Mysore
23
clear sky

Social Media

ಗುರುವಾರ, 12 ಮಾರ್ಚ್ 2026
Light
Dark

ವಾಣಿಜ್ಯ ಅನಿಲ ಅಭಾವ : ಕೆಲ ಹೋಟೆಲ್‌ಗಳು ಬಂದ್

ಮಧ್ಯಪ್ರಾಚ್ಯ ಯುದ್ಧದ ಬಿಸಿಗೆ ನಲುಗಿದ ಮೈಸೂರು ಹೋಟೆಲ್‌ಗಳು

ಸೌದೆ ಒಲೆಗೆ ಮೊರೆ ಹೋದ ನ್ಯೂ ಲಕ್ಷ್ಮಿ ಭವನ; ಅನಿಲದ ಹಂಗಿಲ್ಲದ ಹನುಮಂತು ಮೆಸ್

  • ಎಚ್. ಎಸ್. ದಿನೇಶ್ ಕುಮಾರ್

ಮೈಸೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಗಂಭೀರ ಪರಿಣಾಮದ ಬಿಸಿ ಇದೀಗ ಮೈಸೂರಿಗೂ ತಟ್ಟಿದೆ. ವಾಣಿಜ್ಯ ಸಿಲಿಂಡರ್ ಕೊರತೆಯಿಂದ ನಗರದ ಕೆಲ ಹೋಟೆಲ್‌ಗಳು ಬಾಗಿಲು ಮುಚ್ಚಿದ್ದರೆ, ಇನ್ನು ಕೆಲವು ಹೊಟ್ಟು, ಬೂಸಾ ಒಲೆಗೆ ಮೊರೆ ಹೋಗುತ್ತಿವೆ.

ಸಾಮಾನ್ಯವಾಗಿ ಒಂದು ಸಾಮಾನ್ಯ ಮಟ್ಟದ ಹೋಟೆಲ್ ನಡೆಯಬೇಕಾದಲ್ಲಿ ಪ್ರತಿ ದಿನ ಕನಿಷ್ಠ ಮೂರು ವಾಣಿಜ್ಯ ಸಿಲಿಂಡರ್‌ಗಳು ಬೇಕು. ಇಲ್ಲಿತನಕ ಕೊರತೆ ಕಂಡುಬಂದಿರಲಿಲ್ಲ. ಅನಿಲ ಸಿಲಿಂಡರ್ ವಿತರಕರು ಹೋಟೆಲ್‌ನವರು ಕೇಳಿದಷ್ಟು ಸಿಲಿಂಡರ್ ಗಳನ್ನು ನೀಡುತ್ತಿದ್ದರು.

ಆದರೆ ಕಳೆದ ಮೂರು ದಿನಗಳಿಂದ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಎದುರಾಗಿದ್ದು, ಬೆಲೆ ಕೂಡ ಹೆಚ್ಚಾಗಿದೆ. ಹೆಚ್ಚುವರಿ ಹಣ ನೀಡುತ್ತೇವೆ ಎಂದರೂ ಸಿಲಿಂಡರ್ ಮಾತ್ರ ದೊರಕುತ್ತಿಲ್ಲ. ಅನಿವಾರ್ಯವಾಗಿ ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ಇದೀಗ ಸರಸ್ವತಿಪುರಂ ಮುಖ್ಯ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಒಂದು ಅಡುಗೆ ಅನಿಲ ಕೊರತೆಯ ಕಾರಣ ಬಂದ್ ಆಗಿದೆ. ಅಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಮುಂದೇನು ಎಂದು ಚಿಂತೆಗೀಡಾಗಿದ್ದಾರೆ.

