ಮೋಡ ಕವಿದ ವಾತಾವರಣ: ಕಾಫಿ ಒಣಗಿಸಲು ಬಿಸಿಲಿನ ನಿರೀಕ್ಷೆಯಲ್ಲಿ ಬೆಳೆಗಾರರು; ಮಳೆ ಬಿದ್ದರೆ ಮತ್ತಷ್ಟು ತೊಂದರೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹಲವೆಡೆ ಕಾಫಿ ಬೆಳೆ ಹಣ್ಣಾಗಿರುವುದರಿಂದ ಬೆಳೆಗಾರರು ಸಮಸ್ಯೆ ಎದುರಿಸುವಂತಾಗಿದೆ. ಕಾರ್ಮಿಕರ ಕೊರತೆ, ರಸಗೊಬ್ಬರದ ದರ ಏರಿಕೆ, ಹವಾಮಾನ ವೈಪರೀತ್ಯ, ವನ್ಯಮೃಗಗಳ ಹಾವಳಿ ಸೇರಿದಂತೆ ಹಲವಾರು ಸಮಸ್ಯೆಗಳ ನಡುವೆಯೂ ಬೆಳೆಗಾರರು ಕಾಫಿ ಬೆಳೆ ಯುತ್ತಿದ್ದಾರೆ. ಒಂದಲ್ಲ ಒಂದು ಕಾರಣದಿಂದ ಪ್ರತಿವರ್ಷ ಕಾಫಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಈ ಬಾರಿ ನವೆಂಬರ್ ತಿಂಗಳಿನಲ್ಲಿಯೂ ಮಳೆಯಾದ ಹಿನ್ನೆಲೆಯಲ್ಲಿ ಅರೆಬಿಕಾ ಕಾಫಿ ಬೆಳೆಗಾರರಿಗೆ ತೊಂದರೆಯಾಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರೆಬಿಕಾ ಕಾಫಿ ಬೆಳೆಯಲಾಗುತ್ತದೆ. ಅರೆಬಿಕಾ ಕಾಫಿ ಈಗಾಗಲೇ ಹಣ್ಣಾಗಿದ್ದು, ನವೆಂಬರ್‌ನಿಂದ ಡಿಸೆಂಬರ್ ಒಳಗೇ ಬೆಳೆಯನ್ನು ಕೊಯ್ಲು ಮಾಡ ಬೇಕಾಗುತ್ತದೆ. ಕೊಯ್ದ ಕಾಫಿ ಹಣ್ಣನ್ನು ಪಲ್ಪರ್ ಮಾಡಿ ಕಣದಲ್ಲಿ ಕಾಫಿ ಬೀಜವನ್ನು ಪಾರ್ಚಿಮೆಂಟ್ ಮಾಡಿ ಒಣಗಿಸಬೇಕಾಗುತ್ತದೆ. ಆದರೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಳೆಯಿಂದ ಕಾಫಿ ಬೆಳೆ ಒಣಗಿಸಲು ಸಾಧ್ಯವಾಗದೆ ಬೆಳೆಗಾರರು ಸಮಸ್ಯೆ ಎದುರಿಸುವಂತಾಗಿದೆ. ಸಾಮಾನ್ಯವಾಗಿ ೧ ರಿಂದ ೧೦ ಎಕರೆಯಷ್ಟು ಕಾಫಿ ತೋಟ ಹೊಂದಿರುವ ಬೆಳೆಗಾರರು ಬೇಸಿಗೆಯಲ್ಲಿ ಕೊಳವೆ ಬಾವಿ ನೀರಾವರಿ ಮೂಲಕ ಕಾಫಿಗಿಡಕ್ಕೆ ನೀರು ಹಾಯಿಸುತ್ತಾರೆ.
