ಪ್ರಸಾದ್ ಲಕ್ಕೂರು
ಚಾಮರಾಜನಗರ: ಖಾಸಗಿ ಕಿರು ಹಣಕಾಸು ಸಂಸ್ಥೆ ಗಳಿಂದ ಸಾಲ ಪಡೆದು ಸಕಾಲಕ್ಕೆ ತೀರಿಸಲಾಗದೆ ಕುಟುಂಬವೊಂದು ಬೀದಿಗೆ ಬಿದ್ದಿದೆ. ಸಾಲ ಮರು ಪಾವತಿಸುವಂತೆ ಹಣಕಾಸು ಸಂಸ್ಥೆಗಳ ಸಿಬ್ಬಂದಿ ನೀಡುತ್ತಿ ರುವ ಒತ್ತಡದಿಂದ ಸಂಕಷ್ಟಕ್ಕೆ ಸಿಲುಕಿದೆ.
ತಾಲ್ಲೂಕಿನ ಕುದೇರು ಗ್ರಾಮದ ನಾಗರಾಜು ಅವರ ಕುಟುಂಬ ಅಕ್ಷರಶಃ ನಲುಗಿ ಹೋಗಿದೆ. ೨ ಹಣಕಾಸು ಸಂಸ್ಥೆಗಳಿಂದ ಒಟ್ಟು ೨. ೭೦ ಲಕ್ಷ ರೂ. ಸಾಲ ಪಡೆದಿರುವ ನಾಗರಾಜು ಮತ್ತು ಪೂಜಾ ದಂಪತಿ, ಮರು ಪಾವತಿ ಸಲು ಆಗದೆ ಪರಿ ತಪಿಸುತ್ತಿದ್ದಾರೆ.
ನಾಗರಾಜು ಅವರದು ಮನೆ ಗಳಿಗೆ ಬಣ್ಣ ಹೊಡೆ ಯುವ ಕಾಯಕ. ಥೈರಾಯ್ಡ್ ಸಮಸ್ಯೆಯಿರುವ ಇವರು ಆಗಾಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದೆ. ಬಣ್ಣ ಹೊಡೆಯುವ ಕೆಲಸದಿಂದ ಸಂಸಾರ ಸಾಕುವುದು ಹಾಗೂ ಸಾಲ ತೀರಿಸುವುದು ಕಷ್ಟವಾಗಿತ್ತು. ಹಣಕಾಸು ಸಂಸ್ಥೆಗಳ ಸಿಬ್ಬಂದಿಗಳ ಕಿರುಕುಳ ತಾಳಲಾಗದೆ ನಾಗರಾಜು ಮತ್ತು ಪೂಜಾ ದಂಪತಿ ಕೆಲಸ ಅರಸಿ ಮೈಸೂರಿಗೆ ಹೋಗಿ ೪ ತಿಂಗಳು ಇದ್ದರು.
ಮನೆಗೆ ಬಾಡಿಗೆ ಪಾವತಿ, ಕಡಿಮೆ ಸಂಪಾದನೆಯಿಂದ ಕುಟುಂಬ ನಿರ್ವಹಣೆಯೇ ಕಷ್ಟವಾಯಿತು. ಮೈಸೂರಿನ ಬದುಕು ದುಬಾರಿಯಾದಾಗ ಸ್ವಗ್ರಾಮಕ್ಕೆ ವಾಪಸ್ ಬಂದಿದ್ದಾರೆ. ಆದರೆ, ನಾಗರಾಜು ಅವರ ತಾಯಿ ಮನೆಯ ಬೀಗ ನೀಡಲು ನಿರಾಕರಿಸಿದ್ದಾರೆ.
ಸಾಲ ನೀಡಿರುವ ಹಣಕಾಸು ಸಂಸ್ಥೆಯ ಸಿಬ್ಬಂದಿ ಪದೇ ಪದೇ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಅವರ ಸಾಲವನ್ನು ತೀರಿಸಿದರೆ ಮಾತ್ರ ಮನೆಯ ಬೀಗ ನೀಡುವೆ ಎಂದಿದ್ದಾರೆ. ಹಾಗಾಗಿ ಸುಮಾರು ಒಂದೂವರೆ ವರ್ಷದಿಂದ ಮನೆಯ ಬಾಗಿಲು ಬಂದ್ ಆಗಿದೆ.
