ಮೈಸೂರಿನ ರಾಜೇಂದ್ರ ನಗರದ ಮುಖ್ಯ ರಸ್ತೆ, ರಾಜೇಂದ್ರ ನಗರ ಆರ್ಚ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದು, ಜನರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಜನರ ಓಡಾಟಕ್ಕೆ ಮೀಸಲಾದ ಪಾದಚಾರಿ ಮಾರ್ಗವನ್ನು ಬಟ್ಟೆ, ಪಾದರಕ್ಷೆ, ತರಕಾರಿ, ಹಣ್ಣು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಹೂವಿನ ವ್ಯಾಪಾರಿಗಳು ಅತಿಕ್ರಮಿಸಿ ಕೊಂಡಿದ್ದಾರೆ. ಹೀಗಾಗಿ ಜನರು ಪಾದಚಾರಿ ಮಾರ್ಗದ ಬದಲಿಗೆ ರಸ್ತೆ ಮಧ್ಯೆ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪಾದಚಾರಿ ಮಾರ್ಗದಲ್ಲಿ ತಾತ್ಕಾಲಿಕವಾಗಿ ಮಳಿಗೆ ಇಟ್ಟುಕೊಂಡು ಮತ್ತು ತಳ್ಳುವ ಕೈಗಾಡಿಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವಿಲ್ಲದೆ ಸಮಸ್ಯೆಯಾಗುತ್ತಿದೆ. ಆಗಾಗ್ಗೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಇದು ವಾಹನ ಸವಾರರು ಮತ್ತು ಜನರ ನಡುವೆ ಸಂಘರ್ಷಕ್ಕೆ ದಾರಿ ಮಾಡಿ ಕೊಡುತ್ತಿದೆ. ಈ ಸಮಸ್ಯೆಯನ್ನು ಸಂಬಂಧಪಟ್ಟಂತಹ ಅಧಿಕಾರಿಗಳು ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
– ಸ್ಥಳೀಯ ನಿವಾಸಿಗಳು, ರಾಜೇಂದ್ರ ನಗರ, ಮೈಸೂರು





