ಚುಡಾ ವತಿಯಿಂದ ಹೊಸದಾಗಿ ತಲೆಎತ್ತಲಿದೆ ಉದ್ಯಾನ…
ಚಾಮರಾಜನಗರ: ಚಾಮರಾಜನಗರ- ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರ (ಚುಡಾ) ಇಲ್ಲಿನ ಗಾಳೀಪುರ ಬೀಡಿ ಕಾಲೋನಿಯಲ್ಲಿ ಉದ್ಯಾನ ನಿರ್ಮಾಣ ಮಾಡಲು ಮುಂದಾಗಿದೆ.
ನಗರಸಭೆಯ 4ನೇ ವಾರ್ಡಿಗೆ ಸೇರಿರುವ ಸರ್ಕಾರಿ ಜಾಗದಲ್ಲಿ ಅಂದಾಜು 2೦೦ ಮೀಟರ್ ಉದ್ದ, 2೦೦ ಮೀ. ಅಗಲ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲು ಯೋಜನೆ ತಯಾರಿಸಿ ನಗರಾಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿಗೆ ತಾಂತ್ರಿಕ ಮೌಲ್ಯ ಮಾಪನಕ್ಕಾಗಿ ಕಳುಹಿಸಲಾಗಿದೆ. ಇದಾದ ಬಳಿಕ ಹಣಕಾಸಿಗೆ ಸಂಬಂಧಿಸಿದಂತೆ ಅನು ಮೋದನೆ ಪಡೆದು ಉದ್ಯಾನ ನಿರ್ಮಾಣ ಕಾರ್ಯ ಆದೇಶ ಪತ್ರವನ್ನು (ವರ್ಕ್ ಆರ್ಡರ್) ಗುತ್ತಿಗೆದಾರರಿಗೆ ನೀಡಲಾಗುವುದು. ಎಲ್ಲವೂ ಅಂದುಕೊಂಡಂತೆ ಆದರೆ, ಎಲ್ಲಾ ಪ್ರಕ್ರಿಯೆ ಇನ್ನು ೧೫ ದಿನಗಳಲ್ಲಿ ಮುಗಿಯಲಿದೆ ಎಂದು ಚುಡಾ ಕಚೇರಿ ಮೂಲಗಳು ತಿಳಿಸಿವೆ.
ಇದನ್ನು ಓದಿ: ನವೆಂಬರ್ ಬಂದರೂ ನಡೆಯದ ಚುಂಚನಕಟ್ಟೆ ಜಲಪಾತೋತ್ಸವ
ಸುತ್ತು ಗೋಡೆ, ವಾಕಿಂಗ್ ಪಾಥ್, ಗಾರ್ಡನ್, ವಿಶ್ರಾಂತಿಗಾಗಿ ಕೂರಲು ಬೆಂಚುಗಳು, ಲೈಟಿಂಗ್ಸ್ ಇವೇ ಮೊದಲಾದವು ಉದ್ಯಾನ ಸ್ಥಳದಲ್ಲಿ ಇರುವಂತೆ ಯೋಜನೆ ರೂಪಿಸಲಾಗಿದೆ. ಉದ್ಯಾನ ವ್ಯಾಪ್ತಿಯಲ್ಲಿ ಬಹುತೇಕ ಬೀಡಿ ಕಾರ್ಮಿಕರೇ ಇದ್ದಾರೆ. ಅವರಿಗೆ ವಾಕಿಂಗ್, ವಿಶ್ರಾಂತಿ, ಯೋಗ ಮಾಡಲು ನೆರವಾಗುತ್ತಿರುವುದು ಒಳ್ಳೆಯ ಆಲೋ ಚನೆಯೇ ಸರಿ ಎಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. ಮುಂಚೆ, ಒಂದು ಎಕರೆ ಒಳಗಡೆ ಯಾರಾದರೂ ಹೊಸ ಲೇಔಟ್ ನಿರ್ಮಾಣ ಮಾಡಿದರೆ ಉದ್ಯಾನಕ್ಕೆ ಜಾಗ ಬಿಡುವ ಬದಲಾಗಿ ವಿನಾಯಿತಿ ಶುಲ್ಕ ಪಾವತಿಸಲು ಅವಕಾಶ ಇತ್ತು. ಈ ಯೋಜನೆಯಡಿ ಸಂಗ್ರಹ ಆಗಿರುವ ವಿನಾಯಿತಿ ಶುಲ್ಕ ವನ್ನು ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಬೇಕೆಂಬ ನಿಯಮವಿದೆ. ಹಾಗಾಗಿ ಈ ಹಣದಿಂದ ಉದ್ಯಾನ ನಿರ್ಮಾಣ ಮಾಡಲಾಗುತ್ತದೆ ಎಂದು ಚುಡಾ ಆಯುಕ್ತರು ಮಾಹಿತಿ ನೀಡಿದ್ದಾರೆ.
” ಗಾಳೀಪುರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 44ಲಕ್ಷ ರೂ.ವೆಚ್ಚದಲ್ಲಿ ಉದ್ಯಾನವನ್ನು ನಿರ್ಮಾಣ ಮಾಡಲಾಗುವುದು.:
ಎಚ್.ವಿ.ಸೀಮಾ, ಚುಡಾ ಆಯುಕ್ತರು
” ಬೀಡಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗಾಳೀ ಪುರದಲ್ಲಿ ಉದ್ಯಾನ ನಿರ್ಮಾಣಕ್ಕೆ ಇನ್ನು 15ದಿನಗಳಲ್ಲಿ ಚಾಲನೆ ದೊರೆಯಲಿದೆ. ಜೊತೆಗೆ, ಚುಡಾ ಕಚೇರಿ ಸುತ್ತಲೂ 16 ಲಕ್ಷ ರೂ. ವೆಚ್ಚದಲ್ಲಿ ಪ್ರಾಧಿಕಾರದ ವತಿಯಿಂದ ಕಾಂಪೌಂಡ್ ನಿರ್ಮಾಣವನ್ನೂ ಮಾಡಲಾಗುವುದು.
ಮಹಮ್ಮದ್ ಅಸ್ಗರ್ (ಮುನ್ನಾ), ಚುಡಾ ಅಧ್ಯಕ್ಷರು





