Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಶೀಘ್ರದಲ್ಲೇ ದೊರೆಯಲಿದೆ ಶುದ್ಧ ಕುಡಿಯುವ ನೀರು

೨ ಲೀ.ಗಿಂತ ಕಡಿಮೆ ಸಾಮರ್ಥ್ಯದ ಬಾಟಲಿ ನಿಷೇಧ ಬೆನ್ನಲ್ಲೇ ನಗರಸಭೆಯಿಂದ ವಿವಿಧೆಡೆ ವಾಟರ್ ಫಿಲ್ಟರ್ ಅಳವಡಿಕೆ 

ಮಡಿಕೇರಿ: ನಗರದಲ್ಲಿ ಒಂದು ಮತ್ತು ಅರ್ಧ ಲೀಟರ್ ನೀರಿನ ಬಾಟಲಿಗಳನ್ನು ನಿಷೇಧ ಮಾಡಿದ ಬೆನ್ನಲ್ಲೇ ಜನದಟ್ಟಣೆ ಪ್ರದೇಶಗಳಲ್ಲಿ ವಾಟರ್ ಫಿಲ್ಟರ್‌ಗಳನ್ನು ಅಳವಡಿಸುವ ಕಾರ್ಯವನ್ನು ನಗರಸಭೆ ಮಾಡುತ್ತಿದ್ದು, ಶೀಘ್ರದಲ್ಲೇ ಪ್ರವಾಸಿಗರು ಹಾಗೂ ನಗರ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ.

ಮಂಜಿನ ನಗರಿ ಮಡಿಕೇರಿಯಲ್ಲಿ ಒಂದು ಮತ್ತು ಅರ್ಧ ಲೀಟರ್ ನೀರಿನ ಬಾಟಲಿಗಳನ್ನು ನಿಷೇಧಿಸುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯದ ನಿಯಂತ್ರಣ ಮಾಡುವಲ್ಲಿ ಮಡಿಕೇರಿ ನಗರಸಭೆ ಯಶಸ್ವಿಯಾಗಿದೆ. ಕೆಲ ತಿಂಗಳ ಹಿಂದೆ ನಗರದಲ್ಲಿ ೨ ಲೀಟರ್‌ಗಿಂತ ಕಡಿಮೆ ಸಾಮರ್ಥ್ಯದ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.  ನಿಧಾನವಾಗಿಯಾದರೂ ನಗರದಲ್ಲಿ ಇದಕ್ಕೆ ಉತ್ತಮ ಸ್ಪಂದನೆ ದೊರತಿದ್ದು, ನಗರದೊಳಗೆ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಗಣನೀಯವಾಗಿ ಇಳಿಮುಖವಾಗಿದೆ.

ಹೋಟೆಲ್, ರೆಸ್ಟೋರೆಂಟ್, ಕೆಫೆ ಮತ್ತು ಅಂಗಡಿ ಮಳಿಗೆಗಳಲ್ಲಿ ಒಂದು ಮತ್ತು ಅರ್ಧ ಲೀಟರ್ ನೀರಿನ ಬಾಟಲಿ ವ್ಯಾಪಾರ ಬಹುತೇಕ ನಿಂತಿದೆ. ಇದರಿಂದ ಬಳಕೆಯೂ ಕಡಿಮೆಯಾಗಿದ್ದು, ನಗರಕ್ಕೆ ಬರುವ ಪ್ರವಾಸಿಗರೂ ೨ ಲೀ. ಮತ್ತು ಅದಕ್ಕಿಂತ ದೊಡ್ಡ ನೀರಿನ ಬಾಟಲಿಗಳನ್ನೇ ಕೊಳ್ಳುವಂತಾಗಿದೆ.

