ಕೆ.ಬಿ.ರಮೇಶ ನಾಯಕ
ತಿಂಗಳಿಗೆ ೧,೨೦೦ರಿಂದ ೧,೫೦೦ ಪ್ರಾಣಿಗಳಿಗೆ ಸೂಕ್ತ ರೀತಿಯ ಚಿಕಿತ್ಸೆ
ವಾಹನದಲ್ಲಿ ಪಶು ವೈದ್ಯರು ಹಾಗೂ ಅರೆ ತಾಂತ್ರಿಕ ಸಿಬ್ಬಂದಿ ಕೆಲಸ
ಪ್ರತಿದಿನ ಬೆಳಿಗ್ಗೆ ೯ರಿಂದ ಸಂಜೆ ೫ ಗಂಟೆವರೆಗೆ ಕಾರ್ಯನಿರ್ವಹಣೆ
ಕಾಲ್‌ಸೆಂಟರ್ ೧೯೬೨ರ ಸಂಖ್ಯೆಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ಸೇವೆ
ಮೈಸೂರು: ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನದಾಗಿ ರೈತಾಪಿ ವರ್ಗದವರು ಸಾಕುವ ಸಾಕು ಪ್ರಾಣಿಗಳ ಆರೋಗ್ಯ ಹದಗೆಟ್ಟರೆ ತಕ್ಷಣವೇ ಸ್ಪಂದಿಸಲು ಆರಂಭಿಸಿರುವ ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನದಿಂದ ಪ್ರಾಣಿಗಳ ಜೀವ ಉಳಿಯುತ್ತಿರುವುದು ರೈತರಿಗೆ ವರದಾನವಾಗಿದೆ.
ತಮ್ಮ ಸಾಕು ಪ್ರಾಣಿಗಳ ಆರೋಗ್ಯ ಹದಗೆಟ್ಟು ದೂರದ ಪಶು ಚಿಕಿತ್ಸಾ ಆಸ್ಪತ್ರೆ ಅಥವಾ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯುವುದು ತಪ್ಪುವುದರ ಜತೆಗೆ ಹಣವೂ ಉಳಿತಾಯವಾಗುತ್ತಿದೆ.
ಜಾನುವಾರುಗಳು ಅನಾರೋಗ್ಯಕ್ಕೀಡಾದಾಗ ಪಶು ವೈದ್ಯರನ್ನು ಹುಡಕಲು ಪರ ದಾಡುತ್ತಿದ್ದ ರೈತರಿಗೆ ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನ ನೆರವಾಗಿರುವುದರಿಂದ ಮತ್ತಷ್ಟು ಸಂಚಾರಿ ಪಶುಚಿಕಿತ್ಸಾ ಘಟಕ ವಾಹನಗಳಿಗೆ ಬೇಡಿಕೆ ಉಂಟಾಗಿದೆ. ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ಇಂದಿಗೂ ಹೈನುಗಾರಿಕೆಯನ್ನು ನಂಬಿ ಕೋಟ್ಯಂತರ ಜನರು ಜೀವನ ಮಾಡುತ್ತಿದ್ದಾರೆ. ಅದರಲ್ಲೂ ಪಶು ಭಾಗ್ಯ ಯೋಜನೆಯಿಂದ ಹಸು ಸಾಕಲು ಸಾಲ ಸೌಲಭ್ಯ ದೊರೆಯುತ್ತಿದೆ. ಜೊತೆಗೆ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆದ ಬಳಿಕ ಕುರಿ ಸಾಕಾಣಿಕೆ ಜಾಸ್ತಿಯಾಗಿದೆ.