ಇದನ್ನು ಓದಿ: ‘ಯುವಕರು ಉಜ್ವಲ ಭವಿಷ್ಯ ಬಿಟ್ಟು ನಶೆಯ ಚಟಕ್ಕೆ ಬಲಿ’
ಹೀಗಾಗಿ ಕಾಫಿಗಿಡದಲ್ಲಿ ಬೇಗ ಹೂ ಬಿಟ್ಟುಮಿಡಿಯಾಗುತ್ತದೆ. ನವೆಂಬರ್ ವೇಳೆಗೆ ಕಾಫಿ ಹಣ್ಣಾಗಿ ಅದನ್ನು ಕೊಯ್ಲು ಮಾಡುವ ಅನಿವಾರ್ಯತೆ ಇರುತ್ತದೆ. ಆದರೆ ನವೆಂಬರ್ ತಿಂಗಳಿನಲ್ಲೇ ಅಕಾಲಿಕ ಮಳೆಯಾದ ಹಿನ್ನೆಲೆಯಲ್ಲಿ ಕಾಫಿಯನ್ನು ಪಲ್ಪರ್ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಪಲ್ಪರ್ ಮಾಡಿದ ಕಾಫಿ ಬೀಜವನ್ನು ಒಣಗಿಸಲೂ ಸಾಧ್ಯವಾಗದೆ ಸಣ್ಣ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗುತ್ತಿದೆ. ಬಹಳಷ್ಟು ಸಣ್ಣಸಣ್ಣ ಬೆಳೆಗಾರರು ಕಾಫಿ ಹಣ್ಣನ್ನು ಕೊಯ್ಯುತ್ತಿದ್ದಾರೆ. ಇನ್ನೂ ಕೆಲವರು ಹಣ್ಣನ್ನು ಪಲ್ಪರ್ ಮಾಡಿ ಬೀಜವನ್ನು ಕಣದಲ್ಲಿ ಒಣಗಿಸಲು ಬಿಟ್ಟಿದ್ದಾರೆ. ಅನೇಕರು ಕಾಫಿ ಕೊಯ್ಲು ಮಾಡದೆ ಗಿಡದಲ್ಲೇ ಬಿಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಕಾಫಿ ಬೀಜ ಹಾಳಾಗಿದೆ. ಈಗಿನ ಹವಾಮಾನ ಸೂಚನೆಯಂತೆ ಒಂದು ವೇಳೆ ಮಳೆ ನಾಲ್ಕೈದು ದಿನಗಳ ಕಾಲ ಮುಂದುವರಿದರೆ ಕಾಫಿ ಬೆಳೆಗಾರರು ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಸೋಮವಾರಪೇಟೆ ತಾಲ್ಲೂಕು ಮಾತ್ರವಲ್ಲದೆ ಮಾರ್ಚ್ ತಿಂಗಳಲ್ಲೇ ಉತ್ತಮ ಮಳೆಯಾದ ಭಾಗಗಳಲ್ಲಿ ಮತ್ತು ಕೃತಕನೀರಾವರಿ ಒದಗಿಸಿದ ತೋಟಗಳಲ್ಲಿ ಕಾಫಿ ಹಣ್ಣಾಗಿ ನೆಲಕ್ಕುರುಳುತ್ತಿದೆ. ಕಾಫಿ ಬೆಳೆ ಕೊಯ್ಲು ಮಾಡದೆ ಹಾಗೆಯೇ ಬಿಟ್ಟರೆ ಸಂಪೂರ್ಣ ನೆಲಕಚ್ಚಲಿದೆ. ಕೊಯ್ಲು ಮಾಡಿದರೆ ಮೋಡ ಕವಿದ ವಾತಾವರಣದಿಂದ ಸಕಾಲದಲ್ಲಿ ಒಣಗಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕೆಲವೆಡೆ ಒಣಗಲು ಹಾಕಿದ ಕಾಫಿ ಬೆಳೆಯು ಮಳೆ ನೀರಿಗೆ ನೆನೆದು ಕೊಳೆತ ಚಿತ್ರಣವೂ ಕೆಲದಿನಗಳ ಹಿಂದೆ ಕಂಡುಬಂದಿದೆ. ” ಕಾಫಿ ಬೆಳೆಗಾರರು ಪ್ರತಿ ವರ್ಷ ಒಂದಲ್ಲಾ ಒಂದು ಸಮಸ್ಯೆಎದುರಿಸುವಂತಾಗಿದೆ. ಪ್ರಾರಂಭದಲ್ಲಿ ಹೂ ಅರಳಲು ಉತ್ತಮ ಮಳೆ ಆಗಿತ್ತು.
