ರಾಜಾರಾಂ ತಲ್ಲೂರು
ತಳಮಟ್ಟದಲ್ಲಿ ಆರ್ಥಕತೆಯನ್ನು ಚಿಗುರಿಸಲು ಹಾದಿಮಾಡಿಕೊಡುತ್ತದೆಯೋ ಎಂದು ಕಾದು ನೋಡಬೇಕಿದೆ
ನಿನ್ನೆ (ಶನಿವಾರ) ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ನಲ್ಲಿ ಎರಡು ಬಹಳ ಮುಖ್ಯ “ಟೇಕ್ ಹೋಂ”ಗಳನ್ನು ಗುರುತಿಸಬಹುದು.
ಮೊದಲನೆಯದು, ಇಲ್ಲಿಯ ತನಕ ಕಾರ್ಪೊರೇಟ್‌ಗಳಿಗೆ ಸಂಪನ್ಮೂಲಗಳನ್ನು ಒದಗಿಸಿ, ಅಲ್ಲಿಂದ ಹಣ ಕೆಳಮುಖವಾಗಿ ಹರಿದು, ತಳಮಟ್ಟದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುತ್ತದೆಂದು ನಂಬಿದ್ದ ಸರ್ಕಾರಕ್ಕೆ ಕಾರ್ಪೊರೇಟ್ಗಳು ತಮಗೆ ಸಿಕ್ಕಿದ ಗಂಟು ಬಿಚ್ಚುವುದಿಲ್ಲ ಎಂದು ವಿಳಂಬವಾಗಿ ಅರ್ಥ ಆದಂತಿದೆ. ಹಾಗಾಗಿ, ಈ ಬಾರಿ ತಾನೇ ಸ್ವತಃ ಕಣಕ್ಕಿಳಿದು, ತಳಮಟ್ಟಕ್ಕೆ ಸಂಪನ್ಮೂಲಗಳು ಸುಗಮವಾಗಿ ತಲುಪಲು ಪ್ರಯತ್ನಗಳನ್ನು ಆರಂಭಿಸಲಾಗಿದೆ.
ಎರಡನೆಯದು, ತನ್ನ ಮೇಲೆ ಬೀಸಲಿದ್ದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯಿದೆ (FRBM Act)ಯ ಕತ್ತಿಯಿಂದ ಸರ್ಕಾರ ತನ್ನನ್ನು ತಾನು ಚಾಣಾಕ್ಷ ಜುಗ್ಗತನ ತೋರಿಸಿ ರಕ್ಷಿಸಿಕೊಂಡಿರುವುದು.
ಉಳಿದಂತೆ ಬಜೆಟ್‌ನಲ್ಲಿ ಹೊಸದೇನಿಲ್ಲ. ತನ್ನ ಅದೇ ಹಳೆಯ ನೀತಿಗಳ ಅನುಷ್ಠಾನಕ್ಕೆ ಅದೇ ಹಳೆಯ ಒದ್ದಾಟ. ಅದು ಸರ್ಕಾರದ ಮತ್ತದರ ಥಿಂಕ್ ಟ್ಯಾಂಕ್‌ನ ಮಿತಿ. ಹಾಗಾಗಿ, ಮೇಲಿನ ಎರಡು ಸಂಗತಿಗಳನ್ನು ಸ್ವಲ್ಪ ವಿವರವಾಗಿ ನೋಡೋಣ. ಸರ್ಕಾರ ಈ ಬಾರಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಸಾಲಮಿತಿ ಏರಿಕೆ, MSMEಗಳಿಗೆ, ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಮೈಕ್ರೋ ಕೈಗಾರಿಕೆಗಳಿಗೆ ಕ್ರೆಡಿಟ್ ಕಾರ್ಡ್, PM ನಿಧಿ ಯೋಜನೆಯಡಿ UPIಗೆ ಲಿಂಕ್ ಮಾಡಲಾದ ಕ್ರೆಡಿಟ್ ಕಾರ್ಡ್, ಹೋಮ್ ಸ್ಟೇಗಳಿಗೆ ಮುದ್ರಾ ಸಾಲ… ಹೀಗೆ, ತಳ ಮಟ್ಟದಲ್ಲಿ ಸಾಲ ಸವಲತ್ತುಗಳು, ಗಿಗ್ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ… ಈ ರೀತಿ, ಮಧ್ಯಮ ಮತ್ತು ಕೆಳ ವರ್ಗದ ಜನಸಮುದಾಯಗಳನ್ನು ನೇರವಾಗಿ ತಲುಪಲು ಹಲವು ಹಾದಿಗಳನ್ನು ತೆರೆದಿದೆ. ಜೊತೆಗೆ, ಕ್ಯಾಪೆಕ್ಸ್ ವೆಚ್ಚಗಳನ್ನು ತಾನು ನೇರವಾಗಿ ಮಾಡುವ ಬದಲು, ಈ ಬಾರಿ ರಾಜ್ಯಗಳಿಗೆ ೧.೫ ಲಕ್ಷ ಕೋಟಿ ರೂ.ಗಳ ದೀರ್ಘಕಾಲಿಕ ಬಡ್ಡಿ ರಹಿತ ಸಾಲ ಒದಗಿಸಲು ತೀರ್ಮಾನಿಸಿದೆ. ಇವೆಲ್ಲವೂ ಸರ್ಕಾರ ತನ್ನ ಹಾದಿ ಬದಲಿಸಿಕೊಳ್ಳಲು ಪ್ರಾರಂಭಿಸಿರುವುದಕ್ಕೆ ಸೂಚನೆಗಳು.
FRBM ಕಾಯಿದೆಯ ಅನ್ವಯ, ಸರ್ಕಾರ ಹಣಕಾಸುಕೊರತೆಯನ್ನು ೨೦೨೧ರ ಒಳಗೆ, GDP ೩% ರ ಒಳಗೆ ಮತ್ತು ಸರ್ಕಾರದ ಸಾಲದ ಪ್ರಮಾಣವನ್ನು GDP ೪೦% ರ ಒಳಗೆ ತರಬೇಕಿತ್ತು. ಕೋವಿಡ್ ಕಾಲದ ಆರ್ಥಿಕ ಸಂಕಷ್ಟವು ಸರ್ಕಾರಕ್ಕೆ ಈ ವಿಚಾರದಲ್ಲಿ ಸಡಿಲು ತಂದುಕೊಟ್ಟಿತಾದರೂ, ೨೦೨೫-೨೬ರ ಹೊತ್ತಿಗೆ ಹಣಕಾಸು ಕೊರತೆಯನ್ನು ೪.೫% ರ ಒಳಗೆ ತಂದು ನಿಲ್ಲಿಸುವುದಾಗಿ ಸರ್ಕಾರ ಸಂಸತ್ತಿಗೆ ಭರವಸೆ ನೀಡಿತ್ತು.
ಹಾಲೀ ಹಣಕಾಸು ವರ್ಷದಲ್ಲಿ, ಹಣಕಾಸು ಕೊರತೆಯು GDP ೪.೮%ಕ್ಕೆ ತಲುಪಿದೆ ಮತ್ತು ಬಜೆಟ್ ವರ್ಷಕ್ಕೆ ಅದನ್ನು ನಿರೀಕ್ಷೆಯಂತೆ ೪.೪% ಕ್ಕೆ ಇಳಿಸುವುದಾಗಿ ಹಣಕಾಸು ಸಚಿವರು ಹೇಳಿದ್ದಾರೆ. ಹಾಲೀ ಹಣಕಾಸು ವರ್ಷದಲ್ಲಿ ಭಾರತ ಸರ್ಕಾರದ ಸಾಲ GDP ೫೭.೧% ಇದ್ದು, ಅದನ್ನು ಬಜೆಟ್ ವರ್ಷದಲ್ಲಿ ೫೬.೧%ಕ್ಕೆ ಇಳಿಸುವುದಾಗಿ ಸಚಿವರು ಹೇಳಿದ್ದಾರೆ. ಸಾಲದ ಪ್ರಮಾಣ FRBM ಮಿತಿಯ ಒಳಗೆ ಬರಲು, ಸಾಗಬೇಕಾದ ದೂರ ಇನ್ನೂ ತುಂಬಾ ಇದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ೨೦೨೪-೨೫ನೇ ಸಾಲಿಗೆ, ಸರ್ಕಾರ ತನ್ನ ಬಜೆಟ್ ವೆಚ್ಚಗಳಲ್ಲೇ ಭಾರೀ ಕತ್ತರಿಯಾಡಿಸುವ ಮೂಲಕ, ಈ ಆರ್ಥಿಕ ಶಿಸ್ತಿನ ಮಿತಿಯ ಸಮೀಪಕ್ಕೆ ತಲುಪಿದೆ. ಒಂದೆರಡು ಸಣ್ಣ ಉದಾಹರಣೆಗಳು ಬೇಕೆಂದರೆ, ಸರ್ಕಾರವು ಹಿಂದಿನ ಬಜೆಟ್ ನಲ್ಲಿ ಕ್ಯಾಪೆಕ್ಸ್‌ಗೆ ರೂ. ೧೧.೧೧ ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿತ್ತು.
