ಕೊಡಗು ಜಿಲ್ಲೆಯಾದ್ಯಂತ ಅಭೂತಪೂರ್ವ ಸ್ಪಂದನ ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ
ಮಡಿಕೇರಿ: ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಕೊಡಗು – ಸುಂದರ ಕೊಡಗು ಹೆಸರಿನ ಸ್ವಚ್ಛತಾ ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಅತ್ಯುತ್ತಮ ಸ್ಪಂದನ ದೊರಕಿದೆ. ಜಿಲ್ಲೆಯ ಎಲ್ಲೆಡೆಯೂ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಕೊಡಗಿನ ಸ್ವಚ್ಛತೆಗೆ ಕಾಳಜಿ ತೋರಿದರು.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಸ ಹೆಕ್ಕುವ ಮೂಲಕ ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನಕ್ಕೆ ಶಾಸಕ ಡಾ.ಮಂಥರ್ ಗೌಡ ಮತ್ತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಡಾ.ಮಂಥರ್ ಗೌಡ, ಸ್ವಚ್ಛ ಮತ್ತು ಸುಂದರ ಕೊಡಗು ನಿರ್ಮಾಣದ ಜವಾಬ್ದಾರಿ ಜಿಲ್ಲೆಯ ಪ್ರತಿಯೊಬ್ಬರ ಮೇಲಿದೆ. ಕೊಡಗನ್ನು ಅನೈರ್ಮಲ್ಯದಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕೊಡಗು ಜಿಲ್ಲೆಯ ಪ್ರಕೃತಿ ಸೌಂದರ್ಯ, ಸಂಪನ್ಮೂಲವನ್ನು ಕಾಪಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ಕೆಟ್ಟ ಪರಿಣಾಮಗಳುತಲೆದೋರಲಿದೆ. ಈಗಾಗಲೇ ಏಕಬಳಕೆ ಪ್ಲಾಸ್ಟಿಕ್‌ಅನ್ನು ನಿಷೇಧಿಸಲಾಗಿದೆ. ಮಡಿಕೇರಿಯಲ್ಲಿ ೨ ಲೀಟರ್‌ಗಿಂತ ಕಡಿಮೆ ಸಂಗ್ರಹ ಸಾಮರ್ಥ್ಯದ ನೀರಿನ ಬಾಟಲಿಗಳ ಮಾರಾಟ ಹಾಗೂ ಬಳಕೆಯನ್ನೂ ನಿಷೇಧಿಸಲಾಗಿದೆ. ಇದರಿಂದ ಕಸದ ಪ್ರಮಾಣ ಕಡಿಮೆಯಾಗಿದೆ ಎಂದರು.
ಜಿಲ್ಲೆಯನ್ನು ಸ್ವಚ್ಛತೆಯಿಂದಿಡುವ ಕೆಲಸ ಒಂದು ದಿನಕ್ಕೆ ಮೀಸಲಾಗದೆ ವರ್ಷವಿಡೀ ಜಾಗೃತಿ ವಹಿಸಬೇಕು. ಹಸಿರು ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮನೆಯಿಂದಲೇ ಶೂನ್ಯ ತ್ಯಾಜ್ಯದ ಬಗ್ಗೆ ಚಿಂತಿಸಬೇಕು, ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಎಸೆದು ಪ್ರಕೃತಿಗೆ ಧಕ್ಕೆ ಉಂಟು ಮಾಡುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡುಬಂದಲ್ಲಿ ಸ್ಥಳೀಯ ಆಡಳಿತ ಕೂಡಲೇ ಕ್ರಮವಹಿಸಬೇಕು ಎಂದು ಹೇಳಿದರು.