ಜಾನುವಾರು ಸಾಲದಂತೆ ಕುರಿ ಸಾಕಾಣಿಕೆಗೂ ೫೦,೦೦೦ ದಿಂದ ೩ ಲಕ್ಷ ರೂ.ವರೆಗೆ ಸಬ್ಸಿಡಿ ರೂಪದಲ್ಲಿ ಸಾಲ, ಸೌಲಭ್ಯ ನೀಡುತ್ತಿರುವುದರಿಂದ ಹಸು, ಕುರಿ ಸಾಕುವವರ ಸಂಖ್ಯೆಯು ಹೆಚ್ಚಾಗಿದೆ. ಇದರಿಂದಾಗಿ ಸಾಕು ಪ್ರಾಣಿಗಳ ಆರೋಗ್ಯ ಕಾಪಾಡಲು ಹೋಬಳಿ, ಗ್ರಾಪಂ ಮಟ್ಟದಲ್ಲಿ ಪಶು ಚಿಕಿತ್ಸಾ ಕೇಂದ್ರಗಳನ್ನು ತೆರೆದು ಚಿಕಿತ್ಸೆ ಕೊಡಲಾಗುತ್ತಿದೆ.
ಕಾಲುಬಾಯಿ ಜ್ವರ, ಚರ್ಮಗಂಟು ರೋಗ, ಕರಳು ಬೇನೆ, ಗಂಟಲು ಬೇನೆ, ಚಪ್ಪೆರೋಗ ಕಂಡುಬಂದಾಗ ಸಾಮೂಹಿಕವಾಗಿ ಲಸಿಕೆ ಕೊಡಬೇಕಾಗಿದೆ. ಜೊತೆಗೆ ದಿಢೀರನೇ ಅಸ್ವಸ್ಥವಾಗುವ ಸಾಕು ಪ್ರಾಣಿಗಳಿಗೆಸಕಾಲದಲ್ಲಿ ಚಿಕಿತ್ಸೆ ನೀಡಿದರೆ ಜೀವ ಉಳಿಯುತ್ತದೆ ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಮೈಸೂರು ಜಿಲ್ಲೆಯಲ್ಲಿ ಒಟ್ಟು ೧೦ ಕೇಂದ್ರಗಳನ್ನು ಮುಖ್ಯವಾಗಿಟ್ಟುಕೊಂಡು ಒಂದೊಂದು ಸಂಚಾರಿ ಪಶುಚಿಕಿತ್ಸಾ ಘಟಕ ವಾಹನ ಸೇವೆ ಆರಂಭಿಸಿದೆ.
ತಿಂಗಳಿಗೆ ೧,೨೦೦ರಿಂದ ೧,೫೦೦ ಪ್ರಾಣಿಗಳಿಗೆ ಚಿಕಿತ್ಸೆ: ಜಿಲ್ಲೆಯ ಎಚ್.ಡಿ.ಕೋಟೆ, ನಂಜನಗೂಡು, ಕೆ.ಆರ್.ನಗರ, ಸಾಲಿಗ್ರಾಮ, ಮೈಸೂರು, ಪಿರಿಯಾಪಟ್ಟಣ, ಹುಣಸೂರು, ಸರಗೂರು, ತಿ.ನರಸೀಪುರ ಹಾಗೂ ಬೆಟ್ಟದಪುರದಲ್ಲಿ ಚಿಕಿತ್ಸಾ ಘಟಕ ವಾಹನವಿದ್ದು, ಪ್ರತಿ ತಿಂಗಳು ಅಂದಾಜು ೧,೨೦೦ರಿಂದ ೧,೫೦೦ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ದನ, ಎಮ್ಮೆ, ಹಸು, ಕುರಿ, ಮೇಕೆಗಳಿಗೆ ಚಿಕಿತ್ಸೆ ಕೊಡಲಾಗು ತ್ತದೆ. ಇದರಿಂದಾಗಿ ಅಚಾನಕ್ಕಾಗಿ ಆಗುವ ತೊಂದರೆ ಗಳೂ ತಪ್ಪಿದಂತಾಗಿದೆ.
