Mysore
29
scattered clouds

Social Media

ಮಂಗಳವಾರ, 10 ನವೆಂಬರ್ 2026
Light
Dark

ಕೈಹಿಡಿದ ಹಿಂಗಾರು; ಕೋಟೆಯಲ್ಲಿ ದೀಪಾವಳಿ ಸಡಗರ 

ಮಂಜು ಕೋಟೆ

ರಾಗಿ, ಹುರುಳಿ, ಉದ್ದು, ಮುಸುಕಿನ ಜೋಳ ಬೆಳೆಗಳು ಉತ್ತಮವಾಗಿ ಬರುವ ನಿರೀಕ್ಷೆಯಲ್ಲಿ ರೈತರು

ಎಚ್.ಡಿ.ಕೋಟೆ: ಮುಂಗಾರು ಮಳೆ ಕೊರತೆಯಿಂದ ಬೆಳೆ ನಷ್ಟವಾದರೂ ಹಿಂಗಾರು ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಈ ಬಾರಿಯ ದೀಪಾವಳಿ ಹಬ್ಬವನ್ನು ರೈತಾಪಿ ಕುಟುಂಬದವರು ಸಡಗರದಿಂದ ಆಚರಿಸುತ್ತಿದ್ದಾರೆ.

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಮಳೆ ಕೊರತೆ ಉಂಟಾಗಿ ರೈತರು ಬೆಳೆದಿದ್ದ ವಿವಿಧ ಬೆಳೆಗಳು ಹಾನಿಗೀಡಾಗಿ ಸಂಕಷ್ಟ ಅನುಭವಿಸುವಂತಾಗಿತ್ತು. ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ಆರಂಭಿಸಿದ್ದ ರೈತರಿಗೆ ಮುಂಗಾರು ಕೈಕೊಟ್ಟಿದ್ದರಿಂದ ಆರ್ಥಿಕ ನಷ್ಟದ ಭೀತಿ ಎದುರಾಗಿತ್ತು. ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಕೂಲಿ ಹಾಗೂ ಇತರೆ ಕೃಷಿ ವೆಚ್ಚಗಳನ್ನು ಭರಿಸಿದ್ದ ರೈತರಿಗೆ ಬೆಳೆ ನಷ್ಟ ಆರ್ಥಿಕ ಹೊರೆಯಾಗಿತ್ತು.

ಆದರೆ ಕಳೆದ ೨ ತಿಂಗಳಿನಿಂದ ಆರಂಭವಾದ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಹಿಂಗಾರು ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಚೈತನ್ಯ ದೊರೆತಿದ್ದು, ಮುಂದಿನ ದಿನಗಳಲ್ಲಿ ರಾಗಿ, ಹುರುಳಿ, ಉದ್ದು, ಮುಸುಕಿನ ಜೋಳ ಹಾಗೂ ತೋಟಗಾರಿಕೆ ಬೆಳೆಗಳು, ಉತ್ತಮವಾಗಿ ಬಂದು ರೈತರ ಕೈಗೆ ಸಿಗುವ ನಿರೀಕ್ಷೆ ಇದೆ. ರೈತಾಪಿ ವರ್ಗದವರಿಗೆ ದೀಪಾವಳಿ ಹಬ್ಬ ವಿಶೇಷವಾಗಿದೆ. ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾದಲ್ಲಿ ತಮ್ಮ ಜಮೀನಿನಲ್ಲಿ ಬೆಳೆದಂತಹ ಬೆಳೆಗಳು ದೀಪಾವಳಿ ಸಂದರ್ಭದಲ್ಲಿ ಉತ್ತಮವಾಗಿ ಬಂದು ಹರ್ಷ ಮೂಡಿಸಲಿದೆ.

ಹೀಗಾಗಿ ಮುಂಗಾರು ಮಳೆ ಕೈಕೊಟ್ಟರೂ ಹಿಂಗಾರು ಮಳೆ ಉತ್ತಮವಾಗಿದ್ದು, ಕೆಲವೊಂದು ಬೆಳೆಗಳು ಉತ್ತಮವಾಗಿ ಬಂದಿರುವುದರಿಂದ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲು ಮುಂದಾಗಿದ್ದಾರೆ.

ತಮ್ಮ ದನ-ಕರುಗಳನ್ನು ಕೆರೆ-ಕಟ್ಟೆಗಳಲ್ಲಿ ತೊಳೆದು ಪೂಜೆ ಸಲ್ಲಿಸಿ, ಜಮೀನುಗಳಲ್ಲಿರುವ ಬೆಳೆಗಳಿಗೆ ಮತ್ತು ಗೊಬ್ಬರದ ಗುಂಡಿಗಳಿಗೆ ದೀಪ ಹಚ್ಚಿ ಗೊಬ್ಬರದ ಪೂಜೆ ಸಲ್ಲಿಸುತ್ತಾರೆ. ಅಲಂಕರಿಸಿದ ದನ ಕರುಗಳಿಗೆ ನೈವೇದ್ಯ ನೀಡಿ ಗ್ರಾಮದಲ್ಲಿ ಮತ್ತು ಪಟ್ಟಣದಲ್ಲಿ ಮೆರವಣಿಗೆ ನಡೆಸುತ್ತಾರೆ.

ಮುಂದಿನ ವರ್ಷ ಮುಂಗಾರು ಮಳೆ ಉತ್ತಮವಾಗಿ ಬೆಳೆಗಳೆಲ್ಲ ಚೆನ್ನಾಗಿ ಬಂದು ರೈತಾಪಿ ಕುಟುಂಬಗಳು ಮುಂದಿನ ದೀಪಾವಳಿಯನ್ನು ಮತ್ತಷ್ಟು ಸಡಗರದಿಂದ ಆಚರಿಸಲಿ ಎಂಬುದು ಎಲ್ಲರ ಆಶಯವಾಗಿದೆ

ಜಾನುವಾರುಗಳಿಗೆ ಪೂಜೆ:  ರೈತರಿಗೆ ದೀಪಾವಳಿ ಹಬ್ಬವು ಕೇವಲ ದೀಪಗಳ ಹಬ್ಬವಲ್ಲ, ಇದೊಂದು ಫಸಲಿನ ಹಬ್ಬ ಹಾಗೂ ಜಾನುವಾರುಗಳನ್ನು ಪೂಜಿಸಿ ಗೌರವಿಸುವ ವಿಶೇಷ ಆಚರಣೆಯಾಗಿದೆ.

 

 

Tags:
error: Content is protected !!