ಆದರೆ, ಅಂತಿಮವಾಗಿ ೨೦೨೪ರ ಡಿಸೆಂಬರ್ ವೇಳೆಗೆ ಆದ ಕ್ಯಾಪೆಕ್ಸ್ ಹೂಡಿಕೆ ಕೇವಲ ರೂ. ೬.೪೪ ಲಕ್ಷ ಕೋಟಿ ಮಾತ್ರ! ಇದಲ್ಲದೇ ತನ್ನ ತೆರಿಗೆ ಆದಾಯದ ಪಾಲಿನಲ್ಲಿ ರಾಜ್ಯಸರ್ಕಾರಗಳಿಗೆ ಹಂಚಬೇಕಾಗಿದ್ದ ಹಣದಲ್ಲಿ ಇನ್ನೂ ರೂ. ೧೨,೭೬೪ ಕೋಟಿ ಹಳೆಯ ಬಾಕಿಗಳನ್ನು ಕೊಡದೇ ಬಾಕಿ ಇರಿಸಿಕೊಂಡಿದೆ. ಈ ಎಲ್ಲ ಜುಗ್ಗತನಗಳ ಕಾರಣಕ್ಕಾಗಿಯೇ ಸರ್ಕಾರಕ್ಕೆ ಹಣಕಾಸು ಕೊರತೆಯ ಲೆಕ್ಕವನ್ನು ತಗ್ಗಿಸಿ ತೋರಿಸುವುದು ಸಾಧ್ಯ ಆಯಿತು!
ಹಳೆಯ ನೀತಿಗಳಲ್ಲಿ ಬದಲಾವಣೆ ಇಲ್ಲ: ಉಳಿದಂತೆ, ಸರ್ಕಾರ ತನ್ನ ಹಳೆಯ ಆರ್ಥಿಕ ನೀತಿಗಳಲ್ಲಿ ದೊಡ್ಡ ಬದಲಾವಣೆಗಳನ್ನೇನೂ ಮಾಡಿಕೊಂಡಿಲ್ಲ. ಕೃಷಿ ಕಾಯಿದೆಗಳು ರದ್ದಾಗಿದ್ದರೂ, ಅದರ ಮೂಲ ಉದ್ದೇಶಗಳನ್ನು (ಕೃಷಿಯ ಕಾರ್ಪೊರೇಟೀಕರಣ) ಕಾಯಿದೆ ರಹಿತವಾಗಿ ಜಾರಿಗೆ ತರಲು ಹೊಸ ಹಾದಿಗಳನ್ನು ಹುಡುಕಿಕೊಳ್ಳುವ ಪ್ರಯತ್ನದಲ್ಲಿ ಸರ್ಕಾರ ಇರುವಂತಿದೆ. “ಮಿಷನ್ ಆತ್ಮನಿರ್ಭರ ಪಲ್ಸಸ್” ಅಂತಹ ಒಂದು ಪ್ರಯೋಗದಂತಿದೆ.