ಸೂಕ್ತ ರೀತಿಯ ಚಿಕಿತ್ಸೆ ವ್ಯವಸ್ಥೆ: ಜಿಲ್ಲೆಯಾದ್ಯಂತ ಒಟ್ಟು ೧೦ ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಗಳಿದ್ದು, ನುರಿತ ಪಶು ವೈದ್ಯರು ಹಾಗೂ ಅರೆ ತಾಂತ್ರಿಕ ಸಿಬ್ಬಂದಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ವಾಹನಗಳು ಪ್ರತಿದಿನ ಬೆಳಿಗ್ಗೆ ೯ರಿಂದ ಸಂಜೆ ೫ ಗಂಟೆವರೆಗೆ ಕಾರ್ಯನಿರ್ವಹಿಸಲಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬೆಂಗಳೂರು ಆಯುಕ್ತಾಲಯದಲ್ಲಿ ಮೊಬೈಲ್ ವೆಟರ್ನರಿ ಯೂನಿಟ್ ಕಾಲ್ ಸೆಂಟರ್ ಅನ್ನು ಸ್ಥಾಪಿಸಿದ್ದು, ಕಾಲ್ ಸೆಂಟರ್ ೧೯೬೨ ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಮನೆ ಬಾಗಿಲಿಗೇ ಬಂದು ಸೇವೆ ಒದಗಿಸಲಾಗುತ್ತಿದೆ.
ಜಾನುವಾರುಗಳ ಮಾಲೀಕರು ಮೊಬೈಲ್ ವೆಟರ್ನರಿ ಯೂನಿಟ್ ಕಾಲ್ ಸೆಂಟರ್‌ಗೆ ಕಾಲ್ ಮಾಡಿದಾಗ ಕಾಲ್ ಸೆಂಟರ್ ಕಾರ್ಯನಿರ್ವಾಹಕರು ಕರೆಯನ್ನು ಸ್ವೀಕರಿಸಿದ ನಂತರ ಪ್ರತಿಯೊಂದು ಪಶುವೈದ್ಯಕೀಯ ಸೇವೆಗೆ ಡಾಕೆಟ್ ನಂಬರ್ ಸೃಜಿಸಿ ಸಂಚಾರಿ ಪಶುಚಿಕಿತ್ಸಾ ಘಟಕ ವಾಹನಗಳಲ್ಲಿ ಕಾರ್ಯ ನಿರ್ವಹಿಸುವ ಪಶುವೈದ್ಯರುಗಳಿಗೆ ಕರೆಯನ್ನು ವರ್ಗಾಯಿಸುತ್ತಾರೆ.
ಅಲ್ಲಿಂದ, ತಕ್ಷಣವೇ ಸಂಬಂಧಪಟ್ಟ ಸಂಚಾರಿ ಪಶುಚಿಕಿತ್ಸಾ ಘಟಕ ವಾಹನ ಪಶುವೈದ್ಯರಿಗೆ ರವಾನೆಯಾಗುತ್ತಿದ್ದಂತೆ ಅರ್ಧಗಂಟೆಯೊಳಗೆ ದೂರವಾಣಿ ಕರೆ ಮಾಡಿದ್ದ ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
” ಜಿಲ್ಲೆಯಲ್ಲಿ ಸಂಚಾರಿ ಪಶುಚಿಕಿತ್ಸಾ ಘಟಕ ವಾಹನಗಳು ಆರಂಭವಾದ ಮೇಲೆ ದಿಢೀರನೇ ಅಸ್ವಸ್ಥಗೊಳ್ಳುವ ಸಾಕು ಪ್ರಾಣಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿರುವುದರಿಂದ ಶೇ.೨೦ರಷ್ಟು ಸಾವಿನ ಪ್ರಮಾಣ ಕಡಿಮೆಯಾಗಿದೆ. ತಿಂಗಳಿಗೆ ೧,೫೦೦ ಸಾಕುಪ್ರಾಣಿಗಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ದೊಡ್ಡ ಜಿಲ್ಲೆಯಾಗಿರುವ ಕಾರಣ ಮತ್ತೆ ಐದು ವಾಹನಗಳನ್ನು ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ.”
-ಸಿ.ನಾಗರಾಜು, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ.





