ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರುವ ದಿನಗಳು ಸನ್ನಿಹಿತ ಬನ್ನಿಮಂಟಪ ಬಸ್ ಡಿಪೋದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ನಿಲ್ದಾಣ
ಏನೇನು ಬದಲಾವಣೆ?
* ಹೊಸ ನಿಲ್ದಾಣದಲ್ಲಿ ಏಕ ಕಾಲಕ್ಕೆ ೭೫ ಬಸ್‌ಗಳನ್ನು ನಿಲುಗಡೆ ಮಾಡಬಹುದು
* ಈಗಿನ ಬಸ್ ನಿಲ್ದಾಣದಲ್ಲಿ ಏಕಕಾಲಕ್ಕೆ ೨೫ ರಿಂದ ೩೦ ಬಸ್ ನಿಲ್ಲಿಸಬಹುದು
* ಹಾಲಿ ನಿಲ್ದಾಣದ ಮೂರರಷ್ಟು ದೊಡ್ಡದಾಗಿರುತ್ತದೆ
* ಹಾಲಿ ಗ್ರಾಮಾಂತರ ನಿಲ್ದಾಣಕ್ಕೆ ೧೨೦೦ ಬಸ್‌ಗಳ ಸಂಚಾರ ತಗ್ಗುತ್ತದೆ
* ೧೩೦೦ ಟ್ರಿಪ್ ಹೊಸ ನಿಲ್ದಾಣಕ್ಕೆ ವರ್ಗಾವಣೆಯಾಗುತ್ತದೆ
ಮೈಸೂರು: ಅತಿ ವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಕನಸು ಕೊನೆಗೂ ನನಸಾಗುತ್ತಿದ್ದು, ೧೨೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಗ್ರಾಮಾಂತರ ಬಸ್ ನಿಲ್ದಾಣ ಕಾಮ ಗಾರಿಗೆ ಜುಲೈ ೧೯ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಇದರಿಂದಾಗಿ ಮೈಸೂರು- ಬೆಂಗಳೂರು ನೀಲಗಿರಿ ರಸ್ತೆಯಲ್ಲಿರುವ ಸಬ್ ಅರ್ಬನ್ಬಸ್ ನಿಲ್ದಾಣ ಮುಂದಿನ ದಿನಗಳಲ್ಲಿ ಸ್ಥಳಾಂತರವಾಗುವುದು ಖಚಿತವಾಗಿದೆ. ಈಗಾಗಲೇ ಕಾಮಗಾರಿ ಆರಂಭಕ್ಕೆ ತಾಂತ್ರಿಕ ಮತ್ತು ಆಡಳಿತಾತ್ಮಕ ಒಪ್ಪಿಗೆ ದೊರೆತು ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಜು.೧೨ರಂದು ನಗರದ ಭವಿಷ್ಯದ ಬಹುದೊಡ್ಡ ಮೈಲಿಗಲ್ಲು ಎಂದು ಹೇಳಲಾಗುತ್ತಿರುವ ಬೃಹತ್ ಗ್ರಾಮಾಂತರ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಗೆ ದಿನಾಂಕ ನಿಗದಿಗೊಳಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ತಿಳಿಸಿದ್ದರು. ಆದರೆ, ಆ ದಿನದಂದುಪ್ರಮುಖವಾದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಯೋಜನೆಯಲ್ಲಿ ಏನೇನು ರಲಿದೆ :ಸೆಲ್ಲರ್‌ನಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ನೆಲ ಮಾಳಿಗೆಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಮೊದಲ ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತದೆ. ನಗರ ಬಸ್ ನಿಲ್ದಾಣದ ಬಸ್‌ಗಳು ಇಲ್ಲಿಗೆ ಬಂದು ಹೋಗುತ್ತವೆ. ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ತುಮಕೂರು ಭಾಗಕ್ಕೆ ಸಂಚರಿಸುವ ಬಸ್‌ಗಳು ಹಾಗೂ ಅಂತಾರಾಜ್ಯಗಳಿಗೆ ಹೋಗುವ ಬಸ್‌ಗಳನ್ನು ಹೊಸ ನಿಲ್ದಾಣಕ್ಕೆ ವರ್ಗಾಯಿಸಲಾಗುವುದು. ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳಾದ ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳ ಬಸ್‌ಗಳು ಹಾಲಿ ಗ್ರಾಮಾಂತರ ಬಸ್ ನಿಲ್ದಾಣದಿಂದಲೇ ಸಂಚರಿಸಲಿವೆ.