ಇನ್ನು ಗೃಹಬಳಕೆಯ ಸಿಲಿಂಡರ್ ಗಳನ್ನು ಉಪಯೋಗಿಸಿ ಫುಟ್‌ಪಾತ್ ಹೋಟೆಲ್ ವ್ಯವಹಾರ ನಡೆಸುತ್ತಿದ್ದ ಹಲವರು ಅನಿಲ ಕೊರತೆಯ ಕಾರಣ ಶೇ. 40 ರಷ್ಟು ಹೋಟೆಲ್‌ಗಳನ್ನು ಮುಚ್ಚಿದ್ದಾರೆ. ಗೃಹಬಳಕೆಯ ಸಿಲಿಂಡರ್‌ಗಳನ್ನು ಕದ್ದುಮುಚ್ಚಿ ಮಾರುವವರು ಯಾರೂ ಇಲ್ಲದ ಕಾರಣ ಹೋಟೆಲ್ ಗಳು ಬಂದ್ ಆಗುತ್ತಿವೆ.

ಹೊಟ್ಡಿಗೆ ಬಂತು ಭಾಗ್ಯ: ಈ ಹಿಂದೆ ಅಂದರೆ ಸುಮಾರು 25 ವರ್ಷಗಳಿಂದ 30 ವರ್ಷಗಳ ಹಿಂದೆ ಆರಂಭವಾಗಿದ್ದ ಹೋಟೆಲ್‌ಗಳಲ್ಲಿ ಹೊಟ್ಟು ಬಳಸಿ ಅಡುಗೆ ಮಾಡಲಾಗುತ್ತಿತ್ತು. ಇದಕ್ಕಾಗಿ ದೊಡ್ಡ ಮಟ್ಟದ ಒಲೆಗಳನ್ನು ನಿರ್ಮಿಸಲಾಗುತ್ತಿತ್ತು.

ಕಾಲಾನಂತರದಲ್ಲಿ ಇವುಗಳ ಅಗತ್ಯತೆ ಕಂಡುಬಾರದ ಕಾರಣ ಕೆಲವು ಹೋಟೆಲ್‌ಗಳಲ್ಲಿ ಇಂತಹ ಒಲೆಗಳನ್ನು ಒಡೆದು ಹಾಕಲಾಗಿತ್ತು. ಇದೀಗ ಅವುಗಳನ್ನು ಉಳಿಸಿ ಕೊಂಡಿರುವ ಹೋಟೆಲ್ ಮಾಲೀಕರು ಹೊಟ್ಟಿನ ಒಲೆ ಗಳನ್ನು ದುರಸ್ತಿ ಮಾಡಿಸಿ, ಬಳಸಲು ಮುಂದಾಗಿದ್ದಾರೆ.

ಅದರಂತೆ ಅಗ್ರಹಾರದಲ್ಲಿ ಇರುವ ನ್ಯೂ ಲಕ್ಷ್ಮೀಭವನ ಹೋಟೆಲ್‌ನಲ್ಲಿ ಹೊಟ್ಟಿನ ಒಲೆ ಚಾಲ್ತಿಗೆ ಬಂದಿದೆ. ಮಾಲೀಕ ಪ್ರವೀಣ ಅವರು ಮಂಗಳವಾರ ಬೆಳಿಗ್ಗೆಯಿಂದಲೇ ಹೊಟ್ಟಿನ ಒಲೆಗೆ ಚಾಲನೆ ನೀಡಿ ಅಡುಗೆ ಮಾಡಲು ಆರಂಭಿಸಿದ್ದಾರೆ.

ಈ ಹೋಟೆಲ್‌ಗೆ ಸಿಲಿಂಡರ್ ಸಮಸ್ಯೆ ಯೇ ಇಲ್ಲ:
ಇನ್ನು ನಗರದಲ್ಲಿ ಬೆರಳೆಣಿಕೆಯಷ್ಟು ಹೋಟೆಲ್‌ಗಳ ಮಾಲೀಕರು ಇಂದಿಗೂ ಸೌದೆ ಬಳಸಿ ಅಡುಗೆ ಮಾಡುತ್ತಿದ್ದಾರೆ. ಅಂತೆಯೇ ಅಂತೆಯೇ ನಗರದ ಮಂಡಿ ಮೊಹಲ್ಲಾದಲ್ಲಿ ಇರುವ ಹನುಮಂತು ಪಲಾವ್ ಹೋಟೆಲ್‌ಗೆ ಸಿಲಿಂಡರ್‌ ಅಗತ್ಯವೇ ಇಲ್ಲ.

