ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ
ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ?
ಮೈಸೂರು : ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಹಲವಾರು ಪ್ರಯೋಗಗಳನ್ನು ನಡೆಸಿದರೂ ಸಫಲವಾಗದಿದ್ದರಿಂದ ಅಂತಿಮ ವಾಗಿ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳ ವ್ಯಾಪ್ತಿಯಲ್ಲಿ ಸಫಾರಿ ಬಂದ್ ಮಾಡಿದ್ದ ಅರಣ್ಯ ಇಲಾ ಖೆಯು, ವರ್ಷಾಂತ್ಯ ಕಳೆಯುವ ತನಕವೂ ಪುನಾರಂಭಿಸುವ ಸಾಧ್ಯತೆ ಕ್ಷೀಣವಾಗಿದೆ.
ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಸಫಾರಿಗೆ ಅವಕಾಶ ನೀಡಿದರೆ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅಂತಹ ಸಂದರ್ಭದಲ್ಲಿ ಹುಲಿ ದಾಳಿ ನಡೆದರೆ ಸಮಸ್ಯೆ ಎಂಬ ಕಾರಣದಿಂದ ಅರಣ್ಯ ಸಚಿವರು, ಹೊಸ ವರ್ಷ ಕಳೆದ ಬಳಿಕ ಸಫಾರಿ ಪುನಾರಂಭಕ್ಕೆ ಅವಕಾಶ ಕೊಡುವ ಕುರಿತು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ಹೊಸ ವರ್ಷದ ಸಂಭ್ರಮ ವನ್ನು ಕಳೆಯಲು ಬಂಡೀಪುರ, ನಾಗರಹೊಳೆಯತ್ತ ಮುಖ ಮಾಡಲು ಬಯಸಿ ರೆಸಾರ್ಟ್, ಹೋಂ ಸ್ಟೆಗಳಲ್ಲಿ ಮುಂಗಡವಾಗಿ ಕೊಠಡಿಗಳು, ಸಫಾರಿ ದಿನಾಂಕವನ್ನು ಕಾಯ್ದಿರಿಸಲು ಬಯಸಿ ದ್ದವರಿಗೆ ನಿರಾಸೆಯಾಗುವುದು ನಿಶ್ಚಿತ.
ಸಫಾರಿ ಬಂದ್ ಆದೇಶ ಹಿಂಪಡೆದು ಪುನಾರಂಭಕ್ಕೆ ಅನುಮತಿ ನೀಡುವಂತೆ ಬರುತ್ತಿರುವ ಒತ್ತಡಕ್ಕೆ ಮಣಿಯದ ಸಚಿವರು, ಅಧಿವೇಶನ ಮುಗಿಯುವ ತನಕವೂ ಇಂತಹ ವಿಚಾರದ ಪ್ರಸ್ತಾಪಕ್ಕೆ ಕೈಹಾಕಲ್ಲ ಎನ್ನುವ ಮಾತು ಕೇಳಿಬಂದಿದೆ. ಸಫಾರಿ ಪುನಾರಂಭಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ರೈತ ಸಂಘದವರು ಸಫಾರಿಯನ್ನು ವಿರೋಧಿಸುತ್ತಿದ್ದು, ಪುನಾರಂಭಿಸಿದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರೆ, ಹೋಟೆಲ್, ಪ್ರವಾಸೋದ್ಯಮ ವಲಯದವರು ಬಂದ್ ಆದೇಶವನ್ನು ತೆರವುಗೊಳಿಸುವಂತೆ ನಿರಂತರವಾದ ಒತ್ತಡ ಹೇರುತ್ತಿದ್ದಾರೆ. ಆದರೆ, ಸಚಿವರು ಮಾತ್ರ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಹುಲಿ ದಾಳಿ ಸಂಪೂರ್ಣವಾಗಿ ನಿಲ್ಲುವ, ಕಾಡಿನಿಂದ ಹೊರಬಂದ ಹುಲಿಗಳನ್ನು ಸೆರೆಹಿಡಿಯುವ ತನಕವೂ ಬಂದ್ ಮುಂದುವರಿಸುವ ಆಲೋಚನೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:-ವರ್ಷಾಂತ್ಯಕ್ಕೂ ಸಫಾರಿ ಪುನಾರಂಭ ಸಾಧ್ಯತೆ ಕ್ಷೀಣ