ತಾತ್ಕಾಲಿಕ ಮಾರ್ಗ ನಿಗದಿ: ಬಸ್‌ಗಳು ಬಸ್ ನಿಲ್ದಾಣಕ್ಕೆ ಯಾವ ಮಾರ್ಗದಲ್ಲಿ ಬರಬೇಕು ಮತ್ತು ಹೇಗೆ ಹೊರ ಹೋಗಬೇಕು ಎಂಬುದರ ಕುರಿತು ಪೊಲೀಸ್ ಇಲಾಖೆಯೊಂದಿಗೆ ಚರ್ಚೆಯಾಗಬೇಕಿದೆ. ಸದ್ಯಕ್ಕೆ ಜಂಬೂಸವಾರಿತೆರಳುವ ಬನ್ನಿಮಂಟಪ ರಸ್ತೆಗೆ ಸಂಪರ್ಕಿಸದಂತೆ ಬಸ್ಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ತಾತ್ಕಾಲಿಕ ಮಾರ್ಗವೊಂದನ್ನು ಗುರುತಿಸಲಾಗಿದೆ. ನಿಲ್ದಾಣದಿಂದ ಹೊರಡುವ ಬಸ್‌ಗಳು ಸಂತ ಫಿಲೋಮಿನಾ ಕಾಲೇಜು ಬಳಿ ಮೈಸೂರು-ಬೆಂಗಳೂರು ರಸ್ತೆಗೆ ಸೇರಿಕೊಳ್ಳುವಂತೆ ಹಾಗೂ ಬೆಂಗಳೂರು ಕಡೆಯಿಂದ ಬರುವ ಬಸ್‌ಗಳು ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜು ಕಡೆಯಿಂದ ನಿಲ್ದಾಣಕ್ಕೆ ಬರುವಂತೆ ಮಾರ್ಗ ಗುರುತಿಸಲಾಗಿದೆ.
ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಅಗ್ರಸ್ಥಾನದಲ್ಲಿರುವ ಮೈಸೂರು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ೨೦೨೪ನೇ ಸಾಲಿನಲ್ಲಿ ನವೆಂಬರ್ ಅಂತ್ಯಕ್ಕೆ ಮೈಸೂರು ಅರಮನೆಗೆ ೨೬.೪೦ ಲಕ್ಷ ಮಂದಿ,ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ೨೪.೩೪ ಲಕ್ಷ ಮಂದಿ ಹಾಗೂ ಚಾಮುಂಡಿ ಬೆಟ್ಟಕ್ಕೆ ೩೭.೫೨ ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಮಾತ್ರವಲ್ಲದೇ ವರ್ಷಕ್ಕೆ ೯ ಕೋಟಿ ಜನರು ಮೈಸೂರು ಕೆಎಸ್‌ಆರ್‌ಟಿಸಿ ಗ್ರಾಮಾಂತರ ಸಾರಿಗೆ ಸೇವೆ ಹಾಗೂ ೬ ಕೋಟಿ ಮಂದಿ ನಗರ ಸಾರಿಗೆ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸಾರಿಗೆ ಸೇವೆ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ.
ಹೀಗಾಗಿ ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳ ಮೇಲಿನ ಒತ್ತಡ ಹೆಚ್ಚಾಗಿದೆ. ಹಾಗಾಗಿ ಈ ಅಗತ್ಯತೆಗೆ ತಕ್ಕಂತೆ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಮೈಸೂರಿನ ಬನ್ನಿಮಂಟಪದಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋ ಆವರಣದಲ್ಲಿರುವ ಇಲಾಖೆಗೆ ಸೇರಿದ ೬೧ ಎಕರೆ ಜಾಗದ ಪೈಕಿ ೧೪ ಎಕರೆ ಪ್ರದೇಶದಲ್ಲಿ೧೨೦ ಕೋಟಿ ರೂ. ವೆಚ್ಚದಲ್ಲಿ ಗ್ರಾಮಾಂತರ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ.
” ಶಂಕುಸ್ಥಾಪನೆಗೆ ದಿನಾಂಕ ನಿಗದಿಯಾಗಿತ್ತಾದರೂ ಸಿಎಂ ಅವರ ತುರ್ತು ಕಾರ್ಯದಿಂದ ಜು.೧೯ಕ್ಕೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಸಬ್ ಅರ್ಬನ್ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡುವುದು ಅನಿವಾರ್ಯವಾಗಿರುವ ಕಾರಣ ನಮ್ಮ ಡಿಪೋ ಜಾಗದಲ್ಲೇ ಹೊಸ ನಿಲ್ದಾಣ ನಿರ್ಮಾಣವಾಗಲಿದೆ. ಪ್ರಯಾಣಿಕರು, ಚಾಲಕರು, ನಿರ್ವಾಹಕರ ಅನುಕೂಲಕ್ಕಾಗಿ ಪ್ರತಿಯೊಂದು ಸೌಲಭ್ಯವನ್ನೂ ಹೊಂದಿರುತ್ತದೆ.”
-ಬಿ. ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ





