ಕೆ.ಬಿ.ರಮೇಶನಾಯಕ
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗ್ಯಾಲರಿ ನಿರ್ಮಾಣ
ಜ್ಞಾನಪೀಠ ಪ್ರಶಸ್ತಿ ಮಾದರಿ ರೂಪಿಸಲು ಕುವೆಂಪು ಪುತ್ರಿ ಒಪ್ಪಿಗೆ
ಕಂಪ್ಯೂಟರ್ ಲ್ಯಾಬ್ಗೆ ಹೊಸ ರೂಪ
ಮೈಸೂರು: ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರನ್ನು ಕುರಿತ ಸಮಗ್ರ ಅಧ್ಯಯನಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕುವೆಂಪು ಚಿತ್ರಕೂಟ ಗ್ಯಾಲರಿಯನ್ನು ಆರಂಭಿಸಲಾಗಿದ್ದು, ಶೀಘ್ರದಲ್ಲೇ ಜ್ಞಾನ ಪೀಠ ಪ್ರಶಸ್ತಿಯ ಮಾದರಿಯನ್ನು ಪ್ರದರ್ಶನಕ್ಕಿಡಲು ಸಿದ್ಧತೆ ನಡೆದಿದೆ.
ಕುವೆಂಪು ಅವರ ಹುಟ್ಟೂರು ಕುಪ್ಪಳಿಯಲ್ಲಿರುವ ಜ್ಞಾನಪೀಠ ಪ್ರಶಸ್ತಿ ಫಲಕ ಮತ್ತು ಅಭಿನಂದನಾ ಪತ್ರದ ಪ್ರತಿಕೃತಿ ಮಾದರಿಯನ್ನು ಗ್ಯಾಲರಿಯಲ್ಲಿ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ದರ್ಶನಕ್ಕಿ ಡಲು ಕುವೆಂಪು ಅವರ ಪುತ್ರಿ ತಾರಿಣಿ ಮತ್ತು ಅಳಿಯ ಡಾ.ಕೆ. ಚಿದಾನಂದಗೌಡ ಅವರಲ್ಲಿ ಮನವಿ ಮಾಡಿದ್ದು,ಅವರು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ, ಶೀಘ್ರದಲ್ಲೇ ಜ್ಞಾನಪೀಠ ಪ್ರಶಸ್ತಿಯ ಪ್ರತಿರೂಪವನ್ನು ನೋಡುವ ಸೌಭಾಗ್ಯ ದೊರೆಯ ಲಿದೆ.
ಮಲೆನಾಡಿನಿಂದ ಸಾಂಸ್ಕೃತಿಕ ನಗರಿಗೆ ಆಗಮಿಸಿ ಇಲ್ಲಿಯೇ ಓದಿ, ಅಧ್ಯಾಪಕರಾಗಿ, ಕುಲಪತಿಗಳಾಗಿ ಮಾನಸ ಗಂಗೋತ್ರಿಯನ್ನು ಕಟ್ಟಿದ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಯು ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ರಾಜ್ಯದ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಪದ್ಯವನ್ನು ಕುವೆಂಪು ಅವರು ರಚಿಸಿ ನೂರು ವರ್ಷಗಳು ತುಂಬಿರುವ ಈ ಹೊತ್ತಿನಲ್ಲಿ ಏನಾದರೂ ಶಾಶ್ವತವಾದ ಯೋಜನೆ ರೂಪಿಸಬೇಕೆಂಬ ಉದ್ದೇಶ ಹೊಂದಿದ್ದ ಅಧ್ಯಯನ ಸಂಸ್ಥೆಯು, ಈ ಕುವೆಂಪು ಗ್ಯಾಲರಿಯನ್ನು ನಿರ್ಮಾಣ ಮಾಡಿದೆ.
ಬೆಂಗಳೂರಿನ ಕುವೆಂಪು ವಿಚಾರ ವೇದಿಕೆ ಅಧ್ಯಕ್ಷ ಎಂ.ಸಿ. ನರೇಂದ್ರ ಅವರು ಕುಪ್ಪಳಿಯಲ್ಲಿ ಕುವೆಂಪು, ತೇಜಸ್ವಿ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಈಗ ಅವರೇ ಕುವೆಂಪು ಗ್ಯಾಲರಿ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಗ್ಯಾಲರಿಯಲ್ಲಿ ಕುವೆಂಪು ಅವರ ಸಮಗ್ರ ಕೃತಿಗಳು ಲಭ್ಯಇವೆ. ಕುವೆಂಪು ಚಿತ್ರಕೂಟದಲ್ಲಿ ೨೦೦ಕ್ಕೂ ಹೆಚ್ಚು ಚಿತ್ರಪಟಗಳನ್ನು ನೋಡ ಬಹುದಾಗಿದೆ. ಕುವೆಂಪು ಅವರ ಎಲ್ಲಾ ಕೃತಿಗಳು, ಗ್ರಂಥಗಳು ಒಂದೇ ಕಡೆ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕುವೆಂಪು ಅವರ ಕುರಿತು ರಾಜ್ಯ, ಹೊರ ರಾಜ್ಯದ ಕವಿಗಳು, ವಿಮರ್ಶಕರು ಮಾಡಿ ರುವ ವಿಮರ್ಶಾ ಲೇಖನಗಳ ಸಂಪುಟವನ್ನು ವಿದ್ಯಾರ್ಥಿಗಳ ಕೈಗೆ ಸಿಗುವಂತೆ ಮಾಡಲು ಅನೇಕರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಈಗಾಗಲೇ ಕುವೆಂಪು ಕುರಿತ ವಿಮರ್ಶಾ ಬರಹಗಳನ್ನು ಕೊಡಲು ಕೆಲ ಲೇಖಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಲ್ಯಾಬ್‌ಗೆ ಹೊಸ ರೂಪ: ಸಂಸ್ಥೆಯಲ್ಲಿ ವಿದ್ಯಾರ್ಥಿ ಗಳು, ಸಂಶೋಧನಾರ್ಥಿಗಳು ಸೇರಿ ೨೦೦ಕ್ಕೂ ಹೆಚ್ಚು ಮಂದಿ ಇದ್ದು, ಭಾಷೆ ಹಾಗೂ ಬಹುಮಾಧ್ಯಮ ಪ್ರಯೋಗಾಲಯ(ಕಂಪ್ಯೂಟರ್ ಲ್ಯಾಬ್)ಕ್ಕೆ ಹೊಸ ರೂಪವನ್ನು ನೀಡಲಾಗಿದೆ.
ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೂ ಅನುಕೂಲವಾಗುವ ರೀತಿಯಲ್ಲಿ ಗ್ರಂಥಾಲ ಯವನ್ನು ಉನ್ನತೀಕರಿಸಿ ಅಗತ್ಯ ವಿರುವ ಟೇಬಲ್, ಕುರ್ಚಿಗಳನ್ನು ಹಾಕಲಾಗಿದೆ. ಕುವೆಂಪು ಅವರ ಬಗ್ಗೆ ಇಂದಿನ ತಲೆಮಾರಿಗೆ ಸಮಗ್ರ ವಾಗಿ ಅಧ್ಯಯನದ ವಸ್ತುಗಳು ದೊರೆಯುವಂತೆ ಮಾಡಬೇಕೆಂಬಮಹತ್ವಾಕಾಂಕ್ಷೆ ಯಿಂದ ಬೆಂಗಳೂರಿನ ನರೇಂದ್ರ ಅವರು ಗ್ಯಾಲರಿಯನ್ನು ನಿರ್ಮಿಸಲು ೨ ಲಕ್ಷ ರೂ. ದೇಣಿಗೆ ನೀಡಲು ಮುಂದಾಗಿದ್ದರು. ಆದರೆ, ಕನ್ನಡ ಅಧ್ಯಯನ ಸಂಸ್ಥೆಯವರು, ಅಷ್ಟು ಸಾಕಾಗು ವುದಿಲ್ಲ. ಎಲ್ಲವನ್ನೂ ನೀವೇ (ನರೇಂದ್ರ) ಮಾಡಿಕೊಡ ಬೇಕೆಂದು ಮನವಿ ಮಾಡಿದ್ದರು. ಹಾಗಾಗಿ ನರೇಂದ್ರ ಹಾಗೂ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಸಿ. ಶಿವಾರೆಡ್ಡಿ ಅವರೇ ಗ್ಯಾಲರಿಯ ಸಂಪೂರ್ಣ ಹೊಣೆ ಹೊತ್ತು ನಿರ್ಮಿಸಿಕೊಟ್ಟಿದ್ದಾರೆ. ಕುವೆಂಪು ಗ್ಯಾಲರಿಗೆ ‘ಚಿತ್ರಕೂಟ’ ಎಂದು ಹೆಸರಿಸಲಾಗಿದೆ. ಇದು ‘ಶ್ರೀ ರಾಮಾಯಣ ದರ್ಶನಂ’ನ ಮಹಾಕಾವ್ಯದಲ್ಲಿರುವ ಒಂದು ಶೀರ್ಷಿಕೆಯಾಗಿದೆ ಎಂಬುದಾಗಿ ಕನ್ನಡ ಕುವೆಂಪು ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ.ಎನ್. ಕೆ.ಲೋಲಾಕ್ಷಿ ಹೇಳುತ್ತಾರೆ.
” ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಬಂದ ಆರು ತಿಂಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮಾಜಿ ಸಚಿವ ಎಂ.ಚಂದ್ರಶೇಖರ್‌ರ ಪುತ್ರರಾಗಿರುವ ಎಂ.ಸಿ.ನರೇಂದ್ರ ಅವರ ನೆರವಿನಿಂದ ಗ್ಯಾಲರಿ ನಿರ್ಮಾಣವಾಗಿದೆ. ಕುವೆಂಪು ಅವರಿಗೆ ಬಂದಿರುವ ಜ್ಞಾನಪೀಠ ಪ್ರಶಸ್ತಿಯ ಪ್ರತಿಕೃತಿ ಮಾದರಿಯನ್ನು ಪ್ರದರ್ಶಿಸಲು ಕೇಳಿಕೊಂಡಿದ್ದಕ್ಕೆ ಅವರ ಪುತ್ರಿ ತಾರಿಣಿ ಒಪ್ಪಿಗೆ ನೀಡಿದ್ದಾರೆ. ಶೀಘ್ರದಲ್ಲೇ ಈ ಭಾಗದ ಜನರಿಗೂ ಆ ಮಾದರಿಯನ್ನು ನೋಡುವ ಅವಕಾಶ ದೊರೆಯಲಿದೆ.”
-ಡಾ.ಎನ್.ಕೆ.ಲೋಲಾಕ್ಷಿ, ನಿರ್ದೇಶಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.