ಇದನ್ನು ಓದಿ: ಶುಚಿತ್ವವಿಲ್ಲದ ಬಹುಗ್ರಾಮ ಕುಡಿಯುವ ನೀರಿನ ಘಟಕ
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಸ್ವಚ್ಛ ಕೊಡಗು- ಸುಂದರ ಕೊಡಗು ಸ್ವಚ್ಛತಾ ಅಭಿಯಾನದಲ್ಲಿ ಜಿಲ್ಲೆಯಾದ್ಯಂತ ಸಂಗ್ರಹವಾಗುವ ಕಸವನ್ನು ಮೈಸೂರಿನ ತ್ಯಾಜ್ಯ ಸಂಗ್ರಹಾಲಯಕ್ಕೆ ಕೊಂಡೊಯ್ದು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಕೊಡಗಿನೆಲ್ಲೆಡೆ ಸ್ವಚ್ಛತಾ ಅಭಿಯಾನಕ್ಕೆ ಸಂಘ-ಸಂಸ್ಥೆಗಳು ಕೈಜೋಡಿಸಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಮಾತನಾಡಿ, ಇದು ಕೊಡಗಿನ ಸ್ವಚ್ಛತೆಯ ನಿಟ್ಟಿನ ಪ್ರಥಮ ಹೆಜ್ಜೆಯಾಗಿದೆ. ಈ ಅಭಿಯಾನದಲ್ಲಿ ಜಿಲ್ಲೆಯ ೩೨೦ಕ್ಕೂ ಅಧಿಕ ಸಂಘ-ಸಂಸ್ಥೆಗಳು ಪಾಲ್ಗೊಂಡಿವೆ. ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.
ಪ್ರವಾಸೋದ್ಯಮದಿಂದ ಕೊಡಗಿನ ಪರಿಸರಕ್ಕೆ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪವಿದೆ. ಹಾಗಾಗಿ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರವಾಸೋದ್ಯಮ ಅವಲಂಬಿತರು ಜವಾಬ್ದಾರಿ ತೆಗೆದುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಸ್ವಚ್ಚತಾ ಆಂದೋಲನದಿಂದಾಗಿ ದೇಶಕ್ಕೇ ಕೊಡಗು ಮಾದರಿಯಾಗಲಿದೆ ಎಂದು ಹೇಳಿದರು.
ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ಎಚ್.ಆರ್. ರಮೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸಿರ್ ಅಹಮ್ಮದ್, ಉಪಾಧ್ಯಕ್ಷ ಜಾಹೀರ್ ಅಹಮ್ಮದ್, ಗೌರವ ಸಲಹೆಗಾರ ಜಿ.ಚಿದ್ವಿಲಾಸ್, ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದ ಸಾಮಾಜಿಕ ಜಾಲತಾಣ ಪ್ರಚಾರ ಸಮಿತಿ ಸಂಚಾಲಕ ಎಚ್.ಟಿ.ಅನಿಲ್ ಸೇರಿದಂತೆ ಅನೇಕರು ಈ ವೇಳೆ ಹಾಜರಿದ್ದರು.
ಕಸ ಹೆಕ್ಕಿದ ಡಿಸಿ, ಶಾಸಕ: ಶಾಸಕ ಡಾ.ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ರಾಜಾ ಅವರು ನಗರದ ತಿಮ್ಮಯ್ಯ ವೃತ್ತದಲ್ಲಿ ತ್ಯಾಜ್ಯ ಹೆಕ್ಕಿದರಲ್ಲದೆ, ರಸ್ತೆ ಬದಿಯ ಚರಂಡಿಯೊಳಗೂ ಇಳಿದು ಬಾಟಲಿ, ಕಸವನ್ನು ತೆಗೆದು ಇತರರಿಗೆ ಸೂರ್ತಿ ನೀಡಿದರು. ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛ ಕೊಡಗು – ಸುಂದರ ಕೊಡಗು ಅಭಿಯಾನಕ್ಕೆ ಜಿಲ್ಲಾಡಳಿತ, ಜಿ.ಪಂ., ಪ್ರವಾಸೋದ್ಯಮ ಇಲಾಖೆ, ನಗರಸಭೆ, ಸಂಘ ಸಂಸ್ಥೆಗಳು, ಕೊಡಗು ಚೇಂಬರ್ ಆಫ್ ಕಾಮರ್ಸ್, ಹೋಂ ಸ್ಟೇ ಅಸೋಸಿಯೇಷನ್, ರೋಟರಿ, ಲಯನ್ಸ್ ಸಂಸ್ಥೆಗಳು, ಟ್ರಾವಲ್ ಅಸೋಸಿಯೇಷನ್, ರೆಡ್‌ಕ್ರಾಸ್, ಖಾಸಗಿ ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿ, ಅಭಿಯಾನದಲ್ಲಿ ಪಾಲ್ಗೊಂಡಿದ್ದವು.