ನಾಗರಾಜು ದಂಪತಿ ಅದೇ ಗ್ರಾಮದಲ್ಲಿರುವ ತಮ್ಮ ಮಾವನ ಮನೆಯನ್ನು ಸೇರಿಕೊಂಡಿದ್ದಾರೆ. ಹಣಕಾಸು ಸಂಸ್ಥೆಗಳ ಸಿಬ್ಬಂದಿಯ ಕಿರುಕುಳದಿಂದ ನಾಗರಾಜು ಸ್ವಂತ ಮನೆಯಿದ್ದರೂ ಮಾವನ ಮನೆಯಲ್ಲಿ ವಾಸ್ತವ್ಯ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಈ ದಂಪತಿಗೆ ಒಬ್ಬ ಮಗನಿದ್ದು, ಶಾಲೆಯಲ್ಲಿ ಓದುತ್ತಿದ್ದಾನೆ. ಫೈನಾನ್ಸ್‌ಗಳ ಕಾಟದಿಂದ ಈ ಕುಟುಂಬ ಬಸವಳಿದಿದೆ.
ಊರು ತೋರೆದ 1o ಕುಟುಂಬ
ಕುದೇರು ಗ್ರಾಮದ ಬಹುತೇಕ ಎಲ್ಲ ಸಮುದಾಯಗಳ ಸುಮಾರು ೧೦ ಕುಟುಂಬಗಳು ಸಾಲದ ಬಾಧೆ ತಾಳಲಾರದೆ ಊರನ್ನೇ ತೊರೆದಿವೆ. ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದ ಕುಟುಂಬಗಳು ಸಿಬ್ಬಂದಿ ಹಾಗೂ ಗುಂಪಿನ ಸದಸ್ಯರ ಕಿರುಕುಳ ಹಾಗೂ ನಿಂದನೆಯಿಂದ ಮನ ನೊಂದು ಊರನ್ನೇ ತೊರೆದು ಮೈಸೂರು, ಬೆಂಗಳೂರು ಸೇರಿವೆ.
ನಲುಗಿದ ರತ್ನಮ್ಮ ಕುಟುಂಬ
ಇದೇ ಗ್ರಾಮದ ರತ್ನಮ್ಮ ಅವರು, ೪ ಹಣಕಾಸು ಸಂಸ್ಥೆಗಳಿಂದ ವಾರ, ಪಾಕ್ಷಿಕ, ತಿಂಗಳ ಕಂತು ಆಧಾರದಲ್ಲಿ ೨. ೮೦ ಲಕ್ಷ ರೂ. ಸಾಲ ಪಡೆದಿದ್ದಾರೆ. ಇವರು ಶೇ. ೫೦ ರಷ್ಟು ಸಾಲ ಮರು ಪಾವತಿಸಿದ್ದಾರೆ. ಬಾಕಿ ತೀರಿಸಲು ಸಾಧ್ಯವಾಗದೆ ನೊಂದಿದ್ದಾರೆ. ರತ್ನಮ್ಮ ಮತ್ತು ಇವರ ಪತಿ ಬಸವರಾಜು ಜೀವನ ನಿರ್ವಹಣೆಗೆ ಕೂಲಿ ಮಾಡುತ್ತಾರೆ. ಇತ್ತೀಚೆಗೆ ಬಸವರಾಜು ಎಡಗಾಲಿನಲ್ಲಿ ಇಸುಬು ಕಾಣಿಸಿಕೊಂಡು ಗಾಯವಾಗಿದೆ. ಕೂಲಿ ಕೆಲಸಕ್ಕೆ ಹೋಗಲಾಗದೆ, ಸಾಲ ಮರು ಪಾವತಿಸಲು ಸಾಧ್ಯವಾಗುತ್ತಿಲ್ಲ. ಹಣಕಾಸು ಸಂಸ್ಥೆಗಳ ಸಿಬ್ಬಂದಿ ಬೆಳಿಗ್ಗೆ, ಮಧ್ಯಾಹ್ನ ಮನೆ ಬಾಗಿಲಿಗೆ ಬಂದು ಕುಳಿತುಕೊಳ್ಳುತ್ತಾರೆ. ರಾತ್ರಿಯಾದರೂ ಹೋಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ವಾರ ಕಂತಿನ ಹಣ ಪಾವತಿಸುವುದಾಗಿ ಗೋಗರೆದರೂ ಕೇಳುವುದಿಲ್ಲ. ಅದೆಲ್ಲ ನಮಗೆ ಬೇಕಿಲ್ಲ. ಪಡೆದಿರುವ ಸಾಲವನ್ನು ಮರುಪಾವತಿ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ರತ್ನಮ್ಮ ಕಣ್ಣೀರು ಹಾಕುತ್ತಾರೆ.