Mysore
24
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಅಮೃತ್ ೨.೦ ಯೋಜನೆಗೆ ನಾಗರಿಕರ ಅಸಮಾಧಾನ

ದಾಸೇಗೌಡ ಸರಗೂರು

ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ 

ಸರಗೂರು: ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದ್ದ ಅಮೃತ್ ೨.೦ ಯೋಜನೆಯ ಕಾಮಗಾರಿಗಳ ಬಗ್ಗೆ ವಿವಿಧ ವಾರ್ಡ್‌ಗಳ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೃತ್ ೨.೦ ಯೋಜನೆಗೆ ೧೬.೪೩ ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ೧೬.೪೪ ಕೋಟಿ ರೂ. ಮೊತ್ತಕ್ಕೆ ಬೆಂಗಳೂರು ಮೂಲದ ಸುಜಾಲ ಸ್ಟ್ರಕ್ಚರ್ಸ್ ಕಂಪೆನಿ ಗುತ್ತಿಗೆ ಪಡೆದಿದೆ. ೧೮ ತಿಂಗಳ ಕಾಮಗಾರಿ ಅವಧಿಯಲ್ಲಿ ವಿತರಣಾ ಕೊಳವೆ ಮಾರ್ಗ, ಮೇಲ್ಮಟ್ಟದ ಜಲಸಂಗ್ರಹಾಗಾರ, ಫೀಡರ್ ಮೇನ್, ಜಲಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸುವಿಕೆ ಹಾಗೂ ೨,೯೬೦ ಗೃಹ ಸಂಪರ್ಕಗಳನ್ನು ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳ ಲಾಗಿದೆ. ಇದುವರೆಗೆ ೧೩.೩೨ ಕೋಟಿ ರೂ.ಮ ವೆಚ್ಚವಾಗಿದೆ ಎಂದು ಅಧಿಕಾರಿಗಳ ದಾಖಲೆಗಳಲ್ಲಿ ತಿಳಿಸಲಾಗಿದೆ.

ಯೋಜನೆಯಡಿ ಸರಗೂರು ಪಟ್ಟಣದ ೨, ೩, ೪, ೫, ೬, ೮ ಹಾಗೂ ೧೧ನೇ ವಾರ್ಡ್‌ಗಳಲ್ಲಿ ಹೊಸ ಮೀಟರ್ ಸಂಪರ್ಕಗಳನ್ನು ಅಳವಡಿಸಲಾಗಿದೆ. ಆದರೆ ಹಲವು ಬಡಾವಣೆಗಳಲ್ಲಿ ಹೊಸ ನಲ್ಲಿ ಸಂಪರ್ಕದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಕೆಲವೆಡೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಇದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದರೊಂದಿಗೆ ಹೊಸ ಸಂಪರ್ಕಕ್ಕೆ ನೀರು ಹರಿಸುವ ಸಲುವಾಗಿ ಇತ್ತೀಚೆಗೆ ನಿರ್ಮಿಸಲಾಗಿದ್ದ ಕಾಂಕ್ರೀಟ್ ರಸ್ತೆಗಳು ಹಾಗೂ ಡಾಂಬರ್ ರಸ್ತೆಗಳನ್ನೂ ಕೆಲವೆಡೆ ಅಗೆದು ಪೈಪ್‌ಗಳನ್ನು ಅಳವಡಿಸಿ ಮತ್ತೆ ಪ್ಯಾಚ್ ಹಾಕಲಾಗುತ್ತಿದೆ.ಇದರಿಂದ ಪಟ್ಟಣದ ಹಲವು ರಸ್ತೆಗಳು ಗಾಯಕ್ಕೆ ತೇಪೆ ಹಾಕಿದಂತಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸ ಮೀಟರ್ ಸಂಪರ್ಕದಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ, ಹಿಂದೆ ಇದ್ದ ಹಳೆಯ ನಲ್ಲಿ ಸಂಪರ್ಕದ ಮೂಲಕವೇ ನೀರು ಪೂರೈಸಬೇಕು. ಹೊಸ ಸಂಪರ್ಕದಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಹಲವು ನಿವಾಸಿಗಳ ಒತ್ತಾಯವಾಗಿದೆ.

ಈ ಕುರಿತು ಸರಗೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್ ಕುಮಾರ್ ಅವರನ್ನು ವಿಚಾರಿಸಿದಾಗ, ಹೊಸ ನಲ್ಲಿ ಸಂಪರ್ಕದ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ. ಹಲವು ವಾರ್ಡ್‌ಗಳಿಂದ ನೀರು ಸರಬರಾಜು ಹಾಗೂ ಸಂಪರ್ಕಕ್ಕೆ ಸಂಬಂಧಿಸಿದ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಯೋಜನೆಯ ದಾಖಲೆಗಳಲ್ಲಿ ಸರಗೂರು ಪಟ್ಟಣದ ೧೨,೫೦೦ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಪಟ್ಟಣದ ವಾಸ್ತವ ಜನಸಂಖ್ಯೆ ಸುಮಾರು ೧೧ ಸಾವಿರದಷ್ಟಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳುತ್ತಿರುವ ಹಿನ್ನೆಲೆಯಲ್ಲಿ, ಉಳಿದ ಸುಮಾರು ೧,೫೦೦ ಜನಸಂಖ್ಯೆಗೆ ಸಂಬಂಧಿಸಿದ ಸಂಪರ್ಕ ಅಥವಾ ಲೆಕ್ಕಾಚಾರದ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಯೋಜನೆಯ ಕಾಮಗಾರಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ನೀರು ಸಮರ್ಪಕವಾಗಿ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಅಗೆದಿರುವ ರಸ್ತೆಗಳನ್ನು ಗುಣಮಟ್ಟದಿಂದ ದುರಸ್ತಿ ಮಾಡಬೇಕು. ಹೊಸ ಸಂಪರ್ಕದಿಂದ ಪ್ರಯೋಜನವಾಗದ ಪ್ರದೇಶಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ʼ ಹೊಸ ನಲ್ಲಿಯಲ್ಲಿ ನೀರು ಬಹಳ ಕಡಿಮೆ ಬರುತ್ತಿದೆ. ನಮಗೆ ನೀರಿನ ಸಮಸ್ಯೆ ಬಗೆಹರಿಯಬೇಕು. ಇಲ್ಲದಿದ್ದರೆ ಹಳೆಯ ಸಂಪರ್ಕವನ್ನೇ ಮುಂದುವರಿಸಬೇಕು.”

-ಮಂಗಳಮ್ಮ, ೬ನೇ ವಾರ್ಡ್ ನಿವಾಸಿ

” ಹೊಸ ನಲ್ಲಿ ಸಂಪರ್ಕ ಅಳವಡಿಸಿದರೂ ಸಮರ್ಪಕವಾಗಿ ನೀರು ಬರುತ್ತಿಲ್ಲ. ಹಳೆಯ ಸಂಪರ್ಕದಿಂದಲೇ ನಮಗೆ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು.”

-ದೊಡ್ಡಯ್ಯ, ೪ನೇ ವಾರ್ಡ್ ನಿವಾಸಿ

 

 

Tags:
error: Content is protected !!