ಮಡಿಕೇರಿ ನಗರಸಭೆಯ ಈ ಕ್ರಮಕ್ಕೆ ಆರಂಭದಲ್ಲಿ ಅಪಸ್ವರ ಕೇಳಿಬಂದಿತ್ತು. ನಗರಸಭೆಯಿಂದ ಇಂತಹ ನಿಯಮಗಳನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ ಎಂಬ ಚರ್ಚೆಯೂ ನಡೆದಿತ್ತು. ಆದರೆ ಸ್ಥಳೀಯ ಜನಸಂಖ್ಯೆಗಿಂತ ಹೆಚ್ಚಿನ ಪ್ರವಾಸಿಗರು ಬಂದು ಹೋಗುವ ಮಂಜಿನ ನಗರಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯಿಂದ ಆಗುತ್ತಿರುವ ಮಾಲಿನ್ಯ ಹಾಗೂ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯ ಬಗ್ಗೆ ಹೋಟೆಲ್ ಅಸೋಸಿಯೇಷನ್ ಮತ್ತು ಚೇಂಬರ್ ಆಫ್ ಕಾಮರ್ಸ್ ಗಮನ ಸೆಳೆದು ಅವರ ವಿಶ್ವಾಸಗಳಿಸುವಲ್ಲಿ ನಗರಸಭೆ ಯಶಸ್ವಿಯಾಯಿತು. ಆ ಮೂಲಕ ಸದ್ಯ ಮಡಿಕೇರಿ ನಗರದಲ್ಲಿ ಪ್ಲಾಸ್ಟಿಕ್ ಬಾಟಲಿಗೆ ನಿರ್ಬಂಧವಿದ್ದು, ಬಹುತೇಕ ಕಡೆಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇದರಿಂದ ದಸರಾದಂತಹ ಜನೋತ್ಸವದಲ್ಲಿಯೂ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಈ ಹಿಂದೆಗಿಂತ ಕಡಿಮೆಯಾಗಿರುವುದು ಕಂಡು ಬಂದಿದೆ.

ಪ್ರತಿ ತಿಂಗಳು ಅಂದಾಜು ೨ ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡುತ್ತಿರುವ ಮಡಿಕೇರಿ ನಗರದಲ್ಲಿ ನೀರಿನ ಬಾಟಲಿ ಬ್ಯಾನ್ ಮಾಡುವುದು ಸವಾಲಿನ ಕೆಲಸವಾಗಿತ್ತು. ಹೊರಗಿನಿಂದ ಬರುವ ಪ್ರವಾಸಿಗರಿಗೆ ಇದರ ಅರಿವಿಲ್ಲದಿರುವ ಕಾರಣ ಇದು ಸಂಘರ್ಷಕ್ಕೂ ಕಾರಣವಾಗಲಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಗರಸಭೆ ಈಗ ಮತ್ತೊಂದು ಉಪಾಯ ಮಾಡಿದ್ದು, ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಆರ್‌ಓ ಫಿಲ್ಟರ್‌ಗಳನ್ನು ಅಳವಡಿಸಿ ಉಚಿತವಾಗಿ ಕುಡಿಯುವ ನೀರು ಸಿಗುವಂತೆ ಮಾಡಲಾಗಿದೆ. ನಗರದ ೬ ಸ್ಥಳಗಳಲ್ಲಿ ಈಗಾಗಲೇ ಫಿಲ್ಟರ್ ಅಳವಡಿಕೆ ಕೆಲಸ ಮುಗಿದಿದ್ದು, ಸದ್ಯದಲ್ಲಿಯೇ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಇದರ ಉಪಯೋಗವಾಗಲಿದೆ.