ವಿಮಾ ಕ್ಷೇತ್ರದಲ್ಲಿ ೧೦೦% ವಿದೇಶಿ ಹೂಡಿಕೆಗೆ ಅವಕಾಶ, PM ಗತಿಶಕ್ತಿ ಡೇಟಾಕ್ಕೆ ಖಾಸಗಿಯವರಿಗೆ ಪ್ರವೇಶಾವಕಾಶ, ವಿದ್ಯುತ್ ಕ್ಷೇತ್ರದಲ್ಲಿ ನ್ಯೂಕ್ಲಿಯರ್ ಎನರ್ಜಿಗೆ ಪ್ರೋತ್ಸಾಹ, ಮಾನೆಟೈಸೇಷನ್ ಪೈಪ್‌ಲೈನ್ ಮೂಲಕ ೨೦೩೦ಕ್ಕೆ ಮುನ್ನ ರೂ.೧೦ ಲಕ್ಷ ಕೋಟಿ ಮೌಲ್ಯದ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಗೆ ಮಾರುವುದು, ದೇಶದೊಳಗೆ ಗುಣಮಟ್ಟದ ಕೈಗಾರಿಕಾ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಬದಲು, “ಸ್ಕ್ರೂ ಡ್ರೈವರ್ ತಂತ್ರಜ್ಞಾನ” ಬಳಸಿ, ಗ್ಲೋಬಲ್ ಸಪ್ಲೈಚೈನ್‌ನ ಭಾಗವಾಗಿ ನಿಲ್ಲುವತ್ತ ಹೆಚ್ಚಿನ ಆಸಕ್ತಿ… ಇವೆಲ್ಲವೂ ಕೂಡ ಸರ್ಕಾರದ ಹಳೆಯ ನೀತಿಗಳಲ್ಲಿ ಬದಲಾವಣೆ ಏನೂ ಆಗಿಲ್ಲ ಎಂಬುದನ್ನೇ ಸೂಚಿಸುತ್ತವೆ. ಸರ್ಕಾರವು ತಳಮಟ್ಟದಲ್ಲಿ ಹಣಕಾಸು “ಹನಿಯುವುದಕ್ಕೆ” ಮಾಡಿಕೊಟ್ಟಿರುವ ಅವಕಾಶ ಕೇವಲ ಮೇಲ್ಪದರದ್ದೇ ಅಥವಾ ಅದು ತಳಮಟ್ಟದಲ್ಲಿ ಆರ್ಥಿಕತೆಯನ್ನು ಚಿಗುರಿಸಲು ನಿಜಕ್ಕೂ ಹಾದಿ ಮಾಡಿ ಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈ ಎಲ್ಲ ಸಂಗತಿಗಳ ನಡುವೆ ಎದ್ದು ಕಂಡದ್ದು, ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳನ್ನು ಎದುರಿಸಬೇಕಿ ರುವ ಬಿಹಾರಕ್ಕೆ ಭಾರತ ಸರ್ಕಾರದಿಂದ ದೊರೆತ ಯೋಜನೆಗಳ ಮಹಾಪೂರ.
” ವಿಮಾ ಕ್ಷೇತ್ರದಲ್ಲಿ ೧೦೦% ವಿದೇಶಿ ಹೂಡಿಕೆಗೆ ಅವಕಾಶ, PM ಗತಿಶಕ್ತಿ ಡೇಟಾಕ್ಕೆ ಖಾಸಗಿಯವರಿಗೆ ಪ್ರವೇಶಾವಕಾಶ, ವಿದ್ಯುತ್ ಕ್ಷೇತ್ರದಲ್ಲಿ ನ್ಯೂಕ್ಲಿಯರ್ ಎನರ್ಜಿಗೆ ಪ್ರೋತ್ಸಾಹ, ಮಾನೆಟೈಸೇಷನ್ ಪೈಪ್‌ಲೈನ್ ಮೂಲಕ ೨೦೩೦ಕ್ಕೆ ಮುನ್ನ ರೂ. ೧೦ ಲಕ್ಷ ಕೋಟಿ ಮೌಲ್ಯದ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಗೆ ಮಾರುವುದು, ದೇಶದೊಳಗೆ ಗುಣಮಟ್ಟದ ಕೈಗಾರಿಕಾ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಬದಲು, “ಸ್ಕ್ರೂ ಡ್ರೈವರ್ ತಂತ್ರಜ್ಞಾನ” ಬಳಸಿ, ಗ್ಲೋಬಲ್ ಸಪ್ಲೈಚೈನ್‌ನ ಭಾಗವಾಗಿ ನಿಲ್ಲುವತ್ತ ಹೆಚ್ಚಿನ ಆಸಕ್ತಿ… ಇವೆಲ್ಲವೂ ಕೂಡ ಸರ್ಕಾರದ ಹಳೆಯ ನೀತಿಗಳಲ್ಲಿ ಬದಲಾವಣೆ ಏನೂ ಆಗಿಲ್ಲ ಎಂಬುದನ್ನೇ ಸೂಚಿಸುತ್ತವೆ.”