ಏನಾಗಿತ್ತು ಸಮಸ್ಯೆ? :
ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಹುಲಿ ದಾಳಿಗೆ ಮೂವರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ನಾಗರ ಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನವೆಂಬರ್ ೭ರಂದು ಸ-ರಿ ಬಂದ್ ಮಾಡಿ ಆದೇಶ ಹೊರಡಿಸಿತ್ತು. ಸಫಾರಿಗೆ ವೇಳೆ ವಾಹನಗಳ ಸದ್ದು, ಜನರ ಕೂಗಾಟದಿಂದ ಹುಲಿಗಳು ಚದುರಿ ನಾಡಿನತ್ತ ಲಗ್ಗೆ ಇಟ್ಟು, ನಮ್ಮ ಮೇಲೆ ದಾಳಿ ಮಾಡುತ್ತವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗಾಗಿ ರಾಜ್ಯ ಸರ್ಕಾರ ಇಂತಹ ತೀರ್ಮಾನ ಮಾಡಿತ್ತು. ಸಫಾರಿ ಬಂದ್ ಮಾಡಿದ ಬಳಿಕ ಇಲ್ಲಿಯವರೆಗೆ ಹುಲಿ ದಾಳಿ ಪ್ರಕರಣಗಳು ನಡೆದಿಲ್ಲ ಎಂಬುದು ಗಮನಾರ್ಹ.
ದಿನಕ್ಕೆ ೨೫ ಲಕ್ಷ ರೂ. :
ನಾಗರಹೊಳೆ ಮತ್ತು ಬಂಡೀಪುರ ಸಫಾರಿಯಿಂದಲೇ ನಿತ್ಯ ೨೫ ಲಕ್ಷ ರೂ. ಗಳಿಗೂ ಹೆಚ್ಚು ಆದಾಯ ಬರುತ್ತಿತ್ತು. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ, ಎಚ್. ಡಿ. ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ನಿಂತಿದ್ದು, ಸದ್ಯಕ್ಕೆ ಜೆಎಲ್‌ಆರ್‌ನ ಗುತ್ತಿಗೆ ಆಧಾರಿತ ಸಿಬ್ಬಂದಿಗೆ ಕೆಲಸ ಇಲ್ಲದಂತಾಗಿದ್ದರೆ, ಖಾಯಂ ನೌಕರರು ನಿತ್ಯ ಬಂದು ಸಹಿ ಮಾಡಿ ಮನೆಗೆ ಹಿಂತಿರುಗುತ್ತಿದ್ದಾರೆ.
ಪರೋಕ್ಷವಾಗಿ ಬಹುದೊಡ್ಡ ಹೊಡೆತ:
ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಪ್ರವಾಸಿಗರನ್ನೇ ನಂಬಿಕೊಂಡಿದ್ದ ರೆಸಾರ್ಟ್ ಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ಅಂಗಡಿಗಳು, ಹೋಂ ಸ್ಟೇಗಳಿಗೂ ವರಮಾನ ಸ್ಥಗಿತವಾಗಿದೆ. ವಿಶೇಷವಾಗಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್, ಆರೆಂಜ್ ಕೌಂಟಿಯಂಥ ರೆಸಾರ್ಟ್‌ಗಳಿಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಹೋಟೆಲ್ ಬುಕ್ಕಿಂಗ್, ಕ್ಯಾಬ್ ಸೇವೆ ಸೇರಿದಂತೆ ವಿವಿಧ ರೀತಿಯಲ್ಲಿ ವ್ಯಾಪಾರವಾಗುತ್ತಿತ್ತು. ಮೈಸೂರು, ಚಾಮರಾಜನಗರ, ಕೊಡಗು ಭಾಗದ ಬಹುತೇಕ ರೆಸಾರ್ಟ್‌ಗಳು ಖಾಲಿ ಹೊಡೆಯುತ್ತಿವೆ. ಇದರೊಂದಿಗೆ ಕ್ಯಾಬ್ ಚಾಲಕರಿಗೂ ಟ್ರಿಪ್‌ಗಳು ಸಿಗುತ್ತಿಲ್ಲ. ಸರ್ಕಾರಕ್ಕೆ ಸಫಾರಿ ಸ್ಥಗಿತದಿಂದ ನಿತ್ಯ ೨೫ ಲಕ್ಷ ರೂ. ನಷ್ಟ ನೇರವಾಗಿ ಆಗುತ್ತಿದ್ದರೂ ಪರೋಕ್ಷವಾಗಿ ಕೋಟ್ಯಂತರ ರೂ. ವ್ಯವಹಾರಕ್ಕೆ ಹೊಡೆತ ಬಿದ್ದಿದೆ.
