ಕೆ.ಬಿ.ರಮೇಶನಾಯಕ
ಜಂಬೂಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಳ
ಸ್ಥಳೀಯರಿಗೆ ಶೇ.೭೦, ಹೊರಗಿನವರಿಗೆ ಶೇ.೩೦ರಷ್ಟು ಪ್ರಮಾಣದಲ್ಲೇ ಅದಲು ಬದಲು
* ಕೇರಳ, ತಮಿಳುನಾಡು ಮುಖ್ಯಮಂತ್ರಿಗಳಿಗೂ ಆಹ್ವಾನ
* ಗಣ್ಯರ ಆಗಮನ ಹೆಚ್ಚಳದ ಹಿನ್ನೆಲೆ ಪಾಸ್ಗಳಿಗೆ ಸಮಸ್ಯೆ
* ರಾಯಭಾರಿಗಳು, ಭೂಸೇನೆ, ವಾಯುಸೇನೆ ಅಧಿಕಾರಿಗಳಿಗೂ ಆಹ್ವಾನ
ಮೈಸೂರು: ಲಕ್ಷಾಂತರ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ನಾಡಹಬ್ಬ ದಸರಾಕ್ಕೆ ಹೊಸಸ್ಪರ್ಶ ನೀಡಿರುವ ರಾಜ್ಯ ಸರ್ಕಾರವು, ಜಂಬೂಸವಾರಿ ಮೆರವಣಿಗೆಗೆ ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಿರುವುದರ ಪರಿಣಾಮವಾಗಿ ದಸರಾ ಪಾಸ್ಮ ಹಂಚಿಕೆಯೇ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಹಲವಾರು ವರ್ಷಗಳಿಂದ ಸ್ಥಳೀಯರಿಗೆ ಶೇ.೭೦ ಮತ್ತು ಹೊರಗಿನವರಿಗೆ ಶೇ.೩೦ರಷ್ಟು ಹಂಚಿಕೆಯಾಗುತ್ತಿದ್ದ ಪಾಸ್ಗಳ ಲೆಕ್ಕಾಚಾರ ಈ ಬಾರಿ ಅದಲು ಬದಲಾಗಿದ್ದು, ಈ ಬಾರಿ ಹೊರಗಿನ ವರಿಗೆ ಸಿಂಹಪಾಲು ಹಂಚಿಕೆಯಾಗಿದೆ ಎಂದು ತಿಳಿದುಬಂದಿದೆ. ದಿನದಿಂದ ದಿನಕ್ಕೆ ಜಂಬೂಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ಆಗಮಿಸುವ ಗಣ್ಯರ ಪಟ್ಟಿ ಬೆಳೆಯುತ್ತಲೇ ಇರುವುದರಿಂದ ಅಧಿಕಾರಿಗಳು ಎರಡು ದಿನಗಳಿಂದ ತಲೆಬಿಸಿ ಮಾಡಿಕೊಂಡು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ದಸರೆಗೆ ಆಯಾಯ ಕಾಲಕ್ಕೆ ತಕ್ಕಂತೆ ಹೊಸ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡಿಕೊಂಡು ಬರುತ್ತಿರುವುದರಿಂದ ಅದರ ಸ್ವರೂಪವೂ ಬದಲಾಗಿದೆ. ಈ ಬಾರಿ ಕರಾವಳಿ ಭಾಗದ ಜನಪ್ರಿಯ ಕಂಬಳ ಕ್ರೀಡೆಯನ್ನು ದಸರಾಗೆ ಬೆಸೆಯುವಂತೆ ಮಾಡಲಾಗಿದೆ. ಮತ್ತೊಂದೆಡೆ ಜಂಬೂಸವಾರಿ ವೀಕ್ಷಣೆಗೆ ಬರುವಂತೆ ಮುಖ್ಯಮಂತ್ರಿ ಅವರು ಅನೇಕ ಕ್ಷೇತ್ರದವರಿಗೆ ಆಹ್ವಾನ ನೀಡಿರುವುದು ಈಗ ದೊಡ್ಡ ಚಿಂತೆಗೆ ಕಾರಣವಾಗಿದೆ.
ಅರಮನೆ ಅಂಗಳದಲ್ಲಿ ಕುಳಿತು ವಿಜಯದಶಮಿ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಆಸನದ ವ್ಯವಸ್ಥೆಗಳನ್ನು ಮಾಡಲಿದೆ. ೨೦೧೫ರಲ್ಲಿಯೇ ೨೫ ಸಾವಿರ ಕುರ್ಚಿಗಳನ್ನು ಹಾಕಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಹೆಚ್ಚು ಮಾಡಿದ್ದರಿಂದ ಅಂತಿಮವಾಗಿ ಈಗ ೪೬ ಸಾವಿರ ಆಸನಗಳ ಹಂತಕ್ಕೆ ಬಂದು ನಿಂತಿತು. ಇದರಲ್ಲಿ ಬಹುತೇಕ ಸ್ಥಳೀಯರು ಟಿಕೆಟ್, ಪಾಸ್ಗಳ ಮೂಲಕ ವೀಕ್ಷಣೆ ಮಾಡುತ್ತಿದ್ದರು. ಆದರೆ, ಈ ಬಾರಿ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರ ಯೋಚನಾಲಹರಿಯಿಂದ ಎಲ್ಲ ಲೆಕ್ಕಾಚಾರ ಬದಲಾಗಿದೆ.
