿಸುವುದಕ್ಕಾಗಿಯೇ ೩೦ ಕಿ.ಮೀ.ನಷ್ಟು ದೂರ ಹೋಗಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು, ಸ್ಥಳೀಯ ಟ್ಯಾಕ್ಸಿ ಚಾಲಕರು ವ್ಯಾಪ್ತಿ ಮೀರಿ ಬಂದಿರುವ ರಿಕ್ಷಾಗಳನ್ನು ನಿಲ್ಲಿಸಿ ಪ್ರಶ್ನೆ ಮಾಡುತ್ತಾರೆ.

ಕೆಲವೊಮ್ಮೆ ಪೊಲೀಸರಿಗೆ ದಂಡವನ್ನೂ ಪಾವತಿಸಬೇಕಾಗುತ್ತಿದೆ ಎಂಬುದು ಆಟೋ ಚಾಲಕರು ಮತ್ತು ಮಾಲೀಕರ ಅಳಲು. ಇದಲ್ಲದೆ ಮಡಿಕೇರಿಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಹುತೇಕ ಆರೋಗ್ಯ ಸೇವೆಗಳು ಲಭ್ಯವಿರುವುದರಿಂದ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಜನರು ಆಸ್ಪತ್ರೆಗೆ ಬರುತ್ತಾರೆ. ಆದರೆ ಇವರೆಲ್ಲರೂ ಟ್ಯಾಕ್ಸಿ ಮಾಡಿಕೊಂಡೋ ಅಥವಾ ಆಂಬುಲೆನ್ಸ್ ನಲ್ಲೋ ಬರಲು ಆರ್ಥಿಕ ಶಕ್ತಿ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಆಟೋಗಳಲ್ಲಿ ಪ್ರಯಾಣಿ ಸುತ್ತಾರೆ. ಹೀಗೆ ಅನಿವಾರ್ಯ ಕಾರಣಗಳಿಂದ ತಮ್ಮ ವ್ಯಾಪ್ತಿ ಮೀರಿ ಸಂಚರಿಸುವ ಆಟೋಗಳಿಗೆ ದಂಡ ವಿಧಿಸಲಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಆಟೋ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚಾರಕ್ಕೆ ಅವಕಾಶ ಮಾಡಿ ಕೊಡಬೇಕು ಎನ್ನುವುದು ಆಟೋ ಚಾಲಕರ ಒತ್ತಾಯವಾಗಿದೆ.

ಕೇರಳದಲ್ಲಿದೆ ರಾಜ್ಯ ಪರವಾನಗಿ..!

ನೆರೆ ರಾಜ್ಯ ಕೇರಳದಲ್ಲೀಗ ಆಟೋಗಳಿಗೆ ರಾಜ್ಯಾದ್ಯಂತ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಎಂದು ಆಟೋ ಚಾಲಕ -ಮಾಲೀಕರ ಸಂಘದ ಅಧ್ಯಕ್ಷ ಮೇದಪ್ಪ ತಿಳಿಸಿದ್ದಾರೆ. ಈ ಹಿಂದೆ ಕೇರಳದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಅವಕಾಶವಿತ್ತು. ಈಗ ರಾಜ್ಯ ವ್ಯಾಪ್ತಿಗೆ ವಿಸ್ತರಿಸಲಾಗಿದೆ. ಇದಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಲ್ಲೂಕು ವ್ಯಾಪ್ತಿ ಸಂಚಾರಕ್ಕೆ ಅನುಮತಿಯಿದೆ. ಆದರೆ, ಕೊಡಗಿನಲ್ಲಿ ಸಣ್ಣ ತಾಲ್ಲೂಕುಗಳಾಗಿರುವುದರಿಂದ ಕೆಲವೊಮ್ಮೆ ಗಡಿದಾಟಿ ಬಂದಾಗ ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಜಿಲ್ಲಾ ವ್ಯಾಪ್ತಿ ಪರ್ಮಿಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

” ಟ್ಯಾಕ್ಸಿಯಲ್ಲಿ ಬರುವವರೇಬೇರೆ ಗ್ರಾಹಕರು. ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲದವರು ಆಸ್ಪತ್ರೆಗೋ, ಕೆಲವೊಮ್ಮೆ ಸಣ್ಣ ಪ್ರಮಾಣದ ಲಗೇಜ್ ಕೊಂಡೊಯ್ಯುವುದಕ್ಕೋ ಆಟೋಗಳಲ್ಲಿ ದೂರ ಪ್ರಯಾಣಮಾಡುತ್ತಾರೆ. ಇಂತಹ ಪ್ರಯಾಣಿಕರಿಂದ ಟ್ಯಾಕ್ಸಿ ಚಾಲಕರಿಗೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ನಮ್ಮ ಸಮಸ್ಯೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಜಿಲ್ಲಾ ಪರ್ಮಿಟ್ ನೀಡಿದರೆ ಆಟೋಚಾಲಕರಿಗೆ ಮತ್ತು ಬಡ ಪ್ರಯಾಣಿಕರಿಗೆ ಅನುಕೂಲವಾಗಲಿದೆ.”

-ಮೇದಪ್ಪ, ಅಧ್ಯಕ್ಷರು,ಕೊಡಗು ಜಿಲ್ಲಾ ಆಟೋ ಮಾಲೀಕರು- ಚಾಲಕರ ಸಂಘ

ಟ್ಯಾಕ್ಸಿ ಚಾಲಕರ ಆಕ್ಷೇಪ..!:

ಆಟೋ ಚಾಲಕರ ಬೇಡಿಕೆಗೆ ಟ್ಯಾಕ್ಸಿ ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ವಾರ್ಷಿಕ ಸಾವಿರಾರು ರೂ. ತೆರಿಗೆ ಪಾವತಿಸಿ ವಾಹನ ಓಡಿಸುವ ನಮಗೆ ಸರಿಯಾದ ಬಾಡಿಗೆ ಇಲ್ಲದೇ ಸಮಸ್ಯೆಯಾಗುತ್ತಿದೆ. ಈ ನಡುವೆ ಸ್ವಂತ ಬಳಕೆ ವಾಹನಗಳಲ್ಲಿ ಅಕ್ರಮವಾಗಿ ಪ್ರವಾಸಿಗರನ್ನು ಕರೆದೊಯ್ಯುವ ಪ್ರಕರಣಗಳೂ ನಡೆಯುತ್ತಿವೆ. ಟ್ಯಾಕ್ಸಿ ಚಾಲಕರ ದುಡಿಮೆಗೆ ಧಕ್ಕೆಯಾಗುತ್ತಿದೆ. ಹೀಗಿರುವಾಗ ಆಟೋ ಚಾಲಕರಿಗೆ ಜಿಲ್ಲಾ ವ್ಯಾಪ್ತಿ (೫೫ ಕಿ.ಮೀ.) ಪರ್ಮಿಟ್ ನೀಡಿದರೆ,ಟ್ಯಾಕ್ಸಿ ಚಾಲಕರಿಗೆ ನಷ್ಟ ಉಂಟಾಗುತ್ತದೆ. ಆದ್ದರಿಂದ ಆಟೋಗಳಿಗೆ ಜಿಲ್ಲಾ ಪರ್ಮಿಟ್ ನೀಡಬಾರದು ಎಂದು ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ಯೂನಿಯನ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು ಒತ್ತಾಯಿಸಿದ್ದಾರೆ.

Tags:
error: Content is protected !!