ಮಡಿಕೇರಿಯಲ್ಲಿಯೇ ಕ್ಯಾನ್ಸರ್ ರೋಗಿಗಳಿಗೆ ಪ್ರಾಥಮಿಕ ಹಂತದ ಚಿಕಿತ್ಸೆ; ವೈದ್ಯರ ನೇಮಕಕ್ಕೆ ಸರ್ಕಾರಕ್ಕೆ ಪತ್ರ
ಮಡಿಕೇರಿ: ಕೊಡಗಿನಲ್ಲಿ ಡೇಕೇರ್ ಕಿಮೊಥೆರಪಿ ಕೇಂದ್ರ ಆರಂಭಿಸಲು ಕೋಯಿಮ್ಸ್ ನಿಂದ ಪ್ರಯತ್ನ ನಡೆದಿದ್ದು, ಸದ್ಯದಲ್ಲಿಯೇ ಮಡಿಕೇರಿಯಲ್ಲಿಯೇ ಕ್ಯಾನ್ಸರ್ ರೋಗಿಗಳಿಗೆ ಪ್ರಾಥಮಿಕ ಹಂತದ ಚಿಕಿತ್ಸೆ ಲಭಿಸಲಿದೆ.
ಕಳೆದ ವರ್ಷದ ಬಜೆಟ್‌ನಲ್ಲಿ ಸರ್ಕಾರ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲೂ ಡೇ-ಕೇರ್ ಕಿಮೊಥೆರಪಿ ಕೇಂದ್ರ ತೆರೆಯುವ ಘೋಷಣೆ ಮಾಡಿತ್ತು. ಅದರಂತೆ ಬಹಳಷ್ಟು ಜಿಲ್ಲೆಗಳಲ್ಲಿ ಈ ಕೇಂದ್ರಗಳು ಈಗ ಕಾರ್ಯನಿರ್ವಹಿಸುತ್ತಿವೆ. ಆದರೆ, ಜಿಲ್ಲೆಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಇನ್ನೂ ಈ ಕೇಂದ್ರ ಕಾರ್ಯಾರಂಭಿಸಿಲ್ಲ.
ಆರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಡೇಕೇರ್ ಕಿಮೊಥೆರಪಿ ಕೇಂದ್ರ ಆರಂಭಿಸಲು ಸಿದ್ಧತೆ ನಡೆದಿದ್ದು, ಕೊಯಿಮ್ಸ್‌ನಿಂದ ಅದಕ್ಕೆ ಬೇಕಾದ ಸಲಕರಣೆಗಳನ್ನು ತರಿಸಿಕೊಳ್ಳಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಯಾಗಿರುವುದರಿಂದ ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೇ ಈ ಕೇಂದ್ರವನ್ನು ಆರಂಭಿಸಬೇಕು ಎಂಬ ಕಾರಣಕ್ಕೆ ಈ ಕೇಂದ್ರ ಆರಂಭವಾಗುವುದು ತಡವಾಗಿತ್ತು. ಇದೀಗ ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೇ ಆರಂಭಿಸಲು ಸಿದ್ಧತೆ ನಡೆದಿದ್ದು, ಈಗಾಗಲೇ ಮೈಸೂರಿನ ಆಸ್ಪತ್ರೆಯಿಂದ ಕ್ಯಾನ್ಸರ್ ವೈದ್ಯರೊಬ್ಬರು ಪ್ರತಿ ವಾರ ಮಡಿಕೇರಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
ಈಗಾಗಲೇ ಜಿಲ್ಲೆಗೆ ಭೇಟಿ ನೀಡುತ್ತಿರುವ ಮೈಸೂರಿನ ಕ್ಯಾನ್ಸರ್ ತಜ್ಞ ವೈದ್ಯರು ಕ್ಯಾನ್ಸರ್ ಹೊರ ರೋಗಿಗಳನ್ನು ನೋಡುತ್ತಿದ್ದಾರೆ. ಜತೆಗೆ ಅತ್ಯಗತ್ಯವಾಗಿ ಬೇಕಾಗುವ ಒಂದಷ್ಟು ಔಷಗಳನ್ನು ತರಿಸಿಕೊಳ್ಳಲಾಗಿದ್ದು, ರೋಗಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಕಿಮೊಥೆರಪಿ ಡೇಕೇರ್ ಸೆಂಟರ್ ಆರಂಭವಾದರೆ, ಮೂರರಿಂದ ಐದು ಮಂದಿ ವೈದ್ಯರು ಬೇಕಾಗುತ್ತಾರೆ. ಪ್ರತಿ ದಿನವೂ ವೈದ್ಯರು ಇಲ್ಲಿದ್ದು ಬರುವ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಹೀಗಾಗಿ ಕೊಯಿಮ್ಸ್‌ನಿಂದ ನಾನಾ ವಿಭಾಗಗಳ ಐವರು ಕ್ಯಾನ್ಸರ್ ವೈದ್ಯರನ್ನು ನೇಮಕ ಮಾಡಬೇಕೆಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಇದನ್ನು ಓದಿ: ಚಾ.ನಗರ ಜಿಲ್ಲೆಯಲ್ಲಿ ಹುರುಳಿ ಬೆಳೆ ‘ಇಳಿ’ವರಿ!