ಕ್ಯಾಬ್ ಚಾಲಕರಿಗೆ ಸಂಕಷ್ಟ:
ಮೈಸೂರು ಭಾಗದ ಶೇ. ೮೦ರಷ್ಟು ಕ್ಯಾಬ್ ಚಾಲಕರಿಗೆ ಕೆಲಸ ಸಿಗದೆ ಇರುವುದು, ಕಾಡಿನೊಳಗೆ ಮತ್ತು ಕಾಡಿನ ಅಂಚಿನಲ್ಲಿರುವ ರೆಸಾರ್ಟ್‌ಗಳು ಖಾಲಿ ಖಾಲಿಯಾಗುವುದರಿಂದ ಆದಾಯದ ಮೇಲೆ ಹೊಡೆತ ಬೀಳಲಿದೆ. ವರ್ಷಾಂತ್ಯಕ್ಕೆ ನಿರೀಕ್ಷೆಗೂ ಮೀರಿ ಪ್ರವಾಸಿಗರು ಬಂದು ವಾಸ್ತವ್ಯ ಮಾಡುತ್ತಿದ್ದರಿಂದ ಒಂದಿಷ್ಟು ಆದಾಯ ಬರುತ್ತಿತ್ತು. ಈಗ ಆದಾಯ ಬರುವುದಿರಲಿ, ನಿರ್ವಹಣೆಗೂ ದೊಡ್ಡ ಸಮಸ್ಯೆಯಾಗಲಿದೆ ಎನ್ನುವ ಚಿಂತೆ ಮಾಲೀಕರನ್ನು ಕಾಡಿದೆ.
ಪ್ರವಾಸಿಗರಿಗೆ ನಿರಾಸೆ
ಸದ್ಯದ ಮಾಹಿತಿ ಪ್ರಕಾರ ವರ್ಷಾಂತ್ಯ ಮುಗಿಯುವ ತನಕ ಸಫಾರಿ ಪುನಾರಂಭಿಸದಿರಲು ಸಚಿವರು ತೀರ್ಮಾನಿಸಿದ್ದು, ಒಂದು ವೇಳೆ ಒತ್ತಡಕ್ಕೆ ಮಣಿದರೂ ಜನವರಿ ನಂತರವಷ್ಟೇ ಅನುಮತಿ ಸಿಗಬಹುದು. ಹೊಸ ವರ್ಷದ ಒಳಗೆ ಆರಂಭಿಸದಿದ್ದರೆ ಹಲವಾರು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಹೊಸ ವರ್ಷದ ಹೊತ್ತಿಗೆ ಭಾರತಕ್ಕೆ ಆಗಮಿಸಿ ಸಫಾರಿ ಬುಕ್ಕಿಂಗ್ ಮಾಡಿರುವ ವಿದೇಶಿ ಪ್ರವಾಸಿಗರಿಗೆ ನಿರಾಸೆಯಾಗಿದೆ.