ನಂತರ ಕಾಯಿ ಸರಿಯಾಗಿ ಆಗಿತ್ತು. ನಂತರ ಕಾಯಿ ಕಟ್ಟುವ ವೇಳೆ ಮತ್ತೆ ಮಳೆ ಆಯಿತು. ಇದರಿಂದ ಮತ್ತೆ ಕಾಯಿ ನೆಲಕಚ್ಚಿತ್ತು, ಇದೀಗ ಮತ್ತೆ ಮಳೆಯ ಸೂಚನೆ ಇರುವುದರಿಂದ ಉಳಿದ ಕಾಫಿ ಹಣ್ಣು ನೆಲಕ್ಕುರುಳುತ್ತವೆ. ಇದರಿಂದ ತೀರ ಸಂಕಷ್ಟ ಎದುರಿಸಬೇಕಾಗುತ್ತದೆ.” -ಶರತ್ ಶೇಖರ್, ಕೃಷಿಕರು, ಸೋಮವಾರಪೇಟೆ ” ಪ್ರಸ್ತುತ ಹವಾಮಾನ ಬದಲಾವಣೆಯ ಪರಿಸ್ಥಿತಿಗೆ ಬೆಳೆಗಾರರು ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಮಳೆಯಿಂದ ಕಾಫಿ ಒಡೆದು ಉದುರುವ ಸಾಧ್ಯತೆಯಿದ್ದು, ಬಿದ್ದ ಕಾಫಿ ಬೆಳೆಯನ್ನು ಹೆಕ್ಕಿ ಒಣಗಿಸಬೇಕಿದೆ. ವರ್ಷವಿಡೀ ಕಾಫಿ ತೋಟದಲ್ಲಿ ದುಡಿದು ಅಂತಿಮ ಘಟ್ಟದಲ್ಲಿ ನಷ್ಟ ಅನುಭವಿಸುವುದನ್ನು ತಪ್ಪಿಸಲು ಡ್ರೈಯರ್‌ನಂತಹ ಯೋಜನೆಯನ್ನು ಪಡೆದುಕೊಳ್ಳಬೇಕು. ಇದಕ್ಕೆ ಸಬ್ಸಿಡಿ ಕೂಡ ದೊರೆಯಲಿದೆ.” -ಚಂದ್ರಶೇಖರ್, ಉಪನಿರ್ದೇಶಕರು, ಕಾಫಿ ಮಂಡಳಿ, ಕೊಡಗು ” ಅಕಾಲಿಕ ಮಳೆಯಿಂದ ಸಣ್ಣ ಪುಟ್ಟ ಕಾಫಿ ಬೆಳೆಗಾರರಿಗೆ ತುಂಬಾಸಮಸ್ಯೆಯಾಗುತ್ತಿದೆ. ಈಗ ನಮಗೆ ಕಾಫಿ ಹಣ್ಣು ಕೊಯ್ಲು ಮತ್ತು ಹಣ್ಣು ಪಲ್ಪರ್ ಮಾಡುವ ಸಮಯವಾಗಿದೆ. ಈಗಾಗಲೇ ಅಕಾಲಿಕ ಮಳೆಯಿಂದಾಗಿ ಕಾಫಿ ಹಣ್ಣನ್ನುಪಲ್ಪರ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ವರ್ಷವಂತೂ ಪ್ರತಿ ತಿಂಗಳು ಎಡೆ ಬಿಡದೆ ಮಳೆ ಬಿದ್ದಿರುವುದರಿಂದ ಕಾಫಿ ಬೆಳೆಗಾರರಿಗೆ ಬಾರಿ ಹೊಡೆತ ಬಿದ್ದಿದೆ.” -ಉಮಾಶಂಕರ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರು, ಶನಿವಾರಸಂತೆ
-ನವೀನ್ ಡಿಸೋಜ