೭.೫ ಲಕ್ಷ ರೂ. ವೆಚ್ಚದಲ್ಲಿ ರಾಜಾಸೀಟ್, ಡಿಸಿ ಕಚೇರಿ ರಸ್ತೆ, ನಗರಸಭೆ ಎದುರು, ಮಾರುಕಟ್ಟೆ ಬಳಿ, ಇಂದಿರಾಗಾಂಽ ವೃತ್ತ ಮತ್ತು ಮೂರ್ನಾಡು ರಸ್ತೆಯಲ್ಲಿ ಹೆಚ್ಚು ಜನರಿರುವ ಸ್ಥಳಗಳಲ್ಲಿ ಆರ್‌ಓ ವಾಟರ್ ಪ್ಯೂರಿಫೈಯರ್‌ಗಳನ್ನು ಅಳವಡಿಸಲಾಗುತ್ತಿದ್ದು, ಉಚಿತವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ನಗರಸಭೆ ಮುಂದಾಗಿದೆ. ಈಗಾಗಲೇ ಮೂರು ಕಡೆ ಫಿಲ್ಟರ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ ಮೂರು ಕಡೆಗಳಲ್ಲಿ ಮಾತ್ರ ಆಗಬೇಕಿದೆ. ಮುಂದಿನ ಹಂತದಲ್ಲಿ ಮತ್ತಷ್ಟು ಸ್ಥಳಗಳಲ್ಲಿ ಈ ಫಿಲ್ಟರ್‌ಗಳನ್ನು ಅಳವಡಿಸಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವ ಉದ್ದೇಶವಿದೆ ಎಂದು ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ತಿಳಿಸಿದ್ದಾರೆ.

ನಿರ್ವಹಣೆಯ ಸವಾಲು…: 

ನೀರಿನ ಪ್ಲಾಸ್ಟಿಕ್ ಬಾಟಲ್ ಬ್ಯಾನ್ ಯಶಸ್ವಿಯಾಗಿದೆ. ಇದೀಗ ನಗರದಲ್ಲಿ ಫಿಲ್ಟರ್‌ಗಳ ಅಳವಡಿಕೆಯೂ ಆಗುತ್ತಿದೆ. ಆದರೆ ಈ ಫಿಲ್ಟರ್‌ಗಳ ನೀರನ್ನು ಬಳಸಲು ಪ್ರವಾಸಿಗರನ್ನು ಪ್ರೇರೇಪಿಸುವ ಸವಾಲು ನಗರಸಭೆಯ ಮುಂದಿದೆ. ಇದಕ್ಕಾಗಿ ಪ್ರವಾಸಿ ತಾಣಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವ ಕೆಲಸ ಆಗಬೇಕಿದೆ. ಅದರೊಂದಿಗೆ ಈ ಫಿಲ್ಟರ್ಗಳು ತೆರೆದ ಸ್ಥಳಗಳಲ್ಲಿ ಅಳವಡಿಸಲಾಗುತ್ತಿರುವುದರಿಂದ ಅದರ ನಿರ್ವಹಣೆಯೂ ಸವಾಲಾಗಿರಲಿದೆ. ಶುದ್ಧ ನೀರಿನ ಘಟಕ ಸದಾ ಶುಚಿಯಾಗಿರುವಂತೆ ಎಚ್ಚರ ವಹಿಸಿದರೇ ಮಾತ್ರ ಅದರ ಸಮರ್ಪಕ ಬಳಕೆ ಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

” ೭.೫ ಲಕ್ಷ ರೂ.ವೆಚ್ಚದಲ್ಲಿ ಈ ಶುದ್ಧ ನೀರಿನ ಘಟಕಗಳನ್ನು ಆರಂಭಿಸುತ್ತಿದ್ದೇವೆ. ಹೆಚ್ಚು ಪ್ರವಾಸಿಗರು ಬರುವ ಮಡಿಕೇರಿಯಲ್ಲಿ ಇದರಿಂದ ನೀರಿನ ಬಾಟಲ್‌ಗಳ ಉಪಯೋಗ ಕಡಿಮೆಯಾಗಲಿದೆ. ಸ್ಥಳೀಯರಿಗೂ ಇದರಿಂದ ಅನುಕೂಲವಾಗಲಿ ಎಂಬುದು ನಗರಸಭೆಯ ಉದ್ದೇಶವಾಗಿದೆ.”

-ಮಹೇಶ್ ಜೈನಿ, ನಗರಸಭೆ ಉಪಾಧ್ಯಕ್ಷ .

Tags:
error: Content is protected !!