ಈ ಬಾರಿ ದಸರಾ ಮಹೋತ್ಸವದಲ್ಲಿ ಕೇರಳಂ, ತೆಲಂಗಾಣದ ಮುಖ್ಯಮಂತ್ರಿಗಳು, ಕೆಲವು ಸಚಿವರು, ಸಿಎಂ ಆಪ್ತ ಕಾರ್ಯದರ್ಶಿಗಳು, ವಿಶೇಷಾಧಿಕಾರಿಗಳು, ಬೇರೆ ಬೇರೆ ದೇಶಗಳ ರಾಯಭಾರಿಗಳು, ಭೂಸೇನೆ, ವಾಯುಸೇನೆ, ನೌಕಾಪಡೆಯ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಮಂತ್ರಿಮಂಡಲದಲ್ಲಿರುವ ೨೮ ಸಚಿವರು, ವಿಧಾನಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು, ಸಭಾಪತಿ, ಉಪ ಸಭಾಪತಿಗಳು, ೨೦೦ ಶಾಸಕರು, ೭೫ ವಿಧಾನಪರಿಷತ್ ಸದಸ್ಯರು, ೨೮ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರಿಗೂ ಈ ಬಾರಿ ಆಹ್ವಾನಿಸುವ ಜತೆಗೆ, ಬಂದು ಭಾಗವಹಿಸುವಂತೆ ಸಿಎಂ ಅವರೇ ಹೇಳಿರುವುದರಿಂದ ಶೇ.೬೦ರಷ್ಟು ಮಂದಿ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೊಟ್ಟ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಲ್ಲದೆ, ಒಂಬತ್ತು ದಿನಗಳ ಕಾಲ ಪ್ರತಿದಿನ ಮೂರು ಸಚಿವರಿಗೆ ದಸರಾ ಜವಾಬ್ದಾರಿ ಹಂಚಿಕೆ ಮಾಡಿದ್ದ ಸಿಎಂ, ಜಂಬೂಸವಾರಿ ದಿನದಂದು ಲಲಿತಮಹಲ್ ಹೋಟೆಲ್ ನಲ್ಲಿ ಔತಣಕೂಟ ಏರ್ಪಡಿಸಿರುವುದರಿಂದ ಎಲ್ಲರೂ ಪಾಲ್ಗೊಳ್ಳುವುದು ಖಚಿತವಾಗಿದೆ.
ಅಲ್ಲದೆ, ಲೋಕಭವನದ ಅಧಿಕಾರಿಗಳು, ಹಿರಿಯ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್, ಐಟಿಎಸ್ ಅಧಿಕಾರಿಗಳು ಕೂಡ ಮೈಸೂರಿನತ್ತ ಮುಖ ಮಾಡಿರುವುದರಿಂದ ಶಿಷ್ಟಾಚಾರದ ಪಟ್ಟಿಯಲ್ಲಿ ಅಂತಹವರ ಹೆಸರುಗಳು ನಮೂದಾಗಿದೆ. ಇನ್ನು ಕನ್ನಡ ಚಲನಚಿತ್ರ ರಂಗದ ನಟ-ನಟಿಯರು ಅರಮನೆ ಅಂಗಳದಿಂದ ಕೆ.ಆರ್.ವೃತ್ತದವರೆಗೆ ಒಂದು ಸುತ್ತು ಅಂಬಾರಿ ಬಸ್ನಲ್ಲಿ ಬಂದು, ವಾಪಸ್ ತಮಗಾಗಿ ಮೀಸಲಿರುವ ಜಾಗದಲ್ಲಿ ಕೂರಲಿದ್ದಾರೆ. ಅಂದಾಜು ೪೦ಕ್ಕೂ ಹೆಚ್ಚು ಹೆಸರಾಂತ ನಟ-ನಟಿಯರು ಭಾಗವಹಿಸುತ್ತಿದ್ದಾರೆ. ಇವರೊಂದಿಗೆ ಕುಟುಂಬದವರು, ಪಿಎ, ಗನ್ಮ್ಯಾನ್ಗಳಿಗೂ ಒಂದೊಂದು ಕಡೆಗಳಲ್ಲಿ ಆಸನಕ್ಕೆ ವ್ಯವಸ್ಥೆ ಇರುತ್ತದೆ. ಮತ್ತೊಂದೆಡೆ ನಿಗಮ-ಮಂಡಳಿ ಅಧ್ಯಕ್ಷರುಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ, ಜಿಲ್ಲಾಧ್ಯಕ್ಷರುಗಳನ್ನೂ ಆಹ್ವಾನಿಸಲಾಗಿದೆ. ವಿಶೇಷವಾಗಿ ಅಧಿಕಾರೇತರ ಉಪ ಸಮಿತಿಗಳಲ್ಲಿ ಒಂದೊಂದು ಸಮಿತಿಗೂ ಅಧ್ಯಕ್ಷರು, ೬ರಿಂದ ೮ ಮಂದಿ ಉಪಾಧ್ಯಕ್ಷರು, ಕನಿಷ್ಠ ೧೩೨ರಿಂದ ೧೮೫ ಮಂದಿ ಸದಸ್ಯರನ್ನು ನೇಮಕ ಮಾಡಿರುವುದರಿಂದ ತಲಾ ಎರಡರಂತೆ ಅಂದಾಜು ಐದು ಸಾವಿರ ಪಾಸ್ ಹಂಚಿಕೆ ಮಾಡಬೇಕಿದೆ. ಗೋಲ್ಡ್ ಕಾರ್ಡ್, ಟಿಕೆಟ್ ಖರೀದಿದಾರರನ್ನು ಹೊರತುಪಡಿಸಿ ಉಳಿದೆಲ್ಲವೂ ಪಾಸ್ ಆಗಿರುವ ಕಾರಣ ಈ ಬಾರಿ ಯಾವ ರೀತಿ ಹಂಚಿಕೆ ಮಾಡಬೇಕು ಎನ್ನುವುದೇ ಅಽಕಾರಿಗಳಿಗೆ ಕಠಿಣ ಸವಾಲಾಗಿದೆ.