ಅವರ ಹೋಟೆಲ್ ಮುಂಭಾಗ ಸೌದೆಗಳನ್ನು ಪೇರಿಸಿಟ್ಟಿದ್ದಾರೆ. ವಾರಕ್ಕೆ ಎರಡು ಟನ್ ಸೌದೆ ಬಳಸುತ್ತಾರೆ. ಮಟನ್, ಚಿಕನ್ ಪಲಾವ್ ತಯಾರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಸಿಲಿಂಡರ್ ಬೆಲೆ ಏರಿಕೆಯ ಬಿಸಿ ತಟ್ಟಿಲ್ಲ.

ಬಾಗಿಲು ಮುಚ್ಚುವ ಸಾಧ್ಯತೆ
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದೊರಕುತ್ತಿಲ್ಲದ ಕಾರಣ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಮುಂದಿನ ದಿನಗಳಲ್ಲಿ ಸಿಲಿಂಡರ್ ಕೊರತೆಯ ಕಾರಣ ನಗರದಲ್ಲಿ ಪ್ರತಿಷ್ಠ ಹೋಟೆಲ್‌ಗಳು ಹಾಗೂ ಸಣ್ಣಪುಟ್ಟ ಹೋಟೆಲ್‌ಗಳು ಬಂದ್ ಆದರೂ ಆಶ್ಚರ್ಯವಿಲ್ಲ.

ಈ ಹಿಂದೆ ನಡೆಯುತ್ತಿದ್ದ ಹೋಟೆಲನ್ನು ಬಾಡಿಗೆಗೆ ಪಡೆದಿದ್ದೆ. ಅಲ್ಲಿ ಇದ್ದ ಹೊಟ್ಟಿನ ಒಲೆಯನ್ನು ಹಾಗೆಯೇ ಉಳಿಸಿಕೊಂಡಿದ್ದೆ. ಇದೀಗ ಅದು ನನಗೆ ವರದಾನವಾಗಿದೆ. ಅಡುಗೆ ಅನಿಲ ದೊರಕದಿದ್ದರೂ ಗ್ರಾಹಕರಿಗೆ ಅಗತ್ಯ ಆಹಾರವನ್ನು ಪೂರೈಸಲು ಸಾಧ್ಯವಾಗುತ್ತದೆ. ಅಗತ್ಯವಿರುವ ಹೊಟ್ಟನ್ನು ಈಗಾಗಲೇ ಖರೀದಿಸಲಾಗಿದೆ.
ಪ್ರವೀಣ್, ನ್ಯೂ ಲಕ್ಷ್ಮಿ ಭವನ, ಮೈಸೂರು

ನಾವು ಹಿಂದಿನಿಂದಲೂ ಸೌದೆ ಒಲೆಯಲ್ಲಿಯೇ ಅಡುಗೆ ಮಾಡುತ್ತಿದ್ದೇವೆ. ಇದರಿಂದ ಆರೋಗ್ಯಕ್ಕೂ ಒಳ್ಳೆಯದು ಎಂಬುದು ನಮ್ಮ ಹಿರಿಯರ ಭಾವನೆಯಾಗಿತ್ತು. ಇದೀಗ ಅನಿಲ ಕೊರತೆ ಎಲ್ಲೆಡೆ ಇದೆ. ಆದರೆ, ನಮಗೆ ಯಾವುದೇ ಸಮಸ್ಯೆ ಇಲ್ಲ. ತಿಂಗಳಿಗಾಗುವಷ್ಟು ಸೌದೆ ನಮ್ಮಲ್ಲಿ ದಾಸ್ತಾನು ಇದೆ. ಸದೆಗೂ ಕೊರತೆ ಇಲ್ಲ. ಯಶ್ವಂತ, ಹನುಮಂತು ಹೋಟೆಲ್, ಮೈಸೂರು

Tags:
error: Content is protected !!