ಕೊಯಿಮ್ಸ್‌ನ ಆಂತರಿಕ ಸಂಪನ್ಮೂಲದಿಂದಲೇ ವೈದ್ಯರನ್ನು ನೇಮಿಸಿಕೊಳ್ಳುವ ಬಗ್ಗೆಯೂ ಸರ್ಕಾರದಿಂದ ಅನುಮತಿ ಕೋರಲಾಗಿದೆ. ಸರ್ಕಾರದಿಂದ ಅನುಮತಿ ದೊರೆತು ವೈದ್ಯರನೇಮಕವಾದರೇ ಕಿಮೊಥೆರಪಿ ಡೇಕೇರ್ಸೆಂಟರ್ ಜತೆಗೆ ಕ್ಯಾನ್ಸರ್ ಸಂಬಂಧ ಇನ್ನಷ್ಟು ಚಿಕಿತ್ಸೆಯೂ ಜಿಲ್ಲೆಯಲ್ಲಿಯೇ ದೊರಕಲಿದೆ.ಬೇರೆ ಜಿಲ್ಲೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವ ಸಂಕಷ್ಟ ತಪ್ಪಲಿದೆ.
ಜಿಲ್ಲೆಯಲ್ಲಿ ಪ್ರಸ್ತುತ ೧೬೩ ಮಂದಿ ಕ್ಯಾನ್ಸರ್ ರೋಗಿಗಳಿದ್ದಾರೆ. ಇವರಿಗೆ ಬಹುಪಾಲು ಮಂದಿಗೆ ಕಿಮೊಥೆರಪಿಯಂತಹ ಚಿಕಿತ್ಸೆಯ ಅಗತ್ಯ ಇದೆ. ಇವರೆಲ್ಲ ಮೈಸೂರು ಇಲ್ಲವೇ ಮಂಗಳೂರಿನ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆಯ ಬಳಿಕಮ ತಕ್ಷಣಕ್ಕೆ ಪ್ರಯಾಣ ಕಷ್ಟವಾಗುವುದರಿಂದ ಅಲ್ಲಿಯೇ ಕೆಲ ದಿನಗಳ ಕಾಲ ಉಳಿದುಕೊಳ್ಳಬೇಕಾಗುತ್ತದೆ. ಜಿಲ್ಲೆಯಲ್ಲಿ ಕಿಮೊಥೆರಪಿ ಚಿಕಿತ್ಸೆ ಸಿಗುವಂತಾದರೆ ಈ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ.
” ಈಗಾಗಲೇ ನಮ್ಮ ಬೋಧಕ ಆಸ್ಪತ್ರೆಯಲ್ಲಿ ಮೈಸೂರಿನ ಕ್ಯಾನ್ಸರ್ ತಜ್ಞ ವೈದ್ಯರುವಾರಕ್ಕೊಮ್ಮೆ ಭೇಟಿ ನೀಡುತ್ತಿದ್ದಾರೆ. ಅಲ್ಪ ಪ್ರಮಾಣದಲ್ಲಿ ಔಷಧಗಳ ದಾಸ್ತಾನು ಮಾಡಿಕೊಳ್ಳಲಾಗಿದೆ. ಡೇಕೇರ್ ಸೆಂಟರ್ ಆರಂಭಕ್ಕೆ ಬೇಕಾದ ಉಪಕರಣಗಳೂ ಈಗಾಗಲೇ ನಮ್ಮಲ್ಲಿದ್ದು, ವೈದ್ಯರ ನೇಮಕವಾದರೆ ಕಿಮೊಥೆರಪಿ ಸೇರಿದಂತೆ ಇತರ ಕೆಲ ಸೇವೆಗಳೂ ಆರಂಭವಾಗಲಿವೆ.”
-ಡಾ.ಎ.ಜೆ.ಲೋಕೇಶ್, ಡೀನ್ ಮತ್ತು ನಿರ್ದೇಶಕರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
–ನವೀನ್ ಡಿಸೋಜ





